Mehbooba Mufti controversial statement: ದೆಹಲಿ ಕಾರ್ ಬಾಂಬ್ ಸ್ಫೋಟಕ್ಕೆ ಕೇಂದ್ರ ಸರ್ಕಾರದ ನೀತಿಗಳೇ ಕಾರಣ ಎಂದು ಜೆಕೆಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ. ಅವರ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ದೆಹಲಿ ಸ್ಫೋಟಕ್ಕೆ ಕೇಂದ್ರ ಸರ್ಕಾರದ ನೀತಿಯೇ ಕಾರಣ: ಮೆಹಬೂಬಾ ಮುಫ್ತಿ:
ದೆಹಲಿ: ಜಮ್ಮು ಹಾಗೂ ಕಾಶ್ಮೀರದ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಾಬೂಬಾ ಮುಫ್ತಿ ದೆಹಲಿ ಸ್ಫೋಟದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದಾರೆ. ಇವರ ಹೇಳಿಕೆಗಳು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಹಾಗಿದ್ದರೆ ಈ ಮೆಹಾಬೂಬಾ ಮುಫ್ತಿ ಹೇಳಿದ್ದೇನು? ನವಂಬರ್ 10ರಂದು ನಡೆದ ದೆಹಲಿ ಕಾರ್ ಬಾಂಬ್ ಸ್ಫೋಟದಲ್ಲಿ ಟೆರರ್ ಡಾಕ್ಟರ್ ಕಾಶ್ಮೀರ ಮೂಲದ ಉಮರ್ ನಬಿಯೂ ಸೇರಿದಂತೆ ಒಟ್ಟು 13 ಜನ ಮೃತಪಟ್ಟಿದ್ದು, ಈ ದುರಂತದಲ್ಲಿ ಗಾಯಗೊಂಡವರ ಸ್ಥಿತಿ ಗಂಭೀರವಾಗಿದೆ. ಹೀಗಿರುವಾಗ ಜಮ್ಮುಕಾಶ್ಮೀರದ ಪ್ರಾದೇಶಿಕ ಪಕ್ಷ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (JKPDP)ಯ ನಾಯಕಿ ಮೆಹಾಬೂಬಾ ಮುಫ್ತಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ದೇಹಲಿ ಬಾಂಬ್ ಸ್ಫೋಟಕ್ಕೆ ಕೇಂದ್ರ ಸರ್ಕಾರದ ಕಾರಣ ಎಂದು ನೇರ ಆರೋಪ ಮಾಡಿದ್ದಾರೆ. ಕೇಂದ್ರ ಸರ್ಕಾರವೂ ಕಣಿವೆ ರಾಜ್ಯದಲ್ಲಿ ಸೃಷ್ಟಿಸಿರುವ ವಿಷಕಾರಿ ವಾತಾವರಣದಿಂದಲೇ ಅಲ್ಲಿನ ಯುವ ಸಮುದಾಯ ಭಯೋತ್ಪಾದನೆಯ ಹಾದಿ ಹಿಡಿಯುತ್ತಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರವೇ ಜಮ್ಮು ಕಾಶ್ಮೀರದ ಯುವ ಟೆರರ್ ಡಾಕ್ಟರ್‌ಗಳು ನಡೆಸಿದ ಬಾಂಬ್ ದಾಳಿಗೆ ನೇರ ಕಾರಣ ಎಂದು ಮೆಹಬೂಬಾ ಆರೋಪಿಸಿದ್ದಾರೆ.
ಜಮ್ಮು ಕಾಶ್ಮೀರದ ಪೊಲೀಸರು ಬಯಲಿಗೆಳೆದ ಈ ವೈಟ್ ಕಾಲರ್ ಟೆರರ್ ಘಟಕದ ಹಿಂದಿರುವ ಬಹುತೇಕರು ವಿದ್ಯಾವಂತರು ಅದರಲ್ಲೂ ಕಾಶ್ಮೀರಿಗಳೇ ಆಗಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಹೀಗಿರುವಾಗ ಈ ಸ್ಫೋಟದಿಂದಾಗಿ ಕಾಶ್ಮೀರದ ಸಮಸ್ಯೆಗಳು ಕೆಂಪು ಕೋಟೆಯ ಮುಂದೆ ಪ್ರತಿಧ್ವನಿಸಿವೆ ಎಂದು ಮೆಹಾಬೂಬಾ ಮುಫ್ತಿ ಹೇಳಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಶ್ಮೀರದ ಸಮಸ್ಯೆಗಳು ಏನೆಂದು ದೆಹಲಿ ಕೆಂಪು ಕೋಟೆಯ ಮುಂದೆ ವ್ಯಕ್ತಪಡಿಸಲಾಯಿತು ಅಷ್ಟೇ: ಮುಫ್ತಿ
ಜಮ್ಮು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ವಿಷಕಾರಿ ವಾತಾವರಣವನ್ನು ಸೃಷ್ಟಿಸಿದೆ, ಮತ್ತು ಆ ವಾತಾವರಣವು ಕಾಶ್ಮೀರದ ಯುವಕರು ತಮ್ಮ ಮಾರ್ಗದಿಂದ ವಿಮುಖರಾಗಿ ತಮ್ಮದೇ ಆದ ಅಪಾಯಕಾರಿ ಮಾರ್ಗವನ್ನು ಸೃಷ್ಟಿಸಿಕೊಳ್ಳಲು ಕಾರಣವಾಗಿದೆ. ನಾನು ಆ ಯುವಕರಿಗೆ ಮತ್ತೊಮ್ಮೆ ಹೇಳುತ್ತೇನೆ, ಅವರು ಮಾಡುತ್ತಿರುವುದು ತಪ್ಪು. ಇಷ್ಟೊಂದು ಶಿಕ್ಷಣ ಪಡೆದ ನಂತರ ಈ ಕೆಲಸ ಮಾಡುವುದು ತಪ್ಪು ಎಂದು ಹೇಳಿದ ಮೆಹಾಬೂಬಾ, ಸರ್ಕಾರ ಕಾಶ್ಮೀರದಲ್ಲಿ ವಿನಾಶವನ್ನು ಸೃಷ್ಟಿಸಿದೆ. ಅವರು ಕಾಶ್ಮೀರದಲ್ಲಿ ದೌರ್ಜನ್ಯ ಎಸಗುತ್ತಾರೆ. ಸರ್ಕಾರ ಕಾಶ್ಮೀರದಲ್ಲಿ ಭಯೋತ್ಪಾದನೆಯ ವಾತಾವರಣವನ್ನು ಕೊನೆಗೊಳಿಸಬೇಕು. ಈ ಜನರು ಕಾಶ್ಮೀರದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಹೇಳುತ್ತಾರೆ, ಆದರೆ ಕಾಶ್ಮೀರದ ಸಮಸ್ಯೆಗಳು ಏನು ಎಂಬುದನ್ನು ದೆಹಲಿಯ ಕೆಂಪು ಕೋಟೆಯ ಮುಂದೆ ವ್ಯಕ್ತಪಡಿಸಲಾಯಿತು ಅಷ್ಟೇ ಎಂದು ಮೆಹಾಬೂಬಾ ಹೇಳಿಕೆ ನೀಡಿದ್ದಾರೆ.
ರಾಷ್ಟ್ರೀಯ ಭದ್ರತೆಗಿಂತ ವಿಭಜನೆಯ ರಾಜಕೀಯಕ್ಕೆ ಆದ್ಯತೆ ನೀಡಲಾಗ್ತಿದೆ. ನೀವು ಹಿಂದೂ-ಮುಸ್ಲಿಂ ಎಂದು ರಾಜಕೀಯ ಮಾಡುವ ಮೂಲಕ ಮತಗಳನ್ನು ಪಡೆಯಬಹುದು, ಆದರೆ ರಾಷ್ಟ್ರವು ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ದೆಹಲಿಗೆ ಏನಾದರೂ ತಿಳುವಳಿಕೆ ಇದೆಯೇ? ದೇಶವು ಕುರ್ಚಿಗಿಂತ ದೊಡ್ಡದಾಗಿದೆ ಎಂದು ಅವರು ಮೆಹಾಬೂಬಾ ಹೇಳಿದ್ದಾರೆ.ಮುಫ್ತಿ ಅವರ ಹೇಳಿಕೆಗೆ ಬಿಜೆಪಿಯ ಅನೇಕ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರು ಕೊಳಕು ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದು ಖಂಡನೀಯ. ಅವರು ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿಯಾಗಿ ಅವರು ಅಂತಹ ಹೇಳಿಕೆಗಳನ್ನು ನೀಡಬಾರದು. ಪ್ರಧಾನಿ ಮೋದಿ ಜಮ್ಮು ಮತ್ತು ಕಾಶ್ಮೀರಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ರವೀಂದರ್ ರೈನಾ ಹೇಳಿದ್ದಾರೆ. ಮೆಹಬೂಬಾ ಮುಫ್ತಿ ಅವರ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅವರ ಹೇಳಿಕೆ ಎಷ್ಟು ದುರದೃಷ್ಟಕರ. ವಿಶೇಷವಾಗಿ ನೀವು ಜಮ್ಮು ಮತ್ತು ಕಾಶ್ಮೀರದ ಯುವಕರೊಂದಿಗೆ ನಿಲ್ಲಬೇಕಾದ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ತುಂಬಾ ಕೆಳಮಟ್ಟಕ್ಕೆ ಇಳಿದಿದ್ದಾರೆ. ಅವರು ಕರುಣಾಜನಕ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ನಾಯಕ ಅಭಿಜೀತ್ ಜಸ್ರೋಟಿಯಾ ಹೇಳಿದ್ದಾರೆ.
13 ಜನರ ಬಲಿ ಪಡೆದ ದೆಹಲಿ ಸ್ಫೋಟ
ಕಳೆದ ವಾರ ದೆಹಲಿಯ ಕೆಂಪು ಕೋಟೆಯ ಬಳಿ ಬಿಳಿ ಬಣ್ಣದ ಹುಂಡೈ ಐ20 ಕಾರು ಸ್ಫೋಟಗೊಂಡಿತ್ತು. ಅದರಲ್ಲಿದ್ದ ಆತ್ಮಹತ್ಯಾ ಬಾಂಬರ್‌ನನ್ನು ಕಾಶ್ಮೀರ ನಿವಾಸಿ ಉಮರ್ ಮೊಹಮ್ಮದ್ ನಬಿ ಎಂದು ಗುರುತಿಸಲಾಗಿದೆ. ರಾಜಧಾನಿಯಿಂದ ಕೇವಲ 50 ಕಿ.ಮೀ ದೂರದಲ್ಲಿರುವ ಹರಿಯಾಣದ ಫರಿದಾಬಾದ್‌ನಲ್ಲಿ 2,900 ಕೆಜಿ ಸ್ಫೋಟಕಗಳು ಪತ್ತೆಯಾದ ದಿನದಂದು ಈ ಘಟನೆ ನಡೆದಿದೆ. ಈ ವೈಟ್ ಕಾಲರ್ ಮಾಡ್ಯೂಲ್‌ನ ಇಬ್ಬರು ಪ್ರಮುಖ ಸದಸ್ಯರಾದ ಡಾ. ಮುಜಮ್ಮಿಲ್ ಶಕೀಲ್ ಮತ್ತು ಡಾ. ಆದಿಲ್ ರಾಥರ್ ಅವರನ್ನು ಬಂಧಿಸಿ, ಕಾಶ್ಮೀರ ನಿವಾಸಿಗಳನ್ನು ವಶಕ್ಕೆ ಪಡೆದ ನಂತರ ಈ ಆತ್ಮಹತ್ಯಾ ಬಾಂಬರ್ ಭಯಭೀತರಾಗಿ ಸ್ಫೋಟ ಮಾಡಿರಬಹುದು ಎಂದು ತನಿಖಾಧಿಕಾರಿಗಳು ಹೇಳುತ್ತಿದ್ದಾರೆ.
ಜಮ್ಮು ಕಾಶ್ಮೀರ ಅಭಿವೃದ್ಧಿ ಆಗಿಲ್ಲವೇ?
ಅದೇನೇ ಇರಲಿ ಕಳೆದೊಂದು ದಶಕದಲ್ಲಿ ಜಮ್ಮು ಹಾಗೂ ಕಾಶ್ಮೀರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಪ್ರವಾಸೋದ್ಯಮದಲ್ಲಿ ಭಾರಿ ಏರಿಕೆ ಕಂಡಿದೆ. ಐಐಎಂ ಐಐಟಿಗಳ ಸ್ಥಾಪನೆಯಾಗಿದೆ. ಅದರಲ್ಲೂ ವಿಶೇಷವಾಗಿ ಒಬ್ಬರು ವೈದ್ಯಕೀಯ ಕೋರ್ಸ್ ಮಾಡಬೇಕೆಂದರೆ ಅದೇನು ಸುಲಭದ ಮಾತಂತು ಅಲ್ಲ, ಅದಕ್ಕೆ ಸಾಕಷ್ಟು ವೆಚ್ಚಗಳಿವೆ. ಹೀಗಿರುವಾಗ ಈ ಬ್ಲಾಸ್ಟ್‌ನಲ್ಲಿ ರೂವಾರಿಗಳು ಭಾಗಿಗಳು ಎಲ್ಲರೂ ವೈದ್ಯರು, ಲಕ್ಷ ಲಕ್ಷ ವೇತನವನ್ನು ಗಳಿಸುತ್ತಿದ್ದವರು. ಇಲ್ಲಿನ ವಿದ್ಯಾರ್ಥಿಗಳಿಗೆ ಸಾಕಷ್ಟು ಸ್ಕಾಲರ್ ಶಿಪ್‌ಗಳು ಸಿಗುತ್ತಿವೆ. ಹೀಗಿರುವಾಗ ಮೆಹಾಬೂಬಾ ಮಾತಿನ ಮರ್ಮ ಏನು? ಹಾಗಿದ್ದರೆ ಈ ಹೈ ಸ್ಕಾಲರ್‌ಗಳ ಕೃತ್ಯಕ್ಕೆ ಬೆಂಬಲಿಸ್ತಿರುವವರು ಯಾರು? ಯುವಕರ ದಾರಿ ತಪ್ಪಿಸುತ್ತಿರುವವರು ಯಾರು ಯೋಚನೆ ಮಾಡಿ..
ಇದನ್ನೂ ಓದಿ: ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಕ್ ಹಸೀನಾಗೆ ಗಲ್ಲು ಶಿಕ್ಷೆ: ಢಾಕಾ ಕೋರ್ಟ್ ಆದೇಶ
ಇದನ್ನೂ ಓದಿ: ಮಗುವಿಗೆ ಆಟ ಅಮ್ಮನಿಗೆ ಸಂಕಟ: ರೂಮ್ ಒಳಗಿಂದ ಲಾಕ್ ಮಾಡ್ಕೊಂಡ ಹೊರಬರಲಾರದೇ ಅಳಲು ಶುರು ಮಾಡಿದ ಪುಟಾಣಿ