ಕರ್ನಾಟಕದಿಂದ ನಮಗೆ ಪ್ರತಿನಿತ್ಯ 12,500 ಕ್ಯೂಸೆಕ್ಸ್‌ ನೀರನ್ನು ಹರಿಸಬೇಕು ಎಂದು ತಮಿಳುನಾಡು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸಭೆಯಲ್ಲಿ ಪಟ್ಟು ಹಿಡಿದಿದೆ.

ನವದೆಹಲಿ (ಸೆ.18): ಕರ್ನಾಟಕದಿಂದ ಕಾವೇರಿ ನೀರನ್ನು ಹರಿಸುವಂತೆ ತಮಿಳುನಾಡು ಪುನಃ ಕ್ಯಾತೆಯನ್ನು ಆರಂಭಿಸಿದೆ. ಕಾವೇರಿ ನದಿಯ ಕೆಆರ್‌ಎಸ್‌ ಜಲಾಶಯದಲ್ಲಿ ನೀರಿಲ್ಲದಿದ್ದರೂ, ಸುಪ್ರೀಂ ಕೋರ್ಟ್‌ ಆದೇಶದಂತೆ ತಮಿಳುನಾಡಿಗೆ ಪ್ರತಿನಿತ್ಯ 12,500 ಕ್ಯೂಸೆಕ್ಸ್‌ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸಭೆಯಲ್ಲಿ ಪಟ್ಟು ಹಿಡಿದಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ)ದ ಮುಖ್ಯಸ್ಥ ಎಸ್.ಕೆ. ಹಲ್ದರ್ ನೇತೃತ್ವದಲ್ಲಿ ಕಾವೇರಿ ನೀರಿನ ಹರಿಸುವಿಕೆ ಕುರಿತಂತೆ ಸೋಮವಾರ ನವದೆಹಲಿಯಲ್ಲಿ ಸಭೆ ಮಾಡಲಾಗುತ್ತಿದೆ. ಈ ಸಭೆಯಲ್ಲಿ ತಮಿಳುನಾಡು ಹಾಗೂ ಕೇರಳದ ಅಧಿಕಾರಿಗಳು ನೇರವಾಗಿ ಸಭೆಯಲ್ಲಿ ಭಾಗಿಯಾಗಿದ್ದರೆ, ಕರ್ನಾಟಕ ಮತ್ತು ಪುದುಚೇರಿ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾಗಿದ್ದಾರೆ. ಈ ಸಭೆಯಲ್ಲಿ ತಮ್ಮ ವಾದವನ್ನು ಮಂಡಿಸಿದ ತಿಳುನಾಡು ಅಧಿಕಾರಿಗಳು ತಮಗೆ ಪ್ರತಿನಿತ್ಯ 12,500 ಕ್ಯೂಸೆಕ್ಸ್‌ ನೀರನ್ನು ಹರಿಸಬೇಕು ಎಂದು ಪಟ್ಟು ಹಿಡಿದು ವಾದ ಮಂಡಿಸಿದ್ದಾರೆ.

ಬೆಂಗಳೂರಿನ ಜನರಿಗೆ ಕುಡಿಯೋದಕ್ಕೂ ಕಾವೇರಿ ನೀರು ಕೊಡಲಾಗಲ್ಲ: ಗೃಹ ಸಚಿವ ಪರಮೇಶ್ವರ್‌ ಮಾಹಿತಿ

ಇನ್ನಿ ಈ ಹಿಂದೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನಡೆಸಿದ್ದ ಸಭೆಯಲ್ಲಿ ಪ್ರತಿನಿತ್ಯ 5,000 ಕ್ಯೂಸೆಕ್ಸ್‌ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಸಿಡಬ್ಲ್ಯೂಆರ್‌ಸಿ ಸೂಚನೆ ನೀಡಿತ್ತು. ಆದರೆ, ಕಾವೇರಿ ನದಿಯ ಜಲಾಶಯಗಳಲ್ಲಿ ನೀರಿಲ್ಲದ ಹಿನ್ನೆಲೆಯಲ್ಲಿ ಕೇವಲ 2 ದಿನಗಳು ಮಾತ್ರ ನೀರು ಹರಿಸಿದ್ದ ಕರ್ನಾಟಕ ಸರ್ಕಾರ ನೀರು ಬಿಡುವುದನ್ನು ಸ್ಥಗಿತಗೊಳಿಸಿತ್ತು. ನೀರು ನಿಡಲು ಸಾಧ್ಯವಿಲ್ಲ ಎನ್ನುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಕರ್ನಾಟಕದ ಕಾವೇರಿ ನೀರಿನ ಕುರಿತ ಅರ್ಜಿಯನ್ನು ಸೆ.21ಕ್ಕೆ ವಿಚಾರಣೆ ನಡೆಸಲಿದೆ. ಆದರೆ, ಅದಕ್ಕಿಂತ ಮುನ್ನ ನಡೆಯುತ್ತಿರುವ ಸಿಡಬ್ಲ್ಯೂಎಂಎ ಸಭೆಯಲ್ಲಿ ನೀರು ಹರಿಸುವಂತೆ ಪುನಃ ತಮಿಳುನಾಡು ಕ್ಯಾತೆ ಆರಂಭಿಸಿದೆ.

ಕರ್ನಾಟಕದಲ್ಲಿ ಈವರೆಗೆ ಕೇವಲ ಶೇ.35 ಮಳೆಯಾಗಿದ್ದು, 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಮತ್ತೊಂದೆಡೆ ಕನ್ನಡ ನಾಡಿನ ಜೀವನದಿ ಕಾವೇರಿಯ ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಪ್ರಮಾಣ 96 ಅಡಿಗೆ ಕುಸಿತವಾಗಿದ್ದರೂ, ತಮಿಳುನಾಡು ಮಾತ್ರ ನೀರನ್ನು ಹರಿಸುವಂತೆ ಪುನಃ ಕ್ಯಾತೆ ತೆಗೆದಿದೆ. ಈ ಹಿಂದೆ ಕಾವೇರಿ ನೀರಿ ನಿಯಂತ್ರಣ ಸಮಿತಿ ಸಭೆಯಲ್ಲಿ ಕರ್ನಾಟಕಕ್ಕೆ ಪ್ರತಿನಿತ್ಯ 5,000 ಕ್ಯೂಸೆಕ್‌ ನೀರನ್ನು ಹರಿಸುವಂತೆ ಸೂಚನೆ ನೀಡಿತ್ತು. ಇದನ್ನು ಪಾಲಿಸಲಾಗುವುದಿಲ್ಲ ಎಂದು ಕರ್ನಾಟಕ ಪಟ್ಟು ಹಿಡಿದಿದೆ. ಆದರೆ, ಈಗ ತಮ್ಮ ಪಾಲಿಗೆ ಬರಬೇಕಾದ 12,500 ಕ್ಯೂಸೆಕ್ಸ್‌ ನೀರನ್ನೂ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.