ಪ್ರಧಾನಿ ಮೋದಿ ಮುಗಿಸಲು ಸಿದ್ಧರಾಗಿ ಎಂದ ಕಾಂಗ್ರೆಸ್ ನಾಯಕ ರಾಜಾ ಪಟೇರಿಯಾ ಬಂಧನ
ಸಂವಿಧಾನ ಉಳಿಸಬೇಕಾದ್ರೆ ಪ್ರಧಾನಿ ಮೋದಿಯನ್ನು ಹತ್ಯೆ ಮಾಡಲು ಸಿದ್ಧರಿರಬೇಕು ಎಂದು ಮಧ್ಯ ಪ್ರದೇಶ ಕಾಂಗ್ರೆಸ್ ನಾಯಕ ರಾಜಾ ಪಟೇರಿಯಾ ಹೇಳಿದ್ದರು. ಈ ಹಿನ್ನೆಲೆ ಅವರನ್ನು ಬಂಧಿಸಲಾಗಿದೆ.

ಪ್ರಧಾನಿ ಮೋದಿಯನ್ನು ಹತ್ಯೆ ಮಾಡಿ ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಮಧ್ಯ ಪ್ರದೇಶ ಕಾಂಗ್ರೆಸ್ ನಾಯಕ ರಾಜಾ ಪಟೇರಿಯಾ ಅವರನ್ನು ಬಂಧಿಸಲಾಗಿದೆ. ಸಂವಿಧಾನವನ್ನು ಉಳಿಸಲು ಪ್ರಧಾನಿ ಮೋದಿಯನ್ನು ಮುಗಿಸಿ ಎಮದು ರಾಜಾ ಪಟೇರಿಯಾ ಜನರ ಗುಂಪಿಗೆ ಹೇಳಿದ ವಿಡಿಯೋ ಸೋಮವಾರ ವೈರಲ್ ಆಗಿದ್ದು, ಇದಕ್ಕೆ ಬಿಜೆಪಿ ನಾಯಕರು ಸೇರಿ ಹಲವರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ವೈರಲ್ ವಿಡಿಯೋದಲ್ಲಿ ರಾಜಾ ಪಟೇರಿಯಾ ಮೋದಿ ಚುನಾವಣೆಗಳನ್ನು ಅಂತ್ಯಗೊಳಿಸುತ್ತಾರೆ. ಅವರು ಧರ್ಮ, ಜಾತಿ, ಭಾಷೆ ಆಧಾರದ ಮೇಲೆ ವಿಭಜನೆ ಮಾಡ್ತಾರೆ. ದಲಿತರು, ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತರ ಜೀವಗಳು ಆತಂಕದಲ್ಲಿವೆ. ಈ ಹಿನ್ನೆಲೆ ಸಂವಿಧಾನ ಉಳಿಸಬೇಕಾದ್ರೆ ಪ್ರಧಾನಿ ಮೋದಿಯನ್ನು ಹತ್ಯೆ ಮಾಡಲು ಸಿದ್ಧರಿರಬೇಕು ಎಂದು ಹೇಳಿದ್ದರು.
ಈ ವಿವಾದಾತ್ಮಕ ಹೇಳಿಕೆಯ ನಂತರ ಮಧ್ಯ ಪ್ರದೇಶ ಸರ್ಕಾರ ಅಲ್ಲಿನ ಮಾಜಿ ಸಚಿವ ರಾಜಾ ಪಟೇರಿಯಾ ವಿರುದ್ಧ ಕೇಸ್ ದಾಖಲಿಸಲು ಆದೇಶಿಸಿದ್ದರು. ನಂತರ, ಸೋಮವಾರ ಮಧ್ಯಾಹ್ನ ಪನ್ನಾ ನಗರದ ಪವಾಯ್ ಪೊಲೀಸ್ ಠಾಣೆಯಲ್ಲಿ ರಾಜಾ ಪಟೇರಿಯಾ ವಿರುದ್ಧ ಕೇಸ್ ದಾಖಲಿಸಲಾಯ್ತು. ನಂತರ, ಇಂದು ಬೆಳಗ್ಗೆ ಮಧ್ಯ ಪ್ರದೇಶದ ದಾಮೋಹ್ ಜಿಲ್ಲೆಯ ಹಟಾ ನಗರದ ಅವರ ಮನೆಯಿಂದ ರಾಜಾ ಪಟೇರಿಯಾ ಅವರನ್ನು ಬಂಧಿಸಲಾಯ್ತು.
ಇದನ್ನು ಓದಿ: ‘ಮೋದಿಯನ್ನು ಮುಗಿಸಿ’ ಎಂದು ಜನರಿಗೆ ಹೇಳಿದ ಕಾಂಗ್ರೆಸ್ ನಾಯಕ..!
ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸಹ ಪಟೇರಿಯಾ ಹೇಳಿಕೆಗಳನ್ನು ಖಂಡಿಸಿದ್ದರು. ಹಾಗೂ, ಭಾರತ್ ಜೋಡೋ ಯಾತ್ರೆ ಮಾಡುತ್ತಿರುವಂತೆ ನಟಿಸುತ್ತಿರುವವರ ನಿಜವಾದ ಮುಖ ಹೊರಕ್ಕೆ ಬರುತ್ತಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಕಾಂಗ್ರೆಸ್ನವರಿಗೆ ಪ್ರಧಾನಿ ಮೋದಿ ಜತೆ ಅಖಾಡದಲ್ಲಿ ಹೋರಾಟ ಮಾಡಲು ಆಗುತ್ತಿಲ್ಲ. ಈ ಹಿನ್ನೆಲೆ ಅವರನ್ನು ಕೊಲ್ಲುವ ಬಗ್ಗೆ ಕಾಂಗ್ರೆಸ್ ನಾಐಕರೊಬ್ಬರು ಮಾತನಾಡುತ್ತಿದ್ದಾರೆ. ಇದು ದ್ವೇಷದ ಪರಮಾವಧಿ. ಕಾಂಗ್ರೆಸ್ನ ನಿಜವಾದ ಭಾವನೆ ಹೊರಕ್ಕೆ ಬರುತ್ತಿದೆ. ಕಾನೂನು ತನ್ನ ಕ್ರಮ ತೆಗೆದುಕೊಳ್ಳುತ್ತದೆ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ.
ಇನ್ನೊಂದೆಡೆ, ಅದೇ ವಿಡಿಯೋದಲ್ಲಿ ರಾಜಾ ಪಟೇರಿಯಾ ಕೊಲೆ ಅಂದರೆ ಸೋಲು ಎಂದು ಅರ್ಥ ಎಂದೂ ಹೇಳಿಕೊಂಡಿದ್ದಾರೆ. ಹಾಗೆ, ನಾನು ಮಹಾತ್ಮ ಗಾಂಧಿಯವರ ಅಹಿಂಸೆಯ ಸಿದ್ಧಾಂತ ಪಾಲಿಸುವವನು. ಹಾಗೂ, ಅಲ್ಪಸಂಖ್ಯಾತರನ್ನು ಉಳಿಸಲು ಪ್ರಧಾನಿ ಮೋದಿಯನ್ನು ಚುನಾವಣೆಗಳಲ್ಲಿ ಸೋಲಿಸುವುದು ಅಗತ್ಯ ಎಂದೂ ರಾಜಾ ಪಟೇರಿಯಾ ಹೇಳಿದ್ದರು.
ಇದನ್ನೂ ಓದಿ: ಪ್ರಧಾನಿ ಮೋದಿಯನ್ನು ರಾವಣನಿಗೆ ಹೋಲಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ: ಬಿಜೆಪಿ ತಿರುಗೇಟು
ಈ ಮಧ್ಯೆ, ರಾಜಾ ಪಟೇರಿಯಾ ಅವರ ಖಂಡನೀಯ ಹೇಳಿಕೆಗೆ ಕಾಂಗ್ರೆಸ್ ಪಕ್ಷ ದಿಗ್ಭ್ರಮೆ ವ್ಯಕ್ತಪಡಿಸಿದೆ. ಖಂಡಿತವಾಗಿಯೂ ಖಂಡನೀಯವಾಗಿದೆ. ಪ್ರಧಾನ ಮಂತ್ರಿ ವಿರುದ್ಧ ಆಗಲೀ ಅಥವಾ ಯಾರ ವಿರುದ್ಧವೇ ಆಗಲಿ ಅಂತಹ ಪದಗಳನ್ನು ಬಳಸಬಾರದು. ಕಾಂಗ್ರೆಸ್ ಪಕ್ಷ ಇಂತಹ ಹೇಳಿಕೆಗಳನ್ನು ಖಂಡಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಹೇಳಿರುವ ಬಗ್ಗೆ ಸುದ್ದಿಸಂಸ್ಥೆ ಎಎನ್ಐ ಹೇಳಿದೆ. ಯಾರ ವಿರುದ್ಧವೇ ಆಗಲಿ, ಅದರಲ್ಲೂ ಪ್ರಮುಖವಾಗಿ ಪ್ರಧಾನ ಮಂತ್ರಿ ವಿರುದ್ಧ ಅಂತಹ ಹೇಳಿಕೆ ನೀಡುವುದಕ್ಕೆ ಯಾವುದೇ ಕ್ಷಮೆ ಇಲ್ಲ ಎಂದೂ ಕಾಂಗ್ರೆಸ್ ನಾಯಕ ಪವನ್ ಖೇರಾ ಹೇಳಿದ್ದಾರೆ.
ಇದನ್ನೂ ಓದಿ: PM Modi Reply Ravana Jibe: ಕಾಂಗ್ರೆಸ್ ಎಂದಿಗೂ ರಾಮನನ್ನು ನಂಬಿಲ್ಲ, ನನ್ನ ನಿಂದನೆಗೆ ರಾವಣನ ತಂದಿದ್ದಾರೆ!