- ಸತತ 2ನೆ ದಿನವೂ ಸಂಸತ್ತಲ್ಲಿ ಕಾಂಗ್ರೆಸ್‌ ವಿರುದ್ಧ ಪ್ರಧಾನಿ ವಾಕ್‌ಪ್ರಹಾರ- ಕಾಂಗ್ರೆಸ್‌ ಇರದಿದ್ದರೆ ಈ ದೇಶ ಹಲವು ಸಮಸ್ಯೆ ಎದುರಿಸುತ್ತಿರಲಿಲ್ಲ- ವಂಶಪರಂಪರೆ ರಾಜಕೀಯ ಈ ದೇಶಕ್ಕೆ ದೊಡ್ಡ ಅಡ್ಡಿ

ನವದೆಹಲಿ(ಫೆ.09): ಕಾಂಗ್ರೆಸ್‌ ವಿರುದ್ಧ ಸತತ 2ನೇ ದಿನವೂ ಸಂಸತ್ತಿನಲ್ಲಿ ವಾಗ್ದಾಳಿ ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ(PM Narendra Modi), ಆ ಪಕ್ಷದ ಚಿಂತನೆಯು ಇಂದು ‘ನಗರ ನಕ್ಸಲೀಯರಿಂದ’ ನಿಯಂತ್ರಿಸಲ್ಪಡುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ‘ವಂಶಪರಂಪರೆ ರಾಜಕೀಯವು ಈ ದೇಶಕ್ಕೆ ಇರುವ ದೊಡ್ಡ ಬೆದರಿಕೆ. ತುರ್ತುಸ್ಥಿತಿ, ಕಾಶ್ಮೀರ ಪಂಡಿತರ ವಲಸೆ, ಜಾತಿ ರಾಜಕೀಯ ಹಾಗೂ ಸಿಖ್‌ ವಿರೋಧಿ ದಂಗೆಯಂಥ ಸಮಸ್ಯೆಗಳಿಗೆ ಕಾಂಗ್ರೆಸ್ಸೇ ಕಾರಣ’ ಎಂದಿದ್ದಾರೆ.

ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಿ ಅವರು ಮಾತನಾಡಿದರು. ‘ನಮ್ಮ ಸರ್ಕಾರ ಅನೇಕ ಸಾಧನೆ ಮಾಡಿದೆ. ಆದರೆ ಕಾಂಗ್ರೆಸ್‌(Congress) ಪಕ್ಷವು ವಿರೋಧ ಪಕ್ಷದಲ್ಲಿ ಇದ್ದರೂ ಅಭಿವೃದ್ಧಿಗೆ ಅಡ್ಡಿ ವಂದುವರಿಸುತ್ತಿದೆ’ ಎಂದು ಟೀಕಿಸಿದರು.

ಮೋದಿ ಅವರ ಭಾಷಣದ ವೇಳೆ ಕಾಂಗ್ರೆಸ್ಸಿಗರು ಸಭಾತ್ಯಾಗ ಮಾಡಿದರು. ಇದಕ್ಕೆ ಕುಟುಕಿದ ಮೋದಿ, ‘ಕೇವಲ ಆ ಪಕ್ಷ ಈವರೆಗೆ ಕೇವಲ ಬೋಧನೆಯಲ್ಲಿ ತೊಡಗಿದೆ. ಪ್ರಜಾಪ್ರಭುತ್ವದಲ್ಲಿ(Democracy) ಇತರರ ಮಾತನ್ನು ಕೇಳಿಸಿಕೊಳ್ಳುವುದೂ ಅಗತ್ಯ’ ಎಂದು ತಿವಿದರು.

Inflation ಕಾಂಗ್ರೆಸ್‌ಗೆ ಮುಳುವಾಯ್ತು ನೆಹರು, ಚಿದಂಬರಂ ಹಣದುಬ್ಬರ ನೀತಿ, ಮೋದಿ ಮಾತಿಗೆ ಕಾಂಗ್ರೆಸ್ ಸೈಲೆಂಟ್!

‘ಕಾಂಗ್ರೆಸ್‌ ಪಕ್ಷ ಇಂದು ಅರ್ಬನ್‌ ನಕ್ಸಲೀಯರ ಕಪಿಮಷ್ಟಿಯಲ್ಲಿದೆ. ಹೀಗಾಗಿಯೇ ಅದರ ಮನದಲ್ಲಿ ನಕಾರಾತ್ಮಕ ಭಾವನೆಗಳು ತುಂಬಿಕೊಂಡಿವೆ. ಆ ಪಕ್ಷ ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌ ಎಂಬ ಹೆಸರಿನ ಬದಲು ಫೆಡರೇಷನ್‌ ಆಫ್‌ ಕಾಂಗ್ರೆಸ್‌ ಎಂದು ಹೆಸರು ಬದಲಿಸಿಕೊಳ್ಳಬೇಕು. ರಾಜಕೀಯದಲ್ಲಿ ಸೋಲು-ಗೆಲುವು ಇದ್ದದ್ದೇ. ಆದರೆ ಸೋಲಿನ ಹತಾಶೆಯನ್ನು ಜನರ ಮೇಲೆ ಪ್ರದರ್ಶಿಸಬಾರದು’ ಎಂದು ಛೇಡಿಸಿದರು.

ವಂಶಪರಂಪರೆ ರಾಜಕೀಯ ಈ ದೇಶಕ್ಕೆ ದೊಡ್ಡ ಅಡ್ಡಿ
ದೇಶಕ್ಕೆ ಇರುವ ದೊಡ್ಡ ಬೆದರಿಕೆ ಎಂದರೆ ವಂಶವಾದ. ವಂಶವಾದಕ್ಕೆ ಪ್ರತಿಭೆಗಳೇ ಮೊದಲ ಬಲಿ. ಪಕ್ಷಗಳು ಆಂತರಿಕ ಪ್ರಜಾಪ್ರಭುತ್ವ ಪಾಲಿಸಬೇಕು. ಹಳೆಯ ಪಕ್ಷವಾದ ಕಾಂಗ್ರೆಸ್‌, ಇದನ್ನು ಮೊದಲು ಪಾಲಿಸಬೇಕಿತ್ತು’ ಎಂದರು. ಆದರೆ ಕಾಂಗ್ರೆಸ್ಸಲ್ಲಿ ಆಂತರಿಕ ಪ್ರಜಾಸತ್ತಗೆ ಬೆಲೆ ಇಲ್ಲ ಎಂಬುದಕ್ಕೆ ಸೀತಾರಾಂ ಕೇಸರಿಯವರೇ ನಿದರ್ಶನ. ಗಾಂಧಿ ಕುಟುಂಬದ ವಿರುದ್ಧ ಮಾತನಾಡಿದ್ದಕ್ಕೆ ಅವರು ಪಕ್ಷದಿಂದಲೇ ವಜಾ ಆಗಬೇಕಾಯಿತು ಎಂದು ಮೋದಿ ನುಡಿದರು.

Global Leader Approval: ಬಿಡೆನ್, ಜಾನ್ಸನ್‌ರನ್ನೇ ಹಿಂದಿಕ್ಕಿ ಸತತ ಮೂರನೇ ವರ್ಷ ಮೋದಿ ವಿಶ್ವದ ನಂ.1 ನಾಯಕ!

ಕಾಂಗ್ರೆಸ್‌ ಇರದಿದ್ದರೆ ಇವೆಲ್ಲಾ ಆಗುತ್ತಲೇ ಇರಲಿಲ್ಲ
ಕಾಂಗ್ರೆಸ್‌ ಇಲ್ಲದೇ ಇದ್ದಿದ್ದರೆ ತುರ್ತುಪರಿಸ್ಥಿತಿ ಬರುತ್ತಿರಲಿಲ್ಲ. ಸಿಖ್‌ ದಂಗೆ ನಡೆಯುತ್ತಿರಲಿಲ್ಲ. ಕಾಶ್ಮೀರದಲ್ಲಿ ಸಮಸ್ಯೆಗಳೇ ಹುಟ್ಟಿಕೊಳ್ಳುತ್ತಿರಲಿಲ್ಲ. 1947ರಲ್ಲಿ ದೇಶ ಉದಯಿಸಿತು ಎಂದು ಕಾಂಗ್ರೆಸ್‌ ಭಾವಿಸಿದೆ. ಇಂಥ ಕಲ್ಪನೆ ಅಪಾಯಕಾರಿ. 1975ರಲ್ಲಿ ತುರ್ತುಸ್ಥಿತಿ ಹೇರಿ ಪ್ರಜಾಸತ್ತೆ ತುಳಿದವರಿಂದ ನಾವು ಪ್ರಜಾಪ್ರಭುತ್ವದ ಪಾಠ ಕಲಿಯಬೇಕಿಲ್ಲ. 50 ವರ್ಷಗಳ ಆಡಳಿತದಲ್ಲಿ ಅದು 50 ರಾಜ್ಯ ಸರ್ಕಾರಗಳನ್ನು ಅದು ವಜಾ ಮಾಡಿದೆ. ‘ರಾಜ್ಯ ಸರ್ಕಾರಗಳಿಗೆ ಮೊದಲು ಕೆಟ್ಟಹೆಸರು ತರುವುದು. ನಂತರ ಅಸ್ಥಿರಗೊಳಿಸುವುದು, ವಜಾ ಮಾಡುವುದು’ ಇವು ಕಾಂಗ್ರೆಸ್‌ನ ನೀತಿಗಳು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಸಾಧನೆ ಅಪಾರ
ಇನ್ನು ತಮ್ಮ ಸಾಧನೆ ವಿವರಿಸಿದ ಅವರ, ‘ಅಮೆರಿಕದಲ್ಲಿ ಹಣದುಬ್ಬರ 40 ವರ್ಷದ ಗರಿಷ್ಠ ತಲುಪಿದೆ. ಬ್ರಿಟನ್‌ 30 ವರ್ಷದ ಗರಿಷ್ಠಕ್ಕೆ ಹೋಗಿದೆ. ಆದರೆ ಭಾರತ ಹಣದುಬ್ಬರ ನಿಯಂತ್ರಿಸಿದೆ. ಕಳೆದ 4-5 ವರ್ಷದಲ್ಲಿ ಹಣದುಬ್ಬರ ಶೇ.4-5ರ ಆಸುಪಾಸಲ್ಲಿದೆ. ಯುಪಿಎ ಅವಧಿಯಲ್ಲಿ ಶೇ.10 ದಾಟಿತ್ತು’ ಎಂದರು.

ಗೋವಾ ವಿಮೋಚನೆಗೆ ನೆಹರು ಸೇನೆ ಕಳಿಸಿರಲಿಲ್ಲ
ನವದೆಹಲಿ: ದೇಶದ ಮೊದಲ ಪ್ರಧಾನಿ ಜವಾಹರ್‌ ಲಾಲ್‌ ನೆಹರು, ಶಾಂತಿಧೂತರೆಂಬ ತಮ್ಮ ಜಾಗತಿಕ ಇಮೇಜ್‌ ಕಾಪಾಡಿಕೊಳ್ಳುವ ಉದ್ದೇಶದಿಂದ ಗೋವಾ ವಿಮೋಚನೆಗೆ ಸೇನೆಯನ್ನು ಕಳಿಸಿರಲಿಲ್ಲ ಎಂದು ಪ್ರಧಾನಿ ಮೋದಿ ದೂರಿದರು. ‘ಪೋರ್ಚುಗೀಸರ ಕಪಿಮುಷ್ಠಿಯಿಂದ ಗೋವಾ ವಿಮೋಚನೆಯಾಗಿ 60 ವರ್ಷ ಕಳೆದಿವೆ. ಹೈದರಾಬಾದ್‌ ಮತ್ತು ಜುನಾಗಡ್‌ಕ್ಕೆ ಸರ್ದಾರ್‌ ಪಟೇಲ… ಹೇಗೆ ತಂತ್ರ ರೂಪಿಸಿದರೋ, ಅದೇ ತಂತ್ರವನ್ನು ಗೋವಾಕ್ಕೂ ಅನುಸರಿಸಿದ್ದರೆ ಅದು ಸ್ವಾತಂತ್ರ್ಯಾನಂತರ 15 ವರ್ಷಗಳ ಕಾಲ ಪರಕೀಯರ ಆಳ್ವಿಕೆಗೆ ಒಳಪಡುತ್ತಿರಲಿಲ್ಲ. ಆದರೆ ನೆಹರು ಪೋರ್ಚುಗೀಸರ ಗೋವಾ ಆಕ್ರಮಣದ ವಿರುದ್ಧ ಏನೂ ಕ್ರಮ ತೆಗೆದುಕೊಂಡಿರಲಿಲ್ಲ. ಇದು ಅವರ ಜಾಗತಿಕ ಇಮೇಜ್‌ ಹಾಳುಮಾಡಲಿದೆ ಎಂದು ಅವರು ಭಾವಿಸಿದ್ದರು. ಸತ್ಯಾಗ್ರಹಿಗಳ ವಿರುದ್ಧ ವಿದೇಶಿ ಆಡಳಿತಗಾರರು ಗುಂಡು ಹಾರಿಸುತ್ತಿರುವಾಗಲೂ ನೆಹರು ಅಲ್ಲಿಗೆ ಸೇನೆಯನ್ನು ಕಳಿಸಿರಲಿಲ್ಲ. ಶಾಂತಿಯ ಮೂಲಕ ವಿವಾದ ಬಗೆಹರಿಸುವುದಾಗಿ ತಿಳಿಸಿದ್ದರು. ಸತ್ಯಾಗ್ರಹಿಗಳಿಗೆ ನೆರವು ನೀಡಲು ನಿರಾಕರಿಸಿದ್ದರು. ಗೋವಾ ಜನತೆ ಕಾಂಗ್ರೆಸ್ಸಿನ ಈ ವರ್ತನೆಯನ್ನು ಎಂದೂ ಮರೆಯಲ್ಲ’ ಎಂದು ಹೇಳಿದರು.

ಕವನ ವಾಚಿಸಿದ್ದಕ್ಕೆ ಲತಾ ಸೋದರನ ಕೆಲಸ ಕಟ್‌
ಲತಾ ಮಂಗೇಶ್ಕರ್‌ ಅವರ ಸೋದರ ಹೃದಯನಾಥ ಮಂಗೇಶ್ಕರ್‌ ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ವೀರ ಸಾವರ್ಕರ್‌ ಅವರ ಪದ್ಯವನ್ನು ವಾಚಿಸಿದ್ದಕ್ಕೆ ಕಾಂಗ್ರೆಸ್‌ ಸರ್ಕಾರ ಅವರನ್ನು 8 ದಿನ ಕೆಲಸದಿಂದ ಅಮಾನತ್ತು ಮಾಡಿತ್ತು. ಇದರಲ್ಲಿ ಅವರ ತಪ್ಪು ಏನೂ ಇರಲಿಲ್ಲ. ದೇಶಪ್ರೇಮದ ಒಂದು ಪದ್ಯವನ್ನು ರೇಡಿಯೋದಲ್ಲಿ ವಾಚಿಸಿದ್ದರು. ಇದೇ ಕಾಂಗ್ರೆಸ್‌ ಪ್ರತಿಪಾದಿಸುವ ವಾಕ್‌ ಸ್ವಾತಂತ್ರ್ಯ ಎಂದು ಟೀಕಿಸಿದರು.