Asianet Suvarna News Asianet Suvarna News

ಕೋಮು ಉದ್ವಿಗ್ನತೆಯ ವಾತಾವರಣದಲ್ಲಿರುವುದು ನಾಗರಿಕರ ಜೀವಿಸುವ ಹಕ್ಕಿನ ಉಲ್ಲಂಘನೆ: Supreme Court

ಈ ಅರ್ಜಿಯು 21 ವರ್ಷಗಳಿಂದ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿತ್ತು. ಈ ಹಿನ್ನೆಲೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎ.ಎಸ್. ಓಕಾ ಮತ್ತು ವಿಕ್ರಮ್ ನಾಥ್ ಅವರ ತ್ರಿಸದಸ್ಯ ಪೀಠ, ಸಂತ್ರಸ್ತರ ಸಂಕಷ್ಟದ ಕಡೆಗೆ ಸಾಂವಿಧಾನಿಕ ನ್ಯಾಯಾಲಯ ಕಣ್ಣು ಮುಚ್ಚಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. 

constant communal tension a violation of right to life supreme court ash
Author
First Published Nov 5, 2022, 1:32 PM IST

ಕೋಮು ಉದ್ವಿಗ್ನತೆಯ ನಿರಂತರ ವಾತಾವರಣವು ದೇಶದ ನಾಗರಿಕರಿಗೆ ಖಾತರಿಪಡಿಸುವ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.  900 ಜನರ ಸಾವಿಗೆ ಕಾರಣವಾದ ಹಾಗೂ 2,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದ 1992-93ರ ಮುಂಬೈ ಕೋಮುಗಲಭೆ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರವನ್ನು ಸುಪ್ರೀಂಕೋರ್ಟ್‌ ದೂಷಿಸಿದೆ. ಅಲ್ಲದೆ, ಈ ಪ್ರಕರಣದ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಹಚ್ಚಲು ಮತ್ತು ಗಲಭೆ ಸಂತ್ರಸ್ತರಿಗೆ ಪರಿಹಾರ ನೀಡಲು ಮಹಾರಾಷ್ಟ್ರ ಸರ್ಕಾರಕ್ಕೆ ನ್ಯಾಯಮೂರ್ತಿಗಳು ಹಲವು ನಿರ್ದೇಶನಗಳನ್ನು ನೀಡಿದ್ದಾರೆ.

ಈ ಅರ್ಜಿಯು 21 ವರ್ಷಗಳಿಂದ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿತ್ತು. ಈ ಹಿನ್ನೆಲೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎ.ಎಸ್. ಓಕಾ ಮತ್ತು ವಿಕ್ರಮ್ ನಾಥ್ ಅವರ ತ್ರಿಸದಸ್ಯ ಪೀಠ, ಸಂತ್ರಸ್ತರ ಸಂಕಷ್ಟದ ಕಡೆಗೆ ಸಾಂವಿಧಾನಿಕ ನ್ಯಾಯಾಲಯ ಕಣ್ಣು ಮುಚ್ಚಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. 

ಇದನ್ನು ಓದಿ: 2002 Gujarat Riots Case: ತೀಸ್ತಾ ಸೆಟಲ್ವಾಡ್‌ಗೆ ಮಧ್ಯಂತರ ಜಾಮೀನು

“ಭಾರತದ ಸಂವಿಧಾನದ 21 ನೇ ವಿಧಿಯು ಪ್ರತಿಯೊಬ್ಬ ನಾಗರಿಕನಿಗೆ ಮಾನವ ಘನತೆಯಿಂದ ಬದುಕುವ ಹಕ್ಕನ್ನು ನೀಡುತ್ತದೆ. ಆರ್ಟಿಕಲ್ 21 ಅರ್ಥಪೂರ್ಣ ಮತ್ತು ಗೌರವಾನ್ವಿತ ಜೀವನವನ್ನು ನಡೆಸುವ ಹಕ್ಕನ್ನು ಒಳಗೊಳ್ಳುತ್ತದೆ.  ನಾಗರಿಕರು ಕೋಮು ಉದ್ವಿಗ್ನತೆಯ ವಾತಾವರಣದಲ್ಲಿ ಬದುಕಲು ಬಲವಂತಪಡಿಸಿದರೆ, ಅದು ಆರ್ಟಿಕಲ್ 21 ರ ಮೂಲಕ ಖಾತರಿಪಡಿಸುವ ಅವರ ಜೀವನದ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ. ಈ ರಿಟ್ ಅರ್ಜಿಯ ವಿಲೇವಾರಿಯಲ್ಲಿ ವಿಳಂಬವಾಗಿದೆ ಎಂಬ ಕಾರಣಕ್ಕೆ ಸಂತ್ರಸ್ತರು ಬಳಲುವುದನ್ನು ನಾವು ಅನುಮತಿಸುವುದಿಲ್ಲ ಎಂದೂ ದೇಶದ ಉನ್ನತ ನ್ಯಾಯಾಲಯದ ಪೀಠ ಹೇಳಿದೆ. 

"ಡಿಸೆಂಬರ್ 1992 ಮತ್ತು ಜನವರಿ 1993 ರಲ್ಲಿ ನಡೆದ ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ ಕೆಲವು ಗುಂಪುಗಳು ಜವಾಬ್ದಾರರಾಗಿದ್ದವು ಎಂಬುದನ್ನು ವಿವಾದ ಮಾಡಲಾಗುವುದಿಲ್ಲ. ಆದರೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಮತ್ತು ಭಾರತದ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಜನರಿಗೆ ಖಾತ್ರಿಪಡಿಸಿದ ಹಕ್ಕುಗಳನ್ನು ರಕ್ಷಿಸುವಲ್ಲಿ ರಾಜ್ಯ ಸರ್ಕಾರದ ಕಡೆಯಿಂದ ವಿಫಲವಾಗಿದೆ ಎಂದೂ ಹೇಳಿದೆ. ಆ ವೇಳೆಗೆ ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತವಿತ್ತು, ಹಾಗೂ ಸುಧಾಕರರಾವ್‌ ನಾಯ್ಕ್‌ ಮುಖ್ಯಮಂತ್ರಿಯಾಗಿದ್ದರು.
1998ರಲ್ಲಿ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಆಯೋಗವು ಸಂತ್ರಸ್ತರಿಗೆ ಪರಿಹಾರ, ದಕ್ಷ ತನಿಖೆ ಮತ್ತು ತ್ವರಿತ ವಿಚಾರಣೆ ಹಾಗೂ ಪೊಲೀಸ್ ಸುಧಾರಣೆಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಮಾಡಿದ ಶಿಫಾರಸುಗಳ ಅನುಷ್ಠಾನಕ್ಕೆ ಒತ್ತಾಯಿಸಿ 2001 ರಲ್ಲಿ ಶಕೀಲ್ ಅಹ್ಮದ್ ಸಲ್ಲಿಸಿದ ಅರ್ಜಿಯ ಮೇಲೆ ಕೋರ್ಟ್‌ ಈ ಆದೇಶ ನೀಡಿದೆ.

ಇದನ್ನೂ ಓದಿ: ಬಾಬ್ರಿ ಮಸೀದಿ ಧ್ವಂಸ, 2002ರ ಗುಜರಾತ್‌ ಗಲಭೆಗೆ ಸಂಬಂಧಪಟ್ಟ ಎಲ್ಲಾ ಕೇಸ್‌ ಕ್ಲೋಸ್‌: ಸುಪ್ರೀಂ ಕೋರ್ಟ್‌ ನಿರ್ಧಾರ!

ಆರೋಪಿಗಳು ಪತ್ತೆಯಾಗದ ಕಾರಣ 253 ಕ್ರಿಮಿನಲ್ ಪ್ರಕರಣಗಳ ಪೈಕಿ 97 ಪ್ರಕರಣಗಳು ನಿಷ್ಕ್ರಿಯವಾಗಿವೆ ಎಂದು ಗಮನಿಸಿದ ಸುಪ್ರೀಂಕೋರ್ಟ್, ನಾಪತ್ತೆಯಾಗಿರುವ ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಅವರನ್ನು ವಿಚಾರಣೆಗೆ ಕರೆಸಲು ತಕ್ಷಣವೇ ವಿಶೇಷ ಸೆಲ್ ಅನ್ನು ರಚಿಸುವಂತೆಯೂ ಮಹಾರಾಷ್ಟ್ರ ಸರ್ಕಾರಕ್ಕೆ ಕೋರ್ಟ್‌ ಆದೇಶಿಸಿದೆ.

“ರಾಜ್ಯ ಸರ್ಕಾರವು ಇಂದಿನಿಂದ ಒಂದು ತಿಂಗಳೊಳಗೆ ಬಾಂಬೆ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ನಿಷ್ಕ್ರಿಯ ಕಡತಗಳ ಮೇಲಿನ 97 ಪ್ರಕರಣಗಳ ವಿವರಗಳನ್ನು ಒದಗಿಸಬೇಕು. ವಿವರಗಳನ್ನು ಸ್ವೀಕರಿಸಿದ ನಂತರ ಹೈಕೋರ್ಟ್, ಆಡಳಿತಾತ್ಮಕ ಕಡೆಯಿಂದ, ಆರೋಪಿಗಳನ್ನು ಪತ್ತೆಹಚ್ಚಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಕರಣಗಳು ಬಾಕಿ ಉಳಿದಿರುವ ಸಂಬಂಧಿತ ನ್ಯಾಯಾಲಯಗಳಿಗೆ ಅಗತ್ಯ ಸಂವಹನವನ್ನು ನೀಡುತ್ತವೆ’’ ಎಂದೂ ಸುಪ್ರೀಂಕೋರ್ಟ್‌ ಹೇಳಿದೆ.

ಗಲಭೆಯ ನಂತರ ಕಾಣೆಯಾದ ಅಥವಾ ಅವರ ಕುಟುಂಬಗಳು ಔಪಚಾರಿಕತೆಯನ್ನು ಪೂರೈಸಲು ವಿಫಲವಾದ ಕಾರಣ 108 ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ತಲಾ ₹ 2 ಲಕ್ಷ ಪರಿಹಾರವನ್ನು ನೀಡಲಾಗಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ ಇತ್ತೀಚಿನ ಅಫಿಡವಿಟ್ ಅನ್ನು ಸಹ ನ್ಯಾಯಾಲಯವು ಗಮನಿಸಿತು.

ಇದನ್ನೂ ಓದಿ: ಮೋದಿಗೆ ಮರಣದಂಡನೆ ಸಿಗಬೇಕು, ತೀಸ್ತಾ ಸೆಟಲ್ವಾಡ್ ವಿರುದ್ಧ ಸಲ್ಲಿಸಿರುವ ಚಾರ್ಜ್‌ಶೀಟ್ ಸ್ಫೋಟಕ ಮಾಹಿತಿ ಬಹಿರಂಗ! 

"ಕಾಣೆಯಾದ ವ್ಯಕ್ತಿಗಳ ಕಾನೂನುಬದ್ಧ ಉತ್ತರಾಧಿಕಾರಿಗಳು/ಕುಟುಂಬ ಸದಸ್ಯರನ್ನು ಪತ್ತೆಹಚ್ಚಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿ" ಮತ್ತು 9 ತಿಂಗಳೊಳಗೆ ಎಲ್ಲಾ ಪರಿಹಾರವನ್ನು ಪಾವತಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ಸರ್ವೋಚ್ಚ ನ್ಯಾಯಾಲಯವು ಸದಸ್ಯ ಕಾರ್ಯದರ್ಶಿಯ ನೇತೃತ್ವದಲ್ಲಿ ಮೂರು ಸದಸ್ಯರ ಸಮಿತಿಯನ್ನು ರಚಿಸಿದೆ. ಹಾಗೂ, ಈ ಸಮಿತಿಯನ್ನು ಮಹಾರಾಷ್ಟ್ರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾಯಾಂಗ ಅಧಿಕಾರಿ ಮೇಲ್ವಿಚಾರಣೆ ಮಾಡುತ್ತಾರೆ ಎಂದೂ ಕೋರ್ಟ್ ಹೇಳಿದೆ. ಇದರ ಜತೆಗೆ, 10 ತಿಂಗಳ ನಂತರ ಈ ಬಗ್ಗೆ ಅನುಸರಣೆ ವರದಿ ಸಲ್ಲಿಸುವಂತೆಯೂ ಸಮಿತಿಗೆ ತಿಳಿಸಲಾಗಿದೆ.

ಅಲ್ಲದೆ, ಜುಲೈ 22, 1998 ರಂದು ವಿತ್ತೀಯ ಕ್ರಮವನ್ನು ಘೋಷಿಸಿದ ಸರ್ಕಾರದ ನಿರ್ಣಯದ 6 ತಿಂಗಳೊಳಗೆ ಪರಿಹಾರವನ್ನು ವಿತರಿಸದಿದ್ದರೆ ರಾಜ್ಯ ಸರ್ಕಾರವು ಎಲ್ಲಾ ಸಂತ್ರಸ್ತರಿಗೆ 9% ದರದಲ್ಲಿ ಬಡ್ಡಿಯನ್ನು ಪಾವತಿಸಬೇಕು ಎಂದೂ ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿದೆ. ಹಾಗೆ, "ಸ್ವಾತಂತ್ರ್ಯದ 75 ವರ್ಷಗಳ ನಂತರ, ಗಲಭೆಯಂತಹ ಸನ್ನಿವೇಶಗಳು ಎಂದಿಗೂ ಉದ್ಭವಿಸುವುದಿಲ್ಲ ಎಂದು ನಾವು ಭಾವಿಸುತ್ತೇವೆ ಮತ್ತು ನಂಬುತ್ತೇವೆ" ಎಂದೂ ದೇಶದ ಉನ್ನತ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. 

ಇದನ್ನೂ ಓದಿ: ಬೆಂಗಳೂರಲ್ಲಿ ಗಲಭೆಗೆ ಮಂಗ್ಳೂರಲ್ಲಿ ಷಡ್ಯಂತರ?

Follow Us:
Download App:
  • android
  • ios