ಮೈಚುಂಗ್ ಚಂಡಮಾರುತದಿಂದಾಗಿ (Cyclone Michaung) ನೆರೆಯ ರಾಜ್ಯ ತಮಿಳುನಾಡಿನ ಚೆನ್ನೈನಲ್ಲಿ ಧಾರಾಕಾರ ಮಳೆಯಾಗ್ತಿದ್ದು, ಮಹಾನಗರಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಚೆನ್ನೈ: ಮೈಚುಂಗ್ ಚಂಡಮಾರುತದಿಂದಾಗಿ (Cyclone Michaung) ನೆರೆಯ ರಾಜ್ಯ ತಮಿಳುನಾಡಿನ ಚೆನ್ನೈನಲ್ಲಿ ಧಾರಾಕಾರ ಮಳೆಯಾಗ್ತಿದ್ದು, ಮಹಾನಗರಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮಳೆಯಿಂದಾಗಿ ಪಾರ್ಕಿಂಗ್ ಮಾಡಲಾಗಿದ್ದ ಕಾರುಗಳು ನೀರಲ್ಲಿ ಕೊಚ್ಚಿಕೊಂಡು ದೂರ ಹೋಗುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚೆನ್ನೈ ನಗರದ ಹಲವೆಡೆ ಜನವಸತಿ ಪ್ರದೇಶಗಳು ಮುಳುಗಡೆಯಾಗಿದ್ದು, ಅಲ್ಲಿಂದ ಜನರನ್ನು ಸ್ಥಳಾಂತರಿಸಲು ಸ್ಥಳೀಯಾಡಳಿತ ಹೆಣಗಾಡುತ್ತಿದೆ. ಸೈಕ್ಲೋನ್ ಮೈಚುಂಗ್‌ನಿಂದಾಗಿ ಚೆನ್ನೈ (Chennai Rain) ಸೇರಿದಂತೆ ಸಮೀಪದ ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿದೆ.
vittoba.balaji ಎಂಬುವವರು ಟ್ವಿಟ್ಟರ್‌ನಲ್ಲಿ 40 ಸೆಕೆಂಡ್‌ಗಳ ವೀಡಿಯೋ ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಪಾರ್ಕಿಂಗ್ ಮಾಡಿದ್ದ ಕಾರುಗಳು ನೀರಿನ ಪ್ರವಾಹಕ್ಕೆ ಸಾಲಾಗಿ ಕೊಚ್ಚಿ ಹೋಗುವುದನ್ನು ಕಾಣಬಹುದಾಗಿದೆ. ಚೆನ್ನೈನ ಪಲ್ಲಿಕರನೈ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಸಾಲಾಗಿ ನಿಲ್ಲಿಸಿದ್ದ 10ಕ್ಕೂ ಹೆಚ್ಚು ಕಾರುಗಳು ಪ್ರವಾಹದಲ್ಲಿ ಕೊಚ್ಚಿ ಹೋಗಬಹುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.
ಮೈಚುಂಗ್ ಚಂಡಮಾರುತ ಎಫೆಕ್ಟ್; ಕರ್ನಾಟಕದಲ್ಲೂ ಇನ್ನೆರಡು ದಿನ ಭಾರೀ ಮಳೆ ಸಾಧ್ಯತೆ!
ಮಳೆಯಿಂದಾಗಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಚೆನ್ನೈನ ಕ್ರೊಂಪೆಟ್ ಜಿಎಸ್‌ಟಿ ರೋಡ್‌ನಲ್ಲಿ ರಸ್ತೆಗಳೆಲ್ಲಾ ಪ್ರವಾಹ ನೀರಿನಿಂದಾಗಿ ನದಿಯಂತೆ ಉಕ್ಕಿ ಹರಿಯುತ್ತಿದ್ದು, ಉತ್ತರ ಚೆನ್ನೈನ ವಡಕರೈ ರಸ್ತೆಯೂ ಸಂಪೂರ್ಣ ಮುಳುಗಡೆಯಾಗಿದೆ. ಹೀಗಾಗಿ ಮಾಧವರಂನಿಂದ ಸೆಂಗುನ್ರಾಮ್‌ಗೆ ತೆರಳುವುದು ದುಸ್ತರವಾಗಿದೆ. ಚೆನ್ನೈ (Chennai Rain) ಹಾಗೂ ಸಮೀಪದ ಜಿಲ್ಲೆಗಳಲ್ಲಿ ರಾತ್ರಿಯೆಲ್ಲಾ ಧಾರಾಕಾರ ಮಳೆಯಾಗಿದ್ದು, ಮೆಂಬಾಕ್ಕಂನಲ್ಲಿ ದಾಖಲೆ 196 ಮಿಲಿ ಮೀಟರ್ ಮಳೆಯಾಗಿದೆ. ಹಾಗೆಯೇ ನುಂಗಬಾಕಂನಲ್ಲಿಯೂ ಕೇವಲ 24 ಗಂಟೆಯಲ್ಲಿ 154.3 ಮಿಲಿ ಮೀಟರ್ ಮಳೆಯಾಗಿದೆ.
ಮಳೆಯಿಂದಾಗಿ ಚೆನ್ನೈ ಹಾಗೂ ಸಮೀಪದ ಕೆಲ ಜಿಲ್ಲೆಗಳ ಶಾಲಾ ಕಾಲೇಜಗಳು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಖಾಸಗಿ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡುವಂತೆ ಸರ್ಕಾರ ಮನವಿ ಮಾಡಿದೆ. ಮಳೆಯಿಂದ ತೀವ್ರ ಹಾನಿಗೀಡಾದವರ ಆಶ್ರಯಕ್ಕಾಗಿ ಕರಾವಳಿ ಜಿಲ್ಲೆಯಲ್ಲಿ ಸುಮಾರು 5 ಸಾವಿರ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮಳೆ ಪೀಡಿತ ಜಿಲ್ಲೆಗಳಾದ ವಿಲ್ಲುಪುರಂ, ಮಯಿಲಡುತುರೈ, ನಾಗಪಟ್ಟಿನಂ, ತುವಲ್ಲುವರ್ ಕುಡ್ಲೂರು ಹಾಗೂ ಚೆಂಗಲಪಾಟು ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಕ್ಕಾಗಿ 8 ಎನ್‌ಡಿಆರ್‌ಎಫ್(NDRF), 9 ಎಸ್‌ಡಿಆರ್‌ಎಫ್(SDRF), ತಂಡಗಳನ್ನು ನಿಯೋಜಿಸಲಾಗಿದೆ.