ಡಿ.ಕೆ.ಶಿವಕುಮಾರ್‌ ಪರ ಅವರ ಆಪ್ತ ಶಾಸಕರು ಬ್ಯಾಟಿಂಗ್‌ ಮುಂದುವರಿಸಿದ್ದಾರೆ. ಜನವರಿ 6ರಂದು ಡಿ.ಕೆ.ಶಿವಕುಮಾರ್‌ಗೆ ‘ಸಿಎಂ ಪಟ್ಟಾಭಿಷೇಕ’ವಾಗುವ ವಿಶ್ವಾಸವಿದೆ ಎಂದು ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌ ಪುನರುಚ್ಚರಿಸಿದ್ದಾರೆ.

ಬೆಂಗಳೂರು (ಡಿ.14): ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪರ ಅವರ ಆಪ್ತ ಶಾಸಕರು ಬ್ಯಾಟಿಂಗ್‌ ಮುಂದುವರಿಸಿದ್ದಾರೆ. ಜನವರಿ 6ರಂದು ಡಿ.ಕೆ.ಶಿವಕುಮಾರ್‌ಗೆ ‘ಸಿಎಂ ಪಟ್ಟಾಭಿಷೇಕ’ವಾಗುವ ವಿಶ್ವಾಸವಿದೆ ಎಂದು ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌ ಪುನರುಚ್ಚರಿಸಿದರೆ, ಡಿಕೆಶಿ ಸದ್ಯದಲ್ಲೇ ಸಿಎಂ ಸ್ಥಾನ ಅಲಂಕರಿಸಲಿದ್ದಾರೆ ಎಂದು ಮದ್ದೂರು ಶಾಸಕ ಕೆ.ಎಂ.ಉದಯ್ ಭವಿಷ್ಯ ನುಡಿದಿದ್ದಾರೆ. ಇನ್ನೊಂದೆಡೆ ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ, ‘ಡಿಕೆಶಿಯವರು ನಮ್ಮ ಆರಾಧ್ಯದೈವ ಎಂಬುದರಲ್ಲಿ ಎರಡು ಮಾತಿಲ್ಲ. ಜನವರಿ 6 ಅಥವಾ 9ಕ್ಕೆ ಅವರು ಪ್ರಮಾಣವಚನ ಸ್ವೀಕರಿಸಿದರೆ, ಸಂಭ್ರಮ ಪಡುವುದರಲ್ಲಿ ನಾನೇ ಮೊದಲಿಗ’ ಎಂದಿದ್ದಾರೆ.

ಹುಸೇನ್‌ ಮತ್ತೆ ಬಾಂಬ್

ಸಿಎಂ ಬದಲಾವಣೆ ಕುರಿತು ರಾಮನಗರದಲ್ಲಿ ಪ್ರತಿಕ್ರಿಯೆ ನೀಡಿದ ಇಕ್ಬಾಲ್‌ ಹುಸೇನ್‌, ‘ಡಿಕೆಶಿಯವರಿಗೆ ಸಿಎಂ ಸ್ಥಾನವನ್ನು ಬಿಟ್ಟುಕೊಡಬೇಕು. ನಮ್ಮ ಬೇಡಿಕೆ ಮತ್ತು ಡಿಕೆಶಿಯವರ ಹೋರಾಟ, ಶ್ರಮಕ್ಕೆ ಫಲ ಸಿಗಬೇಕು. ಜ.6ರಂದು ಡಿಕೆಶಿ ಸಿಎಂ ಆಗ್ತಾರೆ ಎಂಬ ಬಗ್ಗೆ ನಮಗೆ ಶೇ.99ರಷ್ಟು ವಿಶ್ವಾಸವಿದೆ. ಜ.6 ಮತ್ತು ಜ.9 ಅವರ ಅದೃಷ್ಟ ಸಂಖ್ಯೆಯಾಗಿದ್ದು, 6ರಂದೇ ಅವರಿಗೆ ಸಿಎಂ ಹುದ್ದೆ ಸಿಗುವ ವಿಶ್ವಾಸವಿದೆ ಎಂದರು.

ಇದೇ ವೇಳೆ, ದಾವಣಗೆರೆಯಲ್ಲಿ ಮಾತನಾಡಿದ ಚನ್ನಗಿರಿ ಬಸವರಾಜ ವಿ.ಶಿವಗಂಗಾ, ಡಿಕೆಶಿಯವರು ನಮ್ಮ ಆರಾಧ್ಯದೈವ ಎಂಬುದರಲ್ಲಿ ಎರಡು ಮಾತಿಲ್ಲ. ಡಿಸೆಂಬರ್ 6 ಅಥವಾ 9ಕ್ಕೆ ಡಿಕೆಶಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರೆ ಖುಷಿ ಪಡುವವರಲ್ಲಿ ನಾನೇ ಮೊದಲಿಗ. ಆದರೆ, ಡಿಸೆಂಬರ್ ಮುಗಿಯುವವರೆಗೂ ನಾನು ಉತ್ತರ ಕೊಡುವುದಿಲ್ಲ. ಜನವರಿಗೆ ಸಂಕ್ರಾಂತಿ ಬರುತ್ತೆ, ಸಂಕ್ರಾಂತಿಯಲ್ಲಿ ಸೂರ್ಯಪಥ ಬದಲಾವಣೆಯಾಗುತ್ತೆ. ಆಗ ಸಿಎಂ ಕುರ್ಚಿ ಬಗ್ಗೆ ಮಾತನಾಡೋಣ’ ಎಂದು ಹೇಳಿದರು.

ಜನವರಿಗೆ ಡಿ.ಕೆ.ಶಿವಕುಮಾರ ಸಿಎಂ ಆಗುತ್ತಾರೆಂದು ರಕ್ತದಲ್ಲಿ ಬರೆದುಕೊಡುವೆ ಎಂದು ಈ ಹಿಂದೆ ಆಡಿದ ಮಾತಿನ ಬಗ್ಗೆ ಪ್ರತಿಕ್ರಿಯಿಸಿ, ಜನವರಿ ಬರಲಿ, ‘ಆ ರಕ್ತ ಆರಿದೆಯೋ, ಇಲ್ಲವೋ, ಜನವರಿಗೆ ನೋಡೋಣ’ ಎಂದರು. ಇದೇ ವೇಳೆ, ಮದ್ದೂರಿನಲ್ಲಿ ಮಾತನಾಡಿದ ಮದ್ದೂರು ಶಾಸಕ ಕೆ.ಎಂ.ಉದಯ್, ‘ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸದ್ಯದಲ್ಲೇ ಆಗಲಿದೆ. ಡಿ.ಕೆ.ಶಿವಕುಮಾರ್ ಅವರು ಸದ್ಯದಲ್ಲೇ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆ’ ಎಂದು ಭವಿಷ್ಯ ನುಡಿದರು.