ಕಾರು ಏರುವ ಮುನ್ನ ಕೆಸರಾದ ಕಾಲನ್ನು ಕಾರ್ಯಕರ್ತನ ಕೈಲಿ ತೊಳೆಸಿಕೊಂಡ ಕಾಂಗ್ರೆಸ್ ಮುಖ್ಯಸ್ಥ: ವೀಡಿಯೋ ವೈರಲ್
ಕಾಂಗ್ರೆಸ್ ಅಧ್ಯಕ್ಷ ತಮ್ಮ ಕೆಸರು ಮೆತ್ತಿದ್ದ ಕಾಲನ್ನು ಕಾರಿಗೆ ಹತ್ತುವ ಮೊದಲು ಕಾರ್ಯಕರ್ತನ ಬಳಿ ತೊಳೆಸಿಕೊಂಡ ಘಟನೆ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ ಅಧ್ಯಕ್ಷನ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮುಂಬೈ: ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೊಲೆ ತಮ್ಮ ಕೆಸರು ಮೆತ್ತಿದ್ದ ಕಾಲನ್ನು ಕಾರಿಗೆ ಹತ್ತುವ ಮೊದಲು ಕಾರ್ಯಕರ್ತನ ಬಳಿ ತೊಳೆಸಿಕೊಂಡ ಘಟನೆ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ ಅಧ್ಯಕ್ಷನ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಕಾಂಗ್ರೆಸ್ ಅಧಕ್ಷ ಕ್ಷಮೆ ಕೇಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಬೆಂಬಲಿಗರೊಬ್ಬರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಕೊಲಾ ಜಿಲ್ಲೆಯಲ್ಲಿರುವ ವಡಗಾಂವ್‌ಗೆ ಭೇಟಿ ನೀಡಿದ್ದರು. ಈ ಕಾರ್ಯಕ್ರಮಕ್ಕೆ ಬಂದಿದ್ದ ಪಟೋಲೆ ಅಲ್ಲಿನ ಸ್ಥಳೀಯ ಶಾಲೆಯ ಬಳಿ ಆಯೋಜಿಸಿದ್ದ ಸಂತ ಶ್ರೀ ಗಜಾನನ ಮಹಾರಾಜರ ಪಲ್ಲಕ್ಕಿ ಉತ್ಸವದಲ್ಲಿಯೂ ಭಾಗವಹಿಸಿದ್ದರು. ಇಲ್ಲಿ ಮಳೆಯಿಂದಾಗಿ ನೆಲ ಕೆಸರಾಗಿದ್ದು, ಈ ಕೆಸರಿನಲ್ಲೇ ನಡೆಯುತ್ತಲೇ ಪಟೋಲೆ ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿದ್ದರು.
ಬುಡಕಟ್ಟು ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಬಿಜೆಪಿ ನಾಯಕ: ಕಾಲು ತೊಳೆದು ಸನ್ಮಾನ ಮಾಡಿದ ಮಧ್ಯ ಪ್ರದೇಶ ಸಿಎಂ
ಹೀಗಾಗಿ ಮರಳಿ ತಮ್ಮ ವಾಹನ ಏರುವ ಮೊದಲು ಪಟೋಲೆ ಕಾಲು ತುಂಬಾ ಕೆಸರಾಗಿದ್ದು, ನೀರು ಕೇಳಿದ್ದಾರೆ. ಈ ವೇಳೆ ಪಕ್ಷದ ಕಾರ್ಯಕರ್ತ ಹಾಗೂ ಪಟೋಲೆ ಬೆಂಬಲಿಗ ವಿಜಯ್ ಗೌರವ್ ಎಂಬಾತ ನೀರು ತೆಗೆದುಕೊಂಡು ಬಂದು ತಾನೇ ಸಚಿವರ ಕಾಲನ್ನು ತನ್ನ ಕೈಗಳಿಂದ ಸ್ವಚ್ಛಗೊಳಿಸಿದ್ದಾರೆ. ಆದರೆ ಆತನನ್ನು ತಡೆಯದೇ ಬೇರೆಯವರಿಂದ ಕಾಲು ತೊಳೆಸಿಕೊಳ್ಳಬಾರದು ಎಂಬ ಸಣ್ಣ ಪರಿಜ್ಞಾನವೂ ಇಲ್ಲದೇ ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥರು ಕಾರ್ಯಕರ್ತನಿಂದ ಕಾಲು ತೊಳೆಸಿಕೊಂಡಿದ್ದಾರೆ. ಆದರೆ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಬಿಜೆಪಿ ವಕ್ತಾರ ಶೆಹ್ಜಾದ್ ಪೂನಾವಲಾ ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ನವಾಬಿ ಕಾಲದ ಉಳಿಗಮಾನ್ಯ ಮನಸ್ಥಿತಿಯನ್ನು ಹೊಂದಿದೆ. ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರ ಕಾಲು ಮತ್ತು ಪಾದಗಳನ್ನು ಅಕೋಲಾದಲ್ಲಿ ಪಕ್ಷದ ಕಾರ್ಯಕರ್ತರೊಬ್ಬರು ತೊಳೆದಿದ್ದಾರೆ, ಅವರು ಜನ ಹಾಗೂ ಪಕ್ಷದ ಕಾರ್ಯಕರ್ತರನ್ನು ಗುಲಾಮರು ಎಂದು ಭಾವಿಸಿದ್ದು, ತಮ್ಮನ್ನು ರಾಜರೆಂದು ಭಾವಿಸಿದ್ದಾರೆ. ಕೈಯಲ್ಲಿ ಅಧಿಕಾರವಿಲ್ಲದೆಯೇ ಇವರು ಹೀಗೆ ಮಾಡುತ್ತಾರೆ. ಒಂದು ವೇಳೆ ಅವರು ಅಧಿಕಾರಕ್ಕೆ ಬಂದರೆ ಹೇಗೆ ವರ್ತಿಸಬಹುದು ಊಹಿಸಿ, ಘಟನೆಗೆ ಸಂಬಂಧಿಸಿದಂತೆ ನಾನಾ ಪಟೋಲೆ ಕ್ಷಮ ಕೇಳಲೇಬೇಕು ಎಂದು ಪೂನಾವಲ್ಲಾ ಆಗ್ರಹಿಸಿದ್ದಾರೆ.
ಆಹಾ! ಏನ್ ಭಕ್ತಿ?: ಸಂಸದನ ಕಾಲು ತೊಳೆದು ನೀರು ಕುಡಿದ ಪುಣ್ಯಾತ್ಮ!
ಹಾಗೆಯೇ ನೆಟ್ಟಿಗರು ಕೂಡ ಕಾಂಗ್ರೆಸ್ ಅಧ್ಯಕ್ಷನ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ತನ್ನ ಕಾರ್ಯಕರ್ತರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇತ್ತ ಈ ವಿಚಾರ ವಿವಾದಕ್ಕೀಡಾಗುತ್ತಿದ್ದಂತೆ, ನಾನಾ ಪಟೋಲೆ ಸ್ಪಷ್ಟನೆ ನೀಡಿದ್ದು, ಲೋಕಸಭೆ ಚುನಾವಣೆ ನಂತರ ನನ್ನನ್ನು ವಿನಾಕಾರಣ ಟಾರ್ಗೆಟ್ ಮಾಡಲಾಗುತ್ತಿದೆ. ನಾನು ಕಾರ್ಯಕರ್ತನ ಬಳಿ ನೀರು ತರುವುದಕ್ಕೆ ಮಾತ್ರ ಹೇಳಿದ್ದೆ, ಆತ ಕೇವಲ ನೀರು ಹೊಯ್ದ, ಈ ವೇಳೆ ನಾನೇ ನನ್ನ ಕಾಲನ್ನು ತೊಳೆದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ವೀಡಿಯೋದಲ್ಲಿ ಕಾರ್ಯಕರ್ತ ಕಾಲು ತೊಳೆಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.