ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದೆಹಲಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ದೇಶಾದ್ಯಂತ ಸರ್ಕಾರಿ ಕಚೇರಿ ಮತ್ತು ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಇಮೇಲ್ ಕಳುಹಿಸುತ್ತಿದ್ದ ಶ್ರೀನಿವಾಸ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. 

ಮೈಸೂರು (ಮಾ.28): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದೆಹಲಿ ಪೊಲೀಸರು ಇಂದು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಹುಸಿ ಬಾಂಬ್ ಸಂದೇಶಗಳನ್ನ ಕಳಿಸಿ ಸರ್ಕಾರಿ ಕಚೇರಿ, ಶಾಲೆಗಳಲ್ಲಿ ಆತಂಕ ಸೃಷ್ಟಿಸುತ್ತಿದ್ದ ವ್ಯಕ್ತಿಯನ್ನು ಕೊನೆಗೂ ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Add Asianetnews Kannada as a Preferred SourcegooglePreferred

ಬೃಂದಾವನ ಬಡಾವಣೆಯಲ್ಲಿ ಅಡಗಿದ್ದ ಆರೋಪಿ:

ನಗರದ ಪ್ರತಿಷ್ಠಿತ ಬೃಂದಾವನ ಬಡಾವಣೆ ಎರಡನೇ ಹಂತದ 6ನೇ ಕ್ರಾಸ್‌ನಲ್ಲಿರುವ ಮನೆಯೊಂದರ ಮೇಲೆ ದೆಹಲಿ ಪೊಲೀಸರ ತಂಡ ದಿಢೀರ್ ದಾಳಿ ನಡೆಸಿದೆ. ಶ್ರೀನಿವಾಸ್ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತ ಮೈಸೂರಿನಲ್ಲೇ ಕುಳಿತು ನಿಗೂಢವಾಗಿ ಬೆದರಿಕೆ ಇಮೇಲ್‌ಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ.

ಸರ್ಕಾರಿ ಕಚೇರಿಗಳೇ ಆರೋಪಿ ಶ್ರೀನಿವಾಸ್ ಟಾರ್ಗೆಟ್:

ಬಂಧಿತ ಆರೋಪಿ ಶ್ರೀನಿವಾಸ್ ಇತ್ತೀಚೆಗೆ ಸರ್ಕಾರಿ ಕಚೇರಿಗಳು, ಶಾಲಾ ಕಟ್ಟಡಗಳು ಹಾಗೂ ನ್ಯಾಯಾಲಯಗಳಿಗೆ ಬಾಂಬ್ ಸ್ಫೋಟಿಸುವುದಾಗಿ ಇಮೇಲ್ ಮೂಲಕ ಬೆದರಿಕೆ ಹಾಕಿ ಆತಂಕ ಸೃಷ್ಟಿಸಿದ್ದ. ಹಲವಾರು ಕಚೇರಿಗಳಿಗೆ, ಶಾಲೆಗಳಿಗೆ ಭಯೋತ್ಪಾದಕ ರೀತಿ ಹುಸಿ ಬಾಂಬ್ ಕಳಿಸಿ ಭಯದ ವಾತಾವರಣವನ್ನು ಸೃಷ್ಟಿಸುತ್ತಿದ್ದ ಆರೋಪಿ. ಕೇವಲ ಒಂದೇ ತಿಂಗಳಿನಲ್ಲಿ ಹಲವು ಬಾರಿ ಇಂತಹ ಸಂದೇಶಗಳನ್ನ ಇಮೇಲ್ ಮೂಲಕ ಕಳಿಸಿ ಭದ್ರತಾ ಏಜೆನ್ಸಿಗಳಿಗೆ ತಲೆನೋವಾಗಿದ್ದ.

ಸೀಜ್ ಆದ ಎಲೆಕ್ಟ್ರಾನಿಕ್ ಡಿವೈಸ್‌ಗಳು:

ದೇಶದ ಭದ್ರತೆಗೆ ಸವಾಲಾಗಿದ್ದ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಕಿಡಿಗೇಡಿಯ ಪತ್ತೆಗೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿತ್ತು. ಸದ್ಯ ಆರೋಪಿಯನ್ನ ಬಂಧಿಸಿದ್ದು, ಕಾರ್ಯಾಚರಣೆಯ ವೇಳೆ ಆರೋಪಿಯ ಮನೆಯಲ್ಲಿದ್ದ ಹಲವು ಸಿಮ್ ಕಾರ್ಡ್‌ಗಳು, ಲ್ಯಾಪ್‌ಟಾಪ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹೆಚ್ಚಿನ ವಿಚಾರಣೆಗೆ ಆರೋಪಿ ದೆಹಲಿಗೆ ಶಿಫ್ಟ್

ಈ ಕಾರ್ಯಾಚರಣೆಗೆ ಮೈಸೂರಿನ ವಿ.ವಿ. ಪುರಂ ಠಾಣೆ ಪೊಲೀಸರು ದೆಹಲಿ ಪೊಲೀಸರಿಗೆ ಸಾಥ್ ನೀಡಿದ್ದಾರೆ. ಸದ್ಯ ಬಂಧಿತ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ದೆಹಲಿ ಪೊಲೀಸರು ತಮ್ಮೊಂದಿಗೆ ಕರೆದೊಯ್ಯಲಿದ್ದಾರೆ.