ವಿಧಾನ ಪರಿಷತ್‌ನಲ್ಲಿ ಸದ್ಯಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮೆಜಾರಿಟಿ ಇಲ್ಲ. ಹೀಗಾಗಿ, ಸಭಾಪತಿ ಸ್ಥಾನಕ್ಕೆ ಧಕ್ಕೆಯಿಲ್ಲ. ಒಂದು ವೇಳೆ, ಮೆಜಾರಿಟಿ ಬಂದರೆ ಆ ಸ್ಥಾನದಿಂದ ಹೊರಟ್ಟಿ ಅವರನ್ನು ಕೆಳಕ್ಕೆ ಇಳಿಸುವುದು ಖಚಿತ.
ಹುಬ್ಬಳ್ಳಿ (ಡಿ.14): ‘ವಿಧಾನ ಪರಿಷತ್‌ನಲ್ಲಿ ಸದ್ಯಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮೆಜಾರಿಟಿ ಇಲ್ಲ. ಹೀಗಾಗಿ, ಸಭಾಪತಿ ಸ್ಥಾನಕ್ಕೆ ಧಕ್ಕೆಯಿಲ್ಲ. ಒಂದು ವೇಳೆ, ಮೆಜಾರಿಟಿ ಬಂದರೆ ಆ ಸ್ಥಾನದಿಂದ ಹೊರಟ್ಟಿ ಅವರನ್ನು ಕೆಳಕ್ಕೆ ಇಳಿಸುವುದು ಖಚಿತ. ಸ್ನೇಹ ಬೇರೆ, ರಾಜಕಾರಣ ಬೇರೆ‘ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಹೊರಟ್ಟಿ ಅವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸಲು ಅವಿಶ್ವಾಸ ನಿರ್ಣಯ ಮಂಡಿಸುವುದು ಖಚಿತ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯರಾಗಿ 45 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಇಲ್ಲಿನ ನೆಹರು ಮೈದಾನದಲ್ಲಿ ಹೊರಟ್ಟಿ ಅಭಿಮಾನಿ ಬಳಗದಿಂದ ಶನಿವಾರ ಅಭಿನಂದಿಸಲಾಯಿತು. ಅವರನ್ನು ಅಭಿನಂದಿಸಿ ಸಿದ್ದರಾಮಯ್ಯ ಮಾತನಾಡಿದರು. ಇದಕ್ಕೂ ಮೊದಲು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ‘ಹೊರಟ್ಟಿಯವರು ಸ್ನೇಹಜೀವಿ. ಈ ಹಿಂದೆ ಅವರು ಕಾಂಗ್ರೆಸ್‌ನಲ್ಲಿದ್ದಾಗ ಕಾಂಗ್ರೆಸ್ ಸರ್ಕಾರ ತಮ್ಮ ಅವಧಿ ಪೂರ್ಣಗೊಳಿಸುವಂತಾಗಬೇಕು ಎಂದಿದ್ದರು’ ಎಂದು ಹೇಳಿದರು. ಇದಕ್ಕೆ ವೇದಿಕೆಯಲ್ಲೇ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಸ್ನೇಹ ಬೇರೆ, ರಾಜಕಾರಣ ಬೇರೆ.
ಹೊರಟ್ಟಿ ಅವರೊಂದಿಗೆ ನನಗೆ ಆಗಾಧವಾದ ಸ್ನೇಹ ಇದೆ. ಆದರೆ, ರಾಜಕಾರಣಿಯಾಗಿ ಈಗ ಅವರು ಬೇರೆ ಪಕ್ಷದಲ್ಲಿದ್ದಾರೆ. ಹೀಗಾಗಿ, ಚುನಾವಣೆ ಬಂದರೆ ಜಿದ್ದಾಜಿದ್ದಿ ಖಚಿತ. ಹಿಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಹೊರಟ್ಟಿ ಅವರನ್ನು ಸೋಲಿಸಲು ಪ್ರಯತ್ನಿಸಿದ್ದೆ ಎಂದು ನೆನಪಿಸಿಕೊಂಡರು. ಸದ್ಯ ಪರಿಷತ್‌ನಲ್ಲಿ ನಮಗೆ ಬಹುಮತವಿಲ್ಲ. ಒಂದು ಮತ ಕಡಿಮೆಯಿದೆ. ಶೀಘ್ರದಲ್ಲೇ ಬಹುಮತ ಪಡೆಯಲಿದ್ದೇವೆ. ಆಗ ಹೊರಟ್ಟಿಯವರನ್ನು ಸಭಾಪತಿ ಸ್ಥಾನದಿಂದ ಕೆಳಕ್ಕಿಳಿಸಬೇಕಾಗುತ್ತದೆ. ಅದೇ ರಾಜಕಾರಣ. ಏನು ಮಾಡಲೂ ಸಾಧ್ಯವಿಲ್ಲ ಎಂದರು.
ಸರ್ಕಾರಕ್ಕೆ ಮುಜುಗರ ತಂದಿಲ್ಲ
ಆದರೆ, ’ಸಭಾಪತಿಗಳಾಗಿ ಹೊರಟ್ಟಿ ಅವರು ನಿಷ್ಪಕ್ಷವಾಗಿ ಸದನವನ್ನು ನಡೆಸುತ್ತಾರೆ. ಯಾರನ್ನೂ ಸುಮ್ಮನೆ ಬಿಡಲ್ಲ. ಯುವ ಶಾಸಕರನ್ನು ಗದರಿಸುತ್ತಾ, ಅತ್ಯಂತ ಅಚ್ಚುಕಟ್ಟಾಗಿ ಸದನ ನಡೆಸುತ್ತಾರೆ. ಅವರ ಸದನ ನಡೆಸುವ ರೀತಿಯಿಂದ ಸರ್ಕಾರಕ್ಕೆ ಎಂದೂ ಮುಜುಗರವಾಗಿಲ್ಲ. ನಮ್ಮ ಪಕ್ಷದವರೇ ಏನೋ ಎಂಬಂತೆ ಭಾಸವಾಗುತ್ತದೆ’ ಎಂದರು. ಅವರೊಂದಿಗೆ ಸ್ನೇಹ ಈಗ ಹೇಗಿದೆಯೋ, ಮುಂದೆ ಕೂಡ ಅದೇ ರೀತಿ ಇರುತ್ತದೆ. ಆದರೆ, ಚುನಾವಣೆಯಲ್ಲಿ ಅವರು ಬೇರೆ ಪಕ್ಷದಿಂದ ಕಣಕ್ಕಿಳಿದರೆ ಅವರ ವಿರುದ್ಧ ನಮ್ಮ ಅಭ್ಯರ್ಥಿಯನ್ನು ಹಾಕುವುದು ಗ್ಯಾರಂಟಿ. ಹೊರಟ್ಟಿ ಅವರ ವಿರುದ್ಧ ಪ್ರಚಾರ ಮಾಡುವುದು ಖಚಿತ. ಆದರೆ, ವೈಯಕ್ತಿಕವಾಗಿ ಹೊರಟ್ಟಿ ಅವರು 9ನೇ ಹಾಗೂ 10ನೇ ಬಾರಿಯೂ ಗೆಲ್ಲಲಿ ಎಂದು ಆಶಿಸುತ್ತೇನೆ ಎಂದು ನುಡಿದರು.


