11 ದಿನ ಬಳಿಕ ದೇಶದಲ್ಲಿ 13000ಕ್ಕೂ ಅಧಿಕ ಕೇಸ್ : ನಿರಂತರ ಏರಿಕೆ
- ಯಾವುದೇ ಸಮಯದಲ್ಲಿ ದೇಶದಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳಬಹುದು ಎಂಬ ಕೇಂದ್ರ ಸರ್ಕಾರದ ಎಚ್ಚರಿಕೆ
- ಗುರುವಾರ ಮುಂಜಾನೆ 8 ಗಂಟೆಗೆ ಅಂತ್ಯವಾದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 13,091 ಕೋವಿಡ್ ಪ್ರಕರಣಗಳು ದಾಖಲಾಗಿವೆ
ನವದೆಹಲಿ (ನ.12): ಯಾವುದೇ ಸಮಯದಲ್ಲಿ ದೇಶದಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳಬಹುದು ಎಂಬ ಕೇಂದ್ರ ಸರ್ಕಾರದ (Govt Of India) ಎಚ್ಚರಿಕೆ ನಡುವೆಯೇ, ಗುರುವಾರ ಮುಂಜಾನೆ 8 ಗಂಟೆಗೆ ಅಂತ್ಯವಾದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 13,091 ಕೋವಿಡ್ (Covid) ಪ್ರಕರಣಗಳು ದಾಖಲಾಗಿವೆ. ಸೋಂಕಿನ ಪ್ರಮಾಣ 13000ದ ಗಡಿ ದಾಟಿದ್ದು 11 ದಿನಗಳ ಬಳಿಕವಾದ್ದರಿಂದ, ಈ ಏರಿಕೆ ಸಹಜವಾಗಿಯೇ ಸಣ್ಣ ಆತಂಕಕ್ಕೆ ಕಾರಣವಾಗಿದೆ.
ಕರ್ನಾಟಕದಲ್ಲೂ (karnataka) ಕೂಡ ಕಳೆದ ಶುಕ್ರವಾರದಿಂದ ಈವರೆಗೆ ಸಣ್ಣ ಪ್ರಮಾಣದಲ್ಲಿ ನಿತ್ಯ ಸೋಂಕಿನ ಸಂಖ್ಯೆ ಏರಿಕೆಯಾಗುತ್ತಿದೆ. ಕಳೆದ ವಾರ 200ರ ಆಸುಪಾಸಿನಲ್ಲಿದ್ದ ನಿತ್ಯ ಸೋಂಕು ಈಗ 300ರ ಸನಿಹಕ್ಕೆ ಬಂದಿದೆ.
ದೇಶಾದ್ಯಂತ ಹಬ್ಬದ ದಿನಗಳ ಸಮಯದಲ್ಲಿ ಮತ್ತೆ ಕೋವಿಡ್ (Covid) ಸೋಂಕಿನ ಪ್ರಮಾಣ ಹೆಚ್ಚಬಹುದು. ಹೀಗಾಗಿ ಇದನ್ನು ತಡೆಯಲು ಜನತೆ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂಬ ಸೂಚನೆಗಳ ನಡುವೆಯೇ ಈ ಏರಿಕೆ ದಾಖಲಾಗಿದೆ.
ಕಳೆದ ಅ.31ರಂದು ದೇಶದಲ್ಲಿ 14313 ಪ್ರಕರಣ ದಾಖಲಾಗಿತ್ತು. ಬಳಿಕ ಸತತ 10 ದಿನಗಳಿಂದಲೂ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ 10000-13000ದ ಒಳಗೇ ದಾಖಲಾಗುತ್ತಿತ್ತು. ಆದರೆ ಗುರುವಾರ ಈ ಪ್ರಮಾಣ 13091ಕ್ಕೆ ಏರಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3.44 ಕೋಟಿಗೆ ತಲುಪಿದೆ. ಇನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 360 ಜನರು ಸಾವನ್ನಪ್ಪುವುದರೊಂದಿಗೆ, ಸೋಂಕಿಗೆ ಬಲಿಯಾದವರ ಸಂಖ್ಯೆ 4.62 ಲಕ್ಷಕ್ಕೆ ತಲುಪಿದೆ.
ಇದೇ ವೇಳೆ ಸಕ್ರಿಯ ಪ್ರಕರಣಗಳು 1.38 ಲಕ್ಷಕ್ಕೆ ಇಳಿದಿದ್ದು, ಇದು 266 ದಿನದ ಕನಿಷ್ಠವಾಗಿದೆ. ಕಳೆದ 24 ಗಂಟೆಗಳಲ್ಲಿ 1,127 ಸೋಂಕಿತರು ಗುಣಮುಖರಾಗಿದ್ದು, ದೈನಂದಿನ ಪಾಸಿಟಿವಿಟಿ ದರ (Positivity Rate) ಶೇ.1.10ರಷ್ಟಿದೆ. ಈವರೆಗೆ 110.23 ಕೋಟಿ ಡೋಸ್ ಲಸಿಕೆಯನ್ನು ವಿತರಿಸಲಾಗಿದೆ.
ಎಚ್ಚರ, ಕೋವಿಡ್ ಮುಗಿದಿಲ್ಲ: ಕೇಂದ್ರ
ಕೊರೋನಾ ಪ್ರಕರಣಗಳ (Corona Cases) ಸಂಖ್ಯೆ ದೇಶದಲ್ಲಿ ಭಾರಿ ಪ್ರಮಾಣದಲ್ಲಿ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಕೋವಿಡ್ ಮುಗಿದೇ ಹೋಯಿತು ಎಂಬಂತೆ ವರ್ತಿಸುತ್ತಿರುವ ನಾಗರಿಕರು ಹಾಗೂ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆಯ ಗಂಟೆ ಬಾರಿಸಿದೆ. ಕೋವಿಡ್ ಮುಕ್ತಾಯವಾಯಿತು ಎಂದು ಯಾವುದೇ ಕಾರಣಕ್ಕೂ ಭಾವಿಸಬೇಡಿ. ಜಾಗತಿಕವಾಗಿ ಪ್ರಕರಣಗಳು ಏರುಮುಖವಾಗಿವೆ. ಶೇ.80ರಷ್ಟುಜನರಿಗೆ ಲಸಿಕೆ ನೀಡಲಾಗಿರುವ ಸಿಂಗಾಪುರ (Singapore) , ಬ್ರಿಟನ್ (Britain), ರಷ್ಯಾ (Russia) ಹಾಗೂ ಚೀನಾದಲ್ಲೂ (China) ಪ್ರಕರಣಗಳು ಹೆಚ್ಚಾಗುತ್ತಿವೆ. ಕೊರೋನಾ ವಿರುದ್ಧದ ಹೋರಾಟದ ಅಂತಿಮಘಟ್ಟದಲ್ಲಿ ನಾವಿದ್ದೇವೆ ಎಂದು ಹೇಳಿದೆ.
ಕೊರೋನಾ ಮುಗಿಯುವ ಮುನ್ನವೇ ಶಸ್ತ್ರಾಸ್ತ್ರಗಳನ್ನು ಕೆಳಗಿಡುವುದು ಬೇಡ
ಕೋವಿಡ್ ಲಸಿಕಾಕರಣ (Covid Vaccination) ಹಾಗೂ ಮುನ್ನೆಚ್ಚರಿಕೆ ಕ್ರಮ ಎರಡನ್ನೂ ಪಾಲಿಸಬೇಕು ಎಂದು ರಾಜ್ಯಗಳ ಆರೋಗ್ಯ ಸಚಿವರ ಜತೆ ಗುರುವಾರ ನಡೆಸಿದ ವಿಡಿಯೋ ಕಾನ್ಫರೆನ್ಸ್ (video conference) ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ (Mansukh Mandaviya) ಸಲಹೆ ಮಾಡಿದರು. ನಾವು ಕೊರೋನಾ ವಿರುದ್ಧದ ಹೋರಾಟದ ಅಂತಿಮ ಘಟ್ಟದಲ್ಲಿದ್ದೇವೆ. ಈ ಹಂತದಲ್ಲಿ ನಿರ್ಲಕ್ಷ್ಯ ಸಲ್ಲದು. ಲಸಿಕೆ ಹಾಗೂ ಹಾಗೂ ನಿಯಮ ಪಾಲನೆ ಕೋವಿಡ್ ವಿರುದ್ಧ ನಮಗಿರುವ ಎರಡು ಪ್ರಬಲ ಅಸ್ತ್ರಗಳು. ಕೊರೋನಾ ಮುಗಿಯುವ ಮುನ್ನವೇ ನಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಡುವುದು ಬೇಡ ಎಂದು ಕಿವಿ ಮಾತು ಹೇಳಿದರು.
ಲಸಿಕೆ ಪಡೆಯುವಂತೆ ಮಕ್ಕಳೇ ಪೋಷಕರ ಮನವೊಲಿಸಲಿ
ದೇಶದಲ್ಲಿ ನ.2ರಂದು ಆರಂಭವಾಗಿರುವ ಒಂದು ತಿಂಗಳ ಕಾಲದ ಮನೆಮನೆಗೆ ಲಸಿಕೆ ಅಭಿಯಾನದ ಪ್ರಗತಿ ಪರಿಶೀಲಿಸಿ ಆರೋಗ್ಯ ಸಚಿವರ ಜತೆ ಮಾತನಾಡಿದ ಮಾಂಡವೀಯ, ಅಭಿಯಾನ ಮುಕ್ತಾಯವಾಗುವುದರೊಳಗೆ ಅರ್ಹರಿಗೆ ಮೊದಲ ಡೋಸ್ ಲಸಿಕೆ ಪೂರ್ಣಗೊಳಿಸಬೇಕು. ಇದಕ್ಕಾಗಿ ಜನರ ಮನವೊಲಿಸಬೇಕು ಎಂದು ಹೇಳಿದರು. 12 ಕೋಟಿಗಿಂತ ಅಧಿಕ ಮಂದಿ ಈವರೆಗೆ ಎರಡನೇ ಡೋಸ್ ಪಡೆದಿಲ್ಲ. ಜನರು ಲಸಿಕೆ ಪಡೆಯಲು ಮುಂದಾಗುವಂತೆ ಮಾಡಲು ಮಕ್ಕಳನ್ನು ಬಳಸಿಕೊಳ್ಳಬೇಕು. ಲಸಿಕೆ ಪಡೆಯುವಂತೆ ಮಕ್ಕಳೇ ಪೋಷಕರ ಮನವೊಲಿಸುವಂತಾಗಬೇಕು. ಈ ಕಾರ್ಯಕ್ಕೆ ಮಕ್ಕಳನ್ನು ಬಳಸಿಕೊಳ್ಳಿ ಎಂದು ಹೇಳಿದರು.
ಬಸ್, ರೈಲು ನಿಲ್ದಾಣಗಳಲ್ಲಿ ಲಸಿಕೆ ವಿತರಣೆ ಆರಂಭಿಸೋಣ. ಈಗಾಗಲೇ ಕೆಲವು ರಾಜ್ಯಗಳಲ್ಲಿ ಈ ಕಾರ್ಯ ಆರಂಭವಾಗಿದೆ. ಬಸ್, ರೈಲು, ರಿಕ್ಷಾ ಇಳಿದವರನ್ನು ಮನವೊಲಿಸಿ ಲಸಿಕೆ ನೀಡಲಾಗುತ್ತಿದೆ. ಇದರ ಜತೆಗೆ ಪ್ರತಿ ವರ್ಗಕ್ಕೂ ಒಂದೊಂದು ದಿನ ನಿಗದಿಗೊಳಿಸಿ ಲಸಿಕೆ ನೀಡಿ. ಉದಾಹರಣೆಗೆ ವ್ಯಾಪಾರಿಗಳು, ಅಂಗಡಿ- ಮಳಿಗೆಗಳ ನೌಕರರು, ರಿಕ್ಷಾ ಎಳೆಯುವವರು ಹಾಗೂ ಆಟೋ ಚಾಲಕರಿಗೆಂದು ಒಂದೊಂದು ದಿನ ಮೀಸಲಿಡಿ ಎಂದು ತಿಳಿಸಿದರು.ಕರ್ನಾಟಕದ (Karnataka) ಪರವಾಗಿ ಕೆ. ಸುಧಾಕರ್ (K Sudhakar) ಅವರು ಕೇಂದ್ರ ಸಚಿವರ ಸಭೆಯಲ್ಲಿ ಭಾಗಿಯಾಗಿದ್ದರು.
ಜರ್ಮನಿಯಲ್ಲಿ ಸೋಂಕು ಸ್ಫೋಟ, ಫ್ರಾನ್ಸಲ್ಲಿ 5ನೇ ಅಲೆ
ಬರ್ಲಿನ್/ಪ್ಯಾರಿಸ್: ಜರ್ಮನಿಯಲ್ಲಿ ಏಕಾಏಕಿ ಕೋವಿಡ್ ಸೋಂಕು ಸ್ಫೋಟವಾಗಿದ್ದು, ಗುರುವಾರ ಒಂದೇ ದಿನ 50000 ಹೊಸ ಪ್ರಕರಣ ಪತ್ತೆಯಾಗಿದೆ. ಇದು ಆ ದೇಶದಲ್ಲಿ ಏಕದಿನದ ಸಾರ್ವಕಾಲಿಕ ಗರಿಷ್ಠ ಸಂಖ್ಯೆಯಾಗಿದೆ. ಫ್ರಾನ್ಸ್‌ನಲ್ಲಿ ನಿತ್ಯ 10 ಸಾವಿರಕ್ಕಿಂತ ಹೆಚ್ಚು ಕೇಸ್ ಪತ್ತೆಯಾಗುತ್ತಿದ್ದು, 5ನೇ ಅಲೆ ಪ್ರಾರಂಭವಾಗಿದೆ ಎಂದು ಸರ್ಕಾರ ಹೇಳಿದೆ. ಹೀಗಾಗಿ ಯುರೋಪ್‌ನಲ್ಲಿ ಆತಂಕ ಸೃಷ್ಟಿಯಾಗಿದೆ.