ಉತ್ತರ ಕನ್ನಡದಲ್ಲಿ ಏರುತ್ತಿದೆ ತಾಪಮಾನ: ತಂಪು ಪಾನೀಯಗಳಿಗೆ ಜನರು ಮೊರೆ!
ರಾಜ್ಯದಲ್ಲಿ ಕೆಲವೆಡೆ ವರುಣನ ದರ್ಶನವಾಗ್ತಿದ್ರೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ತಾಪಮಾನ ಜಾಸ್ತಿಯಾಗಿದೆ. ಈ ಬಾರಿಯೂ ಕೂಡಾ ಅಧಿಕ 37.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಬಿರು ಬಿಸಿಲಿನಿಂದ ಜನ ಕಂಗಾಲಾಗಿದ್ದಾರೆ.
ಉತ್ತರ ಕನ್ನಡ (ಮೇ.19): ರಾಜ್ಯದಲ್ಲಿ ಕೆಲವೆಡೆ ವರುಣನ ದರ್ಶನವಾಗ್ತಿದ್ರೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ತಾಪಮಾನ ಜಾಸ್ತಿಯಾಗಿದೆ. ಈ ಬಾರಿಯೂ ಕೂಡಾ ಅಧಿಕ 37.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಬಿರು ಬಿಸಿಲಿನಿಂದ ಜನ ಕಂಗಾಲಾಗಿದ್ದಾರೆ. ಪಟ್ಟಣ, ಮಾರುಕಟ್ಟೆಯಲ್ಲಿ ಓಡಾಡುವ ಜನರು ಛತ್ರಿ ಹಿಡಿದು, ತಲೆಯ ಮೇಲೆ ಬಟ್ಟೆಯನ್ನಿಟ್ಟು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಕರಾವಳಿ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಭಟ್ಕಳದಲ್ಲಿ ಮಳೆಯ ನಿರೀಕ್ಷಿತವಾಗಿ ಬಿದ್ದಿಲ್ಲ. ರಾಜ್ಯದ ಬೇರೆಡೆಯಲ್ಲಿ ಮಳೆ ಸುರಿದರೂ ಕರಾವಳಿ ಭಾಗದಲ್ಲಿ ವರುಣ ತನ್ನ ಕೃಪೆ ತೋರಿಸಿಲ್ಲ.
ಸೆಖೆಯಿಂದ ಜನ ತತ್ತರಿಸಿದ್ದು, ಮಾರುಕಟ್ಟೆಗಳಲ್ಲಿ ತಂಪುಪಾನೀಯ ಅಂಗಡಿಗಳ ಮುಂದೆ ಜನ ಜಮಾಯಿಸುತ್ತಿದ್ದಾರೆ. ಅಧಿಕ ತಾಪಮಾನದಿಂದಾಗಿ ದಾಹ ಹೆಚ್ಚಾಗುತ್ತಿದ್ದು, ಪದೇ ಪದೇ ನೀರು ಕುಡಿಯುವುದು, ತಂಪು ಪಾನೀಯಗಳನ್ನು ಸೇವಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಪಾನೀಯ ಅಂಗಡಿಗಳಲ್ಲಿ ಜನರಿರುವುದು ಸಾಮಾನ್ಯವಾಗಿದೆ. ಶರಬತ್, ಕಬ್ಬಿನ ಹಾಲು, ಎಳನೀರು ಕುಡಿದು ದಾಹ ತೀರಿಸಿಕೊಳ್ಳುತ್ತಿದ್ದಾರೆ. ಆದ್ರೂ ಕೂಡ ಜನರಿಗೆ ಸೆಖೆಯಿಂದ ರಕ್ಷಣೆ ಪಡೆದುಕೊಳ್ಳಲು ಆಗುತ್ತಿಲ್ಲ. ಮನೆಯಲ್ಲಿ ಫ್ಯಾನ್, ಏರ್ ಕೂಲರ್ ಇದ್ದರೂ ಕೂಡಾ ಸಮಧಾನವಿರದ ಕಾರಣ ಜನರು ಯಾವಾಗ ಮಳೆ ಬೀಳುತ್ತದೆ ಎಂದು ಕಾತರದಿಂದ ಕಾಯುವಂತಾಗಿದೆ. ಹಳ್ಳ-ಕೊಳ್ಳಗಳು, ಬಾವಿಗಳು ಕೂಡಾ ಒಣಗಿ ಹೋಗಿರೋದ್ರಿಂದ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ.
ಭಾಷೆ ಉಳಿಯಬೇಕಾದರೆ ಅಂತರ್ಜಾಲದಲ್ಲಿ ಕನ್ನಡದಲ್ಲಿ ಮಾಹಿತಿ ಸಿಗಬೇಕು: ಯು.ಬಿ.ಪವನಜ
ಎಳನೀರು ಸಿಗದೇ ಪರದಾಟ: ಪ್ರವಾಸಿ ತಾಣದಲ್ಲಿ ಬಿರುಬಿಸಿಲಿನ ಬೇಗೆಗೆ ಎಳನೀರಿನ ಬೇಡಿಕೆ ಜೋರಾಗಿದ್ದು, ಆದರೆ ಬೇಡಿಕೆ ತಕ್ಕಂತೆ ಪೂರೈಕೆ ಇಲ್ಲದೆ ಸ್ಥಳೀಯರು ಮತ್ತು ಪ್ರವಾಸಿಗರು ಪರದಾಡುತ್ತಿದ್ದಾರೆ. ಶಿವಮೊಗ್ಗ, ದಾವಣಗೆರೆ ಸೇರಿದಂತೆ ಹೊರ ಜಿಲ್ಲೆಯಿಂದ ಎರಡು ದಿನಕ್ಕೊಮ್ಮೆ ಇಲ್ಲಿನ ಅಂಗಡಿಗಳಿಗೆ ಪೂರೈಕೆ ಆಗುತ್ತಿತ್ತು. ಆದರೆ ವಾರಕ್ಕೊಮ್ಮೆಯೂ ಪೂರೈಕೆ ಆಗದೆ ಕೊರತೆ ಉಂಟಾಗಿದೆ. ಅನಾರೋಗ್ಯಕ್ಕೆ ತುತ್ತಾದವರು ಸಿಯಾಳ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ಎಳನೀರು ಕೊರತೆಯ ಪರಿಣಾಮ ನೀರಿನ ಬಾಟಲ್‍ಗಳು ಅತ್ಯಧಿಕವಾಗಿ ಮಾರಾಟವಾಗುತ್ತಿದ್ದು, ಪ್ರತಿನಿತ್ಯ ಸಾವಿರಾರು ಲೀಟರ್ ನೀರಿನ ವಹಿವಾಟು ನಡೆಯುತ್ತಿದೆ. ಜತೆ ವಿವಿಧ ಕಂಪನಿಗಳ ತಂಪು ಪಾನೀಯಗಳು ಸಹ ಮಾರಾಟವಾಗುತ್ತಿದೆ. ಆದರೆ ನೈಸರ್ಗಿಕವಾಗಿ ಸಿಗುವ ಆರೋಗ್ಯ ಪೂರ್ಣವಾದ ಪಾನೀಯವಿಲ್ಲದೆ ಅನಿವಾರ್ಯದಲ್ಲಿ ರಾಸಾಯನಿಕಯುಕ್ತ ಪಾನಿಯಗಳನ್ನು ಬಳಸಿ ಬೇಸಿಗೆಯ ದಾಹ ನೀಗಿಸಿಕೊಳ್ಳುತ್ತಿದ್ದಾರೆ.