Karnataka Rain Alert: ಬಿಸಿಲಿನಿಂದ ಬಳಲುತ್ತಿರುವ ಜನತೆಗೆ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ. ಮಾರ್ಚ್ 11 ರಿಂದ ರಾಜ್ಯದ ಈ ಭಾಗದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಬೆಂಗಳೂರು: ಸೂರ್ಯ ದೇವ ಪ್ರತಾಪಕ್ಕೆ ನಲುಗಿರು ಜನತೆಯ ಮೊಗದಲ್ಲಿ ಮಂದಹಾಸ ತರಲು ಮಳೆರಾಯನ ಆಗಮನವಾಗಲಿದೆ. ಕಳೆದ ಒಂದು ತಿಂಗಳಿನಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ರಾಜಧಾನಿ ಕೂಲ್ ಬೆಂಗಳೂರಿನಲ್ಲಿ 33 ರಿಂದ 35 ಡಿಗ್ರಿ ಸೆಲ್ಸಿಯಸ್‌ವರೆಗೂ ತಾಪಮಾನ ದಾಖಲಾಗುತ್ತಿದೆ. ಇದೀಗ ಮಳೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಮಾರ್ಚ್ 11 ರಿಂದ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಮುನ್ಸೂಚನೆ ನೀಡಲಾಗಿದೆ. 

ತಾಪಮಾನ ಏರಿಕೆ ಹಿನ್ನೆಲೆ ಮಳೆ ಮಾರುತಗಳು ಸಕ್ರಿಯವಾಗಿದ್ದು,ಮಾರ್ಚ್ 11 ರಿಂದ 14 ರವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಮಳೆ ಬಳಿಕ ಬಹುತೇಕ ಉತ್ತರ ಒಳನಾಡಿನಲ್ಲಿ ಒಣ ಹವ ಮುಂದುವರೆಯುವ ಸಾಧ್ಯತೆಗಳಿವೆ. ಮೇ ವರೆಗೂ ಮುಂಗಾರು ಪೂರ್ವಾವಧಿ ಇರಲಿದೆ. 

ಮಳೆ ಬಳಿಕ ಮುಂದಿನ ಮೂರು ತಿಂಗಳು ವಾಡಿಕೆಗಿಂತ ಹೆಚ್ಚು ಬಿಸಿಲಿನ ಪ್ರಮಾಣ ಏರಿಕೆಯಾಗಲಿದೆ. ಈ ಮಧ್ಯೆ ಬೇಸಿಗೆ ಮಳೆಯೂ ಕೆಲವೊಮ್ಮೆ ತಂಪೆರೆಯುವ ಮುನ್ಸೂಚನೆ ನೀಡಲಾಗಿದೆ. ಮೇ ಕೊನೆ ವಾರದಲ್ಲಿ ಮುಂಗಾರು ಮಾರುತುಗಳು ಕೇರಳ ಕಡಲತೀರ ಪ್ರವೇಶಿಸಲಿದೆ ಎಂದು ಅಂದಾಜಿಸಲಾಗಿದೆ. 

ಅಧಿಕ ಬಿಸಿಲು, ಉದುರುತ್ತಿರುವ ಮಾವು ಹೂವು
ಅಧಿಕ ಬಿಸಿಲು, ಬೆಳಗ್ಗೆ ಮಂಜು ಸೇರಿದಂತೆ ಹವಾಮಾನ ವೈಪರೀತ್ಯದಿಂದ ಜಿಲ್ಲೆಯಲ್ಲಿ ಮಾವಿನ ಹೂವು ಉದುರುತ್ತಿರುವುದು ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಉತ್ತಮ ಮಳೆಯಿಂದಾಗಿ ಈ ಸಲ ಉತ್ತಮ ಮಾವು ಫಸಲಿನ ನಿರೀಕ್ಷೆಯಲ್ಲಿ ಇದ್ದ ಬೆಳೆಗಾರರಿಗೆ ಇದು ಆತಂಕ ಸೃಷ್ಟಿಸಿದೆ. ಕಳೆದ ಕೆಲವು ದಿನಗಳಿಂದ ಪ್ರಖರ ಬಿಸಿಲು ಬೀಳುತ್ತಿರುವುದರಿಂದ ಹೂವು ಉದುರುತ್ತಿದೆ. ಅಲ್ಲದೇ ಮಾವಿನ ಗಿಡಗಳನ್ನು ಸರಿಯಾಗಿ ನಿರ್ವಹಣೆ ಮಾಡದ್ದರಿಂದಲೂ ಬಿಸಿಲನ್ನು ತಡೆದುಕೊಳ್ಳುವ ಶಕ್ತಿಯಿಲ್ಲದೇ ಹೂವು ಉದುರುತ್ತವೆ ಎಂದು ತೋಟಗಾರಿಕೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಧರಿಸಲು ದುಂಡು ಮಲ್ಲಿಗೆ ಚೆಲುವೆಯರಿಗೆ 6 ವೇಟ್‌ಲೆಸ್ ಸೀರೆಗಳು

ತಂಪು ಪಾನಿಯಕ್ಕೆ ಮೊರೆ
ಬಿಸಿಲಿನ ಬೇಗೆಯಿಂದ ತತ್ತರಿಸಿರುವ ಜನರು ಹಣ್ಣು ಸೇರಿದಂತೆ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಬಿಸಿಲಿನ ಪ್ರಖರತೆಯಿಂದ ಕಾದು ಕೆಂಡವಾಗಿರುವ ಭೂಮಿಯಿಂದ ಜನರು ಮನೆಯಿಂದ ಆಚೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಬೆಳಗ್ಗೆ 10 ಗಂಟೆ ಆಗುತ್ತಿದ್ದಂತೆ ಸೂರ್ಯನ ಕಿರಣಗಳ ಪ್ರಖರತೆ ಪಡೆದು ಜನರು ಮನೆಯಿಂದ ಹೊರಬರುತ್ತಿಲ್ಲ. ಇದರಿಂದ ಮಾರುಕಟ್ಟೆ ಸೇರಿದಂತೆ ರಸ್ತೆಗಳು ಬೀಕೋ ಎನ್ನುತ್ತಿವೆ. ಜನರು ಮಾರುಕಟ್ಟೆಯತ್ತ ದಾವಿಸದೆ ಇರುವುದರಿಂದ ವ್ಯಾಪಾರ ವಹಿವಾಟಿಗೂ ಹೊಡೆತ ಬಿದ್ದಿದೆ. ಇದರಿಂದ ವಿವಿಧ ವ್ಯಾಪಾರಸ್ಥರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಹಣ್ಣಿನ ಅಂಗಡಿ ರಶ್‌
ಬಿಸಿಲಿನಿಂದ ತಪ್ಪಿಸಿಕೊಳ್ಳಲು ಜನರು ಹಣ್ಣು, ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಕಲ್ಲಂಗಡಿ, ಕಬ್ಬಿನ ಹಾಲು, ಎಳನೀರಿನ ಅಂಗಡಿಯಲ್ಲಿ ಜನರಿಂದ ತುಂಬಿ ತುಳುಕುತ್ತಿವೆ. ವ್ಯಾಪಾರಸ್ಥರಿಗೂ ಭರ್ಜರಿ ವ್ಯಾಪಾರ ಆಗುತ್ತಿದೆ. ಬೇಡಿಕೆ ಹೆಚ್ಚಾದಂತೆ ವಿವಿಧ ಹಣ್ಣುಗಳ ದರ ಹೆಚ್ಚಳವಾಗಿದೆ. ಆದರೂ ಸಹ ಗ್ರಾಹಕರು ದೇಹವನ್ನು ತಂಪಾಗಿ ಇಟ್ಟಕೊಳ್ಳಲು ಎಳನೀರು, ಕಲ್ಲಂಗಡಿ, ಅನಾನಸ್, ಕರಬೂಜ, ಪಪ್ಪಾಯಿ, ಪೇರಲ, ಪೈನಾಪಲ್, ಬಾಳೆಹಣ್ಣು, ದ್ರಾಕ್ಷಿ, ಕರಿದ್ರಾಕ್ಷಿ, ಕಿತ್ತಳೆ, ಮೋಸಂಬಿ, ಸೇಬು, ಸ್ಟ್ರಾಬೆರಿ ಹಣ್ಣಿನ ಜ್ಯೂಸ್, ಕಬ್ಬಿನ ಹಾಲು, ಲಿಂಬು ಸೋಡಾ, ಮಜ್ಜಿಗೆ, ಲಸ್ಸಿ ಸೇವಿಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಜನರಿಗೆ ಬೇಸಿಗೆಯಿಂದ ತಪ್ಪಿಸಿಕೊಳ್ಳಲು ಇಲ್ಲಿವೆ 7 ತಂಪಾದ ಸ್ಥಳಗಳು!