ಬುಡಕಟ್ಟು ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಬಿಜೆಪಿ ನಾಯಕ: ಕಾಲು ತೊಳೆದು ಸನ್ಮಾನ ಮಾಡಿದ ಮಧ್ಯ ಪ್ರದೇಶ ಸಿಎಂ
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಗುರುವಾರ ಬಿಜೆಪಿಯ ಪ್ರವೇಶ್ ಶುಕ್ಲಾರಿಂದ ಮೂತ್ರ ವಿಸರ್ಜನೆಗೊಳಗಾಗಿದ್ದ ಬುಡಕಟ್ಟು ವ್ಯಕ್ತಿ ದಶ್ಮತ್ ರಾವತ್ ಅವರ ಪಾದಗಳನ್ನು ತೊಳೆದಿದ್ದಾರೆ.
ಭೋಪಾಲ್ (ಜುಲೈ 6, 2023): ಬಿಜೆಪಿಯ ಪ್ರವೇಶ್ ಶುಕ್ಲಾ ಬುಡಕಟ್ಟು ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ವಿಡಿಯೋ ಇತ್ತೀಚೆಗೆ ವೈರಲ್ ಆಗಿದೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಿಪಕ್ಷಗಳಲ್ಲಿ ತೀವ್ರ ಆಕ್ರೋಶವೆದ್ದ ಪರಿಣಾಮ ಹಾಗೂ ವಿಡಿಯೋ ಬೆಳಕಿಗೆ ಬಂದ ನಂತರ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಅಷ್ಟೇ ಅಲ್ಲದೆ, ಆತ ಅಕ್ರಮವಾಗಿ ನಿರ್ಮಿಸಿದ್ದ ಮನೆಯ ಭಾಗಗಳನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡಲಾಗಿದೆ. ಈಗ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಬುಡಕಟ್ಟು ವ್ಯಕ್ತಿಯ ಕಾಲು ತೊಳೆದಿದ್ದಾರೆ.
ಹೌದು, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಗುರುವಾರ ಬಿಜೆಪಿಯ ಪ್ರವೇಶ್ ಶುಕ್ಲಾರಿಂದ ಮೂತ್ರ ವಿಸರ್ಜನೆಗೊಳಗಾಗಿದ್ದ ಬುಡಕಟ್ಟು ವ್ಯಕ್ತಿ ದಶ್ಮತ್ ರಾವತ್ ಅವರ ಪಾದಗಳನ್ನು ತೊಳೆದಿದ್ದಾರೆ. ಮುಖ್ಯಮಂತ್ರಿ ನೆಲದ ಮೇಲೆ ಸ್ಟೂಲ್ ಮೇಲೆ ಕುಳಿತಿದ್ದರೆ, ಬುಡಕಟ್ಟು ವ್ಯಕ್ತಿ ತನ್ನ ಎರಡೂ ಕಾಲುಗಳನ್ನು ಮತ್ತೊಂದು ಸ್ಟೂಲ್ ಮೇಲೆ ಇರಿಸಲಾದ ವಾಷಿಂಗ್ ಬೌಲ್ ಮೇಲೆ ಇರಿಸಿ ಕುರ್ಚಿಯ ಮೇಲೆ ಕುಳಿತಿದ್ದಾರೆ. ಈ ಸಂಬಂಧದ ವಿಡಿಯೋವನ್ನು ಸುದ್ದಿಸಂಸ್ಥೆ ಎಎನ್‌ಐ ಶೇರ್ ಮಾಡಿದೆ.
ಇದನ್ನು ಓದಿ: ಬುಡಕಟ್ಟು ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಬಿಜೆಪಿ ನಾಯಕ ಬಂಧನ: ಆರೋಪಿ ಮೇಲೆ ಕಠಿಣ ಕ್ರಮ ಎಂದ ಸಿಎಂ
ಈ ಮಧ್ಯೆ, ಮಧ್ಯಪ್ರದೇಶ ಸಿಎಂ ಬುಡಕಟ್ಟು ವ್ಯಕ್ತಿಯ ಎರಡೂ ಪಾದಗಳನ್ನು ತೊಳೆದ ನಂತರ ಅವರಿಗೆ ಶಾಲು ಹಾಕಿ ಸನ್ಮಾನ ಮಾಡಿದ್ದಲ್ಲದೆ, ಹಾರವನ್ನೂ ಹಾಕಿದ್ದಾರೆ. ಹಾಗೆ, ಹಣ್ಣು ಕೊಟ್ಟು ಬಳಿಕ ಕ್ಯಾಮರಾಗಳಿಗೆ ಪೋಸ್ ನೀಡಿದ್ದಾರೆ. ಇನ್ನು, ಪಾದಗಳನ್ನು ತೊಳೆಯುವ ಮೊದಲು ಸಿಎಂ ಮುಂದೆ ಚಪ್ಪಲಿ ತೆಗೆಯಲು ದಶ್ಮತ್ ರಾವತ್ ಹಿಂಜರಿದಿದ್ದಾರೆ. ಆದರೆ, ಸಿಎಂ ಅವರೇ ಹಾಗೆ ಮಾಡಲು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಜೀವನೋಪಾಯಕ್ಕಾಗಿ ಏನು ಮಾಡುತ್ತೀರಿ ಎಂದು ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಪ್ರಶ್ನಿಸಿದ್ದು, ನಂತರ "ಆ ವಿಡಿಯೋ ನೋಡಿ ನನಗೆ ನೋವಾಯಿತು, ನಾನು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ, ಜನರು ನನಗೆ ದೇವರಂತೆ" ಎಂದೂ ಹೇಳಿದರು.
ಇನ್ನು, ಈ ವಿಡಿಯೋ ಹೊರಬಿದ್ದ ನಂತರ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಆರೋಪಿ ಪ್ರವೇಶ್ ಶುಕ್ಲಾ ಅಕ್ರಮವಾಗಿ ನಿರ್ಮಿಸಿದ್ದ ಅವರ ಮನೆಯನ್ನು ಧ್ವಂಸಗೊಳಿಸಲಾಗಿದ್ದು, ಅವರನ್ನು ಬಂಧಿಸಲಾಗಿದೆ. ಇನ್ನೊಂದೆಡೆ, ಅವರ ಕುಟುಂಬ ಸದಸ್ಯರು ಈ ಕ್ರಮವನ್ನು ವಿರೋಧಿಸಿದರು ಮತ್ತು ಈ ವಿಡಿಯೋ ಹಳೆಯದಾಗಿದೆ ಮತ್ತು ಚುನಾವಣೆಗೆ ಮುಂಚಿತವಾಗಿ ಅವರ ರಾಜಕೀಯ ವಿರೋಧಿಗಳು ಅದನ್ನು ಹರಿಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. ಇನ್ನು, ಪ್ರವೇಶ್ ಶುಕ್ಲಾ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಮೂಲಕ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಆಡಳಿತ ಪಕ್ಷದ ಕಿಡಿಗೇಡಿಗಳನ್ನು ಸಹ ಬಿಡುವುದಿಲ್ಲ ಎಂಬ ಬಲವಾದ ಸಂದೇಶವನ್ನು ರವಾನಿಸಿದೆ.
ಇದನ್ನೂ ಓದಿ: ಆದಿವಾಸಿ ವ್ಯಕ್ತಿಯ ಮುಖದ ಮೇಲೆ ಮೂತ್ರ ಮಾಡಿದ್ದ ಪ್ರವೇಶ್ ಶುಕ್ಲಾ ಮನೆಗೆ ನುಗ್ಗಿದ ಬುಲ್ಡೋಜರ್!
ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಕುಬ್ರಿ ಗ್ರಾಮದಲ್ಲಿ ಮೂತ್ರ ವಿಸರ್ಜನೆಯ ಘಟನೆ ನಡೆದಿದೆ. ದಶಮತ್ ರಾವತ್ ಎಂದು ಗುರುತಿಸಲಾದ ವ್ಯಕ್ತಿಯ ಮುಖದ ಮೇಲೆ ಮದ್ಯದ ಅಮಲಿನಲ್ಲಿ ಪ್ರವೇಶ್ ಶುಕ್ಲಾ ಮೂತ್ರ ವಿಸರ್ಜನೆ ಮಾಡಿದ್ದರು. ದಶಮತ್‌ನಲ್ಲಿ ಮೂತ್ರ ವಿಸರ್ಜಿಸುವಾಗ ವಿಡಿಯೋ ತೆಗೆಯಲು ಮತ್ತು ಅದನ್ನು ತನ್ನ ಫೋನ್‌ಗೆ ವರ್ಗಾಯಿಸಲು ಪ್ರವೇಶ್ ಕೇಳಿಕೊಂಡಿದ್ದಾನೆ ಎಂದು ವಿಡಿಯೋ ಚಿತ್ರೀಕರಿಸಿದ ವ್ಯಕ್ತಿ ಹೇಳಿದ್ದಾರೆ. ವಿಡಿಯೋ ತೆಗೆದ ವ್ಯಕ್ತಿ ಹೇಳಿಕೊಂಡಂತೆ ಈ ಘಟನೆ ಸುಮಾರು 10 ದಿನಗಳ ಹಿಂದೆ ನಡೆದಿದ್ದು, ವಿಡಿಯೋವನ್ನು ಮತ್ತೊಬ್ಬ ವ್ಯಕ್ತಿಯೊಂದಿಗೆ ಹಂಚಿಕೊಂಡ ಬಳಿಕ ಇದು ವೈರಲ್ ಆಗಿದೆ ಎಂದಿದ್ದಾರೆ. ‘ಏನಾದರೂ ತಪ್ಪು ಮಾಡಿದ್ದರೆ’ ಗಂಡನ ಕೃತ್ಯಕ್ಕೆ ಶಿಕ್ಷೆ ವಿಧಿಸುವಂತೆ ಪ್ರವೇಶ್ ಪತ್ನಿಯೂ ಆಗ್ರಹಿಸಿದ್ದರು.
ಇದನ್ನೂ ಓದಿ: ಮಾನಸಿಕ ಅಸ್ವಸ್ಥನ ಮುಖದ ಮೇಲೆ ಮೂತ್ರ ಮಾಡಿದ ಬಿಜೆಪಿ ಕಾರ್ಯಕರ್ತ!