ನವದೆಹಲಿ(ಜ.03): ಕೊರೋನಾ ಲಸಿಕೆ ಕುರಿತು ರಾಜಕೀಯ ಆರಂಭಗೊಂಡಿದೆ. ಭಾರತ ಅಭಿವೃದ್ಧಿ ಪಡಿಸಿದ ಕೋವಾಕ್ಸಿನ್ ಲಸಿಕೆಗೆ ಅನುಮತಿ ನೀಡಿರುವುದನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಪ್ರಶ್ನಿಸಿದ್ದಾರೆ. ಇತ್ತ ಸಮಾಜವಾದಿ ನಾಯಕ ಅಖಿಲೇಶ್ ಯಾದವ್, ಬಿಜೆಪಿ ಲಸಿಕೆ ಸ್ವೀಕರಿಸುವುದಿಲ್ಲ, ಸರ್ಕಾರದ ಮೇಲೆ ನಂಬಿಕೆ ಇಲ್ಲ ಎಂದಿದ್ದಾರೆ. ಮತ್ತೊರ್ವ ನಾಯಕ ಲಸಿಕೆ ಫ್ರಾಡ್ ಎಂದಿದ್ದಾರೆ. ಪಕ್ಷಗಳ ಲಸಿಕೆ ರಾಜಕೀಯ ಜನರಲ್ಲಿ ಮತ್ತಷ್ಟು ಆತಂಕ ತಂದೊಡ್ಡಿದೆ.

ಕೋವಾಕ್ಸಿನ್ ಲಸಿಕೆಗೆ ಅನುಮತಿ; ಕೇಂದ್ರ ಸರ್ಕಾರ ನಿರ್ಧಾರ ಪ್ರಶ್ನಿಸಿದ ಶಶಿ ತರೂರ್!.

ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಲಸಿಕೆ ರಾಜಕೀಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್‌ಗೆ ಭಾರತೀಯತೆ ಬಗ್ಗೆ ಹೆಮ್ಮೆ ಇಲ್ಲ. ಪಟ್ಟ ಭದ್ರ ಹಿತಾಸಕ್ತಿಗಳ ಗುಂಪು ಸುಳ್ಳನ್ನು ಪ್ರಚಾರ ಮಾಡುತ್ತಿದ್ದಾರೆ. ಆದರೆ ಜನರು ಸುಳ್ಳುಗಳನ್ನು ಅರಿಯಲು ಶಕ್ತರಾಗಿದ್ದಾರೆ ಎಂದು ಜೆಪಿ ನಡ್ಡಾ ಹೇಳಿದ್ದಾರೆ.

 

ಆಸ್ಟ್ರಾಝೆನಿಕಾ ಕೊರೋನಾ ಲಸಿಕೆ ತುರ್ತು ಬಳಕೆಗೆ ಭಾರತ ಡ್ರಗ್ ರೆಗ್ಯೂಲೇಟರಿ ಅನುಮತಿ

ರಾಜಕೀಯ ನಾಯಕರು ಜನರ ಮನಸ್ಸಿನಲ್ಲಿ ಭೀತಿ ಹಾಗೂ ಗೊಂದಲ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ದೇಶ ಕೊರೋನಾ ವೈರಸ್ ಲಸಿಕೆ ಸಿಕ್ಕದ ಸಂತಸದಲ್ಲಿದೆ. ನಮ್ಮ ತಜ್ಞರು, ವಿಜ್ಞಾನಿಗಳು, ನುರಿತ ವೈದ್ಯರ ಅವಿರತ ಪ್ರಯತ್ನದಿಂದ ಲಸಿಕೆ ಅಭಿವೃದ್ಧಿಪಡಿಸಲಾಗಿದೆ. ಆದರೆ ಕಾಂಗ್ರೆಸ್‌ಗೆ ಭಾರತೀಯರು ಅಭಿವೃದ್ಧಿ ಪಡಿಸಿದ ಲಸಿಕೆ ಮೇಲೆಯೇ ಅನುಮಾನ ಮೂಡಿದ್ದ ದುರಂತ ಎಂದು ನಡ್ಡಾ ಹೇಳಿದ್ದಾರೆ.

ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಈ ರಾಜಕೀಯ ನಡೆಯುವುದಿಲ್ಲ. ಜನರಲ್ಲಿ ಭೀತಿ ಹುಟ್ಟಿಸುವ ಕಾರ್ಯಕ್ಕೆ ಕೈಹಾಕಬೇಡಿ. ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ಜನರ ಜೀವನದ ಜೊತೆ ಚೆಲ್ಲಾಟವಾಡಬೇಡಿ ಎಂದು ಜೆಪಿ ನಡ್ಡಾ ಕಾಂಗ್ರೆಸ್ ಸೇರಿದಂತೆ ಎಲ್ಲರಲ್ಲಿ ಮನವಿ ಮಾಡಿದ್ದಾರೆ.