ಸಂಸದನ ಕಾಲು ತೊಳೆದು ನೀರು ಕುಡಿದ ಕಾರ್ಯಕರ್ತ! ಜಾರ್ಖಂಡ್‌ನ ಗೊಡ್ಡ ಜಿಲ್ಲೆಯಲ್ಲಿ ನಡೆದ ಘಟನೆ! ಗೊಡ್ಡ ಸಂಸದ ನಿಶಿಕಾಂತ್ ದುಬೆ ಕಾಲು ತೊಳೆದ ಪವನ್ ಸಿಂಗ್! ಸಂಸದರ ಕಾಲು ತೊಳೆದು ಅದೇ ನೀರನ್ನು ಸಾರ್ವಜನಿಕವಾಗಿ ಕುಡಿದ! ಪವನ್ ಸಿಂಗ್ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ
ಗೊಡ್ಡ, ಜಾರ್ಖಂಡ್(ಸೆ.17): ಸಾರ್ವಜನಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಿಜೆಪಿ ಸಂಸದರೊಬ್ಬರ ಕಾಲು ತೊಳೆದ ಪಕ್ಷದ ಕಾರ್ಯಕರ್ತನೊಬ್ಬ, ನಂತರ ಕಾಲು ತೊಳೆದ ನೀರು ಕುಡಿದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.
ಜಾರ್ಖಾಂಡ್‌ನ ಗೊಡ್ಡ ಸಂಸದ ನಿಶಿಕಾಂತ್ ದುಬೆ ನಿನ್ನೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಸ್ಥಳದಲ್ಲಿದ್ದ ಕಾರ್ಯಕರ್ತ ಪವನ್ ಸಿಂಗ್ ಎಂಬಾತ ನಿಶಿಕಾಂತ್ ಅವರ ಪಾದ ತೊಳೆದು, ಪಾದವನ್ನು ಒರೆಸಿದ್ದಾರೆ. ಬಳಿಕ ಕಾಲು ತೊಳೆದ ನೀರನ್ನು ಕುಡಿದಿದ್ದಾರೆ.
ಘಟನೆಯ ವಿಡಿಯೋವನ್ನು ಸ್ವತಃ ನಿಶಿಕಾಂತ್ ಅವರೇ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋ ನೋಡಿದ ಸಾರ್ವಜನಿಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನು ಪವನ್ ಕಾರ್ಯಕ್ಕೆ ಟೀಕೆ ವ್ಯಕ್ತವಾದ ಹಿನ್ನಲೆಯಲ್ಲಿ ಘಟನೆಯನ್ನು ಸಮರ್ಥಿಸಿಕೊಂಡಿರುವ ನಿಶಿಕಾಂತ್, ಇದೇನು ಅಂತಹ ದೊಡ್ಡ ವಿಚಾರವಲ್ಲ. ತಮ್ಮ ಇಚ್ಛೆಯಂತೆ ಅವರು ಕಾಲು ತೊಳೆದಿದ್ದಾರೆ. ಇದಕ್ಕೆ ರಾಜಕೀಯ ಬಣ್ಣವನ್ನೇಕೆ ನೀಡಲಾಗುತ್ತಿದೆ? ಅತಿಥಿಗಳ ಪಾದ ತೊಳೆಯುವುದರಲ್ಲಿ ತಪ್ಪೇನಿದೆ?ಮಹಾಭಾರತ ಕಥೆಗಳನ್ನು ಓದಿ ಎಂದು ತಿರುಗೇಟು ನೀಡಿದ್ದಾರೆ.
ಇದೇ ವೇಳೆ ತಮ್ಮ ಜಾತಿ ಕುರಿತಂತೆ ಹೇಳಿಕೊಂಡಿರುವ ನಿಶಿಕಾಂತ್, ನಾನೊಬ್ಬ ಬ್ರಾಹ್ಮಣ ಎಂಬ ಸತ್ಯವನ್ನು ಹೇಗೆ ಬದಲಿಸಲು ಸಾಧ್ಯ? ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ್ದಕ್ಕೆ ನನ್ನ ಪೋಷಕರನ್ನು ನಿಂದಿಸಬೇಕೆ? ಈ ಕಾರಣದಿಂದ ನನ್ನ ತಂದೆ-ತಾಯಿಯನ್ನು ಬದಲಿಸಬೇಕೆ? ಎಂದು ಪ್ರಶ್ನಿಸಿದ್ದಾರೆ.
