Asianet Suvarna News Asianet Suvarna News

ವಯನಾಡು ಭೀಕರ ಭೂಕುಸಿತ ದುರಂತ: ಮೃತರ ಸಂಖ್ಯೆ 270ಕ್ಕೇರಿಕೆ, 200ಕ್ಕೂ ಹೆಚ್ಚು ಮಂದಿ ನಾಪತ್ತೆ..!

130 ಶವಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 75 ಶವಗಳ ಗುರುತು ಪತ್ತೆಯಾಗಿದ್ದು, ಅವುಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಸೇನೆ, ನೌಕಾಪಡೆ, ಎನ್‌ಡಿಆರ್‌ಎಫ್‌ನ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಮುರಿದು ಬಿದ್ದ ಮನೆ, ಕಟ್ಟಡಗಳ ಅಡಿಯಲ್ಲಿ ಜನರ ಪತ್ತೆಗೆ ಹುಡುಕಾಟ ಮುಂದುವರೆಸಿವೆ. 

death toll has risen to 270 in wayanad landslide in kerala grg
Author
First Published Aug 1, 2024, 7:43 AM IST | Last Updated Aug 1, 2024, 10:07 AM IST

ವಯನಾಡು(ಆ.01):  ಕೇರಳದ ವಯನಾಡು ಜಿಲ್ಲೆಯ ಚೂರಲ್‌ಮಲೆ, ಮುಂಡಕ್ಕೆ ಸೇರಿ 4 ಗ್ರಾಮ ಗಳ ವ್ಯಾಪ್ತಿಯಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ಭೂಕುಸಿತದ ಮತ್ತಷ್ಟು ಭೀಕರತೆ ಬುಧವಾರದ ವೇಳೆಗೆ ಅನಾವರಣ ಗೊಂಡಿದೆ.ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 270ಕ್ಕೆ ಏರಿಕೆಯಾಗಿದ್ದರೆ, 200ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಹುಡುಕಾಟ ಮುಂದುವರೆಸಲಾಗಿದೆ. 

ಆದರೆ ಘಟನಾ ಸ್ಥಳದಲ್ಲಿ ಮುಂದುವರೆದಿರುವ ಮಳೆ, ಪ್ರತಿಕೂಲ ಪರಿಸ್ಥಿತಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು ಸಾವಿನ ಸಂಖ್ಯೆ ಹೆಚ್ಚುವ ಆತಂಕಕ್ಕೆ ಕಾರಣವಾಗಿದೆ. 4 ಗ್ರಾಮಗಳ ವ್ಯಾಪ್ತಿಯಲ್ಲಿ 500ಕ್ಕೂ ಹೆಚ್ಚು ಮನೆಗಳು ಕೊಚ್ಚಿಹೋಗಿರುವ ಕಾರಣ, ಸಾವಿನ ಸಂಖ್ಯೆ ಅಂದಾಜಿಗಿಂತ ಹೆಚ್ಚಾಗುವ ದೊಡ್ಡ ಆತಂಕ ಕಾಡಿದೆ. ಈ ನಡುವೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಯನಾಡಿಗೆ ಭೇಟಿ ನೀಡಲಿದ್ದಾರೆ. ಗುರುವಾರ
ನಾಲ್ಕೂ ಗ್ರಾಮಗಳನ್ನೂ ತಲುಪಲು ರಕ್ಷಣಾ ತಂಡಗಳು ಬುಧವಾರದ ವೇಳೆಗೆ ಯಶಸ್ವಿಯಾಗಿದ್ದು, ಎಲ್ಲೆಂದರಲ್ಲಿ ಕುಸಿದು ಬಿದ್ದಿರುವ ಕಟ್ಟಡಗಳು, ಮನೆ, ಕಟ್ಟಡ, ಅರಣ್ಯ, ಕೆಸರಿನಲ್ಲಿ ಶವಗಳು ಸಿಕ್ಕಿಬಿದ್ದಿರುವ ದೃಶ್ಯಗಳು ಕಾಣಸಿಕ್ಕಿವೆ. ಈವರೆಗೂ 250ಕ್ಕೂ ಹೆಚ್ಚು ಜನರು ದುರ್ಘ ಟನೆಗೆ ಬಲಿಯಾಗಿದ್ದು ಖಚಿತಪಟ್ಟಿದೆ. 

Wayanad Landslide: ದೇವರನಾಡಿಗೆ ದೇವರೇ ಗತಿ!

ಈ ಪೈಕಿ 130 ಶವಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 75 ಶವಗಳ ಗುರುತು ಪತ್ತೆಯಾಗಿದ್ದು, ಅವುಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಸೇನೆ, ನೌಕಾಪಡೆ, ಎನ್‌ಡಿಆರ್‌ಎಫ್‌ನ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಮುರಿದು ಬಿದ್ದ ಮನೆ, ಕಟ್ಟಡಗಳ ಅಡಿಯಲ್ಲಿ ಜನರ ಪತ್ತೆಗೆ ಹುಡುಕಾಟ ಮುಂದುವರೆಸಿವೆ. ಮನೆ, ಕೆಸರೊಳಗೆ ಸಿಕ್ಕಿಬಿದ್ದಿರಬಹುದಾದ ವ್ಯಕ್ತಿಗಳ ಪತ್ತೆಗೆ 'ಇಂಟೆಲಿಜೆಂಟ್ ಬರೀಡ್ ಆಪ್ಟೆಕ್ಟ್ ಡಿಟೆಕ್ಷನ್ ಸಿಸ್ಟಮ್' ಅನ್ನು ಬಳಸಲಾ ಗುತ್ತಿದೆ. ಅಲ್ಲದೆ ರಕ್ಷಣೆ ಮತ್ತು ತೆರವು ಕಾರ್ಯಾಚರಣೆಗೆ ಅಗತ್ಯವಾದ ಬೃಹತ್ ಯಂತ್ರಗಳನ್ನು ಸ್ಥಳಕ್ಕೆ ಕೊಂಡೊಯ್ಯಲಾಗುತ್ತಿದೆ. ಜೊತೆಗೆ ಸಂಪರ್ಕ ಕಡಿತಗೊಂಡ ಗ್ರಾಮಗಳ ನಡುವೆ ತುರ್ತು ಸಂಪರ್ಕ ಕಲ್ಪಿಸಲು ಅಗತ್ಯವಾದ ತಾತ್ಕಾಲಿಕ ಸೇತುವೆಯನ್ನು ಸೇನೆ ಬೆಂಗಳೂರಿನಿಂದ ವಯನಾಡಿಗೆ ರಸ್ತೆ ಮೂಲಕ ಸಾಗಿಸುತ್ತಿದೆ. ಕುಳಿತ, ಮಲಗಿದ ಸ್ಥಿತಿಯಲ್ಲೇ ಸಾವು: ಮಂಗಳವಾರ ಭೂಕುಸಿದ ವೇಳೆ ಹರಿದುಬಂದ ಭಾರೀ ಕೆಸರಿನ ಪರಿಣಾಮ ಜನರು ತಾವು ಕುರ್ಚಿಯಲ್ಲಿ ಕುಳಿತ, ಮಂಚದಲ್ಲಿ ಮಲಗಿದ ಸ್ಥಿತಿಯಲ್ಲೇ ಸಾವನ್ನಪ್ಪಿದ್ದಾರೆ. ಬುಧವಾರ ರಕ್ಷಣಾ ಕಾರ್ಯಚರಣೆಗೆ ತೆರಳಿದ್ದ ಸ್ಥಳೀಯರು ಇಂಥ ದೃಶ್ಯಗಳನ್ನು ಕಂಡು ಕಣ್ಣೀರಿಟ್ಟಿದ್ದಾರೆ.

ತಾತ್ಕಾಲಿಕ ಸೇತುವೆ: 

ಈ ನಡುವೆ ಚೂರಲ್‌ಮಲೆಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಒಮ್ಮೆಗೆ ಒಬ್ಬ ವ್ಯಕ್ತಿ ಸಂಚರಿಸಬಹುದಾದ ತಾತ್ಕಾಲಿಕ ಸೇತುವೆಯೊಂದನ್ನು ಸೇನೆ ಬುಧವಾರ ನಿರ್ಮಿಸಿದೆ. ಹೀಗಾಗಿ ರಕ್ಷಣೆ ಮತ್ತು ತೆರವು ಕಾರ್ಯಾಚರಣೆಗೆ ಬಲ ಬಂದಿದೆ.

ಕಾಪ್ಟರ್, ಶ್ವಾನ: 

ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗಾಗಿ ಸೇನೆ ಎರಡು ಹೆಲಿಕಾಪ್ಟರ್ ಮತ್ತು ಶ್ವಾನದಳಗಳನ್ನು ಬಳಕೆ ಮಾಡುತ್ತಿದೆ. ಸೇನೆಯ 300ಕ್ಕೂ ಹೆಚ್ಚು ಯೋಧರು ಈಗಾಗಲೇ ಘಟನಾ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.

ಕೇಂದ್ರ ಸಚಿವ ಜಾರ್ಜ್ ಭೇಟಿ, ಮೋದಿ ನಿಗಾ: 

ಕೇರಳ ಮೂಲದ ಕೇಂದ್ರ ಸಚಿವ ಜಾರ್ಜ್ ಕುರಿಯನ್ ಬುಧವಾರ ಭೂಕುಸಿತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಧಾನಿ ಮೋದಿ ಕೇರಳಕ್ಕೆ ಸಾಧ್ಯವಿರುವ ಎಲ್ಲಾ ನೆರವಿನ ಭರವಸೆ ನೀಡಿದ್ದಾರೆ ಎಂದರು.

ರಾಜ್ಯದ ಇಬ್ಬರಲ್ಲ, 12 ಜನರು ಬಲಿ!: ಇನ್ನೂ 9 ಕನ್ನಡಿಗರು ನಾಪತ್ತೆ

ಮಂಡ್ಯ / ಚಾಮರಾಜನಗರ/ ಮಡಿಕೇರಿ: ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭ ವಿಸಿದ ಗುಡ್ಡ ಕುಸಿತ ದುರಂತದಲ್ಲಿರಾಜ್ಯದ ಇನ್ನೂ 10 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ, ಮಂಡ್ಯ ಜಿಲ್ಲೆಯ ಐವರು, ಮೈಸೂ ರು, ಚಾಮರಾಜನಗರದ ತಲಾ ಇಬ್ಬರು ಹಾಗೂ ಕೊಡಗಿನ ಬಾಲಕ ಸೇರಿದ್ದಾರೆ. ಇದರಿಂದಾಗಿ ದುರಂತದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿದೆ. ಈ ಪೈಕಿ, 7 ಮೃತದೇಹಗಳು ಪತ್ತೆಯಾಗಿದ್ದು, ಉಳಿದವರ ಮೃತದೇಹಗಳಿಗಾಗಿ ಹುಡು ಕಾಟ ಮುಂದುವರಿದಿದೆ. ಇದೇ ವೇಳೆ, ದುರಂತದಲ್ಲಿ ಮಂಡ್ಯ ಜಿಲ್ಲೆಯ 9 ಮಂದಿ ನಾಪತ್ತೆಯಾಗಿದ್ದಾರೆ.

ಮಂಗಳವಾರ ಚಾಮರಾಜನಗರ ಜಿಲ್ಲೆ ಯ ಪುಟ್ಟಸಿದ್ದ ಶೆಟ್ಟಿ (62) ಮತ್ತು ರಾಣಿ ಮದ‌ರ್ (50) ಮೃತಪಟ್ಟ ಬಗ್ಗೆ ವರದಿ ಯಾಗಿತ್ತು. ಬುಧವಾರ ಚಾಮರಾಜನಗರ ತಾಲೂಕಿನ ಇರಸವಾಡಿ ಮೂಲದ ರಾಜನ್ ಮತ್ತು ರಜಿನಿ ದಂಪತಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಆದರೆ, ಅವರ ಮೃತದೇಹ ಇನ್ನೂ ಪತ್ತೆಯಾಗಬೇಕಿದೆ. ಇದೇ ವೇಳೆ, ಮಂಡ್ಯ ಜಿಲ್ಲೆ ಕೆ.ಆ‌ರ್.ಪೇಟೆಯ ಕತ್ತರಘಟ್ಟ ಗ್ರಾಮದ ಲೀಲಾವತಿ, ನಿಹಾಲ್ ಸಾವನ್ನ ಪ್ಪಿದ್ದು, ಅವರ ಮೃತದೇಹಗಳು ಪತ್ತೆಯಾಗಿವೆ. ಅಲ್ಲದೆ, ಜಿಲ್ಲೆಯ ಸಾವಿತ್ರಿ, ಅಚ್ಚು, ಶ್ರೀಕುಟ್ಟಿ ಎಂಬುವರು ಮೃತಪಟ್ಟಿದ್ದು, ಇವರ ಶವಗಳೂ ಪತ್ತೆಯಾಗಿವೆ. ಆದರೆ, ಈ ಮೂವರು ಯಾವ ಗ್ರಾಮಕ್ಕೆ ಸೇರಿದವರು ಎನ್ನುವುದು ತಿಳಿದು ಬಂದಿಲ್ಲ. ಈಗಾಗಲೇ ಅವರ ಸಂಬಂಧಿಕರು ಸ್ಥಳಕ್ಕೆ ತೆರಳಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ್‌ ಹೇಳಿದರು.

ಅಲ್ಲದೆ, ಜಿಲ್ಲೆಯ ಗುರುಮಲ್ಲ, ಸಾವಿತ್ರಿ, ಸಬೀತಾ, ಅಪ್ಪಣ್ಣ, ಅಶ್ವಿನಿ, ಜಿತು, ದಿವ್ಯಾ, ರತ್ನ ಸೇರಿ 9 ಮಂದಿ ದುರಂತದಲ್ಲಿ ನಾಪತ್ತೆಯಾಗಿದ್ದಾರೆ. ಇನ್ನು ಮೈಸೂರಿನ ಟಿ.ನರಸೀಪುರದ ಶಿವಣ್ಣ ಮತ್ತು ಶ್ರೇಯಾ(19) ಅವರ ಶವತ್ತೆಯಾಗಿದೆ. ಇವರ ಸಂಬಂಧಿ ಮಹ ದೇವಮ್ಮ ಎಂಬುವರು ನಿರಾಶ್ರಿತ ಕೇಂದ್ರದಲ್ಲಿ ಇದ್ದಾರೆಂಬ ಮಾಹಿತಿ ಸಿಕ್ಕಿದೆ. ಇದೇ ವೇಳೆ, ವಯನಾಡಿನ ಮೇಪಾಡಿಯಲ್ಲಿ ಕೊಡಗಿನ ವಿರಾಜಪೇಟೆ ತಾಲೂಕಿನ ಗುಹ್ಯ ಗ್ರಾಮದ ಕೂಲಿ ಕಾರ್ಮಿಕರಾದ ರವಿ-ಕವಿತಾ ದಂಪತಿಯ ಪುತ್ರ ರೋಹಿತ್ (9)ಎಂಬ ಬಾಲಕ ಮೃತಪಟ್ಟಿದ್ದಾನೆ.

ಈತ ಗುಹ್ಯ ಸರ್ಕಾರಿ ಶಾಲೆಯಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, 15 ದಿನಗಳ ಹಿಂದೆ ತಾಯಿ ಕವಿತಾ ಜೊತೆಗೆ ಮೈಪಾಡಿಗೆ ಹೋಗಿದ್ದ. ರೋಹಿತ್‌ನನ್ನು ತನ್ನ ಅಕ್ಕನ ಮನೆಯಲ್ಲಿ ಬಿಟ್ಟಿದ್ದ ಕವಿತಾ, ಬೇರೆಡೆ ಕೆಲಸಕ್ಕೆ ಹೋಗಿದ್ದರು. ಹೀಗಾಗಿ ತಾಯಿ ಕವಿತಾ ಬದುಕಿದ್ದು, ಮಗ ರೋಹಿತ್ ಮೃತಪಟ್ಟಿದ್ದಾನೆ.

ವಯನಾಡು ಬಳಿಕ ಕೇರಳದ ಮತ್ತೊಂದು ಜಿಲ್ಲೆಯಲ್ಲೂ 9 ಬಾರಿ ಭೂಕುಸಿತ, ಓರ್ವ ನಾಪತ್ತೆ, 12 ಮನೆಗಳು ಸರ್ವನಾಶ!

23ಕ್ಕೇ ಎಚ್ಚರಿಕೆ ಕೊಟ್ಟಿದ್ದೆವು

ಕೇರಳದಲ್ಲಿ ಭೂಕುಸಿತ ಸಂಭವಿಸಬಹುದು ಎಂದು ಜು.23ರಂದೇ ಕೇರಳಕ್ಕೆ ಎಚ್ಚರಿಕೆ ನೀಡಿದ್ದೆವು. ಎನ್‌ಡಿಆರ್‌ಎಫ್‌ನ 9 ಪಡೆಗಳನ್ನೂ ಕಳುಹಿಸಿದ್ದೆವು. ಆದರೂ ಕೇರಳ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. 

ಎಚ್ಚರಿಕೆ ಬಂದಿದ್ದು ಮಳೆ ಬಗ್ಗೆ ಕೇಂದ್ರ ಸರ್ಕಾರ ನಮಗೆ ಮಳೆಯ ಮುನ್ಸೂಚನೆ ಮಾತ್ರ ನೀಡಿತ್ತು. ಅವರು ಹೇಳಿದ್ದ ಕ್ಕಿಂತ ಹೆಚ್ಚು ಮಳೆಯಾಗಿದೆ. ಪ್ರಾಕೃತಿಕ ವಿಕೋಪದ ಬಗ್ಗೆ ಹೇಳಿರಲಿಲ್ಲ. ದೂಷಿಸುವ ಆಟಕ್ಕೆ ಇದು ಸರಿಯಾದ ಸಮಯವಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ. 

Latest Videos
Follow Us:
Download App:
  • android
  • ios