- ಇಂದು ಸಿದ್ಧ​ಗಂಗೆಗೆ ತೆರ​ಳಿ ಶಿವ​ಕು​ಮಾರ ಶ್ರೀ​ಗಳ ಗದ್ದುಗೆ ದರ್ಶ​ನ - ನಾಳೆ ಕೆಪಿ​ಸಿಸಿ ಕಾರ್ಯ​ಕಾರಿ ಸಮಿ​ತಿ ಸಭೆ​ಯಲ್ಲಿ ರಾಹುಲ್‌ ಭಾಗಿ - ಪಕ್ಷದ ನಾಯ​ಕ​ರೊಂದಿಗೆ ಸರಣಿ ಸಭೆ, ಹಲವು ವಿಚಾರ ಬಗ್ಗೆ ಚರ್ಚೆ

ಬೆಂಗಳೂರು(ಮಾ.31): ಕಾಂಗ್ರೆಸ್‌ ವರಿಷ್ಠ ರಾಹುಲ್‌ಗಾಂಧಿ(Rahul Gandhi) ಎರಡು ದಿನಗಳ ಭೇಟಿಗಾಗಿ ಗುರುವಾರ ರಾಜ್ಯಕ್ಕೆ(Karnataka) ಆಗಮಿಸಲಿದ್ದಾರೆ.ಗುರುವಾರ ಮಧ್ಯಾಹ್ನ ಬೆಂಗಳೂರು(Bengaluru) ನಗರಕ್ಕೆ ಆಗಮಿಸುವ ಅವರು ನೇರವಾಗಿ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡುವರು. ದೆಹಲಿಯಿಂದ ವಿಮಾನದಲ್ಲಿ ನಗರಕ್ಕೆ ಆಗಮಿಸುವ ರಾಹುಲ್‌ ಗಾಂಧಿ ಬಳಿಕ ರಸ್ತೆ ಮಾರ್ಗವಾಗಿ ಸಿದ್ಧಗಂಗಾ ಮಠ ತಲುಪಲಿದ್ದಾರೆ. ಶಿವಕುಮಾರ ಸ್ವಾಮೀಜಿ ಅವರ 105ನೇ ಜಯಂತಿ ಪ್ರಯುಕ್ತ ಗದ್ದುಗೆಗೆ ನಮನ ಸಲ್ಲಿಸಿ ಬಳಿಕ ಸಂಜೆ 6.45ಕ್ಕೆ ಬೆಂಗಳೂರಿನ ಕುಮಾರಕೃಪ ಅತಿಥಿಗೃಹಕ್ಕೆ ವಾಪಸಾಗಲಿದ್ದಾರೆ. ಗುರುವಾರ ಸಂಜೆ ಹಾಗೂ ಶುಕ್ರವಾರ ಎರಡೂ ದಿನ ಪಕ್ಷದ ನಾಯಕರೊಂದಿಗೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ.

ತುಮ​ಕೂ​ರಲ್ಲಿ ರಾಹು​ಲ್‌ಗೆ ಅದ್ಧೂರಿ ಸ್ವಾಗ​ತ:
ಲಿಂ.ಡಾ.​ಶಿ​ವ​ಕು​ಮಾರ ಸ್ವಾಮೀಜಿ ಅವರ 115ನೇ ಜನ್ಮ​ದಿ​ನದ ಹಿನ್ನೆ​ಲೆ​ಯಲ್ಲಿ ಗುರು​ವಾರ ಸಿದ್ಧ​ಗಂಗಾ ಮಠಕ್ಕೆ ಭೇಟಿ ನೀಡ​ಲಿ​ರುವ ಕಾಂಗ್ರೆಸ್‌ ಯುವರಾಜ ರಾಹುಲ್‌ ಗಾಂಧಿ ಅವ​ರಿಗೆ ಭರ್ಜರಿ ಸ್ವಾಗತ ನೀಡಲು ಪಕ್ಷ ಸಿದ್ಧತೆ ನಡೆ​ಸಿ​ದೆ. ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಸಂಜೆ 4 ಗಂಟೆಗೆ ಆಗ​ಮಿ​ಸುವ ರಾಹುಲ್‌ ಗಾಂಧಿ ಅವರು ತುಮಕೂರಿನ ಜಾಸ್‌ಟೋಲ್‌ ಗೇಟ್‌ ಬಳಿ ಇರುವ ಎಚ್‌ಎಂಎಸ್‌ ಎಂಜಿನಿಯರಿಂಗ್‌ ಕಾಲೇಜಿಗೆ ತೆರ​ಳ​ಲಿ​ದ್ದಾರೆ. ಅಲ್ಲಿ ಅವರನ್ನು ಪಕ್ಷದಿಂದ ಆತ್ಮೀಯವಾಗಿ ಬರ ಮಾಡಿಕೊಳ್ಳಲಾಗುವುದು.

26 ಲಕ್ಷ ಕೋಟಿ ರು. ಪೆಟ್ರೋಲ್‌ ತೆರಿಗೆ ಲೆಕ್ಕ ಕೊಡಿ: ಕೇಂದ್ರಕ್ಕೆ ಕಾಂಗ್ರೆಸ್‌ ಸವಾಲು!

ಅಲ್ಲಿಂದ ಕ್ಯಾತ್ಸಂದ್ರ ಸರ್ಕಲ್‌, ಬಟವಾಡಿಗೆ 1 ಸಾವಿರಕ್ಕೂ ಹೆಚ್ಚು ಬೈಕ್‌ಗಳೊಂದಿಗೆ ರಾರ‍ಯಲಿ ಮೂಲಕ ಕರೆತರಲಾಗುವುದು. ಬಳಿಕ ರಾಹುಲ್‌ ಗಾಂಧಿ ಅವ​ರು ಬಂಡೆಪಾಳ್ಯದ ಮೂಲಕ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡ​ಲಿ​ದ್ದು, ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ದರ್ಶನ ಮಾಡಲಿದ್ದಾರೆ. ಬಳಿಕ ಸಿದ್ಧಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಮಕ್ಕಳೊಂದಿಗೆ ಪ್ರಾರ್ಥನೆಯಲ್ಲಿ ತೊಡಗಲಿದ್ದಾರೆ. ಸಿದ್ಧಗಂಗೆಯಲ್ಲೇ ಪ್ರಸಾದ ಸ್ವೀಕರಿಸಿ ಬೆಂಗಳೂರಿಗೆ ವಾಪ​ಸ್‌ ಪ್ರಯಾಣ ಬೆಳೆಸಲಿದ್ದಾರೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪ್ರತಿ​ಪಕ್ಷ ನಾಯಕ ಸಿದ್ದ​ರಾ​ಮಯ್ಯ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌, ಮಾಜಿ ಸಚಿವ ಎಂ.ಬಿ. ಪಾಟೀಲ್‌ ಸೇರಿ ಪಕ್ಷದ ಹಲವು ಮುಖಂಡರು ಇರ​ಲಿ​ದ್ದಾ​ರೆ.

ಶುಕ್ರವಾರ ಸರಣಿ ಸಭೆ: ಏ.1 ರಂದು ಬೆಳಗ್ಗೆ 10.30ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಕಾರಿ ಸಮಿತಿ ಉದ್ದೇಶಿಸಿ ರಾಹು​ಲ್‌ ಮಾತನಾಡಲಿದ್ದಾರೆ. ಈ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್‌, ರಣದೀಪ್‌ಸಿಂಗ್‌ ಸುರ್ಜೇವಾಲ, ಕೆಪಿ​ಸಿಸಿ ಅಧ್ಯ​ಕ್ಷ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಸೇರಿ ಹಲವರು ಭಾಗವಹಿಸಲಿದ್ದಾರೆ. ಈ ವೇಳೆ ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆ ಹಾಗೂ ಮುಂದಿನ ಚುನಾವಣಾ ಸಿದ್ಧತೆಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆಯಿದೆ.

World Happiness Report ದ್ವೇಷದಲ್ಲಿ ಭಾರತ ಶೀಘ್ರದಲ್ಲೇ ಮೊದಲ ಸ್ಥಾನಕ್ಕೆ, ಮೋದಿ ಸರ್ಕಾರ ಕುಟುಕಿದ ರಾಹುಲ್ ಗಾಂಧಿ!

ನಂತರ ಕೆಪಿಸಿಸಿ ಅಧ್ಯಕ್ಷರು, ಪ್ರತಿಪಕ್ಷ ನಾಯಕರ ಜತೆಗೆ ಬೆಂಗಳೂರು ನಗರದ ಮಾಜಿ ಶಾಸಕರು, ಮಾಜಿ ಮೇಯರ್‌ಗಳು, ಪರಿಷತ್‌ ಸದಸ್ಯರೊಂದಿಗೆ ಬೆಂಗಳೂರು ನಗರಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಇದಾದ ಬಳಿಕ ಮಧ್ಯಾಹ್ನ 2 ಗಂಟೆಯಿಂದ 3.30 ವರೆಗೆ ಮುಂಚೂಣಿ ಘಟಕಗಳ ಅಧ್ಯಕ್ಷರೊಂದಿಗೆ ಸಭೆ ನಡೆಸಲಿದ್ದಾರೆ. ಇದೇ ವೇಳೆ ಡಿಜಿಟಲ್‌ ಸದಸ್ಯತ್ವ ನೋಂದಣಿಯಲ್ಲಿ ತೊಡಗಿರುವವರೊಂದಿಗೆ ಜೂಮ್‌ ಸಂವಾದ ನಡೆಸಲಿದ್ದಾರೆ. ನಂತರ ಸಂಜೆ 5 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ವಾಪಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.