ಬೆಂಗಳೂರಲ್ಲಿ ಗಲಭೆಗೆ ಮಂಗ್ಳೂರಲ್ಲಿ ಷಡ್ಯಂತರ?
ಕೆ.ಜಿ.ಹಳ್ಳಿ ಕೇಸ್: ಬಂಧಿತ ಐವರಿಗೆ ಪೊಲೀಸ್ ಕಸ್ಟಡಿಗೆ, ನಾಲ್ವರಿಗೆ ಶೋಧ
ಮಂಗಳೂರು(ಸೆ.24): ಬೆಂಗಳೂರಿನ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಮತ್ತು ಕರ್ನಾಟಕ ಪೊಲೀಸ್ ತಂಡ ಗುರುವಾರ ದ.ಕ. ಜಿಲ್ಲೆಯಲ್ಲಿ ನಡೆಸಿದ ಜಂಟಿ ದಾಳಿ ವೇಳೆ ಐದು ಮಂದಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಮುಖಂಡರನ್ನು ವಶಕ್ಕೆ ತೆಗೆದುಕೊಂಡು ಬಂಧಿಸಿದೆ. ಇನ್ನೂ ನಾಲ್ಕು ಮಂದಿಯ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.
ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ಸಂಚು ಮತ್ತು ಅಪರಾಧಿಕ ಸಂಚು ಅಡಿಯಲ್ಲಿ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಸೆ.22ರಂದು ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ರಾಜ್ಯ ಉಗ್ರ ನಿಗ್ರಹ ದಳದ(ಎಟಿಸಿ) ಅಧಿಕಾರಿಗಳು ವಿವಿಧ ಜಿಲ್ಲೆಗಳ 19 ಮಂದಿ ವಿರುದ್ಧ ಕೇಸು ದಾಖಲಿಸಿದ್ದರು. ರಾಜ್ಯದಲ್ಲಿ ಅಶಾಂತಿಗೆ ಷಡ್ಯಂತರ ರೂಪಿಸಿದ್ದಲ್ಲದೆ, ಯುವಕರನ್ನು ಪ್ರಚೋದಿಸಿ ಸಮಾಜದ ನೆಮ್ಮದಿಗೆ ಭಂಗ ತರುವ ಸಂಚಿನ ಮೇರೆಗೆ ಸಮಗ್ರ ಮಾಹಿತಿ ಕಲೆಹಾಕಿರುವ ಉಗ್ರ ನಿಗ್ರಹ ದಳ ಅಧಿಕಾರಿಗಳು ಕೇಸು ದಾಖಲಿಸಿದ್ದರು. ಬಳಿಕ ಎನ್‌ಐಎ ಜತೆಗೂಡಿ ಏಕಕಾಲಕ್ಕೆ ಕಾರ್ಯಾಚರಣೆಗೆ ಇಳಿದಿದ್ದರು.
ಕರ್ನಾಟಕ, ಕೇರಳ ಸೇರಿ 10 ರಾಜ್ಯಗಳಲ್ಲಿ NIA, ED RAID: ನೂರಾರು ಪಿಎಫ್ಐ ಕಾರ್ಯಕರ್ತರ ಬಂಧನ
ಗುರುವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಪೊಲೀಸರು ದ.ಕ.ಜಿಲ್ಲೆಯಿಂದ ಐದು ಮಂದಿ ಪಿಎಫ್‌ಐ ಮುಖಂಡರನ್ನು ವಶಕ್ಕೆ ತೆಗೆದುಕೊಂಡಿದ್ದರು. ಪಿಎಫ್‌ಐ ಮುಖಂಡರಾದ ಅಬ್ದುಲ್ ಖಾದರ್, ವಿಟ್ಲ ಮಹಮ್ಮದ್ ತಪ್ಶಿರ್, ಜೋಕಟ್ಟೆಯ ಎ.ಕೆ.ಅಶ್ರಫ್, ಕಾವೂರಿನ ನವಾಜ್ ಹಾಗೂ ಹಳೆಯಂಗಡಿಯ ಮೊಯ್ದಿನ್ ಬಂಧಿತರು.
ನಂತರ ಇವರನ್ನು ಮಂಗಳೂರಿನಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ರಾತ್ರಿಯೇ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿ ಪಡೆದು ಮುಂದಿನ ವಿಚಾರಣೆ ನಡೆಸಲಿದ್ದಾರೆ.
ಜಿಲ್ಲೆಯಲ್ಲಿ ಪಿಎಫ್‌ಐ, ಎಸ್‌ಡಿಪಿಐ ಮುಖಂಡರ ಕಚೇರಿ, ಮನೆಗಳಿಗೆ ನಡೆಸಿದ ದಾಳಿ ವೇಳೆ 25ಕ್ಕೂ ಅಧಿಕ ಸಿಮ್ ಕಾರ್ಡ್, 7 ಪೆನ್‌ಡ್ರೈವ್, 6 ಲ್ಯಾಪ್‌ಟಾಪ್, 12 ಮೊಬೈಲ್ ಸೆಟ್, ಕೋಮು ಪ್ರಚೋದಕ ಪುಸ್ತಕಗಳು, ಕರಪತ್ರಗಳನ್ನು ವಶಪಡಿಸಿರುವ ಪೊಲೀಸರು, ಇವುಗಳನ್ನು ಬೆಂಗಳೂರಿಗೆ ಕೊಂಡೊಯ್ದಿದ್ದಾರೆ.
ನಾಲ್ವರಿಗೆ ಶೋಧ:
ದಾಳಿ ವೇಳೆ ಪೊಲೀಸರ ಕೈಗೆ ಸಿಗದ ನಾಲ್ವರ ಬಂಧನಕ್ಕೆ ಬಲೆ ಬೀಸಿದ್ದು, ಕಾರ್ಯಾಚರಣೆ ಮುಂದುವರಿದಿದೆ. ಉಗ್ರ ನಿಗ್ರಹದಳ ಪೊಲೀಸರು ಸ್ಥಳೀಯ ಪೊಲೀಸರ ನೆರವಿನಲ್ಲಿ ತಲೆಮರೆಸಿರುವವರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಎಸ್‌ಡಿಪಿಐ ವಲಯ ಕಾರ್ಯದರ್ಶಿ ಬಜಪೆಯ ಮಹಮ್ಮದ್ ಶರೀಫ್, ಪಿಎಫ್‌ಐ ರಾಜ್ಯ ಕಾರ್ಯದರ್ಶಿ, ಉಪ್ಪಿನಂಗಡಿಯ ಅಯೂಬ್ ಅಗ್ನಾಡಿ, ಪಿಎಫ್‌ಐ ಮುಖಂಡ, ಮಂಗಳೂರು ಕಂಕನಾಡಿಯ ಮಹಮ್ಮದ್ ಅಶ್ರಫ್ ಹಾಗೂ ಬಂದರು ನಿವಾಸಿ ಅಬ್ದುಲ್ ರಜಾಕ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಗಲಭೆ ಸೃಷ್ಟಿಗೆ ಮಂಗ್ಳೂರಲ್ಲಿ ಸಂಚು?
ಬೆಂಗಳೂರಿನ ಕೆ.ಜಿ.ಹಳ್ಳಿ, ಡಿ.ಜಿ.ಹಳ್ಳಿ ಮಾದರಿಯಲ್ಲಿ ಗಲಭೆ ಸೃಷ್ಟಿಗೆ ಮಂಗಳೂರಿನಲ್ಲಿ ಸದ್ದಿಲ್ಲದೆ ಸಿದ್ಧತೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬೆಂಗಳೂರು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.
Suspected Terrorists: ಶಂಕಿತ ಉಗ್ರ ಶಾರೀಕ್‌ಗಾಗಿ ತೀವ್ರ ಶೋಧ
ಕರಾವಳಿ ಉಗ್ರರ ಸ್ಲೀಪರ್ ಸೆಲ್ ಆಗಿದ್ದು, ಇಲ್ಲಿಂದಲೇ ದೇಶದ ವಿವಿಧ ಕಡೆಗಳಲ್ಲಿ ಗಲಭೆ, ಬಾಂಬ್ ಸ್ಫೋಟಕ್ಕೆ ಸ್ಕೆಚ್ ಹಾಕುತ್ತಿರುವ ಆತಂಕಕಾರಿ ಸಂಗತಿಯನ್ನು ಪೊಲೀಸರು ಈ ಹಿಂದೆಯೇ ಪತ್ತೆ ಮಾಡಿದ್ದರು. ಸ್ಲೀಪರ್ ಸೆಲ್ ಇನ್ನೂ ಜೀವಂತ ಇರುವುದನ್ನು ದೃಢಪಡಿಸಿರುವ ಉಗ್ರ ನಿಗ್ರಹ ದಳ, ಈ ಬಗ್ಗೆ ಸಾಕಷ್ಟುಮಾಹಿತಿಯನ್ನು ಕಲೆಹಾಕಿತ್ತು. ವಿಧ್ವಂಸಕ ಕೃತ್ಯಕ್ಕೆ ಬಲವಾದ ಸಂಚು ರೂಪಿಸುತ್ತಿರುವುದನ್ನು ಪತ್ತೆಮಾಡಿದ ಉಗ್ರ ನಿಗ್ರಹ ದಳ ಇದಕ್ಕಾಗಿಯೇ ಪ್ರತ್ಯೇಕವಾಗಿ ಕೆ.ಜಿ.ಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿತ್ತು. ಆಗಲೇ ಸಂಚುಕೋರರ ಬಗ್ಗೆ ಎಲ್ಲ ವಿವರಗಳನ್ನೂ ಪಡೆದುಕೊಂಡು ಯೋಜಿತವಾಗಿಯೇ ದಾಳಿ ನಡೆಸಿದೆ. ರಾಜ್ಯದ ನಾನಾ ಕಡೆಗಳಲ್ಲಿ ಬಂಧಿತರ ವಿಚಾರಣೆ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಗಲಭೆ ಸಂಚಿಗೆ ಪುಷ್ಟಿನೀಡುವ ಸಾಕಷ್ಟುಮಾಹಿತಿ ಲಭ್ಯವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕೆ.ಜಿ.ಹಳ್ಳಿ ಕೇಸ್ ವಿಚಾರಣೆ ಬಳಿಕ ಎನ್‌ಐಎ ತನಿಖೆ?
ಕೆ.ಜಿ.ಹಳ್ಳಿ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದಲ್ಲಿ 19 ಮಂದಿ ಪೈಕಿ 15 ಮಂದಿಯನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. ಇನ್ನೂ ನಾಲ್ವರ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಎನ್‌ಐಎ ನೇತೃತ್ವದ ಕಾರ್ಯಾಚರಣೆಯಲ್ಲಿ ಇವರ ಬಂಧನ ಸತ್ರ ನಡೆದಿದೆ. ಬಂಧಿತರ ಪೊಲೀಸ್ ಕಸ್ಟಡಿ ಮುಕ್ತಾಯಗೊಂಡ ಬಳಿಕ ಎನ್‌ಐಎ ಕೂಡ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಹೇಳಲಾಗಿದೆ. ದೇಶದ ನಾನಾ ಕಡೆಗಳಲ್ಲಿ ನಡೆದ ಉಗ್ರ ಕೃತ್ಯ ಸಂಚು, ನೆರವು ಪ್ರಕರಣಗಳಿಗೆ ಸಂಬಂಧಿಸಿ ಹಲವು ಆಯಾಮಗಳಲ್ಲಿ ಎನ್‌ಐಎ ತನಿಖೆ ನಡೆಸುತ್ತಿದೆ. ಹಲವರನ್ನು ಈಗಾಗಲೇ ಬಂಧಿಸಿದೆ. ಆದರೆ ಈ ಐವರನ್ನು ಬೆಂಗಳೂರಿನ ಉಗ್ರ ನಿಗ್ರಹದಳ ಕೇಸಿಗೆ ಸಂಬಂಧಿಸಿ ಕರ್ನಾಟಕ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದರು. ಕರ್ನಾಟಕ ಪೊಲೀಸರ ತನಿಖೆ ಬಳಿಕ ಎನ್‌ಐಎ ತನ್ನ ವ್ಯಾಪ್ತಿಯ ಪ್ರಕರಣಗಳಿಗೆ ಸಂಬಂಧಿಸಿ ತನಿಖೆಗೆ ವಶಪಡಿಸುವ ಸಾಧ್ಯತೆ ಹೇಳಲಾಗಿದೆ.