26 ಲಕ್ಷ ಕೋಟಿ ರು. ಪೆಟ್ರೋಲ್‌ ತೆರಿಗೆ ಲೆಕ್ಕ ಕೊಡಿ: ಕೇಂದ್ರಕ್ಕೆ ಕಾಂಗ್ರೆಸ್‌ ಸವಾಲು!

* ಕಳೆದ 6 ದಿನಗಳಲ್ಲಿ 5 ಬಾರಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ

* 26 ಲಕ್ಷ ಕೋಟಿ ರು. ಪೆಟ್ರೋಲ್‌ ತೆರಿಗೆ ಲೆಕ್ಕ ಕೊಡಿ ಎಂದ ಕಾಂಗ್ರೆಸ್'

* 6 ದಿನದಲ್ಲಿ ಉಭಯ ತೈಲ ಬೆಲೆ 3.75 ರು.ನಷ್ಟು ಏರಿಕೆ

Give account of Rs 26 lakh crore excise duty earned on petrol diesel Congress to govt pod

ನವದೆಹಲಿ(ಮಾ.28): ಕಳೆದ 6 ದಿನಗಳಲ್ಲಿ 5 ಬಾರಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ. ಅಲ್ಲದೇ ಕಳೆದ 8 ವರ್ಷಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆಯಿಂದ ಗಳಿಸಿಕೊಂಡಿರುವ 26 ಲಕ್ಷ ಕೋಟಿ ರು. ಲೆಕ್ಕ ಕೊಡಬೇಕು ಎಂದು ಆಗ್ರಹಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲ, ‘ಕಳೆದ 8 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆಯಿಂದ 26 ಲಕ್ಷ ಕೋಟಿ ರು. ಲಾಭ ಗಳಿಸಿಕೊಂಡಿದೆ. ಚುನಾವಣೆಯ ಸಮಯದಲ್ಲಿ ಮತದಾರರನ್ನು ವಂಚಿಸಲು 137 ದಿನಗಳ ಕಾಲ ಸುಮ್ಮನಿತ್ತು. ಆದರೆ ಕಳೆದ 6 ದಿನಗಳಲ್ಲಿ 3.7ರಿಂದ 3.75 ರು.ನಷ್ಟುದರ ಹೆಚ್ಚಳ ಮಾಡಿದೆ. ಇದು ಯಾರ ದುರಾದೃಷ್ಟವೋ ಜನರು ಬೆಲೆಯೇರಿಕೆಯಿಂದ ತತ್ತರಿಸುತ್ತಿದ್ದಾರೆ. ಹಾಗಾಗಿ ಸರ್ಕಾರ ಈ ಹಣದ ಲೆಕ್ಕ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

6 ದಿನದಲ್ಲಿ 5ನೇ ಬಾರಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ

ಪಂಚರಾಜ್ಯ ಚುನಾವಣೆಯ ವೇಳೆ ಸ್ಥಗಿತಗೊಂಡಿದ್ದ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆ ಇದೀಗ ಮತ್ತೆ ನಿರಂತರವಾಗಿ ಮುಂದುವರೆದಿದೆ. ಭಾನುವಾರ ಕೂಡ ಪೆಟ್ರೋಲ್‌ ದರ 50 ಪೈಸೆ ಮತ್ತು ಡೀಸೆಲ್‌ ದರ 55 ಪೈಸೆ ಏರಿಕೆ ಕಂಡಿದೆ. ಈ ಮೂಲಕ 6 ದಿನಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ 5 ಬಾರಿ ಏರಿಕೆ ಕಂಡಿದೆ. 5 ದಿನದಲ್ಲಿ ಪ್ರೆಟೋಲ್‌ 3.7 ರು., ಡೀಸೆಲ್‌ 3.75 ರು. ಏರಿಕೆಯಾದಂತಾಗಿದೆ.

5 ಬಾರಿ ಏರಿಕೆಯ ನಂತರ ದೆಹಲಿಯಲ್ಲಿ 1 ಲೀಟರ್‌ ಪೆಟ್ರೋಲ್‌ ದರ 99.11 ರು.ಗೆ, ಡೀಸೆಲ್‌ ದರ 90.42 ರು.ಗೆ ತಲುಪಿದೆ. ಇನ್ನು ಮುಂಬೈನಲ್ಲಿ 1 ಲೀ. ಪೆಟ್ರೋಲ್‌ 113.88 ರು.ಗೆ ಮತ್ತು ಡೀಸೆಲ್‌ 98.13 ರು.ಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಕ್ರಮವಾಗಿ 104.46 ರು. ಮತ್ತು 88.67 ರು.ಗೆ ಏರಿಕೆಯಾಗಿದೆ. ಸ್ಥಳೀಯ ತೆರಿಗೆಗಳನ್ನು ಆಧರಿಸಿ ಈ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಗನಕ್ಕೇರಿದ್ದರೂ, ಕಳೆದ ವಾರಕ್ಕಿಂತ ಮುಂಚಿನ 137 ದಿನಗಳ ಕಾಲ ಇಂಧನ ಬೆಲೆಯನ್ನು ಪರಿಷ್ಕರಣೆ ಮಾಡಿರಲಿಲ್ಲ.

ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಕಹಳೆ, ಮೋದಿ ಸರ್ಕಾರದ ವಿರುದ್ಧ 3 ಹಂತದ ಹೋರಾಟ!

 

ಅಗತ್ಯ ವಸ್ತುಗಳ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್‌ ಪಕ್ಷ ಮಾ.31ರಿಂದ ಏ.7ರವರೆಗೆ ದೇಶಾದ್ಯಂತ ಮೂರು ಹಂತಗಳಲ್ಲಿ ಹೋರಾಟ ನಡೆಸಲು ನಿರ್ಧರಿಸಿದೆ. ಈ ಹೋರಾಟದ ಮೂಲಕ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜನರಿಗೆ ಮೋಸ ಮಾಡಿದೆ ಎಂದು ಸಾರಲು ಮುಂದಾಗಿದೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಪಕ್ಷದ ವಕ್ತಾರ ಹಾಗೂ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲಾ, ಬಿಜೆಪಿ ಸರ್ಕಾರದಿಂದಾಗಿ ದೇಶ ಅನುಭವಿಸುತ್ತಿರುವ ಬೆಲೆಯೇರಿಕೆ ಸಮಸ್ಯೆ ವಿರುದ್ಧ ‘ಮೆಹಂಗಾಯಿ ಮುಕ್ತ ಭಾರತ್‌ ಅಭಿಯಾನ’ ನಡೆಸಲು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಪೆಟ್ರೋಲ್‌, ಡೀಸೆಲ್‌ ಮೇಲಿನ ಅಬಕಾರಿ ಸುಂಕ ಹೆಚ್ಚಳದ ಮೂಲಕ ಕಳೆದ 8 ವರ್ಷಗಳಲ್ಲಿ ಕೇಂದ್ರ ಸರ್ಕಾರ 26 ಲಕ್ಷ ಕೋಟಿ ರು. ಸಂಗ್ರಹಿಸಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಮೊದಲ ಹಂತ:

ಮಾ.31ರಂದು ಮೊದಲ ಹಂತದಲ್ಲಿ ದೇಶಾದ್ಯಂತ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಜನಸಾಮಾನ್ಯರು ತಮ್ಮ ತಮ್ಮ ಮನೆಗಳ ಹೊರಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಹಾರ ಹಾಕುವ ಮೂಲಕ ಪ್ರತಿಭಟಿಸಲಿದ್ದಾರೆ. ಜೊತೆಗೆ ಡ್ರಮ್‌ ಬಡಿದು, ಗಂಟೆ ಬಾರಿಸಿ ಕಿವುಡು ಬಿಜೆಪಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಲಿದ್ದಾರೆ ಎಂದು ಸುರ್ಜೇವಾಲಾ ಹೇಳಿದರು.

ಎರಡನೇ ಹಂತ:

ಏ.2ರಿಂದ 4ರವರೆಗೆ ಕಾಂಗ್ರೆಸ್‌ ನಾಯಕರು ಜಿಲ್ಲಾ ಮಟ್ಟದಲ್ಲಿ ಎನ್‌ಜಿಒಗಳು, ಧಾರ್ಮಿಕ ಮುಖಂಡರು, ಸಾಮಾಜಿಕ ಸಂಸ್ಥೆಗಳು ಹಾಗೂ ನಾಗರಿಕ ಸಂಸ್ಥೆಗಳ ಜೊತೆ ಸೇರಿ ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಹಾಗೂ ಅಗತ್ಯ ವಸ್ತುಗಳ ಬೆಲೆಯೇರಿಕೆ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಆ ಮೂರು ದಿನ ದೇಶಾದ್ಯಂತ ಜಿಲ್ಲಾ ಮಟ್ಟದಲ್ಲಿ ಧರಣಿ ಹಾಗೂ ಪಾದಯಾತ್ರೆಗಳು ನಡೆಯಲಿವೆ.

ಮೂರನೇ ಹಂತ:

ಏ.7ರಂದು ಎಲ್ಲಾ ರಾಜ್ಯಗಳ ರಾಜಧಾನಿಯಲ್ಲಿ ಪಕ್ಷದ ವತಿಯಿಂದ ಸಾಮಾಜಿಕ, ಧಾರ್ಮಿಕ ಸಂಸ್ಥೆಗಳು, ಎನ್‌ಜಿಒಗಳು ಹಾಗೂ ಜನರ ಜೊತೆ ಸೇರಿ ಕಾಂಗ್ರೆಸ್‌ ನಾಯಕರು ಧರಣಿ ನಡೆಸಲಿದ್ದಾರೆ. ಹೋರಾಟದುದ್ದಕ್ಕೂ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜನರ ವೋಟಿಗಾಗಿ 137 ದಿನಗಳ ಕಾಲ ಪೆಟ್ರೋಲ್‌, ಡೀಸೆಲ್‌ ಹಾಗೂ ಎಲ್‌ಪಿಜಿ ಬೆಲೆ ಏರಿಸದೆ ಚುನಾವಣೆ ಮುಗಿದಾಕ್ಷಣ ಏರಿಸುವ ಮೂಲಕ ಮೋಸ ಮಾಡುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಡಲಾಗುವುದು ಎಂದು ಸುರ್ಜೇವಲಾ ತಿಳಿಸಿದರು.

3 ಹಂತದ ಹೋರಾಟ

1. ಮಾ.31: ಮನೆಗಳಲ್ಲಿ ಎಲ್ಪಿಜಿ ಸಿಲಿಂಡರ್‌ಗೆ ಹಾರ ಹಾಕಿ, ಡ್ರಮ್‌ ಬಡಿದು, ಗಂಟೆ ಬಾರಿಸಿ ಪ್ರತಿಭಟನೆ

2. ಏ.2ರಿಂದ 4: ದೇಶಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜನರು, ಸಂಘ ಸಂಸ್ಥೆಗಳ ಜತೆ ಸೇರಿ ಪ್ರತಿಭಟನೆ

3. ಏ.7: ಎಲ್ಲಾ ರಾಜ್ಯಗಳ ರಾಜಧಾನಿಯಲ್ಲಿ ಸಂಘ ಸಂಸ್ಥೆಗಳ ಜೊತೆ ಸೇರಿ ಕಾಂಗ್ರೆಸ್‌ ನಾಯಕರಿಂದ ಧರಣಿ

Latest Videos
Follow Us:
Download App:
  • android
  • ios