ದೇಣಿಗೆ ಮೂಲಕ ಬಂದ 199 ಕೋಟಿ ರು. ಆದಾಯಕ್ಕೆ ತೆರಿಗೆ ವಿನಾಯಿತಿಯ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. 2018-19ನೇ ವರ್ಷದಲ್ಲಿ 199.15 ಕೋಟಿ ರು. ಆದಾಯಕ್ಕೆ ತೆರಿಗೆ ವಿನಾಯಿತಿ ಕೋರಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿ ಮೇಲ್ಮನವಿ ನ್ಯಾಯಮಂಡಳಿ(ಐಟಿಎಟಿ) ವಜಾಗೊಳಿಸಿದೆ.

ನವದೆಹಲಿ: ದೇಣಿಗೆ ಮೂಲಕ ಬಂದ 199 ಕೋಟಿ ರು. ಆದಾಯಕ್ಕೆ ತೆರಿಗೆ ವಿನಾಯಿತಿಯ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. 2018-19ನೇ ವರ್ಷದಲ್ಲಿ 199.15 ಕೋಟಿ ರು. ಆದಾಯಕ್ಕೆ ತೆರಿಗೆ ವಿನಾಯಿತಿ ಕೋರಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ(ಐಟಿಎಟಿ) ವಜಾಗೊಳಿಸಿದೆ.

ಕಾಂಗ್ರೆಸ್ 2019ರ ಫೆ.2ರಂದು ತನ್ನ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿತ್ತು. ಆದರೆ, 2018ರ ಡಿ.31ರಂದೇ ಗಡುವು ಮುಗಿದಿತ್ತು. ಅಲ್ಲದೆ, ಪ್ರತಿ ದಾನಿಯ ಮಿತಿಯಾದ 2,000 ರು.ಗಿಂತ ಹೆಚ್ಚಿನ ದೇಣಿಗೆಗಳನ್ನು ಚೆಕ್‌ ಅಥವಾ ಬ್ಯಾಂಕ್ ವರ್ಗಾವಣೆಯಂತಹ ಬ್ಯಾಂಕಿಂಗ್ ಮಾರ್ಗಗಳ ಮೂಲಕವೇ ಪಾವತಿಸಬೇಕು ಎಂಬ ಕಾನೂನನ್ನು ಉಲ್ಲಂಘಿಸಿ, ಕಾಂಗ್ರೆಸ್ ಪಕ್ಷವು 14.49 ಲಕ್ಷ ರು.ಗಳನ್ನು ನಗದು ರೂಪದಲ್ಲಿ ಸ್ವೀಕರಿಸಿದೆ ಎಂದು 2019ರ ಸೆಪ್ಟೆಂಬರ್‌ನಲ್ಲಿ ಮೌಲ್ಯಮಾಪನ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಹೀಗಾಗಿ ಇಡೀ ಮೊತ್ತಕ್ಕೆ ತೆರಿಗೆ ವಿಧಿಸಲಾಗಿತ್ತು.

ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಐಟಿಎಟಿಗೆ ಮೇಲ್ಮನವಿ ಸಲ್ಲಿಸಿತ್ತು. ಅದನ್ನೀಗ ನ್ಯಾಯಮಂಡಳಿ ವಜಾಗೊಳಿಸಿದ್ದು, ತೆರಿಗೆ ಪಾವತಿಸುವಂತೆ ಸೂಚಿಸಿದೆ.

ಇನ್ನಷ್ಟು ವ್ಯಾಪಾರಿಗಳಿಗೆ ನೋಟಿಸ್ ಜಾರಿ

‘ಜಿಎಸ್ಟಿ ಮಿತಿ ಮೀರಿ ವಹಿವಾಟು ನಡೆಸಿರುವ ವ್ಯಾಪಾರಿಗಳಿಗೆ ಹಂತ ಹಂತವಾಗಿ ನೋಟಿಸ್ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವ್ಯಾಪಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಎಚ್ಚರಿಸಿದೆ. ಈ ಮೂಲಕ ನೋಟಿಸ್ ವಿರುದ್ಧ ವ್ಯಾಪಾರಿಗಳು ಬೀದಿಗೆ ಇಳಿಯುವ ಎಚ್ಚರಿಕೆ ನೀಡಿದ್ದರೂ ಇಲಾಖೆ ಈ ಹೇಳಿಕೆ ನೀಡಿದೆ.

ಸೋಮವಾರ ನಗರದ ಕೋರಮಂಗಲದಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ ಕಚೇರಿಯಲ್ಲಿ ಆಯೋಜಿಸಿದ್ದ ‘ಜಿಎಸ್ಟಿ ತಿಳಿಯಿರಿ’ ಸಭೆಯಲ್ಲಿ ವ್ಯಾಪಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತೆ ಮೀರಾ ಪಂಡಿತ್‌, ಅವರು, ‘ಮೊದಲ ಹಂತದಲ್ಲಿ ಕೋಟ್ಯಂತರ ರು. ಸ್ವೀಕರಿಸಿದ ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗಿದೆ.

 ನಮ್ಮ ವ್ಯಾಪ್ತಿಯಲ್ಲಿ 850 ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗಿದೆ. ಜಿಎಸ್ಟಿ ವಂಚನೆ ಕುರಿತು ಬೇರೆ ಬೇರೆ ಮೂಲಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಸಂಸ್ಥೆಗಳ ಮಾಹಿತಿ ರೇರಾದಿಂದ ಪಡೆದುಕೊಂಡು ನೋಟಿಸ್ ನೀಡಲಾಗುವುದು’ ಎಂದರು