200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಹಿನ್ನಡೆಯಾಗಿದೆ. ಸುಕೇಶ್  ಜೊತೆಗಿನ ಸಂಬಂಧ ಮತ್ತು ದುಬಾರಿ ಉಡುಗೊರೆಗಳನ್ನು ಪಡೆದ ಆರೋಪದಲ್ಲಿ ಇಡಿ ವಿಚಾರಣೆ ಎದುರಿಸುತ್ತಿರುವ ಜಾಕ್ವೆಲಿನ್, ಪ್ರಕರಣ ರದ್ದುಗೊಳಿಸುವ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.

200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ( Jacqueline Fernandez ) ಹಿನ್ನಡೆಯಾಗಿದೆ. ತನ್ನ ವಿರುದ್ಧದ ಇಡಿ ಪ್ರಕರಣವನ್ನು ರದ್ದುಗೊಳಿಸಲು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. 200 ಕೋಟಿ ಅಕ್ರಮ ಹಣ ವರ್ಗಾವಣೆ ಹಗರಣದಲ್ಲಿ ಸುಕೇಶ್ ಚಂದ್ರಶೇಖರ್ ( Sukesh Chandrasekhar ) ಅವರನ್ನು ಪ್ರಮುಖ ಆರೋಪಿಯಾಗಿದ್ದಾನೆ. ಸದ್ಯ ಈತ ಜೈಲಿನಲ್ಲಿದ್ದಾನೆ. ಪ್ರಕರಣದ ಕುರಿತು ನ್ಯಾಯಮೂರ್ತಿ ಅನೀಶ್ ದಯಾಳ್ ವಾದ ಆಲಿಸಿ ಮುಂದಿನ ವಿಚಾರಣೆಯನ್ನು ಎಪ್ರಿಲ್ ತಿಂಗಳಿಗೆ ಮುಂದೂಡಿದ್ದಾರೆ.

ಸುಕೇಶ್ ಚಂದ್ರಶೇಖರ್ ಅವರು ಜಾಕ್ವೆಲಿನ್ ಫರ್ನಾಂಡಿಸ್‌ ಅವರಿಗೆ ಉಡುಗೊರೆ ನೀಡುವ ಸಲುವಾಗಿ ಅದನ್ನು ಖರೀದಿಸಲು ಅಕ್ರಮ ಹಣವನ್ನು ಉಪಯೋಗಿಸಿದ್ದಾರೆ ಎಂದು ಇಡಿ ಆರೋಪಿಸಿದೆ. 2022ರಲ್ಲಿ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ, ಸುಕೇಶ್ ಅವರು ‘ನಾನು ನೀಡಿದ ಬೆಲೆಬಾಳುವ ವಸ್ತುಗಳು, ಆಭರಣಗಳು ಮತ್ತು ಐಶಾರಾಮಿ ಉಡುಗೊರೆಗಳನ್ನು ಜಾಕ್ವೆಲಿನ್ ಆನಂದಿಸುತ್ತಿದ್ದಾರೆ’ ಎಂದು ಹೇಳಿದ್ದರಂತೆ. ಜಾಕ್ವೆಲಿನ್‌ ಅವರಿಗೆ ನೀಡಲಾಗಿದ್ದ ದುಬಾರಿ ಉಡುಗೊರೆಗಳಲ್ಲಿ 52 ಲಕ್ಷ ರೂಪಾಯಿ ಮೌಲ್ಯದ ಕುದುರೆ ಮತ್ತು 9 ಲಕ್ಷ ರೂಪಾಯಿ ಮೌಲ್ಯದ ಪರ್ಷಿಯನ್ ಬೆಕ್ಕು ಸೇರಿವೆ ಎಂದು ವರದಿಯಾಗಿದೆ. ಜೊತೆಗೆ, ಅವರಿಬ್ಬರ ಆಪ್ತ ಕ್ಷಣಗಳ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಇದುವರೆಗೆ, ಸುಕೇಶ್ ಚಂದ್ರಶೇಖರ್ ಕಡೆಯಿಂದ ಜಾಕ್ವೆಲಿನ್ ಅವರಿಗೆ ಸರಿ ಸುಮಾರು 10 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣ, ಡೈಮಂಡ್ ಜವಳಿ ಮತ್ತು ಇತರ ಉಡುಗೊರೆಗಳನ್ನು ಪಡೆದಿದ್ದಾರೆ ಎನ್ನಲಾಗಿದೆ. ಜಾಕ್ವೆಲಿನ್ ಫರ್ನಾಂಡಿಸ್ ಅವರ ವೆಬ್ ಸೀರೀಸ್ ಯೋಜನೆಯ ಸ್ಕ್ರಿಪ್ಟ್ ರೈಟರ್‌ಗೆ, ಸುಕೇಶ್ ಅವರು ಜಾಕ್ವೆಲಿನ್ ಪರವಾಗಿ 15 ಲಕ್ಷ ರೂಪಾಯಿ ನೀಡಿದ್ದರು ಎಂದು ಮಾಹಿತಿ ಲಭ್ಯವಾಗಿದೆ.

ಫೋರ್ಟಿಸ್ ಹೆಲ್ತ್‌ಕೇರ್‌ನ ಮಾಜಿ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಸೇರಿದಂತೆ ಪ್ರಮುಖ ವ್ಯಕ್ತಿಗಳಿಗೆ ಸುಮಾರು 200 ಕೋಟಿ ರೂಪಾಯಿಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, 38 ವರ್ಷದ ಶ್ರೀಲಂಕಾ ಮೂಲದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಇಡಿ ಆರೋಪಿಗಳ ಪಟ್ಟಿಯಲ್ಲಿ ಸೇರಿಸಿದೆ.

ದುಬಾರಿ ಬ್ರ್ಯಾಂಡ್‌ನ ಡಿಸೈನರ್ ಬ್ಯಾಗ್‌ಗಳು, ಜಿಮ್ ಉಡುಪುಗಳು, ದುಬಾರಿ ಬೂಟುಗಳು, ವಜ್ರದ ಕಿವಿಯೋಲೆಗಳು, ಬ್ರೇಸ್‌ಲೆಟ್‌ಗಳನ್ನು ಸುಕೇಶ್ ಚಂದ್ರಶೇಖರ್‌ನಿಂದ ಉಡುಗೊರೆಯಾಗಿ ಸ್ವೀಕರಿಸಿರುವುದು ನಿಜ ಇದರ ಜೊತೆಗೆ ಮಿನಿ ಕೂಪರ್ ಕಾರನ್ನೂ ಕೂಡ ಪಡೆದಿದ್ದೆ ಅದೆಲ್ಲವನ್ನು ಹಿಂತಿರುಗಿಸಿದ್ದೇನೆ ಎಂದು ವಿಚಾರಣ ವೇಳೆ ಜಾಕ್ವೆಲಿನ್ ಫರ್ನಾಂಡಿಸ್‌ ಹೇಳಿದ್ದರು.