ನವದೆಹಲಿ(ಆ.04): ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಕೊರೋನಾ ವೈರಸ್‌ ಲಸಿಕೆಯನ್ನು ಮಾನವರ ಮೇಲೆ 2ನೇ ಹಾಗೂ 3ನೇ ಹಂತದ ಕ್ಲಿನಿಕಲ್‌ ಪ್ರಯೋಗಕ್ಕೆ ಒಳಪಡಿಸಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರವು ಪುಣೆ ಮೂಲದ ಸೀರಂ ಇನ್ಸ್‌ ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಸಂಸ್ಥೆಗೆ ಒಪ್ಪಿಗೆ ನೀಡಿದೆ. ಕ್ಲಿನಿಕಲ್‌ ಪ್ರಯೋಗವನ್ನು ಮೈಸೂರು ಸೇರಿದಂತೆ ದೇಶದ 17 ಆಯ್ದ ಸ್ಥಳಗಳಲ್ಲಿ ಕೈಗೊಳ್ಳಲು ಸೀರಂ ಸಂಸ್ಥೆ ಉದ್ದೇಶಿಸಿದೆ.

ಸೀರಂ ಸಂಸ್ಥೆಯು ಆಕ್ಸ್‌ಫರ್ಡ್‌ ಲಸಿಕೆ ಸಿದ್ಧಪಡಿಸಿದ ಆಸ್ಟ್ರಾ ಜೆನೆಕಾ ಎಂಬ ಉತ್ಪಾದಕ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, 2 ಹಾಗೂ 3ನೇ ಹಂತದ ಪ್ರಯೋಗಕ್ಕಾಗಿ ಜುಲೈ 25ರಂದು ಅರ್ಜಿ ಸಲ್ಲಿಸಿತ್ತು. ತಜ್ಞರ ಸಮಿತಿ ಶಿಫಾರಸಿನ ಮೇರೆಗೆ ಪ್ರಾಧಿಕಾರವು ಭಾನುವಾರ ರಾತ್ರಿ, ಕ್ಲಿನಿಕಲ್‌ ಪ್ರಯೋಗಕ್ಕೆ ಒಪ್ಪಿಗೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊರೋನಾ ಮಹಾಮಾರಿ ಗೆದ್ದ ಪೇದೆಯಿಂದ ಪ್ಲಾಸ್ಮಾ ದಾನ

ಮೈಸೂರಲ್ಲಿ ಪ್ರಯೋಗ:

18 ವರ್ಷ ಮೇಲ್ಪಟ್ಟಸುಮಾರು 1600 ಜನರ ಮೇಲೆ ಲಸಿಕೆಯ ಪ್ರಯೋಗ ನಡೆಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 17 ತಾಣಗಳನ್ನು ಆಯ್ಕೆ ಮಾಡಿಕೊಳ್ಳುವ ಪ್ರಸ್ತಾಪವಿದೆ. ಇದರಲ್ಲಿ ಮೈಸೂರಿನ ಜೆಎಸ್‌ಎಸ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ಆ್ಯಂಡ್‌ ರೀಸಚ್‌ರ್‍ ಸಂಸ್ಥೆ, ದಿಲ್ಲಿಯ ಏಮ್ಸ್‌, ಪುಣೆಯ ಬಿಜೆ ಮೆಡಿಕಲ್‌ ಕಾಲೇಜು ಸೇರಿದಂತೆ ವಿವಿಧ ಸಂಸ್ಥೆಗಳೂ ಇವೆ.

ಎಲ್ಲೆಲ್ಲಿ ಯಾವ್ಯಾವ ಹಂತ?:

ಬ್ರಿಟನ್‌ನಲ್ಲಿ ನಡೆದಿರುವ ಈವರೆಗಿನ ಪರೀಕ್ಷೆಗಳು ಆರಂಭಿಕ ಯಶಸ್ಸು ಕಂಡಿದ್ದು, ಕೊರೋನಾ ವಿರುದ್ಧ ಮನುಷ್ಯನಲ್ಲಿ ರೋಗ ನಿರೋಧಕ ಪ್ರತಿಕಾಯ ಸೃಷ್ಟಿಸಲು ಸಫಲವಾಗಿವೆ. ಬ್ರಿಟನ್‌ನಲ್ಲಿ ಕೂಡ ಮೊದಲ ಹಂತದಲ್ಲಿ ಯಶಸ್ವಿಯಾಗಿರುವ ಆಕ್ಸ್‌ಫರ್ಡ್‌ ವಿವಿ ಲಸಿಕೆಯ 2 ಹಾಗೂ 3ನೇ ಹಂತದ ಪ್ರಯೋಗ ಈಗ ನಡೆದಿದೆ. ಬ್ರೆಜಿಲ್‌ನಲ್ಲಿ 3ನೇ ಹಂತ, ದಕ್ಷಿಣ ಆಫ್ರಿಕದಲ್ಲಿ 1 ಹಾಗೂ 2ನೇ ಹಂತದ ಪ್ರಯೋಗ ಪ್ರಗತಿಯಲ್ಲಿದೆ.

ಆನ್‌ಲೈನ್ ಕ್ಲಾಸ್‌ಗೆ 150 ಅಡಿ ಎತ್ತರದ ನೀರಿನ ಟ್ಯಾಂಕ್‌ ಏರಿದ ಮಕ್ಕಳು..!

ಪ್ರಯೋಗ ಹೇಗೆ?:

ಪ್ರಯೋಗಕ್ಕೆ ಒಳಪಡಲು ಸಿದ್ಧವಾಗಿರುವ ವ್ಯಕ್ತಿಗಳಿಗೆ 2 ಲಸಿಕೆಗಳನ್ನು 4 ವಾರಗಳ ಅಂತರದಲ್ಲಿ ನೀಡಬೇಕಾಗುತ್ತದೆ. ಅಂದರೆ ಮೊದಲ ದಿನ 1 ಡೋಸ್‌ ಹಾಗೂ 29ನೇ ದಿನ 2ನೇ ಅಥವಾ ಕೊನೆಯ ಡೋಸ್‌ ನೀಡಬೇಕಾಗುತ್ತದೆ. 2ನೇ ಹಂತದ ಪ್ರಯೋಗ ಮುಗಿಸಿ 3ನೇ ಹಂತದ ಪ್ರಯೋಗ ಕೈಗೊಳ್ಳುವ ಮುನ್ನ ಆಕ್ಸ್‌ಫರ್ಡ್‌ ವಿವಿ ಜತೆ ಒಪ್ಪಂದ ಮಾಡಿರುವ ಕಂಪನಿಯು, ಲಸಿಕೆಯ ಸುರಕ್ಷತಾ ದತ್ತಾಂಶವನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕು.