ಕೊರೋನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಘೋಷಿಸಲಾಗಿದ್ದ ಭಾರತ ಲಾಕ್‌ಡೌನ್ 30 ದಿನಗಳನ್ನು ಪೂರೈಸಿದೆ. ಈ ಅವಧಿಯಲ್ಲಿ ಭಾರತ ಸಾಧಿಸಿದ್ದೇನು? ಭಾರತದಲ್ಲಿ ಕೊರೋನಾ ನಿಯಂತ್ರಣದ ಪರಿಸ್ಥಿತಿ ಹೇಗಿದೆ ಎನ್ನುವ ನಿಮ್ಮೆಲ್ಲ ಕುತೂಹಲಗಳಿಗೆ ಇಲ್ಲಿದೆ ನೋಡಿ ಉತ್ತರ.

ನವದೆಹಲಿ(ಏ.24): ಕೊರೋನಾ ನಿಗ್ರಹಕ್ಕಾಗಿ ಮಾ.25ರಂದು ಜಾರಿಗೆ ಬಂದ ದೇಶವ್ಯಾಪಿ ಲಾಕ್‌ಡೌನ್‌ ಗುರುವಾರ 30 ದಿನಗಳನ್ನು ಪೂರೈಸಿದೆ. ಲಾಕ್‌ಡೌನ್‌ನಿಂದಾಗಿ ಸೋಂಕು ವ್ಯಾಪಕವಾಗಿ ಹಬ್ಬುವುದಕ್ಕೆ ಬ್ರೇಕ್‌ ಬಿದ್ದಿದ್ದರೆ, ಸೋಂಕಿತರ ಚೇತರಿಕೆ ಪ್ರಮಾಣ ಕಳೆದ 10 ದಿನಗಳಲ್ಲಿ ದ್ವಿಗುಣವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಲಾಕ್‌ಡೌನ್‌ ನಂತರ ಕೊರೋನಾ ಪರೀಕ್ಷಾ ಪ್ರಮಾಣ 24 ಪಟ್ಟು ಹೆಚ್ಚಿದೆ. ಹೊಸ ಸೋಂಕು ಪ್ರಮಾಣವು 16 ಪಟ್ಟು ಮಾತ್ರ ಏರಿದೆ. 30 ದಿನಗಳ ಲಾಕ್‌ಡೌನ್‌ನಲ್ಲಿ ವೈರಸ್‌ ಹರಡುವಿಕೆ ಹಾಗೂ ಸೋಂಕು ದ್ವಿಗುಣವನ್ನು ತುಂಡರಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಿದೆ.

ಅಲ್ಲದೆ, ದೇಶದ 78 ಜಿಲ್ಲೆಗಳಲ್ಲಿ ಕಳೆದ 14 ದಿನಗಳಲ್ಲಿ ಹೊಸ ಕೊರೋನಾ ಪ್ರಕರಣ ವರದಿಯಾಗಿಲ್ಲ. 9 ರಾಜ್ಯಗಳ 33 ಹೊಸ ಜಿಲ್ಲೆಗಳು ಈ ಪಟ್ಟಿಯಲ್ಲಿ ಏ.22ರ ವೇಳೆಗೆ ಸೇರಿಕೊಂಡಿವೆ. ಇಲ್ಲಿ 14 ದಿನಗಳಲ್ಲಿ ಒಂದೂ ಪ್ರಕರಣ ವರದಿ ಆಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್‌ ಅಗರ್‌ವಾಲ್‌ ಗುರುವಾರ ತಮ್ಮ ದೈನಂದಿನ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಈ 78 ಜಿಲ್ಲೆಗಳ ಪಟ್ಟಿಯಲ್ಲಿ ಕರ್ನಾಟಕದ ಕೊಡಗು ಹಾಗೂ ಚಿತ್ರದುರ್ಗ ಕೂಡ ಇವೆ.

ಮಹಾರಾಷ್ಟ್ರದಲ್ಲಿ ಒಂದೇ ದಿನ ದಾಖಲೆಯ 778 ಜನಕ್ಕೆ ವೈರಸ್‌

ಗುಣಮುಖ ಪ್ರಮಾಣ ಶೇ.19:

ಗುರುವಾರ ಸಂಜೆವರೆಗೆ ಒಂದೇ ದಿನ 388 ಸೋಂಕಿತರು ಗುಣಮುಖರಾಗಿದ್ದು, ಒಟ್ಟಾರೆ ಸಂಖ್ಯೆ 4257ಕ್ಕೆ ತಲುಪಿದೆ. ಗುಣಮುಖ ಪ್ರಮಾಣ ಶೇ.19.89ರಷ್ಟಿದೆ ಎಂದು ಅಗರ್‌ವಾಲ್‌ ತಿಳಿಸಿದರು.

ಸೋಂಕು ಏರಿಕೆ ಪ್ರಮಾಣ ಸ್ಫೋಟಕವಾಗಿಲ್ಲ. ಹೆಚ್ಚೂ ಕಡಿಮೆ ಸಾಧಾರಣ ಮಟ್ಟದಲ್ಲಿ ಏರಿಕೆಯಲ್ಲಿದೆ. ಒಟ್ಟಾರೆ ಪರೀಕ್ಷೆಗೆ ಒಳಪಟ್ಟವರಲ್ಲಿ ಶೇ.4.5ರಷ್ಟುಜನರಿಗೆ ಸೋಂಕು ತಗುಲಿದೆ. 1 ತಿಂಗಳ ಹಿಂದೆ ಲಾಕ್‌ಡೌನ್‌ ಜಾರಿ ಮಾಡುವ ಮುಂಚಿನ ಮಟ್ಟದಲ್ಲೇ ಏರಿಕೆ ಪ್ರಮಾಣವಿದೆ ಎಂದು ಅಗರ್‌ವಾಲ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿದ್ದ ಕೊರೋನಾ ಗ್ರೂಪ್‌-2 ಉನ್ನತಾಧಿಕಾರ ಸಮೂಹದ ಅಧ್ಯಕ್ಷ ಸಿ.ಕೆ. ಮಿಶ್ರಾ ಇನ್ನೂ ಹಲವು ಮಹತ್ವದ ಅಂಕಿ ಅಂಶ ನೀಡಿದರು. ‘ಕೊರೋನಾಗೆಂದೇ ಮೀಸಲಿರಿಸಲಾದ ಆಸ್ಪತ್ರೆಗಳ ಸಂಖ್ಯೆಯಲ್ಲಿ 3.5 ಪಟ್ಟು ಏರಿಕೆಯಾಗಿದೆ. ಐಸೋಲೇಶನ್‌ ಬೆಡ್‌ಗಳು ಕೂಡ 3.6 ಪಟ್ಟು ಏರಿವೆ. ಮಾರ್ಚ್ 23ರಂದು 14,915 ಪರೀಕ್ಷೆಗಳನ್ನು ದೇಶಾದ್ಯಂತ ನಡೆಸಲಾಗಿತ್ತು. ಏಪ್ರಿಲ್‌ 22ಕ್ಕೆ 5 ಲಕ್ಷ ಟೆಸ್ಟ್‌ ನಡೆಸಲಾಗಿದೆ. ಹೀಗಾಗಿ ಟೆಸ್ಟ್‌ ಪ್ರಮಾಣ ಗಣನೀಯ ಏರಿಕೆ ಕಂಡಿದೆ. ಸೋಂಕು ಹರಡುವಿಕೆ ಹಾಗೂ ದ್ವಿಗುಣ ಪ್ರಮಾಣ ತುಂಡು ಮಾಡುವಲ್ಲಿ ಯಶ ಕಂಡಿದ್ದೇವೆ’ ಎಂದು ಹೇಳಿದರು.