ಪಾಲಕ್ಕಾಡ್ ಜಿಲ್ಲೆಯಲ್ಲಿ 38 ವರ್ಷದ ಮಹಿಳೆಯೊಬ್ಬರಿಗೆ ನಿಪಾ ವೈರಸ್ ಸೋಂಕು ದೃಢಪಟ್ಟಿದೆ. ನೂರಕ್ಕೂ ಹೆಚ್ಚು ಜನ ಹೈರಿಸ್ಕ್ ಸಂಪರ್ಕ ಪಟ್ಟಿಯಲ್ಲಿದ್ದು, ಆರೋಗ್ಯ ಇಲಾಖೆ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದೆ. ಕಂಟೈನ್ಮೆಂಟ್ ವಲಯ ಘೋಷಿಸಲಾಗಿದ್ದು, ಮತ್ತೊಬ್ಬರಿಗೂ ಸೋಂಕು ಇರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಪಾಲಕ್ಕಾಡ್ (ಜು. 4): ಕೇರಳದ ಪಾಲಕ್ಕಾಡ್ ಜಿಲ್ಲೆಯ ತಚ್ಚನಾಟ್ಟುಕರ ಮೂಲದ 38 ವರ್ಷದ ಮಹಿಳೆಗೆ ನಿಪಾ ವೈರಸ್ ಸೋಂಕು ದೃಢಪಟ್ಟಿದ್ದು, ಜಿಲ್ಲೆಯ ಆರೋಗ್ಯ ಇಲಾಖೆ ಹಾಗೂ ಆಡಳಿತವು ತುರ್ತಾಗಿ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿದೆ. ಪುಣೆ ವೈರಾಲಜಿ ಲ್ಯಾಬೋರೇಟರಿಯಿಂದ ಬಂದ ವರದಿಯು ನಿಪಾ ಸೋಂಕು ದೃಢಪಡಿಸಿದ್ದು, ಸುಮಾರು ನೂರಕ್ಕೂ ಹೆಚ್ಚು ಜನ ಹೈರಿಸ್ಕ್ ಸಂಪರ್ಕ ಪಟ್ಟಿಯಲ್ಲಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.

ರೋಗಿ ಚಿಕಿತ್ಸೆ ಮತ್ತು ಸಂಪರ್ಕ ಪಟ್ಟಿ

  • ನಿಪಾವೈರಸ್ ಸೋಂಕಿತ ಮಹಿಳೆ ಪ್ರಸ್ತುತ ಪೆರಿಂತಲ್ಮನ್ನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
  • 20 ದಿನಗಳ ಹಿಂದೆ ಜ್ವರ ಕಾಣಿಸಿಕೊಂಡ ಮಹಿಳೆ, ಮನೆಯ ಸಮೀಪದ ಮಣ್ಣಾರ್ಕಾಡ್, ಪಾಲೋಡ್ ಮತ್ತು ಕರಿಂಕಲ್ಲತಾಣಿಯ 3 ಖಾಸಗಿ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.
  • ಮಹಿಳೆ ಅವರ ಮಕ್ಕಳೊಂದಿಗೆ ವಾಸವಿದ್ದು, ಪತಿ ವಿದೇಶದಲ್ಲಿದ್ದು ಈಗ ಊರಿಗೆ ಮರಳಿದ್ದಾರೆ.
  • ನಿಪಾವೈರಸ್ ದೃಢಪಟ್ಟ ಬಳಿಕ, ಸ್ಥಳೀಯ ನೆರೆಹೊರೆಯ ಮನೆಯವರನ್ನೂ ಹೈರಿಸ್ಕ್ ಸಂಪರ್ಕ ಪಟ್ಟಿಗೆ ಸೇರಿಸಲಾಗಿದೆ.
  • ಆದರೆ, ಪ್ರಸ್ತುತ ಯಾವುದೇ ವ್ಯಕ್ತಿಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಮಹಿಳೆಯ ಮಕ್ಕಳಿಗೂ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ.

ಕಂಟೈನ್ಮೆಂಟ್ ವಲಯ ಘೋಷಣೆ

ಮಹಿಳೆ ತಂಗಿದ್ದ ನಾಟ್ಟುಕಲ್ ಕಿಳಕ್ಕುಂಪರಂ ಪ್ರದೇಶದ 3 ಕಿ.ಮೀ ವ್ಯಾಪ್ತಿಯನ್ನು ಸಂಪೂರ್ಣ ಕಂಟೈನ್ಮೆಂಟ್ ವಲಯವೆಂದು ಘೋಷಿಸಲಾಗಿದೆ. ಪಾಲಕ್ಕಾಡ್‌ನ 5 ವಾರ್ಡ್‌ಗಳ ಮೇಲೂ ನಿಗಾವಹಿಸಲಾಗಿದೆ. ಜೊತೆಗೆ, ಪಾಲಕ್ಕಾಡಿನ ತಚ್ಚನಾಟ್ಟುಕರ ಮತ್ತೊಬ್ಬ ನಿವಾಸಿಗೆ ನಿಪಾ ಸೋಂಕು ಇರಬಹುದು ಎಂದು ಶಂಕಿಸಲಾಗಿದೆ. ಇವರ ಮಾದರಿಗಳನ್ನು ಪುಣೆಯ ವೈರಾಲಜಿ ಲ್ಯಾಬ್‌ಗೆ ಕಳುಹಿಸಲಾಗಿದ್ದು, ವರದಿ ಸಂಜೆ 4 ಗಂಟೆಗೆ ಬರುವುದೆಂದು ಜಿಲ್ಲಾಡಳಿತ ತಿಳಿಸಿದೆ.

ನಿಪಾ ವೈರಸ್ ಎಂದರೇನು?

ನಿಪಾ ವೈರಸ್ ಒಂದು ಜೂನೋಟಿಕ್ ವೈರಸ್ ಆಗಿದ್ದು, ಇದು ಹೆನಿಪಾ ವೈರಸ್ (henipavirus) ಪ್ರಭೇದಕ್ಕೆ ಸೇರಿದೆ. ಇದು ಹೆಚ್ಚು ಸಾವೂಳ್ಳ ರೋಗವಾಗಿದ್ದು, ಮೂಲತಃ ಬಾವಲಿಗಳಿಂದ ಹರಡುತ್ತದೆ. ಕೆಲವೊಮ್ಮೆ ಹಂದಿಗಳಿಂದಲೂ ಮನುಷ್ಯರಿಗೆ ಹರಡುತ್ತದೆ. ಮನುಷ್ಯರಿಂದ ಮನುಷ್ಯರಿಗೂ ರೋಗ ಹರಡುವ ಸಂಭವವಿದೆ.

ನಿಪಾವೈರಸ್ ಲಕ್ಷಣಗಳು:

  • ಶೀಘ್ರ ಜ್ವರ
  • ತಲೆನೋವು,
  • ತಲೆಸುತ್ತು
  • ಆಯಾಸ,
  • ಮಸುಕಾದ ದೃಷ್ಟಿ
  • ಪ್ರಜ್ಞಾಹೀನತೆ,
  • ನಿಪಾವೈರಸ್ ಮೆದುಳಿಗೆ ಹರಡಿದರೆ ಕೋಮಾ ಸ್ಥಿತಿ
  • ಸಾಧಾರಣವಾಗಿ ರೋಗ ಲಕ್ಷಣಗಳು ಸೋಂಕು ತಗಲಿದ 5–14 ದಿನಗಳಲ್ಲಿ ಕಾಣಿಸಿಕೊಳ್ಳುತ್ತವೆ.

ನಿಪಾ ವೈರಸ್ ಬಗ್ಗೆ ಜಾಗ್ರತೆ ಅಗತ್ಯ

ಹೆನಿಪಾ ವೈರಸ್ ಜೀನಸ್‌ನಲ್ಲಿರುವ ನಿಪಾ ವೈರಸ್ ಪ್ಯಾರಾಮಿಕ್ಸೊವಿರಿಡೆ ಕುಟುಂಬಕ್ಕೆ ಸೇರಿದೆ. ಸಾಮಾನ್ಯವಾಗಿ ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡುವ ರೋಗ ಇದು. ವೈರಸ್ ಸೋಂಕಿತ ಬಾವಲಿಗಳು ಅಥವಾ ಹಂದಿಗಳಿಂದ ಮನುಷ್ಯರಿಗೆ ಹರಡಬಹುದು. ಮನುಷ್ಯರಿಂದ ಮನುಷ್ಯರಿಗೂ ಹರಡಬಹುದು. ಇದರ ರೋಗಲಕ್ಷಣಗಳು ಕಾಣಿಸಿಕೊಂಡ ಒಂದು ಅಥವಾ ಎರಡು ದಿನಗಳಲ್ಲಿ ಪ್ರಜ್ಞಾಹೀನತೆ ಮತ್ತು ಕೋಮಾಕ್ಕೆ ಕಾರಣವಾಗಬಹುದು.

ತಡೆಗಟ್ಟುವಿಕೆ ಕ್ರಮಗಳು:

  • ಮಾಸ್ಕ್ ಧರಿಸಿ, ಬಾಯಿ ಮತ್ತು ಮೂಗು ಮುಚ್ಚಿಕೊಳ್ಳಿ
  • ಕೈಗಳನ್ನು ಸಾಬೂನು ಹಾಗೂ ನೀರಿನಿಂದ ನಿರಂತರವಾಗಿ ತೊಳೆಯಿರಿ
  • ಸಾಮಾಜಿಕ ಅಂತರ ಕಾಪಾಡಿ
  • ಶಂಕಿತ ರೋಗಿಗಳ ಸಂಪರ್ಕದಿಂದ ದೂರವಿರಿ
  • ಬಾವಲಿಗಳು ಕಚ್ಚಿದ ಹಣ್ಣುಗಳ ಸೇವನೆ ತಪ್ಪಿಸಿ
  • ಸೋಂಕಿತ ವ್ಯಕ್ತಿಗೆ ಬಳಸುವ ಸಾಮಗ್ರಿಗಳು ಒಮ್ಮೆ ಬಳಸಿ ಬೀಸಾಡುವಂತಹವು ಆಗಿರಲಿ.

ಪಾಲಕ್ಕಾಡ್‌ನಲ್ಲಿ 2021ರ ಬಳಿಕ ಮತ್ತೊಮ್ಮೆ ನಿಪಾ ವೈರಸ್ ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಆತಂಕದ ವಾತಾವರಣ ಮೂಡಿಸಿದೆ. ಹೈರಿಸ್ಕ್ ಪಟ್ಟಿ, ಕಂಟೈನ್ಮೆಂಟ್ ವಲಯಗಳು ಹಾಗೂ ಜಾಗೃತಾ ಕ್ರಮಗಳೊಂದಿಗೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಸಾಮಾನ್ಯರಿಗೆ ನಿಪಾ ವೈರಸ್ ಕುರಿತು ಅರಿವು, ಜಾಗೃತಿ ಮತ್ತು ಎಚ್ಚರಿಕೆ ಮಾತ್ರವೇ ರಕ್ಷಣೆಯ ಮಾರ್ಗ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ರವಾನಿಸಿದೆ.