ಹಬ್ಬ ಆಗಮಿಸುತ್ತಿದ್ದಂತೆ ಮದ್ಯಪ್ರಿಯರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಅಕ್ಟೋಬರ್‌ನಲ್ಲಿ ವಿಸ್ಕಿ, ಬಿಯರ್, ರಮ್, ವೋಡ್ಕಾ ಸೇರಿದಂತೆ ಮದ್ಯದ ಬೆಲೆ ಏರಿಕೆಯಾಗುತ್ತಿದೆ. ಅಷ್ಟಕ್ಕೂ ಮದ್ಯ ಬೆಲೆ ಏರಿಕೆಗೆ ಕಾರಣವೇನು?

ನವದೆಹಲಿ (ಸೆ.28) ಸಾಲು ಸಾಲು ಹಬ್ಬ, ವೀಕೆಂಡ್ , ರಜೆಗಳ ಕಾರಣ ಸರ್ಕಾರಗಳು ಮದ್ಯ ಮಾರಾಟ ಮೂಲಕ ಉತ್ತಮ ಆದಾಯ ನಿರೀಕ್ಷೆಯಲ್ಲಿದೆ. ಇದೇ ವೇಳೆ ಸರ್ಕಾರ ಬೆಲೆ ಏರಿಕೆಗೆ ಮುಂದಾಗಿದೆ. ಪರಿಣಾಮ ಮದ್ಯಪ್ರಿಯರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮದ್ಯ ಬೆಲೆ ಏರಿಕೆಯಾಗುತ್ತಿದೆ. ಅಬಕಾರಿ ಸುಂಕ ಹಾಗೂ ಮಾರಾಟಗಾರರ ಮಾರ್ಜಿನ್ ಏರಿಕೆ ಮಾಡಲಾಗುತ್ತಿದೆ. ಹೊಸ ಅಬಕಾರಿ ನೀತಿ ಕರಡು ರೆಡಿಯಾಗಿದ್ದು, ಅಕ್ಟೋಬರ್‌ನಲ್ಲಿ ಹೊಸ ನೀತಿ ಜಾರಿಯಾಗಲಿದೆ.

ಲೆಫ್ಟಿನೆಂಟ್‌ಗೆ ಶೀಘ್ರದಲ್ಲೇ ಹೊಸ ನೀತಿ ರವಾನೆ

ಅಬಕಾರಿ ಇಲಾಖೆ ಪ್ರಮುಖ ಅಧಿಕಾರಿ ನೇಮಕ ವಿಳಂಬದಿಂದ ಹೊಸ ಕರಡು ಪ್ರತಿಗೆ ಅಂತಿಮ ಸಹಿ ಬಿದ್ದಿಲ್ಲ. ಶೀಘ್ರದಲ್ಲೇ ಈ ಪ್ರತಿಯನ್ನು ಲೆಫ್ಟಿನೆಂಟ್ ಗವರ್ನರ್‌ ತರಣಜಿತ್ ಸಿಂಗ್ ಸಂಧುಗೆ ರವಾನಿಸಲಾಗುತ್ತದೆ. ಅಕ್ಟೋಬರ್ ತಿಂಗಳಲ್ಲಿ ಹೊಸ ನೀತಿ ಜಾರಿಯಾಗುವ ಸಾಧ್ಯತೆ ಇದೆ. ಈ ಪ್ರಕ್ರಿಯೆಗಳು ಮುಗಿದಿ ಮದ್ಯದ ಬೆಲೆ ಏರಿಕೆ ಅಕ್ಟೋಬರ್ ತಿಂಗಳ ಹಬ್ಬದ ಸಂದರ್ಭದಲ್ಲಿ ಪರಿಷ್ಕರಣೆಯಾಗುವ ಸಾಧ್ಯತೆ ಇದೆ.

ಹೊಸ ನೀತಿಯಲ್ಲಿ ಹಲವು ಬದಲಾವಣೆ

ಹೊಸ ನೀತಿಯಲ್ಲಿ ಕೆಲ ಪ್ರಮುಖ ಬದಲಾವಣೆ ಮಾಡಲಾಗುತ್ತಿದೆ. ರಿಟೇಲ್ ಮಾರ್ಜಿನ್, ಅಬಕಾರಿ ಸುಂಕದ ಜೊತೆಗೆ ರಿಟೇಲ್ ಎಂಆರ್‌ಪಿ ಶಾಪ್ ಕುರಿತು ಮಹತ್ವದ ಬದಲಾವಣೆ ಮಾಡಲಾಗುತ್ತಿದೆ. ಸದ್ಯ ದೆಹಲಿಯಲ್ಲಿ ಸರ್ಕಾರಿ ಪ್ರಾಯೋಜಿತ ಮದ್ಯದ ಶಾಪ್‌ಗಳಿವೆ. ಫಿಕ್ಸಿಡ್ ಮಾರ್ಜಿನ್‌ನಿಂದ ರಿಟೇಲ್ ಮಾರಾಟಗಾರರಗೆ ಹೆಚ್ಚಿನ ಲಾಭವಿಲ್ಲ. ಇದೀಗ ಹೊಸ ಬದಲಾವಣೆಯಿಂದ ಇದು ಸಾಧ್ಯವಾಗಲಿದೆ. ದೆಹಲಿಯಲ್ಲಿ ಪ್ರೀಮಿಯಂ ಮದ್ಯದ ಶಾಪ್ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರೀಮಿಯರ್ ಲಿಕ್ಕರ್ ಸ್ಟಾಕ್ ಕುರಿತು ನಿಮಯದಲ್ಲೂ ಸಡಿಲಿಕೆ ಮಾಡಲಾಗಿದೆ.

ಕಳೆದ ವರ್ಷ ಮುಖ್ಯಮಂತ್ರಿ ರೇಖಾ ಗುಪ್ತಾ ಹೊಸ ಅಭಕಾರಿ ನೀತಿ ಕುರಿತು ಮಾಹಿತಿ ನೀಡಿದ್ದರು. ಪಾರದರ್ಶಕತೆ ಕಾಪಾಡಿಕೊಳ್ಳಲು ಸಮಿತಿ ನೇಮಕ ಮಾಡಲಾಗಿದೆ. ಅಧಿಕಾರಿಗಳು, ತಜ್ಞರು ಸೇರಿ ಹೊಸ ಕರಡು ನೀತಿ ರೂಪಿಸಿದ್ದಾರೆ. ಹೊಸ ನೀತಿಯಿಂದ ಸರ್ಕಾರದ ಆದಾಯಕ್ಕೂ ನೆರವಾಗಲಿದೆ ಎಂದು ರೇಖಾ ಗುಪ್ತ ಹೇಳಿದ್ದಾರೆ.

ಪ್ರಮುಖವಾಗಿ ಸರ್ಕಾರದ ಬೊಕ್ಕಸ ತುಂಬಿಸಲು ಹೊಸ ನೀತಿ ಜಾರಿಯಾಗಲಿದೆ. ಸದ್ಯ ದೆಹಲಿಯಲ್ಲಿ ಬಿಯರ್ ಮೇಲೆ ಶೇಕಡಾ 150ರಷ್ಟು ಅಬಕಾರಿ ಸುಂಕ ವಿಧಿಸಲಾಗುತ್ತದೆ. ಆಮದು ಮಾಡುವ ಮದ್ಯಗಳ ಮೇಲೆ ಶೇಕಡಾ 85ರಷ್ಟು ಅಬಕಾರಿ ಸುಂಕ ವಿಧಿಸಲಾಗುತ್ತಿದೆ. ಇದರ ಜೊತೆಗೆ ಶೇಕಡಾ 25ರಷ್ಟು ವ್ಯಾಟ್ ಹಾಕಲಾಗುತ್ತದೆ. ಅಬಕಾರಿ ಸುಂಕ ಹೆಚ್ಚಳವಾಗುತ್ತಿದ್ದಂತೆ ಮದ್ಯಗಳ ಬೆಲೆಯೂ ಏರಿಕೆಯಾಗಲಿದೆ.