ಕಿಡ್ನಿ ಸಮಸ್ಯೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ, ವೈದ್ಯರು ತಪ್ಪು ಶಸ್ತ್ರಚಿಕಿತ್ಸೆ ನಡೆಸಿ ಆರೋಗ್ಯವಂತ ಕಿಡ್ನಿಯನ್ನು ತೆಗೆದುಹಾಕಿದ್ದಾರೆ. ಇದರಿಂದ ಮಹಿಳೆ ಮೃತಪಟ್ಟಿದ್ದು, ಈ ವೈದ್ಯಕೀಯ ನಿರ್ಲಕ್ಷ್ಯವನ್ನು ಪ್ರಶ್ನಿಸಿದ ಪತಿಗೆ ರಾಷ್ಟ್ರೀಯ ಗ್ರಾಹಕರ ವೇದಿಕೆಯು ಆಸ್ಪತ್ರೆಯಿಂದ 2 ಕೋಟಿ ರೂಪಾಯಿ ಪರಿಹಾರವನ್ನು ಕೊಡಿಸಿದೆ.

ವೈದ್ಯರನ್ನು ದೇವರಿಗೆ ಹೋಲಿಸುತ್ತಾರೆ. ಆದರೆ ಇಂದು ಮೆಡಿಕಲ್​ ಮಾಫಿಯಾ ವಿಸ್ತಾರವಾಗಿ ಬೆಳೆದು ಬಿಟ್ಟಿದೆ. ಹಲವು ಆಸ್ಪತ್ರೆಗಳಲ್ಲಿ ದುಡ್ಡಿನ ಹಪಾಹಪಿಗೆ ಪ್ರಾಣಕ್ಕೆ ಲೆಕ್ಕವೇ ಇಲ್ಲವಾಗಿದೆ. ಕಾಯಿಲೆ ಇದ್ದವ ಆಸ್ಪತ್ರೆಗೆ ಹೋಗಿ ಹುಷಾರಾಗಿ ಬರುವ ಬದಲು, ಆರೋಗ್ಯವಂತನಾಗಿ ಆಸ್ಪತ್ರೆಗೆ ಹೋಗಿ ಹೊರಬರುವಾಗ ರೋಗಿಯಾಗಿ ಮರಳಿದರೆ ಪುಣ್ಯ, ಇಲ್ಲದಿದ್ದರೆ ಆತನ ಡೆಡ್​ಬಾಡಿ ಬರುತ್ತದೆ. ಅದೂ ಹೆಣ ಕೊಡುವಾಗ ಸುಮ್ಮನೇ ಕೊಡುವುದಿಲ್ಲ ಮತ್ತೆ, ಹತ್ತಿಪ್ಪತ್ತು ಲಕ್ಷ ಪೀಕಿಯೇ ಹೆಣ ಕೊಡುವ ಸ್ಥಿತಿ ದಿನನಿತ್ಯ ಸೋಷಿಯಲ್​ ಮೀಡಿಯಾದಲ್ಲಿ ನೊಂದವರು ಬರೆದುಕೊಳ್ಳುವುದನ್ನು ನೋಡಬಹುದಾಗಿದೆ. ರೋಗಿ ಒಂದು ಚಿಕಿತ್ಸೆಗೆ ಹೋದರೆ, ಇನ್ನೊಂದು ಚಿಕಿತ್ಸೆ ನೀಡಿ ಅವರ ಸಾವಿಗೆ ಕಾರಣವಾಗುತ್ತಿರುವ ಎಷ್ಟು ಉದಾಹರಣೆಗಳು ದಿನನಿತ್ಯ ನಡೆಯುತ್ತಿಲ್ಲ ಹೇಳಿ?

Add Asianetnews Kannada as a Preferred SourcegooglePreferred

2 ಕೋಟಿ ರೂ. ಪರಿಹಾರ

ಅಂಥದ್ದೇ ಒಂದು ಕೇಸ್​​ನಲ್ಲಿ ಇದೀಗ ಮಹಿಳೆಗೆ 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ದೆಹಲಿಯ ರಾಷ್ಟ್ರೀಯ ಗ್ರಾಹಕರ ವೇದಿಕೆ ಆಸ್ಪತ್ರೆಯೊಂದಕ್ಕೆ ಆದೇಶಿಸಿದೆ. 56 ವರ್ಷದ ಮಹಿಳೆಯೊಬ್ಬರು ಕಿಡ್ನಿ ಸಮಸ್ಯೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಬಲಭಾಗದ ಮೂತ್ರಪಿಂಡದಲ್ಲಿ ಸಮಸ್ಯೆಯಿತ್ತು. ಆದರೆ ಆ ಎಂಬಿಬಿಎಸ್​ ಸೇರಿ ಹಲವು ಡಿಗ್ರಿಗಳನ್ನು ತಮ್ಮ ಮುಂದೆ ಹಾಕಿಕೊಂಡಿರುವ ಡಾಕ್ಟರ್​, ಎಡಭಾಗದ ಕಿಡ್ನಿ ಆಪರೇಷನ್​ ಮಾಡಿದ್ದಾರೆ! ಸಾಲದು ಎನ್ನುವುದಕ್ಕೆ ಉತ್ತಮವಾಗಿರುವ ಕಿಡ್ನಿಯನ್ನೇ ತೆಗೆದಿದ್ದಾರೆ. ಕೊನೆಗೆ ಮಹಿಳೆ ಸಾವನ್ನಪ್ಪಿದ್ದಾರೆ. ಆ ಶವವನ್ನು ಕೊಡಲು ಆಸ್ಪತ್ರೆ ಇನ್ನೆಷ್ಟು ಲಕ್ಷವನ್ನು ಕೇಳಿತ್ತೋ ಆ ದೇವರಿಗೇ ಗೊತ್ತು.

ಗ್ರಾಹಕರ ಕೋರ್ಟ್​ನಲ್ಲಿ ಪ್ರಶ್ನೆ

ಈ ವಿಷಯವನ್ನು ಇಲ್ಲಿಗೇ ಬಿಡದ ಮೃತ ಮಹಿಳೆಯ ಪತಿ ಇದನ್ನು ಗ್ರಾಹಕರ ಕೋರ್ಟ್​ನಲ್ಲಿ ಪ್ರಶ್ನಿಸಿದರು. ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗ ಇದರ ವಿಚಾರಣೆ ನಡೆಸಿತು. ನಿವೃತ್ತ ನ್ಯಾಯಮೂರ್ತಿ ಎ ಪಿ ಸಾಹಿ (ಅಧ್ಯಕ್ಷರು) ಮತ್ತು ಭರತ್‌ಕುಮಾರ್ ಪಾಂಡ್ಯ (ಸದಸ್ಯರು) ಅವರನ್ನೊಳಗೊಂಡ ಪೀಠವು ಮೃತರ ಕುಟುಂಬ ಸದಸ್ಯರು ಸಲ್ಲಿಸಿದ ದೂರಿನ ವಿಚಾರಣೆ ನಡೆಸಿತು, ಅಲ್ಲಿ ರೋಗಿಯ ಎಡ ಮೂತ್ರಪಿಂಡವನ್ನು ತಪ್ಪಾಗಿ ತೆಗೆದುಹಾಕಲಾಗಿದೆ ಎಂದು ಗಮನಿಸಿದ ನ್ಯಾಯಮೂರ್ತಿಗಳು ಆಸ್ಪತ್ರೆಯ ಕ್ರಮಕ್ಕೆ ಸಿಕ್ಕಾಪಟ್ಟೆ ಅಸಮಾಧಾನಗೊಂಡರು. ಮಹಿಳೆಯ ಬಲ ಮೂತ್ರಪಿಂಡದಲ್ಲಿ ಹೈಡ್ರೋನೆಫ್ರೋಸಿಸ್ (ಮೂತ್ರ ಶೇಖರಣೆಯಿಂದಾಗಿ ಊತ) ಇರುವುದು ಪತ್ತೆಯಾಗಿತ್ತು. ಅದರ ಆಪರೇಷನ್​ ಮಾಡುವ ಬದಲು ಎಡಭಾಗದಲ್ಲಿರುವ ಸರಿಯಾಗಿ ಮೂತ್ರಪಿಂಡದ ಆಪರೇಷನ್​ ಮಾಡಿ ಸಾಯಿಸಿಬಿಟ್ಟಿದ್ದರು ಈ ವೈದ್ಯರು.

ಆಸ್ಪತ್ರೆಯವರು ಮಾಡಿರುವ ಈ ಕೃತ್ಯ ಅಪರಾಧವಾಗದೆ. ಅತ್ಯಂತ ಗಂಭೀರ ನಿರ್ಲಕ್ಷ್ಯದ ರೂಪಗಳಲ್ಲಿ ಒಂದಾಗಿದೆ ಎಂದಿರುವ ನ್ಯಾಯಮೂರ್ತಿಗಳು ಮೃತರ ಕುಟುಂಬಕ್ಕೆ 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಆದೇಶಿದ್ದಾರೆ.