ದೇಶದ ವಿವಿಧ ರಾಜ್ಯಗಳ ವಿಧಾನಸಭೆ ಪ್ರವೇಶಿಸಿರುವ ಶಾಸಕರ ಪೈಕಿ ಶೇ.44ರಷ್ಟು ಶಾಸಕರು ತಮ್ಮ ಮೇಲೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ನವದೆಹಲಿ: ದೇಶದ ವಿವಿಧ ರಾಜ್ಯಗಳ ವಿಧಾನಸಭೆ ಪ್ರವೇಶಿಸಿರುವ ಶಾಸಕರ ಪೈಕಿ ಶೇ.44ರಷ್ಟು ಶಾಸಕರು ತಮ್ಮ ಮೇಲೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದ್ದಾರೆ. ಈ ಪೈಕಿ ಶೇ.28ರಷ್ಟು ಅಂದರೆ 1136 ಶಾಸಕರು ತಮ್ಮ ಮೇಲೆ ಹತ್ಯೆ, ಹತ್ಯೆಯ ಯತ್ನ, ಅಪಹರಣ, ಮಹಿಳೆಯರ ಮೇಲೆ ದೌರ್ಜನ್ಯ ಸೇರಿದಂತೆ ಗಂಭೀರ ಆರೋಪಗಳನ್ನು ಹೊತ್ತಿದ್ದಾರೆ.
28 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 4033 ಶಾಸಕರ ಪೈಕಿ 4001 ಶಾಸಕರು ತಮ್ಮ ಅಫಿಡವಿಟ್‌ಗಳಲ್ಲಿ ನೀಡಿರುವ ಮಾಹಿತಿ ಆಧರಿಸಿ ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (Association for Democratic Reforms) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (National Election Watch) ಎಂಬ ಎರಡು ಸಂಸ್ಥೆಗಳು ನಡೆಸಿದ ಅಧ್ಯಯನ ವರದಿಯಲ್ಲಿ ಈ ಆತಂಕಕಾರಿ ಅಂಶಗಳಿವೆ.
ವರದಿ ಅನ್ವಯ ಕೇರಳದ 135 ಶಾಸಕರ ಪೈಕಿ 95 ಅಂದರೆ ಶೇ.70ರಷ್ಟುಶಾಸಕರು ತಮ್ಮ ಮೇಲೆ ಕ್ರಿಮಿನಲ್ ಕೇಸು (Criminal Case) ಇದೆ ಎಂಬ ಮಾಹಿತಿ ನೀಡಿದ್ದಾರೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಬಿಹಾರ (242ರಲ್ಲಿ 61- ಶೇ.67), ದೆಹಲಿ (70ರಲ್ಲಿ 44- ಶೇ.63), ಮಹಾರಾಷ್ಟ್ರ (284ರಲ್ಲಿ 175- ಶೇ.62), ತೆಲಂಗಾಣ (118ರಲ್ಲಿ 72- ಶೇ.61), ತಮಿಳುನಾಡು (224ರಲ್ಲಿ 134- ಶೇ.60) ರಾಜ್ಯಗಳಿವೆ.
ಕ್ರಿಮಿನಲ್‌ಗಳಿಗೆ ಕರ್ನಾಟಕ ಸ್ವರ್ಗವಾಗುತ್ತಿದೆ, ರಾಜ್ಯ ಸರ್ಕಾರದ ವಿರುದ್ಧ ರಾಜೀವ್ ಚಂದ್ರಶೇಖರ್ ಆಕ್ರೋಶ!
ಗಂಭೀರ ಆರೋಪ:
ಇನ್ನು ದೆಹಲಿಯ 70ರ ಪೈಕಿ 37 (ಶೇ.53), ಬಿಹಾರ 242ರ ಪೈಕಿ 122 (ಶೇ.50), ಮಹಾರಾಷ್ಟ್ರದ 284ರ ಪೈಕಿ 114 (ಶೇ.40), ಜಾರ್ಖಂಡ್‌ನ 118ರ ಪೈಕಿ 46 (ಶೇ.39), ಉತ್ತರಪ್ರದೇಶದ 403ರ ಪೈಕಿ 155 (ಶೇ.38)ರಷ್ಟುಶಾಸಕರು ತಮ್ಮ ಮೇಲೆ ಅತ್ಯಂತ ಗಂಭೀರ ಕ್ರಿಮಿನಲ್ ಪ್ರಕರಣ ದಾಖಲಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಮಹಿಳಾ ದೌರ್ಜನ್ಯ:
4011 ಶಾಸಕರ ಪೈಕಿ 114 ಶಾಸಕರು ತಮ್ಮ ಮೇಲೆ ಮಹಿಳೆಯರ ಮೇಲೆ ಎಸಗಿದ ಕ್ರೌರ್ಯಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಕೇಸು ದಾಖಲಾಗಿದೆ ಎಂದು ಮಾಹಿತಿ ನೀಡಿದ್ದರೆ, 14 ಶಾಸಕರು ತಮ್ಮ ಮೇಲೆ ಅತ್ಯಾಚಾರದ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
