ಇಂದಿನ ದಿನಗಳಲ್ಲಿ 18 ರೂ.ಗೆ ಒಂದ ಲೀಟರ್ ಕುಡಿಯುವ ನೀರು, ಒಂದು ಸಿಗರೇಟ್ ಕೂಡ ಬರುವುದಿಲ್ಲ. ಆದರೆ, ಇದೇ 18 ರೂ.ಗೆ ಒಂದು ಹೊಚ್ಚ ಹೊಸ ಬ್ರ್ಯಾಂಡ್ ನ್ಯೂ ಸೈಕಲ್ ಖರೀದಿ ಮಾಡಿದ್ದಾರೆಂದರೆ ನಂಬುತ್ತೀರಾ? ನಂಬಲು ಕಷ್ಟವಾದರೂ 88 ವರ್ಷಗಳ ಹಿಂದೆ ಖರೀದಿಸಿದ ಸೈಕಲ್ ಬಿಲ್ ಇದೀಗ ವೈರಲ್ ಆಗುತ್ತಿದೆ.

ಇಂದಿನ ದಿನಗಳಲ್ಲಿ ಒಂದು ಸಿಗರೇಟ್‌ನ ಬೆಲೆಯೇ ಬರೋಬ್ಬರಿ 20 ರಿಂದ 25 ರೂ. ಬೆಲೆಯಿದೆ. ಒಂದು ಲೀಟರ್ ಕುಡಿಯುವ ನೀರಿನ ಬಾಟಲಿ ಅಥವಾ ಒಂದು ಪ್ಯಾಕೆಟ್ ಬಿಸ್ಕೆಟ್ ಸಿಗುವುದು ಕೂಡ ಕಷ್ಟ. ಅಷ್ಟೇ ಏಕೆ, ಸೈಕಲ್ ಪಂಕ್ಚರ್ ಹಾಕಿಸಬೇಕೆಂದರೂ ಇವತ್ತು 20 ರಿಂದ 30 ರೂಪಾಯಿ ಖರ್ಚಾಗುತ್ತದೆ. ಆದರೆ, 88 ವರ್ಷಗಳ ಹಿಂದೆ ಇದೇ 18 ರೂಪಾಯಿಗೆ ಒಂದು ಬ್ರ್ಯಾಂಡ್ ನ್ಯೂ ಸೈಕಲ್ ಸಿಗುತ್ತಿತ್ತು ಎಂದರೆ ನೀವು ನಂಬುತ್ತೀರಾ? ಹೌದು, ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಒಂದು ಹಳೆಯ ಬಿಲ್ ಈ ಅಚ್ಚರಿಯ ಸತ್ಯವನ್ನು ಬಿಚ್ಚಿಟ್ಟಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೈರಲ್ ಆದ 1934ರ ಬಿಲ್:

ಇತ್ತೀಚೆಗಷ್ಟೇ 1985ರ ಕಾಲದ ಹೋಟೆಲ್ ಬಿಲ್ ಒಂದು ವೈರಲ್ ಆಗಿತ್ತು. ಅದರಲ್ಲಿ ಶಾಹಿ ಪನೀರ್ ಬೆಲೆ ಕೇವಲ 8 ರೂಪಾಯಿ ಎಂದಿತ್ತು. ಆ ಬೆಲೆ ನೋಡಿಯೇ ಜನ ದಂಗಾಗಿದ್ದರು. ಆದರೆ ಈಗ ಅದಕ್ಕಿಂತಲೂ ಹಳೆಯದಾದ, ಅಂದರೆ 1934ರ ಕಾಲದ ಸೈಕಲ್ ಬಿಲ್ ಒಂದು ಮುನ್ನೆಲೆಗೆ ಬಂದಿದೆ. ಈ ಬಿಲ್ ಅನ್ನು ನೋಡಿದ ನೆಟ್ಟಿಗರು ಕಾಲಚಕ್ರ ಎಷ್ಟು ವೇಗವಾಗಿ ಉರುಳಿದೆ ಮತ್ತು ರೂಪಾಯಿಯ ಮೌಲ್ಯ ಅಂದು ಹೇಗಿತ್ತು ಎಂಬುದನ್ನು ನೆನೆದು ಅಚ್ಚರಿಪಡುತ್ತಿದ್ದಾರೆ.

ಬಿಲ್‌ನಲ್ಲಿ ಏನಿದೆ?

ಈ ವೈರಲ್ ಬಿಲ್ 1934ರ ಜನವರಿ 7 ರದ್ದು. ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ 'ಕುಮುದ್ ಸೈಕಲ್ ವರ್ಕ್ಸ್' (Kumud Cycle Works) ಎಂಬ ಅಂಗಡಿಯಿಂದ ಈ ಸೈಕಲ್ ಖರೀದಿಸಲಾಗಿದೆ. ಬಿಲ್‌ನಲ್ಲಿ 'ಒಂದು ಚೀಪ್ ಸೈಕಲ್' (One Cheap Cycle) ಎಂದು ಬರೆಯಲಾಗಿದೆ. ಆಶ್ಚರ್ಯವೆಂದರೆ, ಆ ಸೈಕಲ್‌ನ ಬೆಲೆ ಕೇವಲ 18 ರೂಪಾಯಿ ಮಾತ್ರ! ಅಷ್ಟೇ ಅಲ್ಲ, ಈ 18 ರೂಪಾಯಿಯಲ್ಲಿ ಸೈಕಲ್ ಜೊತೆಗೆ ಒಂದು ಲೈಟ್ ಮತ್ತು ಒಂದು ಬೆಲ್ (ಘಂಟೆ) ಕೂಡ ಸೇರಿದೆ ಎಂಬುದು ಗಮನಾರ್ಹ.

ನೆನಪಿನ ಬುತ್ತಿ ಬಿಚ್ಚಿಟ್ಟ ಮೊಮ್ಮಗ:

ಸಂಜಯ್ ಖರೆ ಎಂಬ ಫೇಸ್‌ಬುಕ್ ಬಳಕೆದಾರರು ಈ ಹಳೆಯ ಬಿಲ್ ಅನ್ನು ಹಂಚಿಕೊಂಡಿದ್ದಾರೆ. 'ಒಂದು ಕಾಲದಲ್ಲಿ ಸೈಕಲ್ ನಮ್ಮ ತಾತನ ಕನಸಾಗಿತ್ತು. ಸೈಕಲ್ ಚಕ್ರದಂತೆ ಕಾಲದ ಚಕ್ರವೂ ಎಷ್ಟು ವೇಗವಾಗಿ ಉರುಳಿದೆ ನೋಡಿ!' ಎಂದು ಅವರು ಭಾವುಕರಾಗಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಅಡಿ ನೂರಾರು ಜನರು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Scroll to load tweet…

ನೆಟ್ಟಿಗರ ಪ್ರತಿಕ್ರಿಯೆ:

ಈ ಪೋಸ್ಟ್ ನೋಡಿ ಒಬ್ಬ ಬಳಕೆದಾರರು, '1934ರಲ್ಲಿ ನನ್ನ ತಂದೆ ಜನಿಸಿದ್ದರು, ಈಗ ನನಗೆ ಮೊಮ್ಮಕ್ಕಳಿದ್ದಾರೆ. 1977ರಲ್ಲಿ ನನ್ನ ತಂದೆ ನನಗೆ 240 ರೂಪಾಯಿಗೆ ಸೈಕಲ್ ಕೊಡಿಸಿದ್ದರು' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು '1971ರಲ್ಲಿ ನಾನು 85 ರೂಪಾಯಿಗೆ ಸೈಕಲ್ ಖರೀದಿಸಿದ್ದೆ' ಎಂದು ನೆನಪಿಸಿಕೊಂಡಿದ್ದಾರೆ.

ಒಟ್ಟಾರೆಯಾಗಿ, ಈ ಬಿಲ್ ಕೇವಲ ಒಂದು ಕಾಗದದ ತುಣುಕಲ್ಲ, ಅದು ಅಂದಿನ ಸರಳ ಜೀವನ ಮತ್ತು ಆರ್ಥಿಕ ಸ್ಥಿತಿಯ ಕನ್ನಡಿಯಾಗಿದೆ. ಅಂದು 18 ರೂಪಾಯಿಗೆ ಸಿಗುತ್ತಿದ್ದ ಇಡೀ ಸೈಕಲ್, ಇಂದು ಪಂಕ್ಚರ್ ಹಾಕಿಸಲು ಕೂಡ ಸಾಕಾಗುವುದಿಲ್ಲ ಎಂಬುದು ಬದಲಾದ ಕಾಲಕ್ಕೆ ಸಾಕ್ಷಿಯಾಗಿದೆ.