23 ವರ್ಷದ ಅಗ್ನಿವೀರ್ ಮುದವತ್ ಮುರಳಿ ನಾಯಕ್, 'ಆಪರೇಷನ್ ಸಿಂದೂರ'ದಲ್ಲಿ ಹುತಾತ್ಮರಾದರು. ಸರ್ಕಾರದಿಂದ ಪರಿಹಾರ ಘೋಷಣೆಯಾಗಿದೆ. ದಂಪತಿಗಳೊಬ್ಬರು ವಿದೇಶ ಪ್ರವಾಸ ರದ್ದುಗೊಳಿಸಿ ₹1,09,001 ನೆರವು ನೀಡಿದ್ದಾರೆ. ಮುಖ್ಯಮಂತ್ರಿಗಳು ₹50 ಲಕ್ಷ ಪರಿಹಾರ, ಭೂಮಿ ಮತ್ತು ಸರ್ಕಾರಿ ಉದ್ಯೋಗ ಘೋಷಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷದಲ್ಲಿ ಇದಾಗಲೇ ಕೆಲವು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ದೇಶಕ್ಕಾಗಿ, ಉಗ್ರರ ನಾಶಕ್ಕಾಗಿ, ದೇಶದ ಜನತೆ ನೆಮ್ಮದಿಯಿಂದ ಜೀವಿಸುವುದಕ್ಕಾಗಿ ಈ ಯೋಧರು ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ಇವರಲ್ಲಿ ಒಬ್ಬರು ಅಗ್ನಿವೀರ್ ಮುದವತ್ ಮುರಳಿ ನಾಯಕ್ ಎಂಬ 23 ವರ್ಷದ ಯುವಕ. ‘ಆಪರೇಷನ್‌ ಸಿಂದೂರ’ದ ಕಾರ್ಯಾಚರಣೆಯಲ್ಲಿ ಇವರು ಹುತಾತ್ಮರಾಗಿದ್ದಾರೆ. ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಕಲ್ಲಿ ತಾಂಡಾದ ನಿವಾಸಿಯಾಗಿದ್ದ ಮುರಳಿ ನಾಯಕ್ ಅವರಿಗೆ ನಿನ್ನೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ. ಇದಾಗಲೇ ಸರ್ಕಾರದ ಕಡೆಯಿಂದ ಅವರ ಕುಟುಂಬಕ್ಕೆ ಪರಿಹಾರವನ್ನೂ ಘೋಷಿಸಲಾಗಿದೆ. ಮಗನನ್ನು ಕಳೆದುಕೊಳ್ಳುವ ನೋವು ಪರಿಹಾರದಿಂದ ಶಮನವಾಗುವುದಿಲ್ಲ ಎನ್ನುವುದು ಸತ್ಯವಾದರೂ, ಹುತಾತ್ಮ ಯೋಧರ ಕುಟುಂಬದ ನೆರವಿಗೆ ಅದೊಂದು ಚಿಕ್ಕ ಸಹಾಯವಾಗಬಹುದು ಅಷ್ಟೇ. 


ಅಂಥ ಸಹಾಯದಲ್ಲಿ ಭಾಗಿಯಾಗುವ ಮನಸುಗಳೂ ಇವೆ. ಪ್ರವಾಸ, ಅದ್ಧೂರಿ ಕಾರ್ಯಕ್ರಮ, ಮೋಜು- ಮಸ್ತಿಯಲ್ಲಿ ನಾವು ಮೈರೆಯುತ್ತಿದ್ದರೆ, ನಾವು ಇಷ್ಟೊಂದು ಆರಾಮಾಗಿ ಇರುವುದಕ್ಕೆ ಕಾರಣ, ತಮ್ಮ ಜೀವವನ್ನು ಪಣಕ್ಕಿಟ್ಟಿರುವ ಇಂಥ ಯೋಧರೇ ಕಾರಣ ಎನ್ನುವುದೂ ಅಷ್ಟೇ ಸತ್ಯ. ಇದೇ ಕಾರಣಕ್ಕೆ ಹುತಾತ್ಮ ಯೋಧರ ಕುಟುಂಬಕ್ಕೆ ಕಿಂಚಿತ್​ ಸಹಾಯ ಮಾಡುವ ಮೂಲಕವಾದರೂ ದೇಶಪ್ರೇಮವನ್ನು ಮೆರೆಯುವವರು ಇದ್ದಾರೆ. ಕೆಲವರು ಇದಾಗಲೇ ಹುತಾತ್ಮರಿಗೆ ಸಹಾಯ ಮಾಡಿದ್ದಾರೆ. ಕೆಲವರ ಸಹಾಯ ಸೋಷಿಯಲ್​ ಮೀಡಿಯಾಗಳಿಂದ ಬೆಳಕಿಗೆ ಬರುತ್ತಿದೆ. ಇದೀಗ ತಮ್ಮ ಏಕೈಕ ಪುತ್ರ ಮುರಳಿ ನಾಯಕ್ ಅವರನ್ನು ಕಳೆದುಕೊಂಡಿರುವ ಕುಟುಂಬಕ್ಕೆ ತಮ್ಮ ವಿದೇಶಿ ಪ್ರವಾಸವನ್ನು ರದ್ದುಗೊಳಿಸಿ ಅದರ ಮೊತ್ತವನ್ನು ದಂಪತಿಯೊಬ್ಬರು ನೆರವು ನೀಡಿದ್ದಾರೆ. 1, 09,001 ರೂಪಾಯಿಗಳನ್ನು ನೀಡುವ ಮೂಲಕ ದೇಶಪ್ರೇಮವನ್ನು ಮರೆದಿದ್ದಾರೆ. ಹುತಾತ್ಮ ಯೋಧನಿಗೆ ನಮನ ಸಲ್ಲಿಸಿದ್ದಾರೆ. 

ಅಣ್ವಸ್ತ್ರ ಇದೆ ಎಂದು ಹೆದರಿಸ್ತಿರೋ ಪಾಕ್,​ ಕದನ ವಿರಾಮಕ್ಕೆ ಕಾಲು ಹಿಡಿದಿದ್ದೇಕೆ? ಅಸಲಿ ಸ್ಟೋರಿನೇ ಬೇರೆ!

ಮುರಳಿ ಅವರು, ಶ್ರೀರಾಮುಲು ನಾಯಕ್ ಹಾಗೂ ಜ್ಯೋತಿಬಾಯಿರವರ ಏಕೈಕ ಪುತ್ರರಾಗಿದ್ದರು. ಮೊದಲಿನಿಂದಲೂ ಸೇನೆ ಸೇರುವ ಆಸೆ ಮುರಳಿ ಅವರದ್ದು. 2022ರ ಡಿಸೆಂಬರ್‌ನಲ್ಲಿ ಅವರ ಕನಸು ನನಸಾಯಿತು. ಜಮ್ಮು ಮತ್ತು ಕಾಶ್ಮೀರದಲ್ಲಿ 851 ಲೈಟ್ ರೆಜಿಮೆಂಟ್‌ನಲ್ಲಿ ಅವರನ್ನು ನೇಮಿಸಲಾಯಿತು. ಮೇ 6 ರಂದು ಮುರಳಿ ನಾಯಕ್ ತಮ್ಮ ಕುಟುಂಬಕ್ಕೆ ಕರೆ ಮಾಡಿ ಗಡಿಯಿಂದ ಗುಂಡಿನ ದಾಳಿ ನಡೆಯುತ್ತಿರುವ ಬಗ್ಗೆ ತಿಳಿಸಿದ್ದರು. ಅದು ತೀವ್ರವಾಗಿದೆ ಎಂಬುದಾಗಿಯೂ ಕುಟುಂಬಕ್ಕೆ ಹೇಳಿದ್ದರೂ ಧೈರ್ಯದಿಂದ ಇರುವಂತೆ ಅವರೇ ಕುಟುಂಬದವರಿಗೆ ಸಾಂತ್ವನವನ್ನೂ ನೀಡಿದ್ದರು. ಆದರೆ, ದೇಶದ ರಕ್ಷಣೆ ಮಾಡುತ್ತಾ ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ಇರುವ ಒಬ್ಬನೇ ಮಗನನ್ನು ಕುಟುಂಬ ಕಳೆದುಕೊಂಡಿದೆ. 

ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು, ಹುತಾತ್ಮ ಯೋಧ ಮುರಳಿ ನಾಯಕ್ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ, ಐದು ಎಕರೆ ಕೃಷಿ ಭೂಮಿ, ವಸತಿಗಾಗಿ 300 ಚದರಡಿ ಭೂಮಿಯನ್ನು ಘೋಷಿಸಿದ್ದಾರೆ. ಸಂಪುಟದಲ್ಲಿ ಚರ್ಚೆಯ ನಂತರ ನಾಯಕ್ ಅವರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಸಹ ನೀಡಲಾಗುವುದು ಎಂದು ಪವನ್‌ ಕಲ್ಯಾಣ್ ತಿಳಿಸಿದರು. ದುಃಖಿತ ಕುಟುಂಬಕ್ಕೆ ವೈಯಕ್ತಿಕವಾಗಿ 25 ಲಕ್ಷ ರೂ. ಪರಿಹಾರ ನೀಡಿದರು. 

ಉಗ್ರರ ನೆಲೆಗೇ ಗುರಿಯಿಟ್ಟು ನಾಶ ಮಾಡಿದ 'ರಫೇಲ್​ ಜೆಟ್'​ಗೆ ಗಂಟೆಯೊಂದಕ್ಕೆ ಅಬ್ಬಾ ಇಷ್ಟು ಇಂಧನ ಬೇಕಾ?