UPS cargo plane crashಅಮೆರಿಕಾದ ಕೆಂಟುಕಿಯಲ್ಲಿ ಯುಪಿಎಸ್ ಕಾರ್ಗೋ ವಿಮಾನವು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು ಹೊತ್ತಿ ಉರಿದಿದೆ. ಈ ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದು, ಘಟನೆಯ ಭಯಾನಕ ದೃಶ್ಯಗಳು ಅಹ್ಮದಾಬಾದ್ ದುರಂತವನ್ನು ನೆನಪಿಸುತ್ತಿವೆ.
ಅಹ್ಮದಾಬಾದ್ ಏರ್ ಇಂಡಿಯಾ ದುರಂತ ನೆನಪಿಸಿದ ದುರಂತ
ಅಹ್ಮದಾಬಾದ್ ಏರ್ ಇಂಡಿಯಾ ವಿಮಾನ ದುರಂತ ಘಟನೆ ಇನ್ನೂ ಜನಮಾನಸದಿಂದ ಮರೆಯಾಗಿಲ್ಲ, ಹೀಗಿರುವಾಗ ಅಮೆರಿಕಾದಲ್ಲಿ ಇದೇ ರೀತಿಯ ವಿಮಾನ ದುರಂತವೊಂದು ನಡೆದಿದೆ. ವಿಮಾನ ಟೇಕಾಫ್ ಆಗಿ ಕೆಲ ಕ್ಷಣಗಳಲ್ಲಿ ಏರ್‌ಫೋರ್ಟ್ ಸಮೀಪದಲ್ಲೇ ಪತನಗೊಂಡು ಹೊತ್ತಿ ಉರಿದಿದ್ದು, ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಸಾವನ್ನಪ್ಪಿದ್ದಾರೆ. ಈ ಘಟನೆಯ ಭಯಾನಕ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,, ಅಹ್ಮದಾಬಾದ್ ಘಟನೆಯನ್ನು ನೆನಪಿಸುತ್ತಿದೆ. ಕಾರ್ಗೋ ವಿಮಾನ ಇದಾಗಿದ್ದು, ಟೇಕಾಪ್ ಆಗುತ್ತಿದ್ದಂತೆ ವಿಮಾನಕ್ಕೆ ಬೆಂಕಿ ಹತ್ತಿಕೊಂಡು ಸ್ಫೋಟಗೊಂಡಿದ್ದು, ಇದರಿಂದ ಆಕಾಶದೆತ್ತರಕ್ಕೆ ಬೆಂಕಿಯ ಕೆನ್ನಾಲಿಗೆಯ ಜೊತೆ ದಟ್ಟ ಹೊಗೆಯೊಂದಿಗೆ ಬೆಂಕಿ ಹೊತ್ತಿ ಉರಿಯುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಟೇಕಾಫ್ ಆಗಿ ಕೆಲ ಕ್ಷಣದಲ್ಲೇ ವಿಮಾನ ಪತನ: ವಿಮಾನದಲ್ಲಿದ್ದ ಎಲ್ಲರೂ ಸಾವು
ಅಮೆರಿಕಾದ ಕೆಂಟುಕಿಯ ಲೂಯಿಸ್‌ವಿಲ್ಲೆ ವಿಮಾನ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಕಾರ್ಗೋ ವಿಮಾನ ಇದಾಗಿದ್ದು, ಇದರಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ ಸಂಜೆ ಲೂಯಿಸ್‌ವಿಲ್ಲೆ ಮುಹಮ್ಮದ್ ಅಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಈ ವಿಮಾನ ಟೇಕಾಫ್ ಆಗಿದ್ದು, ಇದಾದ ಸ್ವಲ್ಪ ಸಮಯದ ನಂತರ ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಈ ಯುಪಿಎಸ್ ಸರಕು ಸಾಗಣೆ ವಿಮಾನವು ಪತನಗೊಂಡಿದೆ. ಈ ವಿಮಾನ ಕೆಂಟುಕಿಯಿಂದ ಹವಾಯ್‌ಗೆ ಹೋಗುತ್ತಿತ್ತು ಎಂದು ವರದಿಯಾಗಿದೆ. ಈ ಘಟನೆಯಲ್ಲಿ 11 ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಇವರ್ಯಾರು ವಿಮಾನದಲ್ಲಿ ಇದ್ದವರಲ್ಲ. ಹವಾಯಿಗೆ ಹೊರಟಿದ್ದ ಮೆಕ್‌ಡೊನೆಲ್ ಡೌಗ್ಲಾಸ್ ಎಂಡಿ -11 ವಿಮಾನವು ಅಲ್ಲಿನ ಸ್ಥಳೀಯ ಕಾಲಮಾನ ಸಂಜೆ 5:15 ರ ಸುಮಾರಿಗೆ (ಭಾರತೀಯ ಕಾಲಮಾನ ಬೆಳಗ್ಗೆ 3:45ಕ್ಕೆ) ಪತನಗೊಂಡಿದೆ ಎಂದು ಫೆಡರಲ್ ವಿಮಾನಯಾನ ಆಡಳಿತವು ತಿಳಿಸಿದೆ.
ಈ ಘಟನೆಯ ವಿಡಿಯೋ ನೋಡಿದ ಬಹುತೇಕರು ಅಹ್ಮದಾಬಾದ್ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ. ಘಟನೆಯ ವೀಡಿಯೋ ಪ್ರತ್ಯಕ್ಷದರ್ಶಿಗಳ ಫೋನ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಒಮ್ಮಿಂದೊಮ್ಮೆಲೆ ವಿಮಾನವು ಬೆಂಕಿಯುಂಡೆಯಾಗಿ ಬದಲಾಗಿ ನೆಲಕ್ಕೆ ಅಪ್ಪಳಿಸಿರುವುದನ್ನು ಕಾಣಬಹುದಾಗಿದೆ. ವಿಮಾನ ಪತನದಿಂದಾಗಿ ರನ್‌ವೇ ಪಕ್ಕದಲ್ಲಿರುವ ಕಟ್ಟಡಕ್ಕೂ ಹಾನಿಯಾಗಿದ್ದು,ಹಾನಿಗೊಂಡ ಕಟ್ಟಡ ಛಾವಣಿಯ ಭಾಗಗಳನ್ನು ಸಹ ವೀಡಿಯೊ ಬಹಿರಂಗಪಡಿಸಿದೆ. ಈ ದುರಂತದಲ್ಲಿ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ವಿಮಾನ ನಿಲ್ದಾಣದ ವಕ್ತಾರ ಅಧಿಕಾರಿ ಜೊನಾಥನ್ ಬಿವೆನ್ ತಿಳಿಸಿದ್ದಾರೆ. ಈ ದುರಂತದ ಫೋಟೋ, ವೀಡಿಯೊವನ್ನು ನೋಡಿದ ಯಾರಿಗಾದರೂ ಈ ಅಪಘಾತ ಎಷ್ಟು ಹಿಂಸಾತ್ಮಕವಾಗಿದೆ ಎಂಬುದು ಗೊತ್ತಾಗುತ್ತದೆ ಎಂದು ಅವರು ಹೇಳಿದರು.
ಮೆಕ್‌ಡೊನೆಲ್ ಡೌಗ್ಲಾಸ್ MD-11 ವಿಮಾನದಲ್ಲಿದ್ದ ಮೂವರು ಸಿಬ್ಬಂದಿಗಳ ಸ್ಥಿತಿ ಏನೆಂದು ತನಗೆ ತಿಳಿದಿಲ್ಲ ಈ ವಿಮಾನವನ್ನು 1991 ರಲ್ಲಿ ನಿರ್ಮಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. ಯುಪಿಎಸ್ ಎಂದರೆ ಯುನೈಟೆಡ್ ಪಾರ್ಸೆಲ್ ಸರ್ವೀಸ್ ಆಗಿದ್ದು, ಅತಿದೊಡ್ಡ ಪ್ಯಾಕೇಜ್ ನಿರ್ವಹಣಾ ಸಂಸ್ಥೆಯಾಗಿದ್ದು, ಲೂಯಿಸ್‌ವಿಲ್ಲೆಯಲ್ಲಿದೆ. ಪಾರ್ಸೆಲ್ ಸರ್ವೀಸ್ಗಳನ್ನು ನಿರ್ವಹಿಸುವ ಬಹುರಾಷ್ಟ್ರೀಯ ಸಂಸ್ಥೆಯಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾರ್ಸೆಲ್ ವಿತರಿಸುತ್ತದೆ. ಈ ಹಬ್‌ನಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಾರೆ. ಪ್ರತಿದಿನವೂ ಇಲ್ಲಿಂದ 300 ದೈನಂದಿನ ವಿಮಾನಗಳು ಸಂಚರಿಸುತ್ತದೆ. ಇಲ್ಲಿ ಗಂಟೆಗೆ 400,000 ಕ್ಕೂ ಹೆಚ್ಚು ಪ್ಯಾಕೇಜ್‌ಗಳನ್ನು ವಿಭಾಜಿಸಿ ಬೇರೆಡೆ ವಿತರಿಸುವ ಕೆಲಸ ಮಾಡಲಾಗುತ್ತದೆ.
