ರಾಜ್ಯದಲ್ಲಿ ಬಿಸಿಗಾಳಿ ಜೊತೆಗೆ ಆಲಿಕಲ್ಲು ಮಳೆಯಾಗುವ ಮುನ್ಸೂಚನೆ ಕೊಟ್ಟ ಹವಾಮಾನ ಇಲಾಖೆ!
ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮುಂದಿನ 5 ದಿನಗಳ ಕಾಲ ಭಾರಿ ಮಳೆಯಾಗಲಿದೆ. ಅದರಲ್ಲಿಯೂ ಹಳೆ ಮೈಸೂರು ಭಾಗದಲ್ಲಿ ಮೇ 7ರಂದು ಬಿಸಿಗಾಳಿ ಜೊತೆಗೆ ಆಲಿಕಲ್ಲು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು (ಮೇ 06): ರಾಜ್ಯದಲ್ಲಿ ಈಗಾಗಲೇ ಬಿಸಿಲ ಬೇಗೆಗೆ ಜನರು ತತ್ತರಿಸಿ ಹೋಗಿದ್ದಾರೆ. ಮಳೆಗಾಹಿ ಎದುರು ನೋಡುತ್ತಿರುವ ಜನರಿಗೆ ವರುಣ ತತಾಸ್ತು ಎನ್ನುತ್ತಿದ್ದಾನೆ. ಮುಂದಿನ 5 ದಿನಗಳ ಕಾಲ ರಾಜ್ಯದ ಕ್ಷಿಣ ಒಳನಾಡಿನ ಕಲೆವು ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇನ್ನು ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮೇ 7 ರಂದು ಬಿಸಿಗಾಳಿ ಅಲೆಯ ಜೊತೆಗೆ ಆಲಿಕಲ್ಲು ಮಳೆ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೊತೆಗೆ, ಬೆಂಗಳೂರಿನಲ್ಲಿಯೂ ಇಂದು ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಒಂದು ದಿನ ಭಾರಿ ಬಿಸಿಲು ಮತ್ತೊಂದು ದಿನ ಮಳೆಯಾಗಲಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಿದೆ.
ಅನಿರೀಕ್ಷಿತ ಮಳೆಗೆ ತುಸು ತಣ್ಣಗಾದ ಬೆಂಗಳೂರು: ಏಕಾಏಕಿ ಗುಡುಗು, ಮಿಂಚು
ಬೆಂಗಳೂರಿನಲ್ಲಿ ಒಂದು ದಿನ ಉತ್ತಮ ಮಳೆಯಾದ ಬಳಿಕ ಮತ್ತೆ ಬಿಸಿಲು ಹೆಚ್ಚಾಗಿತ್ತು. ಈಗ ಮತ್ತೆ ಮಳೆಯ ಮುನ್ಸೂಚನೆ ನೀಡಿದ್ದರಿಂದ ಬೆಂಗಳೂರಿಗೆ ವರುಣ ತಂಪೆರೆಯುವ ಸಾಧ್ಯತೆಯಿದೆ. ಆದರೆ, ಕಳೆದ ಗುರುವಾರ ರಾತ್ರಿ ಸುರಿದ ಮಳೆಯಿಂದ ನಗರಾದ್ಯಂತ ವಿವಿಧೆಡೆ 10ಕ್ಕೂ ಅಧಿಕ ಮರಗಳು ಬಿದ್ದಿದ್ದವು. ಜೊತೆಗೆ, ತೀವ್ರವಾದ ಗಾಳಿ ಬೀಸಿದ್ದರಿಂದ ಮರದ ಟೊಂಗೆಗಳು ಮುರಿದು ಬಿದ್ದು ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಹತ್ತಾರು ವಾಹನಗಳು ಕೂಡ ಜಖಂ ಆಗಿದ್ದವು. ಇಂದು ಸಂಜೆ ಕೂಡ ಮಳೆ ಆಗಲಿದ್ದು, ಗಾಳಿ-ಮಳೆ ಬೀಳುವಾಗ ಮರದ ಕೆಳಭಾಗದಲ್ಲಿ ಆಶ್ರಯ ಪಡೆಯದಂತೆ ಸೂಚನೆ ನೀಡಲಾಗಿದೆ.
ಮೇ 6 ರಿಂದ ಮೇ 10ರವರೆಗೆ ಮಳೆ: ಇನ್ನು ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ 5 ದಿನ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗುವ ಸಾಧ್ಯತೆಯಿದೆ. ಮೇ 6 ರಿಂದ 10 ರವರೆಗೆ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ. ಕರಾವಳಿ ಭಾಗದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಸಾಧ್ಯತೆಯಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಹಲವು ಕಡೆಗಳಲ್ಲಿ ಶಾಖದ ಅಲೆ ಹೆಚ್ಚಿರಲಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಮಿಂಚಿನೊಂದಿಗೆ ಮಳೆಯಾಗಲಿದ್ದು, ಕೆಲವು ಕಡೆಗಳಲ್ಲಿ ಆಲಿಕಲ್ಲು ಮಳೆ ಸುರಿಯಲಿದೆ. ಇನ್ನು ಮೇ 10 ರವರೆಗೆ ರಾಜ್ಯದಲ್ಲಿ ಸತತವಾಗಿ ಮಳೆ ಸುರಿಯುವ ಸಾಧ್ಯತೆಯಿದ್ದು, ಹಳೇ ಮೈಸೂರು ಭಾಗದಲ್ಲಿ ಭಾರಿ ಮಳೆಯನ್ನು ನಿರೀಕ್ಷೆ ಮಾಡಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆಯಿಂದ ಮಳೆ ಮುನ್ಸೂಚನೆ ನೀಡಿದೆ.
Karnataka Rain Updates: ರಾಜ್ಯದ ಹಲವು ಕಡೆ ವರುಣನ ಸಿಂಚನ, ಬೆಂಗಳೂರಿಗರ ಮೊಗದಲ್ಲಿ ಮಂದಹಾಸ