* ಶಾಲೆಗಳಲ್ಲಿ ಕೋವಿಡ್‌ ಮಾರ್ಗಸೂಚಿ ಪಾಲನೆ ಕಡ್ಡಾಯ* ದಿಲ್ಲಿ ರಾಜಧಾನಿ ವಲಯದಲ್ಲಿ ಕೋವಿಡ್‌ ಕೇಸುಗಳಲ್ಲಿ ಹೆಚ್ಚಳ* ದೈನಂದಿನ ಕೇಸುಗಳು ಶೇ.50ರಷ್ಟುಹೆಚ್ಚಳ* ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ಸೋಂಕು 

ನವದೆಹಲಿ(ಏ.16): ದೇಶದ ಅನೇಕ ರಾಜ್ಯಗಳಲ್ಲಿ ಸೋಂಕು ಇಳಿಕೆ ಆಗುತ್ತಿದ್ದರೆ, ದೆಹಲಿ ಮತ್ತು ರಾಷ್ಟ್ರರಾಜಧಾನಿ ವಲಯದಲ್ಲಿ (ಎನ್‌ಸಿಆರ್‌) ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಶಾಲಾ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ.

ಕೋವಿಡ್‌ ಸೋಂಕು ಕಡಿಮೆಯಾಗುತ್ತಿದ್ದಂತೆಯೇ ದಿಲ್ಲಿಯಲ್ಲಿ ಭೌತಿಕ ತರಗತಿಗಳನ್ನು ಆರಂಭಿಸಲಾಗಿತ್ತು. ಆದರೆ ಈಗ ಶಾಲೆಗಳಲ್ಲಿ ಸೋಂಕು ಹೆಚ್ಚುತ್ತಿದೆ. ಹೀಗಾಗಿ ಶಾಲೆಗಳಿಗೆ ಪ್ರತ್ಯೇಕ ಮಾರ್ಗದರ್ಶಿ ಸೂತ್ರಗಳನ್ನು ದಿಲ್ಲಿ ಸರ್ಕಾರ ಬಿಡುಗಡೆ ಮಾಡಿದ್ದು, ಇವುಗಳ ಪಾಲನೆ ಕಡ್ಡಾಯಗೊಳಿಸಿದೆ.

ದೆಹಲಿ ರಾಜಧಾನಿ ವಲಯದ ಘಾಜಿಯಾಬಾದ್‌ ಮತ್ತು ನೊಯ್ಡಾದ ಶಾಲೆಗಳಲ್ಲೂ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಬುಧವಾರ ದೆಹಲಿಯಲ್ಲಿ 299 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, ಹಿಂದಿನ ದಿನಕ್ಕೆ ಹೋಲಿಸಿದರೆ ಶೇ.50ರಷ್ಟುಸೋಂಕು ಹೆಚ್ಚಳವಾಗಿದೆ. ಈ ಪೈಕಿ ಖೈತಾನ್‌ ಪಬ್ಲಿಕ್‌ ಶಾಲೆಯ 13 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ದಿಲ್ಲಿ ಪಕ್ಕದ ನೊಯ್ಡಾದಲ್ಲಿ 23 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಗುರುವಾರ ಉತ್ತರ ಪ್ರದೇಶದ ಗೌತಮ ಬುದ್ಧ ನಗರದಲ್ಲಿ 15 ಮಕ್ಕಳು ಸೇರಿದಂತೆ 44 ಜನರಲ್ಲಿ ಹೊಸದಾಗಿ ಕೋವಿಡ್‌ ಸೋಂಕು ಕಾಣಿಸಿಕೊಂಡಿದೆ.

ಶಾಲೆಗೆ ಮಾರ್ಗಸೂಚಿ:

ಕೇಸುಗಳ ಹೆಚ್ಚಳದ ಬೆನ್ನಲ್ಲೇ ಶಾಲೆಗಳಿಗೆ ದಿಲ್ಲಿ ಸರ್ಕಾರ ಮಾರ್ಗಸೂಚಿ ಜಾರಿ ಮಾಡಿದೆ. ಶಾಲಾ ಆವರಣದಲ್ಲಿ ಮಾಸ್‌್ಕ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಮಾಡುವುದು, ಸ್ಯಾನಿಟೈಸರ್‌ ಬಳಕೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಅಲ್ಲದೇ ಯಾವುದೇ ಶಾಲೆಯಲ್ಲಿ ಕೋವಿಡ್‌ ಸೋಂಕು ಕಂಡುಬಂದರೆ ತಕ್ಷಣವೇ ಶಿಕ್ಷಣ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಬೂಸ್ಟರ್‌ ಡೋಸ್‌ ನಿರ್ಲಕ್ಷ್ಯ ಬೇಡ

18ರಿಂದ 59 ವರ್ಷ ವಯೋಮಾನದವರು ಬೂಸ್ಟರ್‌ ಡೋಸ್‌ ಕೊರೋನಾ ಲಸಿಕೆ ಪಡೆಯಲು ನೀರಸ ಪ್ರತಿಕ್ರಿಯೆ ತೋರುತ್ತಿರಲು ಮುಖ್ಯ ಕಾರಣ 2ನೇ ಡೋಸ್‌ ಮತ್ತು ಮುನ್ನೆಚ್ಚರಿಕಾ ಡೋಸ್‌ ಲಸಿಕೆ ನಡುವೆ 9 ತಿಂಗಳ ಅಂತರವಿರುವುದು ಕಾರಣ. ಇದಲ್ಲದೆ ಕೋವಿಡ್‌ ಹೋಗಿದೆ ಎಂಬ ಉದಾಸೀನವೂ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಬೂಸ್ಟರ್‌ ಡೋಸ್‌ ಬಗ್ಗೆ ನಿರ್ಲಕ್ಷ್ಯ ಬೇಡ ಎಂದೂ ಎಚ್ಚರಿಸಿದ್ದಾರೆ.

ಎರಡು ಡೋಸ್‌ ಲಸಿಕೆ ಪಡೆದ ನಾಲ್ಕೈದು ತಿಂಗಳ ಬಳಿಕ ಪ್ರತಿಕಾಯ ಶಕ್ತಿ ಕುಗ್ಗಲು ಆರಂಭವಾಗುತ್ತದೆ. 9 ತಿಂಗಳ ವೇಳೆಗೆ ಅದು ಕನಿಷ್ಠ ಪ್ರಮಾಣಕ್ಕೆ ಇಳಿಕೆಯಾಗಿರುತ್ತದೆ. ಹೀಗಾಗಿ ಎರಡನೇ ಡೋಸ್‌ ಲಸಿಕೆ ಪಡೆದ 6 ತಿಂಗಳ ನಂತರ ಮುನ್ನೆಚ್ಚರಿಕಾ ಡೋಸ್‌ ಲಸಿಕೆ ಪಡೆಯುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ. ಹಾಗೆಯೇ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಮುನ್ನೆಚ್ಚರಿಕಾ ಲಸಿಕೆ ಬಗ್ಗೆ ಅರಿವಿನ ಕೊರತೆ ಇದೆ ಎಂದು ಏಮ್ಸ್‌ ಮುಖ್ಯಸ್ಥ ರಣದೀಪ್‌ ಗುಲೇರಿಯಾ ಹೇಳಿದ್ದಾರೆ.