ದೇಶಾದ್ಯಂತ 1100ಕ್ಕೂ ಹೆಚ್ಚು ಹುಸಿ ಬಾಂಬ್‌ ಬೆದರಿಕೆ ಸಂದೇಶ ರವಾನಿಸಿದ್ದ ಮೈಸೂರಿನ ಶ್ರೀನಿವಾಸ್‌ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ತನ್ನ ಕುಟುಂಬದ ಆಸ್ತಿ ವಿವಾದದಲ್ಲಿ ನ್ಯಾಯಾಂಗದಿಂದ ನ್ಯಾಯ ಸಿಗದಿದ್ದಕ್ಕೆ ಆಕ್ರೋಶಗೊಂಡು ಈತ ನ್ಯಾಯಾಲಯಗಳನ್ನೇ ಗುರಿಯಾಗಿಸಿಕೊಂಡು ಬೆದರಿಕೆ ಹಾಕುತ್ತಿದ್ದ!

  • ಬಂಧಿತ ಶ್ರೀನಿವಾಸ್ ಬಗ್ಗೆ ದಿಲ್ಲಿ ಪೊಲೀಸರ ಮಾಹಿತಿ
  •  ಪಾಕಿಸ್ತಾನದ ಹಲವು ನಗರಗಳೂ ಈತನ ಟಾರ್ಗೆಟ್‌

ನವದೆಹಲಿ (ಏ.1): ಕರ್ನಾಟಕ ಸೇರಿದಂತೆ ದೇಶಾದ್ಯಂತ ಕೋರ್ಟ್‌ಗಳಿಗೆ 1100ಕ್ಕೂ ಹೆಚ್ಚು ಹುಸಿ ಬಾಂಬ್‌ ಸಂದೇಶ ರವಾನಿಸಿದ್ದ ಪ್ರಕರಣದಲ್ಲಿ ಇತ್ತೀಚೆಗೆ ಬಂಧಿತನಾಗ ಮೈಸೂರು ವಾಸಿ ಶ್ರೀನಿವಾಸ್‌ ಲೂಯಿಸ್‌, ತಮ್ಮ ಕುಟುಂಬಕ್ಕೆ ನ್ಯಾಯ ಒದಗಿಸದ ದೇಶದ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಆಕ್ರೋಶ ಹೊಂದಿದ್ದ. ಇದೇ ಕಾರಣಕ್ಕೆ ಕೋರ್ಟ್‌ಗಳಿಗೇ ಬೆದರಿಕೆ ರವಾನಿಸುತ್ತಿದ್ದ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂಧಿದೆ.

ಇತ್ತೀಚೆಗೆ ಶ್ರೀನಿವಾಸ್‌ನನ್ನು ದೆಹಲಿ ಪೊಲೀಸರು ಬಂಧಿಸಿ ವಿಚಾರಣೆಗೆ ಕರೆದೊಯ್ದಿದ್ದರು. ಈ ವೇಳೆ ಆತ, ‘ತನ್ನ ತಂದೆಗೆ ಅವರ ಕುಟುಂಬದ ಕಡೆಯಿಂದ ಸರಿಯಾಗಿ ಆಸ್ತಿ ಬಂದಿರಲಿಲ್ಲ. ಈ ಬಗ್ಗೆ ನ್ಯಾಯಾಂಗದ ಮೆಟ್ಟಿಲೇರಿದರೂ ಅಲ್ಲೂ ನ್ಯಾಯ ಸಿಕ್ಕಿರಲಿಲ್ಲ. ಹೀಗಾಗಿ ಆಕ್ರೋಶಗೊಂಡು ಹುಸಿ ಬಾಂಬ್‌ ಸಂದೇಶ ರವಾನಿಸುತ್ತಿದ್ದೆ’ ಎಂದು ಬಹಿರಂಗಪಡಿಸಿದ್ದಾನೆ.

ತಂತ್ರಜ್ಞಾನ ನಿಪುಣ:

ಸಹಾಯಕ ಪ್ರಾಧ್ಯಾಪಕನಾಗಿ ನಿವೃತ್ತನಾಗಿರುವ ಶ್ರೀನಿವಾಸ್‌ ತಂತ್ರಜ್ಞಾನ ನೈಪುಣ್ಯತೆ ಹೊಂದಿದ್ದ. ಇದನ್ನೇ ದುರ್ಬಳಕೆ ಮಾಡಿಕೊಂಡು ಮೊಬೈಲ್‌ ಮೂಲಕವೇ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ದೇಶದ ಹಲವು ಸಂಸ್ಥೆಗಳಿಗೆ ಬಾಂಬ್‌ ಬೆದರಿಕೆ ಹಾಕುತ್ತಿದ್ದ. ಕೂಡಲೇ ತನ್ನ ಗುರುತು, ವಿಳಾಸ ಗೊತ್ತಾಗದಂತೆ ಐಪಿ ಅಡ್ರೆಸ್‌ ಬದಲಿಸಿಕೊಳ್ಳುತ್ತಿದ್ದ. ಈ ಮೂಲಕ ತನಿಖೆಗಿಳಿದ ಪೊಲೀಸರ ದಾರಿ ತಪ್ಪಿಸುತ್ತಿದ್ದ. ಭಾರತದ ಹೊರಗೂ ತನ್ನೀ ದುಷ್ಕೃತ್ಯ ವಿಸ್ತರಿಸಿ, ಪಾಕಿಸ್ತಾನದ ಕೆಲ ನಗರಗಳ ಸಂಸ್ಥೆಗಳಿಗೂ ಇಂತಹ ಸಂದೇಶ ಕಳಿಸಿದ್ದ ಎಂದು ತಿಳಿದುಬಂದಿದೆ.