ಬಳ್ಳಾರಿಯಲ್ಲಿ ಸರ್ಕಾರಿ ಶಾಲೆಯನ್ನು ಉಳಿಸಲು ಸ್ವಾಮೀಜಿಯೊಬ್ಬರು ತಮ್ಮ ಮಠಕ್ಕೆ ಸೇರಿದ 2 ಎಕರೆ ಜಮೀನನ್ನು ದಾನ ಮಾಡಿದ್ದಾರೆ. ಶಾಲಾ ಕಟ್ಟಡ ನಿರ್ಮಾಣಕ್ಕೆ ಜಮೀನು ನೀಡುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿದ್ದಾರೆ.

ಬಳ್ಳಾರಿ (ಮಾ.09): ತುಂಡು ಭೂಮಿಗಾಗಿ ಅಣ್ಣ-ತಮ್ಮಂದಿರು ದಯಾದಿಗಳಾಗಿ, ನೆರೆಹೊರೆಯವರು ವೈರಿಗಳಾಗಿ ಹೊಡೆದಾಡುತ್ತಾ ಕೊಲೆ ಮಾಡುವ ಪ್ರಕರಣಗಳು ನಡೆಯುತ್ತಿವೆ. ಆದರೆ, ಇಲ್ಲೊಬ್ಬ ಸ್ವಾಮೀಜಿ ಸರ್ಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಮಠದ ಭೂಮಿಯಲ್ಲಿ ಶಾಲೆ ನಿರ್ಮಾಣಕ್ಕಾಗಿ 2 ಎಕರ ದಾನ ಮಾಡಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಗಡಿಗ್ರಾಮವಾದ ಕೆ.ಸೂಗೂರು ‌ಸರ್ಕಾರಿ ಪ್ರೌಢ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಸಿದ್ದಲಿಂಗೇಶ್ವರ ಮಠಾಧಿಪತಿ ಶಿವಯೋಗಿ ಮಲ್ಲಿಕಾರ್ಜುನ ಸ್ವಾಮೀಜಿ ಅವರು ಎರಡು ಎಕರೆ ಜಮೀನನ್ನು ದಾನ ಮಾಡಿದ್ದಾರೆ. ಸಿರಗುಪ್ಪ ನಗರದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಜಮೀನನ್ನು ಸರ್ಕಾರಿ ಶಾಲೆಯ ಹೆಸರಿಗೆ ನೋಂದಾಣಿ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಗುರಪ್ಪ ಅವರಿಗೆ ಭೂಮಿ ಹಕ್ಕು ಪತ್ರವನ್ನು ಹಸ್ತಾಂತರಿಸಿದ್ದಾರೆ. ಸರ್ಕಾರಿ ಶಾಲೆಯ ಉಳಿಯಬೇಕು‌. ಕನ್ನಡ ಬೆಳೆಯಬೇಕು ಎಂದು ಬಾಯಿ ಮಾತಿನಲ್ಲಿ ಹೇಳುವ ಅದೆಷ್ಟೋ ಜನರ ಮಧ್ಯೆ ಈ ಸ್ವಾಮಿಜಿ ಸರ್ಕಾರಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಜಮೀನು ದಾನ ಮಾಡುವ ಮೂಲಕ ಸರ್ಕಾರಿ ಶಾಲೆ ಉಳಿವಿಗಾಗಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಕೆ.ಸೂಗೂರು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು 2015ರಲ್ಲಿ ಉನ್ನತೀಕರಿಸಲಾಗಿತ್ತು. ಹೊಸ ಕಟ್ಟಡ ನಿರ್ಮಿಸಲು ಜಾಗದ ಅವಶ್ಯಕತೆ ಇತ್ತು. ಗ್ರಾಮದಲ್ಲಿ ಹಲವು ಬಾರಿ ಶಿಕ್ಷಣ ಇಲಾಖೆಯು ಸಾರ್ವಜನಿಕ ಸಂಪರ್ಕ ಸಭೆ ಏರ್ಪಡಿಸಿ ಜಮೀನು ಖರೀದಿ ಮಾಡಲು ಮುಂದಾಗಿದ್ದರು. ಆದರೆ, ಯಾರೊಬ್ಬರೂ ಭೂಮಿ ನೀಡಲು ಮುಂದೆ ಬಂದಿರಲಿಲ್ಲ. ಹೀಗಾಗಿ 2 ಕಿ.ಮೀ.ದೂರದಲ್ಲಿರುವ ಸರ್ಕಾರಿ ಜಾಗದಲ್ಲಿ ಶಾಲೆ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿತ್ತು. ಹೀಗೆ ಮಾಡಿದ್ರೇ ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಸವದತ್ತಿ ಯಲ್ಲಮ್ಮ ದೇವರಿಗೆ ಹೋದವರ ಕಾರು ಲಾರಿಗೆ ಡಿಕ್ಕಿ; ಬೆಂಗಳೂರಿನ ಐವರು ಸ್ಥಳದಲ್ಲೇ ಸಾವು!

ಇದನ್ನು ಮನಗೊಂಡು ಮಲ್ಲಿಕಾರ್ಜುನ ಸ್ವಾಮೀಜಿ ಶಾಲೆ ನಿರ್ಮಿಸಲು ಗ್ರಾಮದ ಮುಂದೆ ಇರೋ 2 ಎಕರೆ ಜಮೀನು ದಾನ ನೀಡಿದ್ದಾರೆ. ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಹೀಗಾಗಿ ಗ್ರಾಮಸ್ಥರ ಸಹಮತದಿಂದ ಭೂಮಿಯನ್ನು ದಾನ ಮಾಡಲಾಹಿದೆ. ಗ್ರಾಮದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಸ್ವಾಮೀಜಿ ಹೇಳಿದ್ದಾರೆ.