ಪೆಟ್ರೋಲ್ ದರದಲ್ಲಿ ಸ್ಥಿರತೆ ಹೊಂದಲು ನೆರವಾದ ಭಾರತ ಸರ್ಕಾರದ ಸ್ಥಿರ ವಿದೇಶಾಂಗ ನೀತಿಗಳು
ಒಡಿಶಾದ ಕಟಕ್‌ನಲ್ಲಿ ಮೇ 5ರಂದು ಚುನಾವಣಾ ಸಂಬಂಧಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು, ರಷ್ಯಾ - ಉಕ್ರೇನ್ ಯುದ್ಧದ ಅವಧಿಯಲ್ಲಿ ಭಾರತಕ್ಕೆ ಸಾಕಷ್ಟು ಒತ್ತಡಗಳು ಎದುರಾಗಿದ್ದವು ಎಂದಿದ್ದರು.
ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಶಕ್ತಿ ಸಂಪನ್ಮೂಲಗಳ ವಿಶ್ಲೇಷಕರ ಪ್ರಕಾರ, ಭಾರತ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳಲು ಆರಂಭಿಸಿದ ಬಳಿಕ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸ್ಥಿರವಾಗಿದೆ. ಪ್ರಸ್ತುತ ರಷ್ಯಾ ಭಾರತದ ಪ್ರಾಥಮಿಕ ತೈಲ ಪೂರೈಕೆದಾರ ರಾಷ್ಟ್ರವಾಗಿದೆ. ಭಾರತದ ವಿದೇಶಾಂಗ ಸಚಿವರಾದ ಎಸ್ ಜೈಶಂಕರ್ ಅವರು, ಒಂದು ವೇಳೆ ಭಾರತ ಏನಾದರೂ ಪಾಶ್ಚಾತ್ಯ ದೇಶಗಳ ಒತ್ತಡಕ್ಕೆ ಮಣಿದು, ಉಕ್ರೇನ್ ಯುದ್ಧದ ಸಂದರ್ಭದಲ್ಲಿ ರಷ್ಯಾದಿಂದ ತೈಲ ಆಮದು ಸ್ಥಗಿತಗೊಳಿಸಿದ್ದರೆ, ಪೆಟ್ರೋಲ್ ಬೆಲೆ ಇನ್ನೂ 20 ರೂಪಾಯಿಗಳಷ್ಟು ಹೆಚ್ಚಾಗುತ್ತಿತ್ತು ಎಂದಿದ್ದಾರೆ.
ಒಡಿಶಾದ ಕಟಕ್‌ನಲ್ಲಿ ಮೇ 5ರಂದು ಚುನಾವಣಾ ಸಂಬಂಧಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು, ರಷ್ಯಾ - ಉಕ್ರೇನ್ ಯುದ್ಧದ ಅವಧಿಯಲ್ಲಿ ಭಾರತಕ್ಕೆ ಸಾಕಷ್ಟು ಒತ್ತಡಗಳು ಎದುರಾಗಿದ್ದವು ಎಂದಿದ್ದರು. ಎಂತಹ ಒತ್ತಡಗಳು ಎದುರಾದರೂ, ಭಾರತ ಸ್ಥಿರವಾಗಿ ನಿಂತು, ನಾವು ನಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಮತ್ತು ಅದನ್ನು ಕಾರ್ಯರೂಪಕ್ಕೆ ತರುತ್ತೇವೆ ಎಂಬ ಸಂದೇಶ ರವಾನಿಸಿತು ಎಂದರು. ಆ ಸಂದರ್ಭದಲ್ಲಿ ಏನಾದರೂ ಭಾರತ ಪಾಶ್ಚಾತ್ಯ ದೇಶಗಳ ಒತ್ತಡಕ್ಕೆ ಮಣಿದು, ರಷ್ಯಾದ ಜೊತೆಗಿನ ತೈಲ ವ್ಯಾಪಾರ ಸ್ಥಗಿತಗೊಳಿಸಿದ್ದರೆ, ಈಗ ಪೆಟ್ರೋಲ್ ದರ ಇನ್ನೂ ಇಪ್ಪತ್ತು ರೂಪಾಯಿ ಹೆಚ್ಚಾಗಿ, ಜನರಿಗೆ ಹೊರೆಯಾಗುತ್ತಿತ್ತು ಎಂದು ಅವರು ವಿವರಿಸಿದ್ದರು.
ಬಾಹ್ಯಾಕಾಶದಿಂದ ಹಿಮಾಲಯದ ಹಿಮ ಸರೋವರಗಳ ಮೇಲೆ ಕಣ್ಣಿಟ್ಟ ಇಸ್ರೋ!
ಮಾರ್ಚ್ ತಿಂಗಳಲ್ಲಿ, ಭಾರತದ ಪೆಟ್ರೋಲಿಯಂ ಸಚಿವಾಲಯ ಪೆಟ್ರೋಲ್ - ಡೀಸೆಲ್ ಚಿಲ್ಲರೆ ವ್ಯಾಪಾರ ಸರವನ್ನು ಕಡಿಮೆಗೊಳಿಸಿತು. ಇದು ಎಪ್ರಿಲ್ 2022ರ ಬಳಿಕ, ಪೆಟ್ರೋಲ್ ಡೀಸೆಲ್ ದರದಲ್ಲಿನ ಮೊದಲ ಪರಿಷ್ಕರಣೆಯಾಗಿತ್ತು. ಶಕ್ತಿ ಮೂಲಗಳ ವಿಶ್ಲೇಷಕರು ಈ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ನವದೆಹಲಿ ರಷ್ಯಾದಿಂದ ತೈಲ ಆಮದು ನಡೆಸುವ 'ವಿಂಡ್ ಫಾಲ್ ಗೇಯ್ನ್' ಪಡೆದುಕೊಳ್ಳಲು ಯಶಸ್ವಿಯಾದ ಕಾರಣದಿಂದ, ಭಾರತದಲ್ಲಿ ಒಟ್ಟಾರೆಯಾಗಿ ತೈಲ ಬೆಲೆ ಕಡಿಮೆಯಾಗಲು ಸಾಧ್ಯವಾಗಿದೆ ಎಂದು ವಿವರಿಸಿದ್ದಾರೆ. ಐರೋಪ್ಯ ಒಕ್ಕೂಟ ಕ್ರಮೇಣ ರಷ್ಯಾದಿಂದ ತೈಲ ಆಮದನ್ನು ಕ್ರಮೇಣ ನಿಲ್ಲಿಸುವ ಉದ್ದೇಶ ಹೊಂದಿರುವುದರಿಂದ, ಜಾಗತಿಕ ತೈಲ ದರ ಹೆಚ್ಚಳವಾಗುತ್ತಿದ್ದ ಸಂದರ್ಭದಲ್ಲಿ ಭಾರತ ರಷ್ಯಾದಿಂದ ತೈಲ ಆಮದು ಹೆಚ್ಚಿಸುವ ನಿರ್ಧಾರಕ್ಕೆ ಬಂದಿತ್ತು.
'ವಿಂಡ್ ಫಾಲ್ ಗೇಯ್ನ್ಸ್' ಎಂದರೆ, ಅನಿರೀಕ್ಷಿತವಾಗಿ ಎದುರಾಗುವ ಆರ್ಥಿಕ ಪ್ರಯೋಜನಗಳು ಅಥವಾ ಲಾಭಗಳು ಎಂದಾಗಿದ್ದು, ಒಂದು ದೇಶಕ್ಕೆ ಪೂರಕವಾದ ಪರಿಸ್ಥಿತಿ ಅಥವಾ ಅನಿರೀಕ್ಷಿತ ಸನ್ನಿವೇಶಗಳಿಂದ ಉಂಟಾಗುತ್ತದೆ. ಭಾರತದ ವಿಚಾರದಲ್ಲಿ, ರಷ್ಯಾದಿಂದ ತೈಲ ಆಮದು ನಡೆಸುವ ಭಾರತದ ನಿರ್ಧಾರ ಭಾರತಕ್ಕೆ ಲಾಭದಾಯಕವಾಗಿದೆ. ಭಾರತದ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಪಾಶ್ಚಾತ್ಯ ಒತ್ತಡದ ನಡುವೆಯೂ ರಷ್ಯಾದಿಂದ ತೈಲ ಆಮದು ನಡೆಸಿದ್ದು ಹಣದುಬ್ಬರವನ್ನು ನಿರ್ವಹಿಸುವ ಕಾರ್ಯತಂತ್ರವಾಗಿತ್ತು ಎಂದಿದ್ದರು. ಭಾರತ ಸರ್ಕಾರದ ಅಧಿಕೃತ ದಾಖಲೆಗಳ ಪ್ರಕಾರ, 2022-23ಕ್ಕೆ ಹೋಲಿಸಿದರೆ, ಭಾರತದಲ್ಲಿ ತೈಲ ಮಾರಾಟದ ಚಿಲ್ಲರೆ ದರ ಅಂದಾಜು 8% ಇಳಿಕೆ ಕಂಡಿದೆ. ಆದರೆ, ಫ್ರಾನ್ಸ್, ಇಟಲಿ, ಮತ್ತು ಯುನೈಟೆಡ್ ಕಿಂಗ್‌ಡಮ್‌ಗಳ ತೈಲ ಆಮದು ದರ ಹೆಚ್ಚಳ ಕಂಡಿದೆ.
ರಷ್ಯಾ ಈಗ ಭಾರತದ ಮುಖ್ಯ ಇಂಧನ ಪೂರೈಕೆದಾರ ರಾಷ್ಟ್ರವಾಗಿದ್ದು, ಕಳೆದ ವರ್ಷದಿಂದ ಭಾರತದ ಒಟ್ಟು ಇಂಧನ ಅವಶ್ಯಕತೆಯ 30-40% ಇಂಧನವನ್ನು ರಷ್ಯಾ ಪೂರೈಸುತ್ತಿದೆ. ವಿದೇಶಾಂಗ ಸಚಿವ ಜೈಶಂಕರ್ ಅವರು ಮುಂದಿನ ಐದು ವರ್ಷಗಳ ಅವಧಿಯ ಕುರಿತು ತನ್ನ ಆತಂಕಗಳನ್ನು ವ್ಯಕ್ತಪಡಿಸಿದ್ದಾರೆ. ಭೌಗೋಳಿಕ ರಾಜಕಾರಣದ ಬೆಳವಣಿಗೆಗಳು ಮತ್ತು ಪ್ರಾದೇಶಿಕ ವಿದ್ಯಮಾನಗಳ ಕಾರಣದಿಂದ, ಮುಂದಿನ ಐದು ವರ್ಷಗಳು ಸವಾಲಿನ ಅವಧಿಯಾಗಿರಲಿವೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಇವೆಲ್ಲ ಕಾರಣಗಳಿಂದಾಗಿ, ಭಾರತವೂ ಬಹಳಷ್ಟು ತೊಂದರೆಗಳು ಮತ್ತು ಒತ್ತಡಗಳನ್ನು ಎದುರಿಸಲಿದೆ ಎಂದು ಜೈಶಂಕರ್ ವಿವರಿಸಿದ್ದಾರೆ.
ಉಕ್ರೇನ್ ಮತ್ತು ಮಧ್ಯ ಪೂರ್ವ ಪ್ರದೇಶದಲ್ಲಿ ಮುಂದುವರಿದಿರುವ ಯುದ್ಧಗಳು, ಅರಬ್ಬೀ ಸಮುದ್ರ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿನ ಉದ್ವಿಗ್ನತೆಗಳು, ಮತ್ತು ಚೀನಾ ಭಾರತ ಗಡಿ ವಿವಾದಗಳು ಮುಂದಿನ ದಿನಗಳಲ್ಲೂ ಮುಂದುವರಿಯುವ ಸಾಧ್ಯತೆಗಳತ್ತ ವಿದೇಶಾಂಗ ಸಚಿವರು ಬೆಳಕು ಚೆಲ್ಲಿದ್ದಾರೆ. ಜೈಶಂಕರ್ ಅವರು, ಈಗ ಎದುರಾಗಿರುವ ಜಾಗತಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು, ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರಕ್ಕೆ ಅತ್ಯಂತ ಹೆಚ್ಚಿನ ಸ್ಥಾನಗಳನ್ನು ಒದಗಿಸುವಂತೆ ಮತದಾರರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಮೋದಿ ಬೆಂಬಲ: ದಕ್ಷಿಣ ಚೀನಾ ಸಮುದ್ರದ ಬಿಕ್ಕಟ್ಟಿನ ನಡುವೆಯೂ ಫಿಲಿಪೈನ್ಸ್‌ಗೆ ಬ್ರಹ್ಮೋಸ್ ಬಲ!
"ಈಗಿನ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಏನಾಗಲಿದೆ ಎನ್ನುವುದರ ಸುಳಿವುಗಳನ್ನು ನೀಡುತ್ತಿದೆ. ಭಾರತದ ಪಾಲಿನ ನಿಜವಾದ ಪರೀಕ್ಷೆ ಇನ್ನಷ್ಟೇ ಬರಬೇಕಿದೆ. ನವದೆಹಲಿ ಜಗತ್ತಿನಲ್ಲಿ ಎಷ್ಟರಮಟ್ಟಿಗೆ ಬದಲಾವಣೆ ತರಬಲ್ಲದು ಎನ್ನುವುದು ಮತದಾರರು ನಮಗೆ ನೀಡುವ ಬಹುಮತದ ಮೇಲೆ ಅವಲಂಬಿತವಾಗಿದೆ. ಅಂತಿಮವಾಗಿ, ನಮ್ಮ ವಿದೇಶಾಂಗ ನೀತಿಗಳ ಸಾಧನೆಗಳು ನಮ್ಮ ದೇಶೀಯ ಸಾಮರ್ಥ್ಯದ ಮೇಲೆ ಆಧರಿಸಿವೆ" ಎಂದು ಜೈಶಂಕರ್ ಹೇಳಿದ್ದಾರೆ.