5 ತಿಂಗಳ ಹಿಂದಷ್ಟೇ ಉದ್ಘಾಟನೆಗೊಂಡಿದ್ದ ದೇಶದ ಅತೀ ಉದ್ದದ ಸೀ ಬ್ರಿಡ್ಜ್ ಅಟಲ್ ಸೇತುವಿನಲ್ಲಿ ಬಿರುಕು
ಕೇವಲ 5 ತಿಂಗಳ ಹಿಂದಷ್ಟೇ ಉದ್ಘಾಟನೆಗೊಂಡಿದ್ದ ದೇಶದ ಅತೀ ಉದ್ದದ ಸೀ ಬ್ರಿಡ್ಜ್ ಎಂದು ಖ್ಯಾತಿ ಗಳಿಸಿದ ಮುಂಬೈನ ಸೆವ್ರಿ ಮತ್ತು ರಾಯಗಡ ಜಿಲ್ಲೆಯ ನ್ಹವಾ ಶೇವಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಅಟಲ್ ಸೇತುವಿನಲ್ಲಿ ಬಿರುಕು ಕಾಣಿಸಿಕೊಂಡಿದೆ
ಮುಂಬೈ: ಕೇವಲ 5 ತಿಂಗಳ ಹಿಂದಷ್ಟೇ ಉದ್ಘಾಟನೆಗೊಂಡಿದ್ದ ದೇಶದ ಅತೀ ಉದ್ದದ ಸೀ ಬ್ರಿಡ್ಜ್ ಎಂದು ಖ್ಯಾತಿ ಗಳಿಸಿದ ಮುಂಬೈನ ಸೆವ್ರಿ ಮತ್ತು ರಾಯಗಡ ಜಿಲ್ಲೆಯ ನ್ಹವಾ ಶೇವಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಅಟಲ್ ಸೇತುವಿನಲ್ಲಿ ಬಿರುಕು ಕಾಣಿಸಿಕೊಂಡಿದೆ. 17,840 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಸೀ ಬ್ರಿಡ್ಜ್‌ನಲ್ಲಿ ಲೋಕಾರ್ಪಣೆಯಾದ ಕೇವಲ ಐದು ತಿಂಗಳ ಒಳಗೆ ಬಿರುಕು ಕಾಣಿಸಿಕೊಂಡಿರುವುದಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಿದೆ. ಅಟಲ್ ಬಿಹಾರಿ ವಾಜಪೇಯಿ ಸೆವ್ರಿ ನಹ್ವಾ ಅಟಲ್ ಸೇತು ಹೆಸರಿನ ಈ ಸೀಬ್ರಿಡ್ಜ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಈ ವರ್ಷದ ಆರಂಭದಲ್ಲಿ ಜನವರಿ 12ರಂದು ಉದ್ಘಾಟಿಸಿದ್ದರು. ಈ ಸೇತುವೆಯ ಉದ್ಘಾಟನೆ ಬಹಳ ಅದ್ದೂರಿಯಾಗಿ ನಡೆದಿತ್ತು.
ಆದರೆ ಈ ಅಟಲ್ ಸೇತುವಿನಲ್ಲಿ ಈಗ 2 ರಿಂದ ಮೂರು ಅಡಿ ಉದ್ದದ ಬಿರುಕುಗಳು ಕಾಣಿಸಿಕೊಂಡಿದೆ. ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಕೂಡ ಈ ಅಟಲ್ ಸೇತುವಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇಂತಹ ಅಟಲ್ ಸೇತುವಿನಲ್ಲಿ ಈಗ ಬಿರುಕು ಕಾಣಿಸಿಕೊಂಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಟಲ್ ಸೇತುಗೆ ನಟಿ ರಶ್ಮಿಕಾ ಮೆಚ್ಚುಗೆಗೆ ಮೋದಿ ಕೃತಜ್ಞತೆ: ನ್ಯಾಷನಲ್ ಕ್ರಶ್ ಈಗ ನ್ಯಾಷನಲಿಸ್ಟ್ ಎಂದು ಕಾಮೆಂಟ್
ವಿಡಿಯೋ ವೈರಲ್ ಆಗುತ್ತಿದ್ದಂತೆ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅಟಲ್ ಸೇತುವಿಗೆ ಭೇಟಿ ನೀಡಿ ಬಿರುಕು ಪರಿಶೀಲಿಸಿದ್ದಾರೆ. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಇಡೀ ರಾಜ್ಯದಲ್ಲೇ ಭಾರಿ ಭ್ರಷ್ಟಾಚಾರ ಇದೆ. ನಾವು ಇದಕ್ಕೆ ಬೇಕಾದಷ್ಟು ಉದಾಹರಣೆಯನ್ನು ವಿಧಾನಸಭೆಯಲ್ಲಿ ನೀಡಿದ್ದೇವೆ. ಅಟಲ್ ಬಿಹಾರಿ ವಾಜಪೇಯಿಯವರನ್ನು ಪಕ್ಷಾತೀತವಾಗಿ ದೇಶದ ಜನ ಮೆಚ್ಚಿಕೊಂಡಿದ್ದರು. ಆದರೆ ಬಿಜೆಪಿ ಅವರ ಹೆಸರಿನಲ್ಲೂ ಭ್ರಷ್ಟಾಚಾರ ಮಾಡುವುದಕ್ಕೆ ಹೇಸುತ್ತಿಲ್ಲ, ಮಹಾರಾಷ್ಟ್ರವೂ ಅಮಿತ್ ಷಾ ಹಾಗೂ ನರೇಂದ್ರ ಮೋದಿಯವರಿಗೆ ಎಟಿಎಂ ಆಗುತ್ತಿದೆ. ಹೀಗಾಗಿ ಮಹಾರಾಷ್ಟ್ರದ ವಿರುದ್ಧ ಸುಳ್ಳು ಸುಳ್ಳೇ ಹೊಗಳಿಕೆ ಮಾಡುತ್ತಿದ್ದಾರೆ ಎಂದು ನಾನಾ ಪಟೋಲೆ ದೂರಿದ್ದಾರೆ.
ಅಟಲ್ ಸೇತುವಿನಲ್ಲಿ ಅಪಘಾತ: ಹಿಂದಿದ್ದ ಕಾರಿನ ಡ್ಯಾಶ್ ಕ್ಯಾಮರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಅಟಲ್ ಸೇತು ಬಗ್ಗೆ ಒಂದಿಷ್ಟು ಮಾಹಿತಿ
ಎಂಟಿಎಚ್‌ಎಲ್ ಎಂದು ಕರೆಯಲಾಗುವ ಈ ಸೇತುವೆ ಯೋಜನೆ 21.8 ಕಿಲೋಮೀಟರ್ ಉದ್ದದ ಸಮುದ್ರ ಸೇತುವೆಯಾಗಿದ್ದು, ಅಂದಾಜು 17, 843 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. . 2023ರ ಡಿಸೆಂಬರ್ 25 ರಂದು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆಯಂದು ಇದು ಉದ್ಘಾಟನೆ ಆಗಬೇಕಿತ್ತಾದರೂ, ಸೇತುವೆ ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗದ ಕಾರಣ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿತ್ತು. ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) ಆರು ಪಥದ 21.8-ಕಿಮೀ ಉದ್ದದ ಸೇತುವೆ. ಇದು ಭಾರತದ ಅತಿ ಉದ್ದದ ಸಮುದ್ರ ಸೇತುವೆಯಾಗಿದೆ. ಸಮುದ್ರದ ಮೇಲೆ 16.5 ಕಿಲೋಮೀಟರ್ ಹಾಗೂ ಉಳಿದ 5.5 ಕಿಲೋಮೀಟರ್ ಮಾರ್ಗ ಭೂಮಿಯ ಮೇಲಿದೆ. ಅಟಲ್ ಸೇತು ಎಂದು ಕರೆಸಿಕೊಳ್ಳುವ ಈ ಸೇತುವೆಯು ನವಿ ಮುಂಬೈ ತುದಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 4B ಯಲ್ಲಿ ಸೆವ್ರಿ, ಶಿವಾಜಿ ನಗರ, ಜಸ್ಸಿ ಮತ್ತು ಚಿರ್ಲೆಯಲ್ಲಿ ಇಂಟರ್‌ಚೇಂಜ್‌ಗಳನ್ನು ಹೊಂದಿರುತ್ತದೆ. ಇದು ರಾಜ್ಯದ ಎರಡು ದೊಡ್ಡ ನಗರಗಳಾದ ಮುಂಬೈ ಹಾಗೂ ಪುಣೆಗೆ ಸಂಪರ್ಕಿಸುವ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಗೆ ಲಿಂಕ್ ಆಗಿಯೂ ಸಂಪರ್ಕ ಕಲ್ಪಿಸುತ್ತದೆ.