ಟಿವಿ ಸೌಂಡ್ ಕಡಿಮೆ ಮಾಡೆಂದಿದ್ದಕ್ಕೆ ಸಿಟ್ಟು, ಜಪ ಮಾಡ್ತಿದ್ದ ಅತ್ತೆಯ ಕಚ್ಚಿ ಗಾಯಗೊಳಿಸಿದ ಸೊಸೆ
ಟಿವಿ ಸೌಂಡ್ ವಿಚಾರವಾಗಿ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ಅತ್ತೆಯ ಬಲಗೈಯ ಮೂರು ಬೆರಳುಗಳನ್ನು ಸೊಸೆ ಹಿಡಿದು ಕಚ್ಚಿದ್ದಾಳೆ. ಇದರಿಂದ ಅತ್ತೆಯ ಕೈಗಳಿಗೆ ಗಾಯಗಳಾಗಿವೆ. 32 ವರ್ಷದ ಸೊಸೆ ತನ್ನ 60 ವರ್ಷದ ಅತ್ತೆಯ ಮೇಲೆ ದೌರ್ಜನ್ಯವೆಸಗಿದ್ದಾಳೆ.
ಟಿವಿ ಸೌಂಡ್ ಕಡಿಮೆ ಮಾಡು ಎಂದ ಅತ್ತೆಯ ಕೈಗೆ ಸೊಸೆ ಕಚ್ಚಿ ಗಾಯಗೊಳಿಸಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಈ ಅತ್ತೆ ಸೊಸೆ ಸಣ್ಣ ಸಣ್ಣ ವಿಚಾರಗಳಿಗೆ ಆಗಾಗ ಜಗಳವಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸೆಪ್ಟೆಂಬರ್ ಐದರಂದು ಟಿವಿ ಸೌಂಡ್ ವಿಚಾರವಾಗಿ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ಅತ್ತೆಯ ಬಲಗೈಯ ಮೂರು ಬೆರಳುಗಳನ್ನು ಸೊಸೆ ಹಿಡಿದು ಕಚ್ಚಿದ್ದಾಳೆ. ಇದರಿಂದ ಅತ್ತೆಯ ಕೈಗಳಿಗೆ ಗಾಯಗಳಾಗಿವೆ. 32 ವರ್ಷದ ಸೊಸೆ ತನ್ನ 60 ವರ್ಷದ ಅತ್ತೆಯ ಮೇಲೆ ದೌರ್ಜನ್ಯವೆಸಗಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ಅಂಬೆರ್‌ನಾಥ್ ಪ್ರದೇಶದಲ್ಲಿರುವ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ (Shivaji Nagar police station) ಪ್ರಕರಣ ದಾಖಲಾಗಿದೆ. ಆದರೆ ಪ್ರಕರಣದಲ್ಲಿ ಸೊಸೆಯನ್ನು ಪೊಲೀಸರು ಬಂಧಿಸಿಲ್ಲ.ಅಂಬೇರ್‌ನಾಥ್ ಪೂರ್ವದಲ್ಲಿ ಬರುವ ವಡ್ವಾಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅತ್ತೆ ತನ್ನ ಧಾರ್ಮಿಕ ಕಾರ್ಯಗಳ ಭಾಗವಾಗಿ ಭಜನೆ ಮಾಡುತ್ತಿದ್ದು, ಈ ವೇಳೆ ಸೊಸೆ ಟಿವಿ ಸೌಂಡನ್ನು ಜೋರಾಗಿ ಇಟ್ಟು ಟಿವಿ ನೋಡುತ್ತಿದ್ದಳು. ಇದರಿಂದ ಅತ್ತೆ ಸೊಸೆಗೆ ಟಿವಿ ವಲ್ಯೂಮ್ ಅನ್ನು ಸ್ವಲ್ಪ ತಗ್ಗಿಸುವಂತೆ ಕೇಳಿದ್ದಾಳೆ. ಆದರೆ ಸೊಸೆ ಟಿವಿ ವಲ್ಯೂಮ್ ಕಡಿಮೆ ಮಾಡುವುದಕ್ಕೆ ಆಕೆ ಒಪ್ಪಲಿಲ್ಲ. ಅಲ್ಲದೇ ಅತ್ತೆ ಮೇಲೆ ಸಿಟ್ಟುಗೊಂಡ ಸೊಸೆ ಟಿವಿಯನ್ನು ಆಫ್ ಮಾಡಿ ಅತ್ತೆಯ ಹತ್ತಿರ ಬಂದು ಜಗಳಕ್ಕೆ ನಿಂತಿದ್ದು, ಇಬ್ಬರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿದೆ.
Shivamogga: ಗಂಡ-ಹೆಂಡತಿ ಜಗಳ ಪತ್ನಿ ಕೊಲೆಯಲ್ಲಿ ಅಂತ್ಯ!
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಶಿವಾಜಿನಗರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್, ಅಶೋಕ್ ಭಗತ್ (Ashok Bhagat), ನಮಗೆ ಈ ಜಗಳದ ಬಗ್ಗೆ 60 ವರ್ಷದ ಮಹಿಳೆಯಿಂದ ದೂರು ಬಂದಿದೆ. ಅಂಬೆರ್‌ನಾಥ್ (Ambernath) ಪ್ರದೇಶದ ನಿವಾಸಿಯಾಗಿರುವ 32 ವರ್ಷದ ತನ್ನ ಸೊಸೆ, ನನ್ನ ಮೇಲೆ ಹಲ್ಲೆ ಮಾಡಿದ್ದು, ಬಲಗೈನ ಬೆರಳುಗಳನ್ನು ಕಚ್ಚಿದ್ದಾಳೆ. ಸೊಸೆ ಟಿವಿ ನೋಡುತ್ತಿದ್ದು, ಟಿವಿ ಸೌಂಡ್ ಕಡಿಮೆ ಮಾಡು ಎಂದಿದ್ದಕ್ಕೆ ಹಲ್ಲೆ ಮಾಡಿದ್ದಾಳೆ. ನೀವು ಏನು ಬೇಕಾದರು ಮಾಡಿ ಆದರೆ ಟಿವಿ ಸೌಂಡ್ ಮಾತ್ರ ತಾನು ಕಡಿಮೆ ಮಾಡುವುದಿಲ್ಲ ಎಂದು ಸೊಸೆ ಅತ್ತೆ ಮೇಲೆ ರೇಗಾಡಿ ಹಲ್ಲೆ ಮಾಡಿದ್ದಾಳೆ ಎಂದು ಅತ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಭಾವಿ ಅತ್ತೆ-ಮಾವನ ಭೇಟಿ: ಮಾತನಾಡುವಾಗ ಇರಲಿ ನಾಲಿಗೆ ಮೇಲೆ ಹಿಡಿತ!
ಈ ವೇಳೆ ಸೊಸೆಗೆ ಅತ್ತೆಯೂ ಬೈದಿದ್ದು, ಇದು ನನ್ನ ಗಂಡನ ಮನೆ ನಿನ್ನ ಮನೆ ಅಲ್ಲ ಎಂದು ಹೇಳಿದ್ದಾಳೆ. ಈ ವೇಳೆ ಸಿಟ್ಟಿಗೆದ್ದ ಸೊಸೆ ಅತ್ತೆಯ ಮೂರು ಬೆರಳುಗಳನ್ನು ಕಚ್ಚಿ ಗಾಯಗೊಳಿಸಿದ್ದಾಳೆ. ಇದರಿಂದ ಅತ್ತೆ ಗಾಯಗೊಂಡಿದ್ದು, ವೈದ್ಯಕೀಯ ತಪಾಸಣೆಗೆ ಆಕೆಯನ್ನು ಕಳುಹಿಸಲಾಗಿದೆ ಹಾಗೂ ಸೊಸೆಯ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೇ ಈ ವೇಳೆ ಇಬ್ಬರ ಜಗಳ ಬಿಡಿಸಲು ಬಂದ ಮಗನ ಮೇಲೆಯೂ ಸೊಸೆ ಹಲ್ಲೆ ನಡೆಸಿದ್ದಾಳೆ ಎಂದು ಅತ್ತೆ ಆರೋಪಿಸಿದ್ದಾರೆ. ಅಲ್ಲದೇ ಇಬ್ಬರಿಗೂ ತಮ್ಮನ್ನು ಮುಂದೆ ನೋಡಿಕೊಳ್ಳುವುದಾಗಿ ಹೇಳಿ ಬೆದರಿಕೆಯೊಡ್ಡಿದ್ದಾಳೆ ಎಂದು ಅತ್ತೆ ಹೇಳಿದ್ದಾಳೆ. ಈ ಕುಟಂಬದಲ್ಲಿ ಆಗಾಗ ಜಗಳಗಳು ನಡೆಯುತ್ತಿದ್ದು, ಮಹಿಳೆಯ ಮಗ ಸೊಸೆಯ ಮಧ್ಯೆಯೂ ಜಗಳಗಳಾಗುತ್ತಿದ್ದು, ಈ ಗಂಡ ಹೆಂಡತಿ ನಡುವಿನ ಜಗಳ ವಿಚ್ಚೇದನಕ್ಕೆ ತಿರುಗಿದ್ದು, ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.