Asianet Suvarna News Asianet Suvarna News

ತಮಿಳುನಾಡಿನಲ್ಲಿ ಮಳೆಗೆ 17 ಜನ ಬಲಿ, ಈಗ ಆಂಧ್ರದ ಮೇಲೆ ಮೈಚಾಂಗ್‌ ದಾಳಿ!

ತಮಿಳುನಾಡಿನಲ್ಲಿ ಮಳೆಗೆ 17 ಮಂದಿ ಬಲಿಯಾಗಿದ್ದಾರೆ. ಈಗ ಆಂಧ್ರದ ಮೇಲೆ ಮೈಚಾಂಗ್‌ ದಾಳಿ ಮಾಡಿದ್ದು, ದಕ್ಷಿಣ ಆಂಧ್ರದ ಬಾಪ್ಟಾಲಾ ಕರಾವಳಿಗೆ ಚಂಡಮಾರುತ ಅಪ್ಪಳಿಸಿದೆ. ಆಂಧ್ರದಲ್ಲಿ 50 ವಿಮಾನ, 100 ರೈಲು ಸಂಚಾರ ರದ್ದು ಮಾಡಲಾಗಿದೆ.

 

cyclone michaung death toll rises in tamil nadu gow
Author
First Published Dec 6, 2023, 7:49 AM IST

ಅಮರಾವತಿ/ ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಸೃಷ್ಟಿಯಾಗಿದ್ದ ಮೈಚಾಂಗ್‌ ಚಂಡಮಾರುತ ಮಂಗಳವಾರ ಮಧ್ಯಾಹ್ನ ಆಂಧ್ರಪ್ರದೇಶದ ಬಾಪ್ಟಾಲಾ ಜಿಲ್ಲೆಯ ಕರಾವಳಿ ಪ್ರದೇಶಗಳ ಮೇಲೆ ಅಪ್ಪಳಿಸಿದೆ. ಚಂಡಮಾರುತದ ಪರಿಣಾಮವಾಗಿ ಆಂಧ್ರ ಮತ್ತು ಒಡಿಶಾದ ಕರಾವಳಿಯ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದಿದ್ದು, ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಚಂಡಮಾರುತದ ಪರಿಣಾಮ ರಾಜ್ಯದ ವಿವಿಧ ಭಾಗಗಳಲ್ಲಿ 50ಕ್ಕೂ ಹೆಚ್ಚು ವಿಮಾನ ಮತ್ತು 100ಕ್ಕೂ ಹೆಚ್ಚು ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.

ಆದರೆ ಮುಂಜಾಗ್ರತಾ ಕ್ರಮವಾಗಿ ಕರಾವಳಿ ಪ್ರದೇಶದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಿದ್ದ ಕಾರಣ ಸಾವು-ನೋವು ಸಂಭವಿಸಿಲ್ಲ. ಆದರೆ ಚಂಡಮಾರುತದ ಪ್ರಭಾವದಿಂದಾಗಿ ಭಾನುವಾರದಿಂದಲೇ ಭಾರೀ ಮಳೆಗೆ ಸಾಕ್ಷಿಯಾಗಿದ್ದ ತಮಿಳುನಾಡಿನಲ್ಲಿ ಮಳೆ ಸಂಬಂಧಿ ಘಟನೆಗೆ ಬಲಿಯಾದವರ ಸಂಖ್ಯೆ 17ಕ್ಕೆ ಏರಿದೆ. ಮಂಗಳವಾರ ತಮಿಳುನಾಡಿನ ಬಹುತೇಕ ಕಡೆ ಮಳೆ ನಿಂತಿದ್ದು, ರಾಜ್ಯ ಸರ್ಕಾರ ಪ್ರವಾಹೋಪಾದಿ ಪರಿಹಾರ ಕಾರ್ಯಗಳನ್ನು ಆರಂಭಿಸಿದೆ.

Michaungನಿಂದ ಚೆನ್ನೈನಲ್ಲಿ ಭಾರೀ ಮಳೆ: ನೀರಲ್ಲಿ ಕೊಚ್ಚಿ ಹೋಯ್ತು 10ಕ್ಕೂ ಹೆಚ್ಚು ಕಾರುಗಳು

ಆಂಧ್ರದ ಮೇಲೆ ದಾಳಿ: ಮೈಚಾಂಗ್‌ ಚಂಡಮಾರುತ ಮಂಗಳವಾರ ಮಧ್ಯಾಹ್ನದ ವೇಳೆಗೆ ಆಂಧ್ರದ ಬಾಪ್ಟಾಲಾ ಜಿಲ್ಲೆಯ ಮೇಲೆ ಅಪ್ಪಳಿಸಿದೆ. ಚಂಡಮಾರುತದ ಪರಿಣಾಮ ಗಂಟೆಗೆ 100-110 ಕಿ.ಮೀ ವೇಗದಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು ಸಾಮಾನ್ಯ ಜನಜೀವನ ಅಸ್ತವ್ಯಸ್ಥಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಬಾಪ್ಟಾಲಾ, ಕಾಕಿನಾಡ, ಕೃಷ್ಣಾ, ಪ್ರಕಾಶಂ, ನೆಲ್ಲೂರ್‌, ತಿರುಪತಿಯಲ್ಲಿ 211 ಪರಿಹಾರ ಕೇಂದ್ರಗಳನ್ನು ತೆರೆದು ಅಲ್ಲಿಗೆ ಈ ಜಿಲ್ಲೆಗಳ ವ್ಯಾಪ್ತಿಯ ಅಂದಾಜು 10000 ಜನರನ್ನು ಸ್ಥಳಾಂತರ ಮಾಡಲಾಗಿದೆ.

ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಚಂಡಮಾರುತ ಪೀಡಿತ ಜಿಲ್ಲೆಗಳ ಪ್ರತಿ ಪೊಲೀಸ್‌ ಠಾಣಾ ವ್ಯಾಪ್ತಿಗೆ ಒಂದರಂತೆ ಜೆಸಿಬಿ, ಕಟರ್‌ ಮಷಿನ್‌, ಹಗ್ಗ, ಮುಳುಗು ತಜ್ಞರ ತಂಡವನ್ನು ಒದಗಿಸಲಾಗಿದೆ. ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಇರುವ ಸೇತುವೆಗಳ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ಇದಲ್ಲದೆ ರಾಷ್ಟ್ರಿಯ ವಿಪತ್ತು ನಿರ್ವಹಣಾ ತಂಡ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡಗಳನ್ನು ಕೂಡಾ ಆಯಕಟ್ಟಿನ ಸ್ಥಳದಲ್ಲಿ ಸನ್ನದ್ಧ ಸ್ತಿತಿಯಲ್ಲಿ ಇರಿಸಲಾಗಿದೆ.

ಚಂಡಮಾರುತ ಎಫೆಕ್ಟ್‌: 3 ದಿನ ಹಲವು ರೈಲು ಸಂಚಾರ ರದ್ದು

ಸೋಮವಾರದಿಂದಲೇ ಆರಂಭವಾಗಿರುವ ಮಳೆ ಭುಧವಾರದವರೆಗೂ ಮುಂದುವರೆಯಲಿದೆ. ಹೀಗಾಗಿ ಯಾರೂ ಸಮುದ್ರಕ್ಕೆ ಇಳಿಯಬಾರದು. ಕರಾವಳಿ ಪ್ರದೇಶಗಳ ಜನತೆ ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಡಳಿಗಳು ಈಗಾಗಲೇ ಸೂಚಿಸಿವೆ. ಕೊನಸೀಮಾ, ಪಶ್ಚಿಮ ಗೋದಾವರಿ, ಕಡಪಾ, ನೆಲ್ಲೂರು, ಕಾಕಿನಾಡ ಎಲ್ಲೂರು, ಕೃಷ್ಣಾ, ಎನ್‌ಟಿಆರ್‌, ಪಲಂದು, ಬಾಪ್ಟಾಲಾ ಮತ್ತು ಪ್ರಕಾಶಂ ಜಿಲ್ಲೆಗಳ ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ 11 ರಿಂದ 20 ಸೆಂ.ಮೀವರೆಗೂ ಭಾರೀ ಮಳೆ ಸುರಿಯುವ ಮುನ್ನೆಚ್ಚರಿಕೆ ನೀಡಲಾಗಿದೆ. ಭಾರೀ ಮಳೆಯ ಪರಿಣಾಮ ತಿರುಪತಿ ಘಾಟ್ ರೋಡ್‌ನಲ್ಲಿ ದ್ವಿಚಕ್ರ ವಾಹನಗಳ ಸಂಚಾರದ ಮೇಲೆ ಟಿಟಿಡಿ ನಿಯಂತ್ರಣ ಹೇರಿದೆ.

17 ಸಾವು: ಚಂಡಮಾರುತದ ಹೊಡೆತಕ್ಕೆ ಸಿಕ್ಕಿದ್ದ ತಮಿಳುನಾಡಿನಲ್ಲಿ ಮಳೆ ಸಂಬಂಧಿ ಘಟನೆಗಳಿಗೆ ಬಲಿಯಾದವರ ಸಂಖ್ಯೆ 17ಕ್ಕೆ ಏರಿದೆ. ಆದರೆ ಮಂಗಳವಾರ ಮಳೆ ನಿಂತಿದೆ. ಮಳೆ ನಿಂತಿದ್ದರೂ ಇನ್ನೂ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಇರುವ ಕಾರಣ ಬೋಟ್‌ ಬಳಸಿ ಜನರನ್ನು ತೆರವುಗೊಳಿಸುವ ಕಾರ್ಯವನ್ನು ಮಂಗಳವಾರವೂ ನಡೆಸಲಾಗಿದೆ. ಮುಖ್ಯಮಂತ್ರಿ ಸ್ಟಾಲಿನ್‌ ನಗರ ಪ್ರದಕ್ಷಿಣೆ ಮಾಡಿ ಪರಿಹಾರ ಕಾಮಗಾರಿ ವೀಕ್ಷಿಸಿದರು.

ಕಳೆದ 24 ಗಂಟೆಗಳ ಅವಧಿಯಲ್ಲಿ ಚೆನ್ನೈನ ಪೆರುಂಗುಡಿಯಲ್ಲಿ 29 ಸೆ.ಮೀ., ತಿರುವಲ್ಲೂರು ಜಿಲ್ಲೆಯ ಅವಧಿಯಲ್ಲಿ 28 ಸೆ.ಮೀ., ಚೆಂಗಲ್‌ಪೇಟೆಯ ಮಾಮಲಪುರದಲ್ಲಿ 22 ಸೆಂ.ಮೀ.ನಷ್ಟು ಭಾರೀ ಮಳೆ ಸುರಿದಿದೆ.

ಮಳೆಗೆ ಸಾಕ್ಷಿಯಾದ 9 ಜಿಲ್ಲೆಗಳ ವ್ಯಾಪ್ತಿಯಲ್ಲಿ 61666 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ರಕ್ಷಣೆ ಮಾಡಿದವರಿಗೆ ಇವುಗಳಲ್ಲಿ ವಸತಿ ಮತ್ತು ಆಹಾರದ ವ್ಯವಸ್ಥೆ ಮಾಡಲಾಗಿದೆ. ಮಂಗಳವಾರ ಪರಿಸ್ಥಿತಿ ಸುಧಾರಣೆಯಾದ ಕಾರಣ ರಾಜ್ಯದಲ್ಲಿ ವಿಮಾನಗಳ ಸಂಚಾರ ಪುನಾರಂಭವಾಗಿದೆ.

Follow Us:
Download App:
  • android
  • ios