ವೈದ್ಯರ ಸೂಚನೆ ಮೀರಿ, ಶುಗರ್ ಏರುವ ಆಹಾರವನ್ನು ಅರವಿಂದ್ ಕೇಜ್ರಿವಾಲ್‌ಗೆ ನೀಡಲಾಗಿದೆ: ಕೋರ್ಟ್
ಅರವಿಂದ್ ಕೇಜ್ರಿವಾಲ್ ಅವರಿಗೆ ಯಾವ ಆಹಾರ ಪದಾರ್ಥವನ್ನು ತಿನ್ನಬಾರದು ಎಂದು ಸ್ವತಃ ಅವರ ವೈದ್ಯರು ಹೇಳಿದ್ದರೋ, ಅದೇ ಆಹಾರವಾದ ಆಲೂಗಡ್ಡೆ, ಕೆಸುವಿನ ಗಡ್ಡೆ ಮತ್ತು ಮಾವಿನಹಣ್ಣುಗಳನ್ನು ಮನೆಯಿಂದ ಬಂದ ಅವರ ಆಹಾರದಲ್ಲಿ ನೀಡಲಾಗಿದೆ ಎಂದು ದೆಹಲಿ ಕೋರ್ಟ್ ಹೇಳಿದೆ.
ನವದೆಹಲಿ (ಏ.22): ಅರವಿಂದ್ ಕೇಜ್ರಿವಾಲ್ ಅವರಿಗೆ ತಿಹಾರ್ ಜೈಲಿನಲ್ಲಿ ಹೋಮ್ ಫುಡ್‌ಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಅವರ ಮನೆಯಿಂದ ಬಂದ ಊಟದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ವೈದ್ಯರು ಯಾವ ಪದಾರ್ಥಗಳನ್ನು ತಿನ್ನಬಾರದು ಎಂದು ಹೇಳಿದ್ದರೂ, ಅದರಲ್ಲಿ ಅಂಥದ್ದೇ ಪದಾರ್ಥಗಳಿವೆ ಎಂದು ದೆಹಲಿ ಹೈಕೋರ್ಟ್ ಸೋಮವಾರ ಹೇಳಿದೆ. ಕೇಜ್ರಿವಾಲ್ ಅವರ ವೈದ್ಯರು ಅವರಿಗೆ ಆಲೂಗಡ್ಡೆ, ಕೆಸುವಿನ ಗಡ್ಡೆ ಹಾಗೂ ಮಾವಿನ ಹಣ್ಣುಗಳನ್ನು ತಿನ್ನಬೇಡಿ ಎಂದಿದ್ದಾರೆ. ಆದರೆ, ಅವರಿಗೆ ಮನೆಯಿಂದ ಬಂದ ಆಹಾರದಲ್ಲಿ ಇವುಗಳನ್ನೇ ನೀಡಲಾಗಿದೆ ಎಂದು ಕೋರ್ಟ್ ತಿಳಿಸಿದೆ. ಸಿಬಿಐ ಮತ್ತು ಇಡಿ ಪ್ರಕರಣಗಳ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರು ಕೇಜ್ರಿವಾಲ್ ಅವರ ವೈದ್ಯಕೀಯ ಪ್ರಿಸ್ಕ್ರಿಪ್ಷನ್‌ಗೆ ಅನುಗುಣವಾಗಿಲ್ಲದ ಆಹಾರ ಪದಾರ್ಥಗಳನ್ನು ಅವರಿಗೆ ಕಳುಹಿಸಲು ಏಕೆ ಅನುಮತಿಸಲಾಗಿದೆ ಎಂಬುದನ್ನು ಜೈಲು ಅಧಿಕಾರಿಗಳು ನಮಗೆ ಈವರೆಗೂ ತಿಳಿಸಿಲ್ಲ ಎಂದಿದ್ದಾರೆ.
ಮಧುಮೇಹಿಯಾಗಿರುವ ಅರವಿಂದ್ ಕೇಜ್ರಿವಾಲ್ ಅವರು ವೈದ್ಯಕೀಯ ಜಾಮೀನಿಗೆ ಕಾರಣವಾಗಲು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಪ್ರತಿದಿನ ಮಾವಿನಹಣ್ಣು, ಆಲೂ ಪುರಿ ಮತ್ತು ಸಿಹಿತಿಂಡಿಗಳನ್ನು ಸೇವಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದ ಕೆಲವು ದಿನಗಳ ನಂತರ ನ್ಯಾಯಾಲಯದ ಈ ವಿಚಾರವನ್ನು ತಿಳಿಸಿದೆ. ಮಧುಮೇಹಶಾಸ್ತ್ರಜ್ಞರನ್ನು ಒಳಗೊಂಡಿರುವ ಏಮ್ಸ್ ವೈದ್ಯಕೀಯ ಮಂಡಳಿಯು ಸೂಚಿಸಿದ ಆಹಾರವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ ಎನ್ನುವ ಷರತ್ತಿನ ಆಧಾರ ಮೇಲೆ ದೆಹಲಿ ಸಿಎಂಗೆ ಹೋಮ್ ಫುಡ್‌ಗೆ ಅನುಮತಿ ನೀಡಲಾಗುತ್ತದೆ ಎಂದು ಕೋರ್ಟ್ ಸೋಮವಾರ ತೀರ್ಪು ನೀಡಿದೆ.
ವೈದ್ಯಕೀಯ ಮಂಡಳಿಯು ಡಯಟ್ ಪ್ಲಾನ್ ನೀಡುವವರೆಗೆ, ಅರವಿಂದ್ ಕೇಜ್ರಿವಾಲ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ಏಪ್ರಿಲ್ 1 ರಿಂದ ಅವರ ವೈದ್ಯರು ಸೂಚಿಸಿದ ಡಯಟ್ ಚಾರ್ಟ್ ಮತ್ತು ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅವರ ಕುಟುಂಬಕ್ಕೆ ಸೂಚನೆ ನೀಡಲಾಗಿದೆ. ಕೇಜ್ರಿವಾಲ್ ಅವರ ಆಹಾರದಲ್ಲಿ ವೈದ್ಯಕೀಯವಾಗಿ ಸೂಚಿಸಲಾದ ಆಹಾರದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ತಿಹಾರ್ ಜೈಲು ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ. ಪ್ರತಿನಿತ್ಯ ತಮ್ಮ ಕುಟುಂಬದ ವೈದ್ಯರೊಂದಿಗೆ ವಿಡಿಯೋ ಕಾಲ್ ಮೂಲಕ ಸಮಾಲೋಚನೆ ನಡೆಸಬೇಕು ಎಂಬ ದೆಹಲಿ ಮುಖ್ಯಮಂತ್ರಿಯ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ ಈ ಆದೇಶ ನೀಡಿದೆ.
'ವರ್ಕ್ ಫ್ರಮ್ ಜೈಲ್' ಅವಕಾಶ ನೀಡುವಂತೆ ಹೈಕೋರ್ಟ್‌ಗೆ ಅರವಿಂದ್ ಕೇಜ್ರಿವಾಲ್ ಅರ್ಜಿ!
ಕೇಜ್ರಿವಾಲ್ ಅವರಿಗೆ ಪ್ರಸ್ತುತ ಇನ್ಸುಲಿನ್ ಅಗತ್ಯವಿದೆಯೇ ಎಂಬ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಏಮ್ಸ್ ವೈದ್ಯಕೀಯ ಮಂಡಳಿಯನ್ನು ಕೇಳಲಾಗಿದೆ. ಯಾವುದೇ ಹಸ್ತಕ್ಷೇಪದ ಅಗತ್ಯವಿದ್ದರೆ, ವೈದ್ಯಕೀಯ ಮಂಡಳಿಯೊಂದಿಗೆ ಸಮಾಲೋಚಿಸಿ ಜೈಲು ಅಧಿಕಾರಿಗಳು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನ್ಯಾಯಾಲಯ ಹೇಳಿದೆ. ಆಮ್ ಆದ್ಮಿ ಪಕ್ಷ (ಎಎಪಿ) ಮುಖ್ಯಮಂತ್ರಿಗೆ ಇನ್ಸುಲಿನ್ ನಿರಾಕರಿಸಲಾಗಿದೆ ಮತ್ತು ನಿಧಾನವಾಗಿ ಅವರನ್ನು ಸಾವಿನತ್ತ ಕಳುಹಿಸಲಾಗುತ್ತಿದೆ ಎಂದು ದೂರಿದೆ. ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿ ಪ್ರಸ್ತುತ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.
Breaking: ಕೆ.ಕವಿತಾಗೆ ಮುಗಿಯದ ಸಂಕಷ್ಟ, ಇಡಿ ಬೆನ್ನಲ್ಲಿಯೇ ಸಿಬಿಐನಿಂದ ಬಂಧನ!