ಸೈಬರ್ ವಂಚಕರ ವರ್ಚುವಲ್ ಅರೆಸ್ಟ್‌ನಲ್ಲಿದ್ದ 74 ವರ್ಷದ ವೃದ್ಧನನ್ನು ಪೊಲೀಸರು ರಕ್ಷಿಸಿದ್ದಾರೆ. ಮುಂಬೈ ಪೊಲೀಸರ ಸೋಗಿನಲ್ಲಿ ವಂಚಕರು, 10 ಲಕ್ಷ ರೂ. ವರ್ಗಾಯಿಸಲು ಯತ್ನಿಸಿದಾಗ ಬ್ಯಾಂಕ್ ಮ್ಯಾನೇಜರ್ ಅನುಮಾನದಿಂದ ಪೊಲೀಸರಿಗೆ ಮಾಹಿತಿ ನೀಡಿದರು. ಮಧ್ಯಸ್ಥಿಕೆಯಿಂದ ವೃದ್ಧರ ಪ್ರಾಣ, ಹಣ ಎರಡೂ ಉಳಿದಿದೆ.
ಕಳೆದ ಐದು ದಿನಗಳಿಂದ ವರ್ಚುವಲ್ ಅರೆಸ್ಟ್‌ನಲ್ಲಿದ್ದ (Cyber Fraud Digital Arrest) 74 ವರ್ಷದ ವೃದ್ಧನನ್ನು ಸೈಬರ್ ಪೊಲೀಸರು ರಕ್ಷಿಸಿದ್ದಾರೆ. ವಂಚಕರ ತಂಡಕ್ಕೆ 10 ಲಕ್ಷ ರೂ. ವರ್ಗಾಯಿಸಲು ಬ್ಯಾಂಕ್‌ಗೆ ಬಂದಾಗ ಮ್ಯಾನೇಜರ್‌ಗೆ ಉಂಟಾದ ಅನುಮಾನದಿಂದ 74 ವರ್ಷದ ವೃದ್ಧನ ಪ್ರಾಣ ಮತ್ತು ಜೀವಮಾನದ ಉಳಿತಾಯ ಹಣ ಎರಡೂ ಉಳಿದಿದೆ. ಹಣ ವರ್ಗಾಯಿಸಿದ ನಂತರ ಆತ್ಮ*ಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ ಎಂದು ಸಂತ್ರಸ್ತ ವೃದ್ಧ ಹೇಳಿದ್ದಾರೆ.
ಮಾಜಿ ಸರ್ಕಾರಿ ಅಧಿಕಾರಿಯಾಗಿದ್ದ ಈ ವೃದ್ಧನನ್ನು ಐದು ದಿನಗಳ ಕಾಲ ಮನೆಯೊಳಗೆ ವರ್ಚುವಲ್ ಅರೆಸ್ಟ್‌ನಲ್ಲಿ ಇರಿಸಲಾಗಿತ್ತು. ಮುಂಬೈ ಪೊಲೀಸರೆಂದು ಪರಿಚಯಿಸಿಕೊಂಡು ವಾಟ್ಸಾಪ್ ವಿಡಿಯೋ ಕಾಲ್ ಬಂದಿತ್ತು. ಆರ್ಥಿಕ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವುದರಿಂದ ನಿಮ್ಮನ್ನು ಬಂಧಿಸಲಾಗಿದೆ, ಈ ವಿಷಯವನ್ನು ಯಾರಿಗೂ ಹೇಳಬಾರದು ಎಂದು ವಂಚಕರ ತಂಡ ಹೇಳಿತ್ತು. ಪತ್ನಿಗೂ ವಿಷಯ ತಿಳಿಸದೆ, ಕೊನೆಗೆ ಫಿಕ್ಸೆಡ್ ಡೆಪಾಸಿಟ್‌ನಲ್ಲಿದ್ದ 10 ಲಕ್ಷ ರೂ.ಗಳನ್ನು ವಂಚಕರ ತಂಡಕ್ಕೆ ವರ್ಗಾಯಿಸಲು ನಿರ್ಧರಿಸಿದ್ದರು. ಬ್ಯಾಂಕ್‌ಗೆ ಬಂದು ಫಿಕ್ಸೆಡ್ ಡೆಪಾಸಿಟ್ ಮುರಿದು ಬೇರೊಂದು ಖಾತೆಗೆ ವರ್ಗಾಯಿಸಿದರು. ಆನ್‌ಲೈನ್ ಮೂಲಕ ಮುಂಬೈನ ಕಂಪನಿಯೊಂದರ ಖಾತೆಗೆ ಹಣ ವರ್ಗಾಯಿಸಲು ಯತ್ನಿಸಿದಾಗ ಬ್ಯಾಂಕ್ ಮ್ಯಾನೇಜರ್‌ಗೆ ಅನುಮಾನ ಬಂದಿದೆ. ತಕ್ಷಣ ಅವರು ಸೈಬರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆಘಾತದಿಂದ ಹೊರಬರದ ವೃದ್ಧ
ಬ್ಯಾಂಕ್‌ನಿಂದ 74 ವರ್ಷದ ವೃದ್ಧನನ್ನು ಕರೆತಂದು ಮೊಬೈಲ್ ಫೋನ್ ಪರಿಶೀಲಿಸಲಾಯಿತು. ಆಗಲೂ ವಂಚಕರ ತಂಡ ಕರೆ ಮಾಡುತ್ತಲೇ ಇತ್ತು. ಪೊಲೀಸರು ಫೋನ್ ತೆಗೆದುಕೊಂಡ ತಕ್ಷಣ, ತಂಡವು ಕರೆಯನ್ನು ಕಡಿತಗೊಳಿಸಿತು. ಪೊಲೀಸರ ಸಹಾಯದಿಂದ ವಂಚನೆಯಿಂದ ಪಾರಾಗಿದ್ದೇನೆಂದು ಅರಿವಾದರೂ, ವೃದ್ಧರು ಆಘಾತದಿಂದ ಹೊರಬಂದಿರಲಿಲ್ಲ. ಬ್ಯಾಂಕ್ ಮ್ಯಾನೇಜರ್ ಮತ್ತು ಪೊಲೀಸರ ಸಮಯೋಚಿತ ಮಧ್ಯಸ್ಥಿತೆಯಿಂದಾಗಿ ವೃದ್ಧರ ಪ್ರಾಣ ಮತ್ತು ಸಂಪತ್ತು ಎರಡೂ ಉಳಿಯಿತು.
ಸೈಬರ್ ವಂಚಕರಿಂದ ಜಾಗೃತರಾಗಿರಿ:
ಇನ್ನು ಬ್ಯಾಂಕ್ ಖಾತೆಯಲ್ಲಿ ಹೆಚ್ಚು ಹಣವನ್ನು ಇಟ್ಟುಕೊಂಡಿರುವ ವೃದ್ಧರು, ನಿವೃತ್ತ ನೌಕರರು ಸೇರಿದಂತೆ ಹಲವರಿಗೆ ಪೊಲೀಸರ ಸೋಗಿನಲ್ಲಿ, ರಿಸರ್ವ್ ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ, ಆದಾಯ ತೆರಿಗೆ ಅಧಿಕಾರಿಗಳಂತೆ ವಿಡಿಯೋ ಕರೆ ಮಾಡಿ ಮಾತನಾಡುವ ಸೈಬರ್ ವಂಚಕರು ನಿಮ್ಮನ್ನು ಡಿಜಿಟಲ್ ಆಗಿ ಆರೆಸ್ಟ್ ಮಾಡುತ್ತಾರೆ. ಅಂದರೆ ನೀವು ಫ್ರೀಯಾಗಿ ಓಡಾಡುವುದಕ್ಕೆ, ಊಟ ಮಾಡುವುದಕ್ಕೆ, ಹೊರಗೆ ಹೋಗುವುದಕ್ಕೆ ಅವಕಾಶವಿದ್ದರೂ ನಿಮ್ಮನ್ನು ತಪ್ಪಿತಸ್ಥರು ಅಥವಾ ಬೇರೆ ಯಾವುದಾದರೂ ವಂಚನೆಯಲ್ಲಿ ಅಕಸ್ಮಾತ್ ಆಗಿ ನಿಮ್ಮ ಹೆಸರು ಸಿಕ್ಕಿಕೊಂಡಿದೆ ಎಂದು ಹೇಳಿ ಲಾಕ್ ಮಾಡುತ್ತಾರೆ.
ಆಗ ನಿಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲನೆ ಮಾಡಬೇಕು ಎಂದು ಹಣವನ್ನು ವರ್ಗಾಯಿಸಿಕೊಂಡು ನಂತರ ಫೋನ್ ಸ್ವಿಚ್ ಆಫ್ ಮಾಡಿಕೊಂಡು ವಂಚಿಸುತ್ತಾರೆ. ಹೀಗೆ ಕೋಟ್ಯಂತರ ರೂ. ಹಣವನ್ನು ಕಳೆದುಕೊಂಡು ಬೀದಿಗೆ ಬಿದ್ದವರು ಹಾಗೂ ಅದೆಷ್ಟೋ ವೃದ್ಧರು ವಂಚನೆಗೆ ಒಳಗಾಗಿ ಜೀವಮಾನವಿಡೀ ಉಳಿತಾಯ ಮಾಡಿದ, ತಮ್ಮ ವೃದ್ದಾಪ್ಯ ಜೀವನಕ್ಕೆ ಇಟ್ಟುಕೊಂಡಿದ್ದ ಹಣವನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಇನ್ನು ಕೆಲವರು ಪ್ರಾಣವನ್ನೂ ಕಳೆದುಕೊಂಡ ಉದಾಹರಣೆಗಳಿವೆ. ಹೀಗಾಗಿ, ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಬೇಕು. ಒಂದು ವೇಳೆ ನೀವು ಸೈಬರ್ ವಂಚನೆಗೆ ಒಳಗಾಗುತ್ತಿದ್ದೀರಿ ಎಂದಾಗ ರಾಜ್ಯದ ಜನತೆ 080-22942475 ಹಾಗೂ ಕೇಂದ್ರದ ಸೈಬರ್ ಹೆಲ್ಪ್‌ಲೈನ್ 1930ಗೆ ಕರೆ ಮಾಡಿ ವಂಚನೆಯಿಂದ ತಪ್ಪಿಸಿಕೊಳ್ಳಬಹುದು.


