ಹರೆಯಕ್ಕೆ ಕಾಲಿರಿಸಿದ ಅಥವಾ ಋತುಮತಿಯಾದ ಮುಸ್ಲಿಂ ಹೆಣ್ಣು ಮಗಳು ತನ್ನಿಷ್ಟದಂತೆ ಬದುಕಬಹುದು. ಪೋಷಕರ ಅನುಮತಿ ಇಲ್ಲದೆಯೂ ವಿವಾಹವಾಗಬಹುದು ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.
ದೆಹಲಿ: ಮುಸ್ಲಿಂ ಹೆಣ್ಣು ಮಕ್ಕಳ ವಿವಾಹಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹರೆಯಕ್ಕೆ ಕಾಲಿರಿಸಿದ ಅಥವಾ ಋತುಮತಿಯಾದ ಮುಸ್ಲಿಂ ಹೆಣ್ಣು ಮಗಳು ತನ್ನಿಷ್ಟದಂತೆ ಬದುಕಬಹುದು. ಪೋಷಕರ ಅನುಮತಿ ಇಲ್ಲದೆಯೂ ವಿವಾಹವಾಗಬಹುದು ಎಂದು ತೀರ್ಪು ನೀಡಿದೆ. ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶ ಜಸ್ಮಿತ್ ಸಿಂಗ್ ಅವರು ಈ ತೀರ್ಪು ನೀಡಿದ್ದಾರೆ.
ಪ್ರಕರಣವೊಂದರಲ್ಲಿ ಹರೆಯಕ್ಕೆ ಬಂದ ಮುಸ್ಲಿಂ ಅಪ್ರಾಪ್ತ ತರುಣಿಯೊಬ್ಬಳು, ಮಾರ್ಚ್ 11 ರಂದು ಅವಳ ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಳು. ಈಕೆ ಮದುವೆಯಾದ ಯುವಕನಿಗೆ 25 ವರ್ಷವಾಗಿದ್ದರೆ, ಈಕೆಯ ಪೋಷಕರು ಹಾಗೂ ಪೊಲೀಸರು ಹೇಳುವ ಪ್ರಕಾರ ಈಕೆಗೆ ಕೇವಲ 15 ವರ್ಷ ಆದರೆ ಆಧಾರ್ ಕಾರ್ಡ್‌ನಲ್ಲಿ ಆಕೆಗೆ 19 ವರ್ಷ ಎಂದು ನಮೂದಾಗಿತ್ತು.
ಈ ಬಗ್ಗೆ ಈ ತರುಣಿಯ ಪರ ವಕೀಲ ಕೋರ್ಟ್‌ಗೆ ನೀಡಿದ ಮಾಹಿತಿಯಂತೆ ತರುಣಿ ಗರ್ಭಿಣಿಯಾಗಿದ್ದು, ಆಕೆ ತನ್ನಿಚ್ಛೆಯಂತೆ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಳು. ತರುಣಿಯ ಪರ ವಕೀಲರ ಹೇಳಿಕೆಯನ್ನು ಆಲಿಸಿದ ದೆಹಲಿ ಹೈಕೋರ್ಟ್, ಹುಡುಗಿ ಆಕೆಯ ಇಷ್ಟದಂತೆ ಮದುವೆಯಾಗಿದ್ದು, ಆ ಸಂಬಂಧದಲ್ಲಿ ಆಕೆ ಖುಷಿಯಾಗಿ ಇದ್ದಲ್ಲಿ ಆಕೆಯ ಖಾಸಗಿ ಬದುಕಿನಲ್ಲಿ ಮಧ್ಯ ಪ್ರವೇಶಿಸಿ ಅವರನ್ನು ಬೇರೆ ಬೇರೆ ಮಾಡುವ ಹಕ್ಕು ಯಾರಿಗೂ ಇಲ್ಲ. ಇದು ಖಾಸಗಿ ಬದುಕಿನಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿದಂತೆ ಆಗುವುದು ಎಂದು ಹೈಕೋರ್ಟ್ ಹೇಳಿದೆ.
ಮುಸ್ಲಿಂ ಮದುವೆ ಹಿಂದೂ ವಿವಾಹದಂತೆ ಸಂಸ್ಕಾರವಲ್ಲ, ಕೇವಲ ಒಪ್ಪಂದ ; ಕರ್ನಾಟಕ ಹೈಕೋರ್ಟ್!
ಹೀಗೆ ಓಡಿ ಹೋಗಿ ವಿವಾಹವಾದ ಜೋಡಿ ಏಪ್ರಿಲ್ ಒಂದರಂದು ತಮಗೆ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದರು. ಅಲ್ಲದೇ ತಮ್ಮನ್ನು ಯಾರೂ ದೂರ ಮಾಡದಂತೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದರು. ಇದಕ್ಕೂ ಮೊದಲು ಈ ಹುಡುಗಿಯ ಪೋಷಕರು ಮಾರ್ಚ್ 5 ರಂದು ದ್ವಾರಕ ಜಿಲ್ಲೆಯಲ್ಲಿ ತಮ್ಮ ಅಪ್ರಾಪ್ತ ಮಗಳು ಕಿಡ್ನ್ಯಾಪ್ ಆಗಿರುವುದಾಗಿ ದೂರು ನೀಡಿದ್ದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆಯ ಸೆಕ್ಷನ್ 6 (ಲೈಂಗಿಕ ದೌರ್ಜನ್ಯ) ಅಡಿ ಪ್ರಕರಣ ದಾಖಲಿಸಿದ್ದರು.
ಇದಾದ ಬಳಿಕ ಏಪ್ರಿಲ್ 27 ರಂದು ಯುವಕನ ಜೊತೆಗಿದ್ದ ಈ ಹುಡುಗಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅಲ್ಲದೇ ಆಕೆಯನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ಬಾಲಕಿ ಕೋರ್ಟ್‌ನಲ್ಲಿ ತನಗೆ ತನ್ನ ಪೋಷಕರು ನಿರಂತರವಾಗಿ ಹೊಡೆಯುತ್ತಿದ್ದು, ಬೇರೆ ವ್ಯಕ್ತಿಯ ಜೊತೆ ವಿವಾಹ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದರು. ಇದೆಲ್ಲವನ್ನು ಆಲಿಸಿದ ಕೋರ್ಟ್ ಈ ಜೋಡಿಗೆ ರಕ್ಷಣೆ ನೀಡಲು ಆದೇಶಿಸಿದ್ದಲ್ಲದೇ, ಹುಡುಗಿ ಆಕೆಯ ಪತಿಯೊಂದಿಗೆ ವಾಸಿಸಲು ಅರ್ಹಳು ಎಂದು ಹೇಳಿದೆ.
ಮುಸ್ಲಿಂ ಹುಡುಗ-ಹಿಂದು ಯುವತಿ ಪ್ರೇಮ ಪ್ರಕರಣ : ಹೈ ಕೋರ್ಟ್ ಮಹತ್ವದ ಆದೇಶ
ಮುಸ್ಲಿಂ ವಿವಾಹ ಕಾಯ್ದೆ
ಮುಸ್ಲಿಂ ವಿವಾಹ ಕಾಯಿದೆಯನ್ನು 1954 ರಲ್ಲಿ ಭಾರತೀಯ ಕಾನೂನು ವ್ಯವಸ್ಥೆಗೆ ಸೇರಿಸಲಾಯಿತು. ಈ ಕಾಯಿದೆಯು ಭಾರತದಲ್ಲಿ ಮುಸ್ಲಿಂ ಸಮುದಾಯದ ನಡುವೆ ನಡೆಯುವ ವಿವಾಹದ ಕ್ರಮಗಳನ್ನು ತಿಳಿಸುತ್ತದೆ. ಈ ಕಾಯಿದೆಯ ಪ್ರಕಾರ, ವರ ಮತ್ತು ವಧು ಇಬ್ಬರೂ ತಮ್ಮ ಸ್ವತಂತ್ರ ಇಚ್ಛೆಯಿಂದ ಮದುವೆಗೆ ಒಪ್ಪಿಗೆ ನೀಡಬೇಕು. ಕುರಾನ್‌ನಲ್ಲಿ, ಮುಸ್ಲಿಂ ಪುರುಷರಿಗೆ ನಾಲ್ವರು ಹೆಂಡತಿಯರನ್ನು ಹೊಂದಲು ಅನುಮತಿ ಇದೆ. ಅದು ಎಲ್ಲಿಯವರೆಗೆ ಎಂದರೆ ಅವರು ಪ್ರತಿಯೊಬ್ಬ ಪತ್ನಿಯನ್ನು ಸಮಾನವಾಗಿ ಪರಿಗಣಿಸುವವರೆಗೆ. ಇದನ್ನು ಬಹುಪತ್ನಿತ್ವ ಎಂದು ಕರೆಯಲಾಗುತ್ತದೆ. ಆದಾಗ್ಯೂ, ಪತಿಗೆ ಎಲ್ಲಾ ಪತ್ನಿಯರನ್ನು ಸಮಾನವಾಗಿ ಪರಿಗಣಿಸಲು ಸಾಧ್ಯವಾಗದಿದ್ದರೆ, ಮುಸ್ಲಿಂ ಪುರುಷರು ಕೇವಲ ಒಬ್ಬ ಹೆಂಡತಿಯನ್ನು ಮಾತ್ರ ಹೊಂದುವಂತೆ ಸಲಹೆ ನೀಡಲಾಗುತ್ತದೆ. ಇದು ಹೆಚ್ಚಿನ ಆಧುನಿಕ ಇಸ್ಲಾಮಿಕ್ ಸಮಾಜಗಳಲ್ಲಿ ಸಾಮಾನ್ಯವಾಗಿದೆ. ಅದಾಗ್ಯೂ ಮುಸ್ಲಿಂ ಮಹಿಳೆಯರು ಓರ್ವ ಗಂಡನನ್ನು ಮಾತ್ರ ಹೊಂದುತ್ತಾರೆ.
