ಬೆಂಗಳೂರಿನ ಜನರಿಗೆ ಕುಡಿಯೋದಕ್ಕೂ ಕಾವೇರಿ ನೀರು ಕೊಡಲಾಗಲ್ಲ: ಗೃಹ ಸಚಿವ ಪರಮೇಶ್ವರ್ ಮಾಹಿತಿ
ರಾಜ್ಯದಲ್ಲಿ ಕೇವಲ ಶೇ.35 ಮಳೆಯಾಗಿದೆ. ಬೆಂಗಳೂರಿನ ಜನರಿಗೆ ಕುಡಿಯೋದಕ್ಕೆ ಕಾವೇರಿ ನೀರು ಕೊಡಲಾಗದ ಪರಿಸ್ಥಿತಿಯಿದೆ. ಅಂಥದ್ದರಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ.
ಮಂಡ್ಯ (ಸೆ.18): ನಮ್ಮ ರಾಜ್ಯದಲ್ಲಿ ಕೇವಲ ಶೇ.35 ರಷ್ಟು ಮಾತ್ರ ಮಳೆಯಾಗಿದೆ. ಹೀಗಾಗಿ, ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ತಿಳಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆ ಪಾಲಿಸುವುದು ಸಾಧ್ಯವಿಲ್ಲ. ತಮಿಳುನಾಡಿಗೆ ಹರಿಸಲು ನೀರು ಇಲ್ಲವೇ ಇಲ್ಲ, ಹಾಗಾಗಿ ನೀರು ಬಿಡುವ ಹಾಗೂ ಬಿಡದಿರುವ ಪ್ರಶ್ನೆಯೇ ಇಲ್ಲ. ಬೆಂಗಳೂರಿನ ಜನರಿಗೆ ಕುಡಿಯೋದಕ್ಕೆ ನೀರು ಕೊಡಲು ಆಗದಿರುವ ಪರಿಸ್ಥಿತಿ ಇದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದರು.
ಈ ಕುರಿತು ಮಂಡ್ಯ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಲವು ಸಂಧರ್ಭಗಳಲ್ಲಿ ನೀರಿನ ಕೊರತೆ ಬಗ್ಗೆ ಪ್ರಾಧಿಕಾರಕ್ಕೆ ತಿಳಿಸಿದ್ದೇವೆ. ಆದರೂ ಯಾವ ಕಾರಣಕ್ಕೆ ಪ್ರಾಧಿಕಾರದವರು ತಮಿಳುನಾಡಿಗೆ ನೀರು ಬಿಡಲು ಸೂಚಿಸಿದ್ದಾರೆ ಗೊತ್ತಿಲ್ಲ. ನಮಗೆ ವಿಶ್ವಾಸ ಇದೆ. ಸಂಕಷ್ಟ ಸೂತ್ರ ರೂಪಿಸಿ ಈ ವರ್ಷಕ್ಕೆ ಪರಿಸ್ಥಿತಿ ತಕ್ಕಂತೆ ಆದೇಶ ಬರಲಿದೆ. ಕೇಂದ್ರ ತಜ್ಞರ ತಂಡ ಬರಬಾರದು ಎಂದು ನಾವು ಹೇಳಿಲ್ಲ. ಬಂದು ವಾಸ್ತವ ಸ್ಥಿತಿ ಬಗ್ಗೆ ಅಂಕಿ ಅಂಶ ಕಲೆ ಹಾಕಲಿ ಎಂದು ಅರ್ಜಿಗಳಲ್ಲಿ ಕೇಳಿದ್ದೇವೆ. ನಾವೂ ಕೂಡ ಫಿಸಿಕಲ್ ವೆರಿಫಿಕಶನ್ ಮಾಡಿ ಎಂದು ಮನವಿ ಮಾಡಿದ್ದೇವೆ. ಅವರು ಬಂದು ನೋಡಿದ್ರೆ ಸತ್ಯಾಂಶ ಗೊತ್ತಗಲಿದೆ ಎಂದರು.
ಜೀ ಕನ್ನಡ ಭರ್ಜರಿ ಬ್ಯಾಚುಲರ್ಸ್: ಮಾಡ್ರನ್ ಗೋಪಿಕೆಯರ ನಡುವೆ ಕುರಿಗಾಹಿ ಗಾಯಕ ಹನುಮಂತ
ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರು ಇಲ್ಲವೇ ಇಲ್ಲ. ಹಾಗಾಗಿ ತಮಿಳುನಾಡಿಗೆ ನೀರು ಬಿಡುವ, ಬಿಡದಿರುವ ಪ್ರಶ್ನೆಯೇ ಇಲ್ಲ. ಬೆಂಗಳೂರಿನ ಜನರಿಗೆ ಕುಡಿಯೋದಕ್ಕೆ ನೀರು ಕೊಡಲು ಆಗದಿರುವ ಪರಿಸ್ಥಿತಿ ಇದೆ. ಈಗಿನ್ನೂ ನಾವು ಅಕ್ಟೋಬರ್‌ನಲ್ಲಿದ್ದೇವೆ. ಈಗಲೇ ಈ ಪರಿಸ್ಥಿತಿ ಇದೆಯೆಂದರೆ, ಮುಂದೆ ಏನಾಗಬೇಕು. ಮಧ್ಯದಲ್ಲಿ ಮಳೆ ಬರದಿದ್ರೆ ಇನ್ನು ಕಷ್ಟವಾಗಲಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಪ್ರಾಧಿಕಾರವು ತಮಿಳುನಾಡಿಗೆ ನೀರು ಬಿಡಲು ಸೂಚಿಸಲ್ಲ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಇನ್ನು ಕಾವೇರಿ ನೀರು ಹರಿಸುವ ಕುರಿತಂತೆ ಸೆ. 21ಕ್ಕೆ ಸುಪ್ರೀಂ ಕೋರ್ಟ್ ವಿಚಾರಣೆ ಇದೆ. ಈ ವೇಳೆ ನೀರು ಬಿಟ್ಟಿದ್ರಾ, ಸ್ವಲ್ಪವಾದರೂ ನೀರು ಬಿಡಬೇಕಲ್ವ ಎಂದು ಸುಪ್ರೀಂ ಕೇಳುತ್ತದೆ. ಆ ಸಂಧರ್ಭದಲ್ಲಿ ಛೀಮಾರಿ ಹಾಕಿಸಿಕೊಳ್ಳುವ ಪರಿಸ್ಥಿತಿ ಬರಬಾರದು ಎನ್ನುವ ನಿಟ್ಟಿನಲ್ಲಿ ನೀರು ಜಲಸಂಪನ್ಮೂಲ ಸಚಿವರು 2 ದಿನ ನೀರು ಬಿಡುತ್ತೇವೆ ಎಂದು ಹೇಳಿದ್ದರು. ಆದರೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವರು ಹೇಳಿದ್ದಾರೆಂದು ಕಾವೇರಿ ನೀರನ್ನು ಬಿಟ್ಟಿಲ್ಲ ಎಂದು ಹೇಳಿದರು.