'ವರ್ಕ್ ಫ್ರಮ್ ಜೈಲ್' ಅವಕಾಶ ನೀಡುವಂತೆ ಹೈಕೋರ್ಟ್‌ಗೆ ಅರವಿಂದ್ ಕೇಜ್ರಿವಾಲ್ ಅರ್ಜಿ!
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಜೈಲಿನಿಂದಲೇ ಸರ್ಕಾರವನ್ನು ನಡೆಸಲು ಅನುವು ಮಾಡಿಕೊಡುವಂತೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ಕೇಜ್ರಿವಾಲ್ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ನವದೆಹಲಿ (ಏ.18): ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದು, ವರ್ಕ್ ಫ್ರಮ್ ಜೈಲ್‌ಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈ ಅರ್ಜಿಯನ್ನು ವಕೀಲ ಶ್ರೀಕಾಂತ್ ಪ್ರಸಾದ್ ಅವರು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ಜೈಲಿನಿಂದ ಸರ್ಕಾರ ನಡೆಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗೆ ಅಗತ್ಯ ವ್ಯವಸ್ಥೆ ಮಾಡುವಂತೆ ತಿಹಾರ್ ಜೈಲಿನ ಡಿಜಿಗೆ ನಿರ್ದೇಶನ ನೀಡಬೇಕು ಎಂದು ಅವರು ಕೋರ್ಟ್‌ಗೆ ಒತ್ತಾಯಿಸಿದ್ದಾರೆ. ಆದರೆ, ಅರ್ಜಿಯ ವಿಚಾರಣೆ ನಡೆಸಬೇಕೆ ಅಥವಾ ಬೇಡವೇ ಎಂಬುದನ್ನು ನ್ಯಾಯಾಲಯ ಇನ್ನೂ ನಿರ್ಧರಿಸಿಲ್ಲ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಜೈಲಿನಲ್ಲಿಯೇ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಜೈಲು ಡಿಜಿಗೆ ನ್ಯಾಯಾಲಯ ನಿರ್ದೇಶಿಸಬೇಕು. ಇದರಿಂದಾಗಿ ದೆಹಲಿಯ ಶಾಸಕರು ಮತ್ತು ಸಚಿವರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಬಹುದು ಎಂದು ಶ್ರೀಕಾಂತ್ ಪ್ರಸಾದ್ ಮನವಿಯಲ್ಲಿ ತಿಳಿಸಿದ್ದಾರೆ.
ಅರ್ಜಿಯಲ್ಲಿ ಇರುವ ಮನವಿ ಏನು: ದೆಹಲಿಯ ಪ್ರಸ್ತುತ ಪರಿಸ್ಥಿತಿಯು ಸಂವಿಧಾನದ 21, 14 ಮತ್ತು 19 ನೇ ವಿಧಿ ಅಡಿಯಲ್ಲಿ ನಾಗರಿಕರಿಗೆ ನೀಡಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಶ್ರೀಕಾಂತ್ ಪ್ರಸಾದ್ ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ದೆಹಲಿಯಲ್ಲಿ ಆರೋಗ್ಯ ಮತ್ತು ಶಿಕ್ಷಣದ ದಾಖಲೆ ಅತ್ಯುತ್ತಮವಾಗಿದೆ ಎಂದು ಅವರು ಹೇಳಿದರು. ಭಾರತದ ಸಂವಿಧಾನ ಅಥವಾ ಯಾವುದೇ ಕಾನೂನು ಯಾವುದೇ ಸಚಿವರು, ಮುಖ್ಯಮಂತ್ರಿ ಅಥವಾ ಪ್ರಧಾನಿಯನ್ನು ಸರ್ಕಾರ ನಡೆಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಅರ್ಜಿಯ ಶೀಘ್ರ ವಿಚಾರಣೆಗೆ ಆಗ್ರಹ: ದೆಹಲಿ ಸರ್ಕಾರದ ಯೋಜನೆಗಳ ಲಾಭ ಪಡೆಯುತ್ತಿರುವ ಆದರೆ ತಮ್ಮ ಹಕ್ಕುಗಳ ಬಗ್ಗೆ ಅರಿವಿಲ್ಲದ ಬಡವರು ಮತ್ತು ವಂಚಿತ ಜನರ ಪರವಾಗಿ ನಾನು ನ್ಯಾಯಾಲಯದ ಬಾಗಿಲು ತಟ್ಟುತ್ತಿದ್ದೇನೆ ಎಂದು ಶ್ರೀಕಾಂತ್ ಪ್ರಸಾದ್ ಹೇಳಿದ್ದಾರೆ. ರಾಜಕೀಯ ದುರುದ್ದೇಶದಿಂದ ಕೇಜ್ರಿವಾಲ್ ಜೈಲು ಸೇರಿದ್ದಾರೆ ಎಂದು ಅವರು ತಮ್ಮ ಅರ್ಜಿಯಲ್ಲಿ ಮಾಹಿತಿ ನೀಡಿದ್ದಾರೆ. ದೆಹಲಿ ಸರ್ಕಾರ ಆರೋಗ್ಯ ಮತ್ತು ಶಿಕ್ಷಣದಂತಹ ವಿಷಯಗಳಲ್ಲಿ ದೇಶದಲ್ಲಿ ಅತ್ಯುತ್ತಮ ಕೆಲಸ ಮಾಡಿದೆ, ಆದ್ದರಿಂದ ಸರ್ಕಾರವನ್ನು ಜೈಲಿನಿಂದ ನಡೆಸಲು ಅನುಮತಿ ನೀಡಬೇಕು ಎಂದು ತಿಳಿಸಿದ್ದು, ತಮ್ಮ ಅರ್ಜಿಯನ್ನು ಶೀಘ್ರವಾಗಿ ವಿಚಾರಣೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಕೇಜ್ರಿವಾಲ್ ಜೈಲಿನಿಂದ ಸರ್ಕಾರ ನಡೆಸುತ್ತಾರಾ?: ದೆಹಲಿಯ ಮದ್ಯ ಹಗರಣದಲ್ಲಿ ಇಡಿ ಮಾರ್ಚ್ 21 ರಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿತ್ತು. ಅಂದಿನಿಂದ ಆಮ್ ಆದ್ಮಿ ಪಕ್ಷ ಜೈಲಿನಿಂದಲೇ ಸರ್ಕಾರ ನಡೆಸುತ್ತಿದೆ. ಇದೀಗ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಾಠಕ್ ಅವರು ಮುಂದಿನ ವಾರದಿಂದ ಕೇಜ್ರಿವಾಲ್ ಇಬ್ಬರು ಸಚಿವರನ್ನು ಜೈಲಿನಲ್ಲಿಯೇ ಭೇಟಿಯಾಗಿ ಸರ್ಕಾರದ ಕಾರ್ಯವೈಖರಿಯನ್ನು ಪರಿಶೀಲಿಸಲಿದ್ದಾರೆ ಎಂದು ತಿಳಿಸಿದ್ದಾರೆ. ದೆಹಲಿ ಸರ್ಕಾರದ ಸಚಿವರಾದ ಅತಿಶಿ, ಕೈಲಾಶ್ ಗೆಹ್ಲೋಟ್ ಮತ್ತು ಸೌರಭ್ ಭಾರದ್ವಾಜ್ ಅವರ ಹೆಸರನ್ನು ಸಂದರ್ಶಕರ ಪಟ್ಟಿಗೆ ಸೇರಿಸಲಾಗಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂವರು ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ವಾರಕ್ಕೆ ಎರಡು ಬಾರಿ ಭೇಟಿ ಮಾಡಬಹುದಾಗಿದೆ. ಕೇಜ್ರಿವಾಲ್ ಜೈಲಿನಿಂದ ಸರ್ಕಾರವನ್ನು ನಡೆಸುವುದನ್ನು ತಡೆಯುವ ಯಾವುದೇ ಕಾನೂನು ಅಥವಾ ನಿಯಮವಿಲ್ಲ. ಕೇಜ್ರಿವಾಲ್ ಇನ್ನೂ ಮುಖ್ಯಮಂತ್ರಿಯಾಗಿದ್ದು, ಜೈಲಿನಿಂದ ಸರ್ಕಾರವನ್ನು ನಡೆಸಬಹುದಾಗಿದೆ.
ತಿಹಾರ್ ಜೈಲಿನ ಅಧೀಕ್ಷಕರಾಗಿರುವ ಸುನಿಲ್ ಗುಪ್ತಾ ಮಾತನಾಡಿದ್ದು, ದೆಹಲಿ ಕಾರಾಗೃಹ ಕಾಯ್ದೆ 2000 ರ ಪ್ರಕಾರ, ಯಾವುದೇ ಸ್ಥಳ ಅಥವಾ ಕಟ್ಟಡವನ್ನು ಜೈಲು ಎಂದು ಘೋಷಿಸಬಹುದು ಮತ್ತು ಕೇಜ್ರಿವಾಲ್ ಅಲ್ಲಿಯೇ ಇದ್ದು ಸರ್ಕಾರವನ್ನು ನಡೆಸಬಹುದು ಎಂದು ಹೇಳಿದ್ದರು. ಆದಾಗ್ಯೂ, ಇದು ಎಲ್ಲಾ ಲೆಫ್ಟಿನೆಂಟ್ ಗವರ್ನರ್ ಅನ್ನು ಅವಲಂಬಿಸಿರುತ್ತದೆ. ಸುಬ್ರತಾ ರಾಯ್ ಸಹಾರಾ ಜೈಲಿನಲ್ಲಿದ್ದಾಗ, ಇಲ್ಲಿನ ಜೈಲಿನ ಸಂಕೀರ್ಣವನ್ನೇ ಜೈಲು ಎಂದು ಘೋಷಿಸಲಾಯಿತು ಎಂದು ಸುನೀಲ್ ಗುಪ್ತಾ ಹೇಳಿದ್ದರು. ಇಂಟರ್‌ನೆಟ್, ಫೋನ್ ಮತ್ತು ವಿಡಿಯೋ ಕಾನ್ಫರೆನ್ಸಿಂಗ್‌ಗೆ ಸೌಲಭ್ಯಗಳಿದ್ದವು. ಇಲ್ಲೇ ಉಳಿದುಕೊಂಡಿದ್ದ ಸಹಾರಾ ತನ್ನ ಆಸ್ತಿಯನ್ನು ಮಾರಿ ಸಾಲ ತೀರಿಸಿದ್ದರು. ಇದೀಗ ಜೈಲಿನಿಂದಲೇ ಕೇಜ್ರಿವಾಲ್ ಸರ್ಕಾರ ನಡೆಸಲು ಸೂಕ್ತ ವ್ಯವಸ್ಥೆ ಮಾಡಬೇಕೆಂದು ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಒಂದು ವೇಳೆ ಹೈಕೋರ್ಟ್ ಅರ್ಜಿಯನ್ನು ಆಲಿಸಿ ವ್ಯವಸ್ಥೆ ಮಾಡಲು ಆದೇಶಿಸಿದರೆ, ತಿಹಾರ್‌ನಲ್ಲಿಯೂ ಕೇಜ್ರಿವಾಲ್‌ಗೆ ಇದೇ ರೀತಿಯ ವ್ಯವಸ್ಥೆ ಮಾಡಬಹುದು.