Chandrayaan-3 ಯಶಸ್ಸಿನ ಬಳಿಕ ಕೇರಳದ ಭದ್ರಕಾಳಿ ದೇಗುಲದಲ್ಲಿ ಇಸ್ರೋ ಅಧ್ಯಕ್ಷರ ಪ್ರಾರ್ಥನೆ: ಸೂರ್ಯ ಶಿಕಾರಿಗೆ ರೆಡಿ!
ಭಾರತದ ಮೊದಲ ಸೌರ ಮಿಷನ್ ಆದಿತ್ಯ-ಎಲ್ 1 ಅನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಉಡಾವಣೆ ಮಾಡಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಇಸ್ರೋ ಮುಖ್ಯಸ್ಥರು ಹೇಳಿದರು.
ನವದೆಹಲಿ (ಆಗಸ್ಟ್ 27, 2023): ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಐತಿಹಾಸಿಕ ಸಾಫ್ಟ್ ಲ್ಯಾಂಡಿಂಗ್ ಮಾಡಿದ ನಾಲ್ಕು ದಿನಗಳ ನಂತರ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಅವರು ಇಂದು ಕೇರಳದ ತಿರುವನಂತಪುರಂನಲ್ಲಿರುವ ಪೌರ್ಣಮಿಕಾವು - ಭದ್ರಕಾಳಿ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಚಂದ್ರಯಾನ-3 ಮಿಷನ್‌ನ ಯಶಸ್ಸನ್ನು ದೇಶವು ಆಚರಿಸುತ್ತಿರುವ ನಡುವೆ ಸೋಮನಾಥ್ ಅವರು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಬುಧವಾರ ಚಂದ್ರಯಾನ-3 ನ ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಿದಾಗ ಇತಿಹಾಸ ಸೃಷ್ಟಿಸಿದೆ. ಭಾರತವು ಆ ಸಾಧನೆಯನ್ನು ಸಾಧಿಸಿದ ನಾಲ್ಕನೇ ದೇಶವಾಗಿದೆ ಹಾಗೂ ಅಜ್ಞಾತ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲನೆಯ ರಾಷ್ಟ್ರ ಎನಿಸಿಕೊಂಡಿದೆ. ಚಂದ್ರಯಾನ 3 ಮಿಷನ್ ಉಡಾವಣೆಗೂ ಮುನ್ನ ತಿರುಪತಿ ದೇಗುಲಕ್ಕೆ ತೆರಳಿದ್ದ ಸೋಮನಾಥ್ ಅವರು ಈಗ ಸೂರ್ಯನತ್ತ ಉಪಗ್ರಹ ಉಡಾವಣೆಗೂ ಮುನ್ನ ಕೇರಳದ ಪೌರ್ಣಮಿಕಾವು - ಭದ್ರಕಾಳಿ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇದನ್ನು ಓದಿ: Mann ki baat: ಚಂದ್ರಯಾನ ಮಿಷನ್ ನವ ಭಾರತದ ಸ್ಪೂರ್ತಿ, ನಾರಿ ಶಕ್ತಿಯ ಜೀವಂತ ಉದಾಹರಣೆ: ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಇಸ್ರೋ ವಿಜ್ಞಾನಿಗಳನ್ನು ಉದ್ದೇಶಿಸಿ ನಿನ್ನೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಚಂದ್ರಯಾನ-3 ಲ್ಯಾಂಡರ್ ಸ್ಪರ್ಶಿಸಿದ ಚಂದ್ರನ ಸ್ಥಳವನ್ನು 'ಶಿವಶಕ್ತಿ ಪಾಯಿಂಟ್' ಎಂದು ಕರೆಯಲಾಗುತ್ತದೆ ಎಂದು ಘೋಷಿಸಿದ್ದಾರೆ. ಇನ್ನು, ಚಂದ್ರಯಾನ - 3 ಮಿಷನ್‌ನ ಯಶಸ್ಸಿನ ಕುರಿತು ಮಾತನಾಡಿದ ಸೋಮನಾಥ್, ಭಾರತವು ಈಗ ಚಂದ್ರ, ಮಂಗಳ ಮತ್ತು ಶುಕ್ರಕ್ಕೆ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು. ಪ್ರಧಾನಿ ಮೋದಿಯವರು ನೀಡಿದ ದೂರದೃಷ್ಟಿಯನ್ನು ಈಡೇರಿಸಲು ಇಸ್ರೋ ಸನ್ನದ್ಧವಾಗಿದೆ ಎಂದೂ ಸೋಮನಾಥ್ ಹೇಳಿದ್ದಾರೆ.
"ಭಾರತವು ಚಂದ್ರ, ಮಂಗಳ ಮತ್ತು ಶುಕ್ರಕ್ಕೆ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ನಾವು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕಾಗಿದೆ. ನಮಗೆ ಹೆಚ್ಚಿನ ಹೂಡಿಕೆಯ ಅಗತ್ಯವಿದೆ ಮತ್ತು ಬಾಹ್ಯಾಕಾಶ ಕ್ಷೇತ್ರವು ಅಭಿವೃದ್ಧಿ ಹೊಂದಬೇಕು ಮತ್ತು ಇದರಿಂದ ಇಡೀ ರಾಷ್ಟ್ರವು ಅಭಿವೃದ್ಧಿ ಹೊಂದಬೇಕು, ಅದು ನಮ್ಮ ಧ್ಯೇಯವಾಗಿದೆ. ಪ್ರಧಾನಿ ಮೋದಿಯವರು ನಮಗೆ ನೀಡಿದ ದೂರದೃಷ್ಟಿಯನ್ನು ಈಡೇರಿಸಲು ನಾವು ಸಿದ್ಧರಿದ್ದೇವೆ ಎಂದು ಇಸ್ರೋ ಅಧ್ಯಕ್ಷ ಸೋಮನಾಥ್ ತಿರುವನಂತಪುರಂ ಸುದ್ದಿ ಸಂಸ್ಥೆ ಎಎನ್‌ಐ ಉಲ್ಲೇಖಿಸಿ ಹೇಳಿದ್ದಾರೆ.
ಇದನ್ನೂ ಓದಿ: Chandrayaan: ಮೂರು ಮುಖ್ಯ ಉದ್ದೇಶಗಳಲ್ಲಿ 2 ಪೂರ್ಣ; ಇನ್ನೊಂದು ಪ್ರಗತಿಯಲ್ಲಿದೆ: ಇಸ್ರೋ
ಈ ಮಧ್ಯೆ, ಭಾರತದ ಮೊದಲ ಸೌರ ಮಿಷನ್ ಆದಿತ್ಯ-ಎಲ್ 1 ಅನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಉಡಾವಣೆ ಮಾಡಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದೂ ಇಸ್ರೋ ಮುಖ್ಯಸ್ಥರು ಹೇಳಿದರು. ಆದಿತ್ಯ ಎಲ್1 ಉಪಗ್ರಹ ಸಿದ್ಧವಾಗಿದೆ. ಇದು ಶ್ರೀಹರಿಕೋಟಾ ತಲುಪಿದ್ದು, ಪಿಎಸ್‌ಎಲ್‌ವಿ ಸಂಪರ್ಕ ಹೊಂದಿದೆ. ಇಸ್ರೋ ಮತ್ತು ದೇಶದ ಮುಂದಿನ ಗುರಿ ಅದರ ಉಡಾವಣೆಯಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಲಾಂಚ್ ಆಗಲಿದೆ. ಇನ್ನೆರಡು ದಿನಗಳಲ್ಲಿ ದಿನಾಂಕ ಪ್ರಕಟಿಸಲಾಗುವುದು ಎಂದೂ ಹೇಳಿದರು.
"ಉಡಾವಣೆಯ ನಂತರ, ಅದು ದೀರ್ಘವೃತ್ತದ ಕಕ್ಷೆಗೆ ಹೋಗುತ್ತದೆ ಮತ್ತು ಅದು L1 ಪಾಯಿಂಟ್‌ಗೆ ಪ್ರಯಾಣಿಸುತ್ತದೆ, ಇದು ಸುಮಾರು 120 ದಿನಗಳನ್ನು ತೆಗೆದುಕೊಳ್ಳುತ್ತದೆ’’ ಎಂದು ತಿಳಿಸಿದರು. ಆದಿತ್ಯ-L1 ಭಾರತದ ಮೊದಲ ಬಾಹ್ಯಾಕಾಶ ಆಧಾರಿತ ಸೌರ ವೀಕ್ಷಣಾಲಯವಾಗಿದ್ದು, ಸೂರ್ಯನನ್ನು ಅಧ್ಯಯನ ಮಾಡಲು ವಿನ್ಯಾಸಗೊಳಿಸಲಾಗಿದೆ.
ಇದನ್ನು ಓದಿ: ಯಾರಪ್ಪಾ ಇವ್ನು ಪುಂಗಿದಾಸ! ನಾನೇ CHANDRAYAAN 3 ಲ್ಯಾಂಡರ್ ಡಿಸೈನರ್; ನಾಸಾ ಜತೆಗೂ ಕೆಲಸ ಮಾಡ್ತೀನಿ ಎಂದ ಭೂಪ