Harleen Deol interaction with PM modi: ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಪ್ರಧಾನಿ ಮೋದಿಯವರನ್ನು ಭೇಟಿಯಾಯಿತು. ಈ ಸಂವಾದದ ವೇಳೆ, ಆಟಗಾರ್ತಿ ಹರ್ಲಿನ್ ಡಿಯೋಲ್ ಅವರು ಪ್ರಧಾನಿಯವರ ಹೊಳೆಯುವ ಚರ್ಮದ ರಹಸ್ಯದ ಬಗ್ಗೆ ಪ್ರಶ್ನಿಸಿ ಅಚ್ಚರಿ ಮೂಡಿಸಿದರು. 

ಪ್ರಧಾನಿ ಭೇಟಿ ಮಾಡಿದ ವಿಶ್ವಕಪ್ ಗೆದ್ದ ಮಹಿಳಾ ಕ್ರಿಕೆಟ್ ತಂಡ

ಭಾರತ ಕ್ರಿಕೆಟ್ ಮಹಿಳಾ ತಂಡ ಇದೇ ಮೊದಲ ಬಾರಿಗೆ ವಿಶ್ವಕಪ್ ಗೆದ್ದ ಖುಷಿಯಲ್ಲಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾರತ ಮಹಿಳಾ ತಂಡದ ಆಟಗಾರರನ್ನು ಭೇಟಿ ಮಾಡಿ ಅವರಿಗೆ ಅಭಿನಂದನೆ ಸಲ್ಲಿಸುವ ಜೊತೆ ಅವರ ಜೊತೆ ಕೆಲ ಕಾಲ ಸಂವಾದ ನಡೆಸಿದರು. ಈ ವೇಳೆ ಮಹಿಳಾ ತಂಡದ ಟಾಪ್ ಆರ್ಡರ್ ಬ್ಯಾಟರ್ ಹರ್ಲಿನ್ ಡಿಯೋಲ್ ಅವರು ಪ್ರಧಾನಿಯವರ ಹೊಳೆಯುವ ಚರ್ಮದ ಹಿಂದಿನ ರಹಸ್ಯದ ಬಗ್ಗೆ ಪ್ರಶ್ನಿಸಿದ್ದಾರೆ. ನೀವು ತುಂಬಾ ಹೊಳೆಯುತ್ತೀರಿ ನಿಮ್ಮ ಹೊಳೆಯುವ ಚರ್ಮದ ಹಿಂದಿನ ರಹಸ್ಯ ಏನು ಎಂದು ಕ್ರಿಕೆಟರ್ ಹರ್ಲಿನ್ ಡಿಯೋಲ್ ಪ್ರಧಾನಿ ಬಳಿ ಕೇಳಿದ್ದಾರೆ. ಈಕೆಯ ಪ್ರಶ್ನೆಗೆ ಅಲ್ಲಿದ್ದವರೆಲ್ಲಾ ಅಚ್ಚರಿಯ ಜೊತೆ ನಕ್ಕಿದ್ದಾರೆ.

ಪ್ರಧಾನಿ ಬಳಿ ಹೊಳೆಯುವ ತ್ವಚೆಯ ರಹಸ್ಯ ಕೇಳಿದ ಆಟಗಾರ್ತಿ

ಇದಕ್ಕೆ ಪ್ರಧಾನಿಯವರು ನಾನು ಈ ವಿಚಾರದ ಬಗ್ಗೆ ಅಷ್ಟೊಂದು ಯೋಚನೆಯೇ ಮಾಡಿಲ್ಲ ಎಂದು ಹೇಳಿದ್ದಾರೆ. ಕ್ರಿಕೆಟರ್‌ಗಳ ಜೊತೆಗಿನ ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ಸಂವಾದವನ್ನು ಸ್ವತಃ ಪ್ರಧಾನಿಯವರು ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನಿ ಈ ಪ್ರಶ್ನೆಗೆ ಉತ್ತರ ನೀಡದೇ ಇದ್ದರೂ ಟೀಂನಲ್ಲಿದ್ದ ಆಲ್‌ರೌಂಡರ್ ಸ್ನೇಹಾ ರಾಣಾ ಹರ್ಲಿನ್ ಪ್ರಶ್ನೆಗೆ ಉತ್ತರಿಸಿ ಹೀಗೆ ಹೇಳಿದ್ದಾರೆ. ದೇಶವಾಸಿಗಳ ಪ್ರೀತಿಯೇ ಪ್ರಧಾನಿಯನ್ನು ಹೊಳೆಯುವಂತೆ ಮಾಡಿದೆ ಎಂದು ಅವರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಖಂಡಿತ ಹೌದು. ಇದು ನನ್ನ ಶಕ್ತಿಯ ದೊಡ್ಡ ಮೂಲವಾಗಿದೆ. ನಾನು ಸರ್ಕಾರದಲ್ಲಿ ಹಲವು ವರ್ಷಗಳನ್ನು ಕಳೆದಿದ್ದೇನೆ ಚರ್ಮದ ಆರೈಕೆ ಬಗ್ಗೆ ಹೆಚ್ಚು ಯೋಚನೆ ಮಾಡಲಿಲ್ಲ ಎಂದು ಪ್ರತಿಕ್ರಿಯಿಸಿದರು. ಇದೆಲ್ಲದರ ಹೊರತಾಗಿಯೂ ನಿಮಗೆ ಆಶೀರ್ವಾದಗಳು ಬರುತ್ತಲೇ ಇರುತ್ತವೆ ಮತ್ತು ಅದು ಅಂತಿಮವಾಗಿ ನಿಮ್ಮ ಮೇಲೆ ಪರಿಣಾಮ ಬೀರುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.

52 ರನ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ್ದ ಭಾರತ ತಂಡ

ಭಾನುವಾರ, ಭಾರತೀಯ ಮಹಿಳಾ ಕ್ರಿಕೆಟ್ ತಂಡವು ನವಿ ಮುಂಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ತಮ್ಮ ಮೊದಲ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಅನ್ನು ಮೂಡಿಗೇರಿಸಿಕೊಂಡು ಇತಿಹಾಸ ಬರೆದಿದೆ. ಇದು ಭಾರತೀಯ ಮಹಿಳಾ ಕ್ರಿಕೆಟ್‌ಗೆ ಒಂದು ಮಹತ್ವದ ಕ್ಷಣವಾಗಿತ್ತು. ಏಕೆಂದರೆ ವರ್ಷಗಳ ಕಠಿಣ ಪರಿಶ್ರಮ ಇದರ ಹಿಂದಿತ್ತು. ಜೊತೆಗೆ ಭಾರತ ಮಹಿಳಾ ತಂಡ ವಿಶ್ವಕಪ್ ಮುಡಿಗೇರಿಸಿಕೊಂಡಿದ್ದು ಇದೇ ಮೊದಲು. ಈ ಫೈನಲ್ ಪಂದ್ಯದಲ್ಲಿ ಭಾರತ 52 ರನ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ವಿಶ್ವಕಪ್ ಮೂಡಿಗೇರಿಸಿಕೊಂಡಿತ್ತು.

ನಾವು 2017 ರಲ್ಲಿ ನಿಮ್ಮನ್ನು ಭೇಟಿಯಾದದ್ದು ನನಗೆ ಇನ್ನೂ ನೆನಪಿದೆ. ಆ ಸಮಯದಲ್ಲಿ, ನಾವು ಟ್ರೋಫಿಯೊಂದಿಗೆ ಬಂದಿರಲಿಲ್ಲ. ಆದರೆ ಈ ಬಾರಿ, ನಾವು ಟ್ರೋಫಿಯನ್ನು ಇಲ್ಲಿಗೆ ತಂದಿರುವುದು ನಮಗೆ ತುಂಬಾ ಗೌರವದ ವಿಷಯವಾಗಿದೆ ಎಂದು ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಪ್ರಧಾನಿ ಮೋದಿಗೆ ತಿಳಿಸಿದರು. ಭವಿಷ್ಯದಲ್ಲಿ ನಾವು ನಿಮ್ಮನ್ನು ಮತ್ತೆ ಮತ್ತೆ ಭೇಟಿಯಾಗುವುದು ಮತ್ತು ನೀವು ಮತ್ತು ನಿಮ್ಮ ತಂಡದೊಂದಿಗೆ ಮತ್ತೆ ಮತ್ತೆ ಫೋಟೋ ತೆಗೆದುಕೊಳ್ಳುವುದು ನಮ್ಮ ಗುರಿ ಎಂದು ಅವರು ಹೇಳಿದರು.

2017 ರಲ್ಲಿ ನಡೆದ ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಎರಡನೇ ಬಾರಿಗೆ ಇಂಗ್ಲೆಂಡ್ ವಿರುದ್ಧ ಕೇವಲ ಒಂಬತ್ತು ರನ್‌ಗಳಿಂದ ಸೋತಿತ್ತು ಆದರೂ ನಂತರ ತಂಡವು ಪ್ರಧಾನಿ ಮೋದಿಯನ್ನು ಭೇಟಿ ಆಗಿತ್ತು. ಇತ್ತ ಕೌರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ನೀವು ಉತ್ತಮ ಕೆಲಸ ಮಾಡಿದ್ದೀರಿ. ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಲ್ಲ. ಒಂದು ರೀತಿಯಲ್ಲಿ, ಅದು ಭಾರತದ ಜನರ ಜೀವನವಾಗಿದೆ. ಕ್ರಿಕೆಟ್‌ನಲ್ಲಿ ಒಳ್ಳೆಯದು ನಡೆದರೆ, ಭಾರತ ಒಳ್ಳೆಯದೆನಿಸುತ್ತದೆ ಮತ್ತು ಕ್ರಿಕೆಟ್‌ನಲ್ಲಿ ಸ್ವಲ್ಪ ತಪ್ಪು ನಡೆದರೂ, ಇಡೀ ಭಾರತ ಕೆಟ್ಟದೆನಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಶೇ.47 ಲಾಭದೊಂದಿಗೆ 2 ಲಕ್ಸುರಿ ಫ್ಲಾಟ್‌ಗಳ ಸೇಲ್ ಮಾಡಿದ ಅಮಿತಾಭ್

ಇದನ್ನೂ ಓದಿ: ಟೇಕಾಫ್ ಆಗ್ತಿದ್ದಂತೆ ವಿಮಾನ ಪತನ: ವಿಮಾನದಲ್ಲಿದ್ದ ಎಲ್ಲರೂ ಸಾವು: ಅಹ್ಮದಾಬಾದ್ ಘಟನೆ ನೆನಪಿಸಿದ ಭಯಾನಕ ದೃಶ್ಯ

Scroll to load tweet…