1983 ರ ಜೂನ್ 25 ರಂದು ಲಾರ್ಡ್ಸ್‌ನಲ್ಲಿ ವಿಶ್ವಕಪ್ ಗೆದ್ದ ನಂತರ ಕಪಿಲ್ ದೇವ್ ನೇತೃತ್ವದ ಭಾರತ ತಂಡ ಸಂಭ್ರಮಿಸಿದ ಭೋಜನದ ಅಸಲಿ ರಶೀದಿ ವೈರಲ್ ಆಗಿದೆ. ಆ ರಾತ್ರಿ ಟೀಮ್ ಇಂಡಿಯಾ ಆರ್ಡರ್ ಮಾಡಿದ್ದ ಮೆನು ಮತ್ತು ಬಿಲ್ ಮೊತ್ತದ ವಿವರ ಇಲ್ಲಿದೆ. ಇನ್ನು ಕೀರ್ತಿ ಅಜಾದ್ ಬಿಲ್ ಸತ್ಯ ಬಾಯಿಬಿಟ್ಟಿದ್ದಾರೆ.

ನವದೆಹಲಿ : ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ 1983ರ ಜೂನ್ 25 ಎಂಬುದು ಎಂದಿಗೂ ಮರೆಯಲಾಗದ ದಿನ. ಅಂದು ಕಪಿಲ್ ದೇವ್ ನೇತೃತ್ವದ ಟೀಮ್ ಇಂಡಿಯಾ ದೈತ್ಯ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಮೊದಲ ಬಾರಿಗೆ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಇತ್ತೀಚೆಗೆ ಆ ಐತಿಹಾಸಿಕ ರಾತ್ರಿಯ ಸಂಭ್ರಮಾಚರಣೆಗೆ ಸಂಬಂಧಿಸಿದ ಹೋಟೆಲ್ ಬಿಲ್ ಎಂದು ಹೇಳಲಾದ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಆದರೆ, ಈ ಬಿಲ್‌ನ ಹಿಂದಿನ ಅಸಲಿ ಸತ್ಯ ಈಗ ಬಯಲಾಗಿದೆ.

Add Asianetnews Kannada as a Preferred SourcegooglePreferred

ವೈರಲ್ ಆಗಿರುವ ಬಿಲ್‌ನಲ್ಲಿ ಏನಿದೆ?

ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ನಲ್ಲಿ ಹರಿದಾಡುತ್ತಿರುವ ಈ ಬಿಲ್ 'ದಿ ಗ್ರಾಸ್‌ವೋನರ್ ಹೋಟೆಲ್' (The Grosvenor Hotel) ಹೆಸರಿನಲ್ಲಿದೆ. 25 ಜೂನ್ 1983ರ ದಿನಾಂಕ ಹೊಂದಿರುವ ಈ ಬಿಲ್‌ನಲ್ಲಿ ‘ಟೀ ಇಂಡಿಯಾ ಸೆಲೆಬ್ರೇಷನ್ ಡಿನ್ನರ್’ ಎಂದು ಬರೆಯಲಾಗಿದೆ. ಇದರಲ್ಲಿ ಮದ್ಯ (Champagne, Scotch), ಸಿಗರೇಟ್ (Dunhill), ಮಟನ್ ರೋಗನ್ ಜೋಶ್, ಚಿಕನ್ ಪ್ಲ್ಯಾಟರ್ ಸೇರಿದಂತೆ ಹಲವು ಖಾದ್ಯಗಳ ಪಟ್ಟಿ ಇದೆ. ಒಟ್ಟು 764.40 ಪೌಂಡ್ ಮೊತ್ತದ ಈ ಬಿಲ್ ಮೇಲೆ ಕಪಿಲ್ ದೇವ್ ಅವರ ಸಹಿ ಕೂಡ ಇದೆ. ಕ್ರಿಕೆಟ್ ಪ್ರೇಮಿಗಳು ಇದನ್ನು ಕಂಡು ಅಂದಿನ ಕಾಲದ ಸಂಭ್ರಮ ಎಂದು ಭಾವಿಸಿ ಭಾವುಕರಾಗಿದ್ದರು.

ಸತ್ಯ ಬಯಲು ಮಾಡಿದ ಕೀರ್ತಿ ಆಜಾದ್:

ಈ ಬಿಲ್ ವೈರಲ್ ಆಗುತ್ತಿದ್ದಂತೆ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಕೀರ್ತಿ ಆಜಾದ್ ಅವರು ಈ ಬಗ್ಗೆ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿರುವ ಅವರು, 'ಇದು ಸಂಪೂರ್ಣ ನಕಲಿ ಬಿಲ್. ಈ ಮಾಹಿತಿ ಸುಳ್ಳು ಮತ್ತು ಜನರನ್ನು ದಾರಿ ತಪ್ಪಿಸುವಂತಿದೆ' ಎಂದು ಕಿಡಿಕಾರಿದ್ದಾರೆ.

ಬಿಲ್ ನಕಲಿ ಎನ್ನಲು ಕೀರ್ತಿ ಆಜಾದ್ ನೀಡಿದ ಕಾರಣಗಳು:

ಹೋಟೆಲ್ ಬದಲಾವಣೆ: 'ವಿಶ್ವಕಪ್ ಗೆದ್ದ ದಿನ ನಾವು ಲಂಡನ್‌ನ ಲಾರ್ಡ್ಸ್ ಮೈದಾನದ ಪಕ್ಕದಲ್ಲೇ ಇರುವ 'ವೆಸ್ಟ್‌ಮೋರ್‌ಲ್ಯಾಂಡ್' (Westmoreland Hotel) ಎಂಬ ಹೋಟೆಲ್‌ನಲ್ಲಿ ತಂಗಿದ್ದೆವು. ನಾವು ಪೋಸ್ಟ್‌ನಲ್ಲಿ ಉಲ್ಲೇಖಿಸಿರುವ ಗ್ರಾಸ್‌ವೋನರ್ ಹೋಟೆಲ್‌ಗೆ ಹೋಗಿಯೇ ಇಲ್ಲ' ಎಂದು ಹೇಳಿದ್ದಾರೆ.

ಸಹಿ ಫೋರ್ಜರಿ: ಬಿಲ್‌ನಲ್ಲಿರುವ ಕಪಿಲ್ ದೇವ್ ಅವರ ಸಹಿ ಕೂಡ ನಕಲಿಯಾಗಿದೆ. ಅದು ಕಪಿಲ್ ಅವರ ಅಸಲಿ ಸಹಿ ಅಲ್ಲ ಎಂದು ಆಜಾದ್ ಖಚಿತಪಡಿಸಿದ್ದಾರೆ.

ಸಂಭ್ರಮಾಚರಣೆಯ ಹಾದಿ: ವಿಶ್ವಕಪ್ ಗೆಲುವಿನ ಸಂಭ್ರಮವು ಜೂನ್ 25ರ ರಾತ್ರಿಯಿಂದ 26ರ ಬೆಳಗಿನವರೆಗೂ ನಡೆದಿತ್ತು. ಆದರೆ ಅದು ನಾವು ತಂಗಿದ್ದ ಹೋಟೆಲ್‌ನಲ್ಲಿ ನಡೆಯಿತೇ ಹೊರತು ಈ ಬಿಲ್‌ನಲ್ಲಿ ತೋರಿಸಲಾದ ಸ್ಥಳದಲ್ಲಲ್ಲ.

AI ತಂತ್ರಜ್ಞಾನದ ದುರ್ಬಳಕೆಯ ಆತಂಕ:

ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ಫೋಟೋಶಾಪ್ ಬಳಸಿ ಇತಿಹಾಸವನ್ನು ತಿರುಚುವ ಅಥವಾ ಸುಳ್ಳು ಸುದ್ದಿ ಹಬ್ಬಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಿಲ್ ಕೂಡ ಎಐ ತಂತ್ರಜ್ಞಾನ ಬಳಸಿ ರಚಿಸಲಾದ 'ವಿಂಟೇಜ್' ಮಾದರಿಯ ಚಿತ್ರ ಎನ್ನಲಾಗಿದೆ. ಹಳೆಯ ಕಾಗದದ ವಿನ್ಯಾಸ ಮತ್ತು ಸಹಿಯನ್ನು ಬಳಸಿ ಜನರನ್ನು ನಂಬಿಸಲು ಈ ಕೃತ್ಯ ಎಸಗಲಾಗಿದೆ.

ಒಟ್ಟಿನಲ್ಲಿ, 1983ರ ಗೆಲುವಿನ ನೆನಪುಗಳು ಭಾರತೀಯರ ಹೃದಯದಲ್ಲಿ ಅಮರವಾಗಿವೆ. ಆದರೆ ಇಂತಹ ನಕಲಿ ಪೋಸ್ಟ್‌ಗಳ ಮೂಲಕ ಇತಿಹಾಸವನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನಗಳ ಬಗ್ಗೆ ಜಾಗರೂಕರಾಗಿರಬೇಕಿದೆ. ಈ ಬಿಲ್ ಕ್ರಿಕೆಟ್ ಇತಿಹಾಸದ ಭಾಗವಲ್ಲ, ಬದಲಿಗೆ ಇದೊಂದು 'ಡಿಜಿಟಲ್ ವಂಚನೆ' ಎಂಬುದು ಈಗ ಸಾಬೀತಾಗಿದೆ.

Scroll to load tweet…