* ದೇಶದಲ್ಲಿ ಮತ್ತೆ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆ* ಕೊರೋನಾ ಏರಿಕೆ ಬೆನ್ನಲ್ಲೇ ಏಳು ರಾಜ್ಯಗಳ ಸಿಎಂ ಜೊತೆ ಮೋದಿ ಸಭೆ* ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿರುವ ಸಭೆಯಲ್ಲಿ ಕೊರೋನಾ ಪರರಿಸ್ಥಿತಿ ಬಗ್ಗೆ ಚರ್ಚೆ

ನವದೆಹಲಿ(ಜು.12): ದೇಶಕ್ಕೆ ಎಂಟ್ರಿ ಕೊಟ್ಟಿದ್ದ ಕೊರೋನಾ ಮೊದಲ ಅಲೆ ಹಾಗೂ ಎರಡನೇ ಅಲೆ ಈಗಾಗಲೇ ಅಪಾರ ನಷ್ಟವುಂಟು ಮಾಡಿದೆ. ಇದು ದೇಶದ ಅರ್ಥವ್ಯವಸ್ಥೆಗೆ ಬಹುದೊಡ್ಡ ಏಟು ನೀಡಿದ್ದರೆ, ಅತ್ತ ಜನ ಸಾಮಾನ್ಯರು ತಮ್ಮ ಆಪ್ತರನ್ನು ಕಳೆದುಕೊಂಡಿದ್ದಾರೆ. ಅಲ್ಲದೇ ಈ ಸಂಕಷ್ಟದ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಅನೇಕರು ಊಟಕ್ಕಾಗಿ ಪರದಾಡುತ್ತಿದ್ದಾರೆ. ಆದರೀಗ ದೇಶದಲ್ಲಿ ಮತ್ತೆ ಕೊರೋನಾ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಹೀಗಿರುವಾಗ ಪಿಎಂ ಮೋದಿ ಆರು ರಾಜ್ಯಗಳ ಸಿಎಂ ಜೊತೆ ಸಂವಾದ ನಡೆಸಲಿದ್ದಾರೆ.

ಮತ್ತೆ ಲಾಕ್‌ಡೌನ್ ಆತಂಕ!

ಹೌದು ನಾಳೆ ಮಂಗಳವಾರ ಬೆಳಗ್ಗೆ 11 ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಸ್ಸಾಂ, ನಾಗಾಲ್ಯಾಂಡ್, ತ್ರಿಪುರ, ಸಿಕ್ಕಿಂ, ಮಣಿಪುರ, ಮೇಘಾಲಯ, ಅರುಣಾಚಲ ಪ್ರದೇಶ ಮತ್ತು ಮಿಜೋರಾಂ ಸಿಎಂಗಳ ಜೊತೆ ಸಂವಾದ ನಡೆಸಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿರುವ ಈ ಸಂವಾದ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿರುವ ಕೊರೋನಾ ಪರಿಸ್ಥಿತಿ ಬಗ್ಗೆ ಮೋದಿ ಚರ್ಚೆ ನಡೆಸಲಿದ್ದಾರೆ.

ಇನ್ನು ದೇಶದಲ್ಲಿ ಮೊದಲ ಹಾಗೂ ಎರಡನೇ ಅಲೆ ದಾಳಿ ಬಳಿಕ ಪರಿಸ್ಥಿತಿ ಅವಲೋಕಿಸಿ ಅನ್‌ಲಾಕ್‌ ಮಾಡಲಾಗಿದೆಯಾದರೂ ಜನರ ಚಟುವಟಿಕೆಗಳು ಮಾತ್ರ ದುಪ್ಪಟ್ಟಾಗಿದೆ. ಅನ್‌ಲಾಕ್ ಆರಂಭಗೊಂಡ ಬೆನ್ನಲ್ಲೇ ಪ್ರವಾಸಿ ತಾಣ ಭರ್ತಿಯಾಗುತ್ತಿದೆ. ಸಭೆ , ಸಮಾರಂಭ ಹೆಚ್ಚಾಗುತ್ತಿದೆ. ಜನರ ಒಡಾಟ ಹೆಚ್ಚಾಗಿದೆ. ಈ ನಡುವೆ ಕೊರೋನಾ ಮಾರ್ಗಸೂಚಿಯೂ ಮಾತ್ರ ಪಾಲನೆಯಾಗುತ್ತಿಲ್ಲ. ಈ ಓಡಾಟದ ಬೆನ್ನಲ್ಲೇ ಕುಸಿದಿದ್ದ ಕೊರೋನಾ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗಲಾರಂಭಿಸಿದೆ.

ಅನ್‌ಲಾಕ್‌ ಬೆನ್ನಲ್ಲೇ ದೇಶದಲ್ಲಿ ಕೊರೋನಾ ಪ್ರಸರಣ ಹೆಚ್ಚಳ!

ಭಾರತದ 66 ಜಿಲ್ಲೆಗಳಲ್ಲಿ ಕೊರೋನಾ ಹೆಚ್ಚಳ!

ಕರ್ನಾಟಕದ ಹತ್ತು ಜಿಲ್ಲೆಗಳು ಸೇರಿ ದೇಶದ ಒಟ್ಟು 66 ಜಿಲ್ಲೆಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಲಾರಂಭಿಸಿದೆ. ದೇಶದ 66 ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ ಶೇಕಡಾ 10ಕ್ಕಿಂತ ಹೆಚ್ಚಾಗಿದೆ. ಇದು ಒಂದೆಡೆ ಮೂರನೇ ಅಲೆ ಭೀತಿ ಹುಟ್ಟಿಸಿದ್ದರೆ, ಮತ್ತೊಂದೆಡೆ ಮತ್ತೆ ಲಾಕ್‌ಡೌನ್ ಘೋಷಣೆಯಾಗುವ ಆತಂಕ ಸೃಷ್ಟಿಸಿದೆ.

 ಹೊಸ ಪ್ರಕರಣ ಹೆಚ್ಚಾಗುತ್ತಿರುವ ರಾಜ್ಯ ಹಾಗೂ ಜಿಲ್ಲೆ

* ಮಹಾರಾಷ್ಟ್ರ: 15 ಜಿಲ್ಲೆ 
* ಕೇರಳ: 14 ಜಿಲ್ಲೆ 
* ತಮಿಳುನಾಡು: 12 ಜಿಲ್ಲೆ 
* ಒಡಿಶಾ: 10 ಜಿಲ್ಲೆ 
* ಆಂಧ್ರಪ್ರದೇಶ: 10 ಜಿಲ್ಲೆ
* ಕರ್ನಾಟಕ: 10 ಜಿಲ್ಲೆ
* ಅಸ್ಸಾಂ: 6 ಜಿಲ್ಲೆ
* ಪಶ್ಚಿಮ ಬಂಗಾಳ: 4 ಜಿಲ್ಲೆ 
* ಮೇಘಾಲಯ :2 ಜಿಲ್ಲೆ
* ಮಣಿಪುರ: 2 ಜಿಲ್ಲೆ
* ತ್ರಿಪುರ: 1 ಜಿಲ್ಲೆ
* ಗೋವಾ:1 ಜಿಲ್ಲೆ
* ಮಿಜೋರಾಂ:1 ಜಿಲ್ಲೆ
* ಪುದುಚೇರಿ:1 ಜಿಲ್ಲೆ
* ಅರುಣಾಚಲ ಪ್ರದೇಶ:1 ಜಿಲ್ಲೆ