ಶಿರಡಿ ಸಾಯಿಬಾಬಾ ಮತ್ತು ಸಂಸ್ಥಾನ ಟ್ರಸ್ಟ್ ವಿರುದ್ಧದ ನಿಂದನಾತ್ಮಕ ಯೂಟ್ಯೂಬ್ ವೀಡಿಯೋಗಳ ಕುರಿತು ದೆಹಲಿ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ಸಂಸ್ಥಾನ ಸಲ್ಲಿಸಿದ್ದ ಅರ್ಜಿಯ ಮೇರೆಗೆ, ಈ ಆಕ್ಷೇಪಾರ್ಹ ವೀಡಿಯೋಗಳನ್ನು ತೆಗೆದುಹಾಕಲು ನ್ಯಾಯಾಲಯ ಸೂಚಿಸಿದೆ.

ನವದೆಹಲಿ (ಆ.14): ಶಿರಡಿಯ ಶ್ರೀ ಸಾಯಿಬಾಬಾ ಹಾಗೂ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ವಿರುದ್ಧ ಯೂಟ್ಯೂಬ್‌ನಲ್ಲಿ (YouTube) ಹರಿಬಿಡಲಾಗಿದ್ದ ನಿಂದನಾತ್ಮಕ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಆಕ್ಷೇಪಾರ್ಹ ವೀಡಿಯೋಗಳಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ಮಹತ್ವದ ನಿರ್ದೇಶನ ನೀಡಿದ್ದು, ಸಂಸ್ಥಾನಕ್ಕೆ ದೊಡ್ಡ ರಿಲೀಫ್‌ ಸಿಕ್ಕಂತಾಗಿದೆ.

ಸಂಸ್ಥಾನ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ. ಸ್ವರ್ಣ ಕಾಂತ ಶರ್ಮಾ ಅವರಿದ್ದ ಪೀಠವು, ಮುಂದಿನ 7 ದಿನಗಳ ಒಳಗೆ ಈ ಕುರಿತು ಸೂಕ್ತ ನಿರ್ಧಾರ ಕೈಗೊಂಡು, ಆಗಸ್ಟ್ 19ರೊಳಗೆ ವರದಿ ಸಲ್ಲಿಸುವಂತೆ ‘ಗ್ರೀವೆನ್ಸ್ ಅಪೆಲೇಟ್ ಕಮಿಟಿ’ಗೆ (GAC) ನಿರ್ದೇಶನ ನೀಡಿದೆ. ಈ ಆದೇಶದೊಂದಿಗೆ ಎಲ್ಲಾ ಸೋಶಿಯಲ್‌ ಮೀಡಿಯಾಗಳಿಂದ ಆಕ್ಷೇಪಾರ್ಹ ವೀಡಿಯೋಗಳನ್ನು ತೆಗೆದುಹಾಕಲು ಹಾದಿ ಸುಗಮವಾಗಿದೆ.

ಪ್ರಕರಣದ ಹಿನ್ನೆಲೆ ಏನು?

ಶ್ರೀ ಸಾಯಿಬಾಬಾರವರ ವರ್ಚಸ್ಸು ಹಾಗೂ ಕೋಟ್ಯಂತರ ಭಕ್ತರ ನಂಬಿಕೆಯನ್ನು ರಕ್ಷಿಸುವ ಉದ್ದೇಶದಿಂದ, ಸಾಯಿ ಸಂಸ್ಥಾನದ ಸಿಇಒ ಗೋರಕ್ಷ ಗಡಿಲ್ಕರ್ ಅವರ ನೇತೃತ್ವದಲ್ಲಿ ಸಂಸ್ಥಾನದ ಪರವಾಗಿ ಈ ಕಾನೂನು ಹೋರಾಟ ನಡೆಸಲಾಗಿತ್ತು.

2026ರ ಜುಲೈನಲ್ಲಿ ಯೂಟ್ಯೂಬ್ ಸಂಸ್ಥೆಗೆ ಹತ್ತಾರು ಬಾರಿ ದೂರು ನೀಡಿದ್ದರೂ ಯಾವುದೇ ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಷಯವನ್ನು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಗ್ರೀವೆನ್ಸ್ ಅಪೆಲೇಟ್ ಕಮಿಟಿ (GAC) ಗಮನಕ್ಕೆ ತರಲಾಗಿತ್ತು. ಅಂತಿಮವಾಗಿ ಸಂಸ್ಥಾನವು ಹೈಕೋರ್ಟ್ ಮೆಟ್ಟಿಲೇರಿತು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಇಂತಹ ಆಕ್ಷೇಪಾರ್ಹ ವಿಷಯಗಳು ಸಂವಿಧಾನದ ವಿಧಿ 25 ರ ಅಡಿಯಲ್ಲಿ ಭಕ್ತರಿಗೆ ನೀಡಲಾಗಿರುವ ಧಾರ್ಮಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಗಂಭೀರವಾಗಿ ವೀಕ್ಷಿಸಿದೆ.

'ಸಾಯಿ ಭಕ್ತರ ಧಾರ್ಮಿಕ ಭಾವನೆಗಳನ್ನು ಗೌರವಿಸುವುದು ಮತ್ತು ಸಂಸ್ಥಾನದ ಘನತೆಯನ್ನು ರಕ್ಷಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಹೈಕೋರ್ಟ್ ನೀಡಿದ ಈ ಮಹತ್ವದ ನಿರ್ದೇಶನವು ಶ್ರೀ ಸಾಯಿಬಾಬಾ ಹಾಗೂ ಸಂಸ್ಥಾನದ ವಿರುದ್ಧ ಹರಡಲಾಗುತ್ತಿದ್ದ ಅಪಪ್ರಚಾರ ಮತ್ತು ನಿಂದನಾತ್ಮಕ ವೀಡಿಯೋಗಳ ಹರಿವಿಗೆ ಕಡಿವಾಣ ಹಾಕಲು ನೆರವಾಗಲಿದೆ' ಎಂದು ಗೋರಕ್ಷ ಗಡಿಲ್ಕರ್ ಹೇಳಿದ್ದಾರೆ.

ಕೋರ್ಟ್‌ನಲ್ಲಿ ವಾದ ಮಂಡಿಸಿದವರು ಯಾರು?

ಸಂಸ್ಥಾನದ ಪರವಾಗಿ ಹಿರಿಯ ವಕೀಲರಾದ ಪ್ರಮೋದ್ ಕುಮಾರ್ ದುಬೆ, ಸೌರವ್ ಅಗರ್ವಾಲ್, ರವಿ ಶರ್ಮಾ, ಪ್ರಾಚಿ ದುಬೆ, ರೂಪರಾಜ್ ಬ್ಯಾನರ್ಜಿ, ಸತ್ಯಂ ಶರ್ಮಾ, ಹರ್ಷ್ ಖಬರ್, ಆರ್ಯನ್ ಕುಮಾರ್ ತಿವಾರಿ, ಅನುಷಾ ಸಿನ್ಹಾ, ಖುಷಿ ಅರೋರಾ ಮತ್ತು ಶಂಭು ಪ್ರಸಾದ್ ಸಿಂಗ್ ವಾದ ಮಂಡಿಸಿದರು. ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಹಾಗೂ ಮುಖ್ಯ ಅಭಿಯೋಜಕ ವಿಜಯ್ ಜೋಶಿ ಹಾಜರಾಗಿದ್ದರು.