ಏಕದಿನ ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ತಂಡಕ್ಕೆ ಕೋಟಿಗಟ್ಟಲೆ ಬಹುಮಾನದ ಸುರಿಮಳೆಯಾಗಿದೆ. ಆದರೆ, ಪುರುಷರ ತಂಡಕ್ಕೆ ಹೋಲಿಸಿದರೆ ಬಹುಮಾನದ ಮೊತ್ತ ಮತ್ತು ಬಿಸಿಸಿಐ ವಾರ್ಷಿಕ ಗುತ್ತಿಗೆಯ ಸಂಭಾವನೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. 

ಮುಂಬೈ: ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಭಾರತೀಯ ತಂಡಕ್ಕೆ ಈಗ ಬಹುಮಾನಗಳ ಸುರಿಮಳೆಯಾಗುತ್ತಿದೆ. ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಚೊಚ್ಚಲ ಮಹಿಳಾ ಏಕದಿನ ವಿಶ್ವಕಪ್ ಕಿರೀಟವನ್ನು ಗೆದ್ದ ಹರ್ಮನ್‌ಪ್ರೀತ್ ಮತ್ತು ತಂಡಕ್ಕೆ ಬಿಸಿಸಿಐ 51 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. ಇನ್ನು ಐಸಿಸಿ ವತಿಯಿಂದ ನಗದು ಬಹುಮಾನ ಮೊತ್ತ 40 ಕೋಟಿ ರುಪಾಯಿ ಭಾರತದ ಪಾಲಾಗಿದೆ. ಆದರೆ ಕಳೆದ ವರ್ಷ ಐಸಿಸಿ ಟಿ20 ವಿಶ್ವಕಪ್ ಗೆದ್ದಿದ್ದ ರೋಹಿತ್ ಶರ್ಮಾ ನಾಯಕತ್ವದ ಪುರುಷರ ತಂಡಕ್ಕೆ ಬಿಸಿಸಿಐ 125 ಕೋಟಿ ರೂಪಾಯಿ ಬಹುಮಾನ ನೀಡಿತ್ತು.

ಭಾರತ ಪುರುಷರ ಹಾಗೂ ಮಹಿಳಾ ಕ್ರಿಕೆಟ್ ತಂಡದ ನಗದು ಬಹುಮಾನ ಮಾತ್ರವಲ್ಲದೇ ಕೇಂದ್ರ ವಾರ್ಷಿಕ ಗುತ್ತಿಗೆಯಲ್ಲೂ ಅಜಗಜಾಂತರ ವ್ಯತ್ಯಾಸವಿದೆ. ಬಹುಮಾನದ ಮೊತ್ತದಂತೆಯೇ, ಪುರುಷ ಮತ್ತು ಮಹಿಳಾ ಆಟಗಾರರ ವಾರ್ಷಿಕ ಒಪ್ಪಂದದಲ್ಲೂ ಈಗಲೂ ದೊಡ್ಡ ಅಂತರವಿದೆ. ಮಹಿಳಾ ಆಟಗಾರ್ತಿಯರಿಗೆ 2024-25ನೇ ಸಾಲಿನ ವಾರ್ಷಿಕ ಒಪ್ಪಂದಗಳನ್ನು ಬಿಸಿಸಿಐ ಪ್ರಕಟಿಸಿದಾಗ, ಪುರುಷ ಕ್ರಿಕೆಟಿಗರಂತೆ 'ಎ ಪ್ಲಸ್' ಒಪ್ಪಂದ ಇರಲಿಲ್ಲ. ಆಟಗಾರ್ತಿಯರಿಗೆ ಎ, ಬಿ ಮತ್ತು ಸಿ ಎಂಬ ಮೂರು ವಿಭಾಗಗಳಲ್ಲಿ ವಾರ್ಷಿಕ ಒಪ್ಪಂದ ನೀಡಲಾಗಿದೆ. ಪುರುಷರ ಕ್ರಿಕೆಟ್‌ನಲ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಹೀಗೆ ಮೂರೂ ಮಾದರಿಗಳಲ್ಲಿ ಆಡುವ ಅಗ್ರ ಆಟಗಾರರಿಗೆ 'ಎ ಪ್ಲಸ್' ಒಪ್ಪಂದ ನೀಡಲಾಗುತ್ತದೆ. ಮಹಿಳಾ ಕ್ರಿಕೆಟ್‌ನಲ್ಲಿ ಟೆಸ್ಟ್ ಪಂದ್ಯಗಳು ಅಪರೂಪವಾಗಿ ನಡೆಯುವುದರಿಂದ, ಆಟಗಾರ್ತಿಯರಿಗೆ ಎ, ಬಿ, ಮತ್ತು ಸಿ ವಿಭಾಗಗಳಲ್ಲಿ ವಾರ್ಷಿಕ ಒಪ್ಪಂದ ನೀಡಲಾಗುತ್ತದೆ.

ನಾಯಕಿ ಹರ್ಮನ್‌ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂಧನಾ ಮತ್ತು ಆಲ್ರೌಂಡರ್ ದೀಪ್ತಿ ಶರ್ಮಾ ಬಿಸಿಸಿಐ ವಾರ್ಷಿಕ ಒಪ್ಪಂದದ 'ಎ' ವಿಭಾಗದಲ್ಲಿದ್ದಾರೆ. 'ಬಿ' ಗುಂಪಿನಲ್ಲಿ ರೇಣುಕಾ ಸಿಂಗ್ ಠಾಕೂರ್, ಜೆಮಿಮಾ ರೋಡ್ರಿಗ್ಸ್‌, ರಿಚಾ ಘೋಷ್ ಮತ್ತು ಶಫಾಲಿ ವರ್ಮಾ ಇದ್ದಾರೆ. 'ಸಿ' ವಿಭಾಗದಲ್ಲಿ ರಾಧಾ ಯಾದವ್, ಅಮನ್‌ಜೋತ್ ಕೌರ್, ಉಮಾ ಛೆಟ್ರಿ ಮತ್ತು ಸ್ನೇಹ್ ರಾಣಾ ಇದ್ದಾರೆ.

ವಾರ್ಷಿಕ ಒಪ್ಪಂದದಲ್ಲಿ ಪುರುಷ ಆಟಗಾರರೊಂದಿಗೆ ದೊಡ್ಡ ಅಂತರ

ಬಿಸಿಸಿಐನ 'ಎ' ಗ್ರೇಡ್‌ನಲ್ಲಿರುವ ಮಹಿಳಾ ಆಟಗಾರ್ತಿಯರಿಗೆ ವಾರ್ಷಿಕ 50 ಲಕ್ಷ ರೂಪಾಯಿ ಸಂಭಾವನೆ ಸಿಗಲಿದೆ. 'ಬಿ' ಗ್ರೇಡ್‌ನಲ್ಲಿರುವವರಿಗೆ 30 ಲಕ್ಷ ಮತ್ತು 'ಸಿ' ಗ್ರೇಡ್‌ನಲ್ಲಿರುವ ಆಟಗಾರ್ತಿಯರಿಗೆ 10 ಲಕ್ಷ ರೂಪಾಯಿಗಳನ್ನು ಬಿಸಿಸಿಐ ವಾರ್ಷಿಕ ಸಂಭಾವನೆಯಾಗಿ ನೀಡುತ್ತದೆ. ಇದು ಪ್ರತಿ ಪಂದ್ಯಕ್ಕೆ ಸಿಗುವ ಮ್ಯಾಚ್ ಫೀ ಹೊರತುಪಡಿಸಿ. ಆದರೆ, ಪುರುಷರ ತಂಡದಲ್ಲಿ 'ಎ ಪ್ಲಸ್' ಒಪ್ಪಂದವಿರುವ ಆಟಗಾರರಿಗೆ 7 ಕೋಟಿ, 'ಎ' ಗ್ರೇಡ್ ಆಟಗಾರರಿಗೆ 5 ಕೋಟಿ, 'ಬಿ' ಗ್ರೇಡ್ ಆಟಗಾರರಿಗೆ 3 ಕೋಟಿ ಮತ್ತು 'ಸಿ' ಗ್ರೇಡ್ ಆಟಗಾರರಿಗೆ 1 ಕೋಟಿ ರೂಪಾಯಿಗಳನ್ನು ಬಿಸಿಸಿಐ ವಾರ್ಷಿಕ ಸಂಭಾವನೆಯಾಗಿ ನೀಡುತ್ತದೆ.

ಲಿಂಗ ಸಮಾನತೆಗಾಗಿ ಮ್ಯಾಚ್ ಫೀನಲ್ಲಿ ಸಮಾನ ಸಂಬಳ

ಲಿಂಗ ಸಮಾನತೆ ಖಚಿತಪಡಿಸಲು, ಬಿಸಿಸಿಐ ಈ ಹಿಂದೆ ಮಹಿಳೆಯರ ಮ್ಯಾಚ್ ಫೀಯನ್ನು ಪುರುಷ ಕ್ರಿಕೆಟಿಗರಿಗೆ ಸಮನಾಗಿಸಿ ಐತಿಹಾಸಿಕ ಘೋಷಣೆ ಮಾಡಿತ್ತು. ಇದರ ಪ್ರಕಾರ, ಪುರುಷ ಮತ್ತು ಮಹಿಳಾ ಆಟಗಾರರು ಹಾಗೂ ಆಟಗಾರ್ತಿಯರಿಗೆ ಪ್ರತಿ ಟೆಸ್ಟ್ ಪಂದ್ಯಗಳಿಗೆ ತಲಾ 15 ಲಕ್ಷ, ಏಕದಿನ ಪಂದ್ಯಗಳಿಗೆ 6 ಲಕ್ಷ ಮತ್ತು ಟಿ20 ಪಂದ್ಯಗಳಿಗೆ 3 ಲಕ್ಷ ರೂಪಾಯಿ ಮ್ಯಾಚ್ ಫೀ ಸಿಗುತ್ತದೆ.

ಭಾರತ ಮಹಿಳಾ ಕ್ರಿಕೆಟ್ ತಂಡವು ಇದೀಗ ಏಕದಿನ ವಿಶ್ವಕಪ್ ಚಾಂಪಿಯನ್ ಬೆನ್ನಲ್ಲೇ ಇನ್ನಾದರೂ ಬಿಸಿಸಿಐ ಕಾಂಟ್ರ್ಯಾಕ್ಟ್‌ನಲ್ಲಿ ಮಹಿಳಾ ತಂಡಕ್ಕೆ ಸಂಬಳ ಹೆಚ್ಚುವರಿಯಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.